Vijayasiri News
ವಿಜಯನಗರಹೂವಿನಹಡಗಲಿ

ಹೂವಿನಹಡಗಲಿ: ಪೊಲೀಸರ ಕೈಯಲ್ಲಿ ಸಲಕೆ, ಬುಟ್ಟಿ…!, ನಾವು ಕಾನೂನು ರಕ್ಷಣೆಗೂ ಸದಾ ಬದ್ಧ, ಸಮಾಜಸೇವೆಗೂ ಸಿದ್ಧ…!!

ವಿಜಯಸಿರಿನ್ಯೂಸ್.ಕಾಂ/ ಹೂವಿನಹಡಗಲಿ
ದೊಡ್ಡದೊಡ್ಡ ಸಭೆ, ಸಮಾರಂಭಗಳಲ್ಲೋ… ಜಾತ್ರೆ, ಉತ್ಸವ, ಉರುಸು ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದ ಸಂದರ್ಭಗಳಲ್ಲಿ ಕೈಯಲ್ಲಿ ಲಾಠಿ ಹಿಡಿದು, ಶಾಂತಿ, ಸಾಮರಸ್ಯ ಮರುಸೃಷ್ಟಿಸುವ ಹಿನ್ನೆಲೆಯಲ್ಲಿ ಹಗಲಿರಳು ಬಂದೋಬಸ್ತ್ ಕರ್ತವ್ಯದಲ್ಲಿರುವ ಪೊಲೀಸರನ್ನು ನಾವು ನೋಡುತ್ತೇವೆ. ಆದರೆ, ಇಲ್ಲೊಂದು ಪೊಲೀಸ್ ಠಾಣೆಯ ಸಿಬ್ಬಂದಿ, ನಾವು ರಕ್ಷಣೆಗೂ ಬದ್ಧ, ಸಮಾಜಸೇವೆಗೂ ಸಿದ್ಧ ಎಂಬುದನ್ನು ತೋರಿಸುವ ಮೂಲಕ ಪೊಲೀಸರು ಹೀಗೂ ಇರುತ್ತಾರಾ…? ಅಚ್ಚರಿಗೆ ಕಾರಣವಾಗುವ ಜತೆಗೆ, ಇತರರಿಗೆ ಮಾದರಿಯಾಗಿದ್ದಾರೆ.
ಅದು ಎಲ್ಲಿ ಅಂತೀರಾ…? ಹಾಗಾದರೆ ಈ ಸ್ಟೋರಿ ನೋಡಿ…
ಹೌದು, ಗೆಳೆಯರೇ… ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಪೊಲೀಸ್ ಸಿಬ್ಬಂದಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮ ನಡುವೆ ಮಾದರಿ ಪೊಲೀಸ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಹೂವಿನಹಡಗಲಿ ತಾಲ್ಲೂಕಿನಲ್ಲಿ ಹಾದುಹೋಗಿರುವ ಮೈಲಾರ- ತೋರಣಗಲ್ಲು ರಾಜ್ಯಹೆದ್ದಾರಿಯ ಕೆಲ ಭಾಗಗಳಲ್ಲಿ ಅಳವಾದ ಗುಂಡಿಗಳ ನಿರ್ಮಾಣವಾಗಿದ್ದು, ಬಲಿಗಾಗಿ ಬಾಯ್ತೆರೆದುಕೊಂಡು ಕುಳಿತಿವೆ. ಜತೆಗೆ, ನಿರ್ಮಾಣದ ಸಂದರ್ಭದಲ್ಲಿಯೂ ಗುತ್ತಿಗೆದಾರರ ನಿರ್ಲಕ್ಷö್ಯತೆಯಿಂದಾಗಿಯೂ ಕೆಲಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿರುವ ಹಿನ್ನೆಲೆಯಲ್ಲಿಯೂ ಸಾಕಷ್ಟು ಅವಘಡಗಳು ಸಂಭವಿಸಿವೆ. ಜತೆಗೆ, ಈ ರಸ್ತೆಯಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಈ ಹೆದ್ದಾರಿಗೆ ಹೊಂದಿಕೊಂಡಿರುವ ವಡ್ಡಿನಹಳ್ಳಿ ತಾಂಡ ಕ್ರಾಸ್‌ನಿಂದ, ಹಗರನೂರುವರೆಗೂ ರಸ್ತೆಯ ಹದಗೆಟ್ಟು ಹೋಗಿದೆ. ಜತೆಗೆ, ಈಗ, ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿಯೂ ರಸ್ತೆ ಈಗ ಮತ್ತಷ್ಟು ಹಾಳಾಗಿದೆ. ಸುಕ್ಷೇತ್ರ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರಸ್ವಾಮಿ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಜತೆಗೆ, ವಿಜಯನಗರ ಹಾಗೂ ಹಾವೇರಿ ಜಿಲ್ಲೆಯ ಪ್ರಮುಖ ಸಂಪರ್ಕ ಬೆಸುಗೆಯ ಕೊಂಡಿಯೂ ಹೌದು. ಪ್ರತಿ ಹುಣ್ಣಿಮೆಗೆ ವಿಜಯನಗರ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಗದಗ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಕೆಲ ಭಾಗಗಳ ಭಕ್ತರು, ಈ ರಸ್ತೆಮಾರ್ಗದ ಮೂಲಕವೇ ಮೈಲಾರದ ಸನ್ನಿಧಿಗೆ ತೆರಳುತ್ತಾರೆ. ಸಾವಿರಾರು ಭಕ್ತರು, ಬೈಕ್‌ಗಳಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ರಸ್ತೆಯ ಗುಂಡಿಗಳ ಗಮನಿಸದ ಹಿನ್ನೆಲೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿರುವ ಉದಾಹರಣೆಗಳು ಇವೆ. ಜತೆಗೆ, ಈ ರಸ್ತೆಮಾರ್ಗ ಅನುಸರಿಸುವ ಮೂಲಕ ಹಾವೇರಿ ಹಾಗೂ ರಾಣೆಬೆನ್ನೂರು ನಗರಗಳಿಗೆ ಸಂಚರಿಸುವ ಪ್ರಯಾಣಿಕರು ಗೋಳು, ಆ ಭಗವಂತನೇ ಬಲ್ಲ. ಬಳ್ಳಾರಿ ಭಾಗದ ಮೆಣಸಿನಕಾಯಿ ಬೆಳೆಗಾರರು ಸಹ, ಈ ರಸ್ತೆಯ ಮೂಲಕವೇ, ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಸಾಗಾಣಿಕೆ ಮಾಡುತ್ತಿರುವುದರಿಂದ, ಸಹಜವಾಗಿಯೇ ಮೆಣಸಿನಕಾಯಿ ತುಂಬಿದ ಲಾರಿ ಹಾಗೂ ಗೂಡ್ಸ್ ವಾಹನಗಳು ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಅನುಭವಿಸುವ ಮೂಲಕ ಸಾಕಷ್ಟು ಬಾರಿ ಕಿರಿಕಿರಿ ಅನುಭವಿಸುತ್ತಿರುವುದು ಕೂಡ ಸಾಮಾನ್ಯ ಸಂಗತಿಯಾಗಿದೆ.


ರಸ್ತೆಯ ದುರಸ್ಥಿಯನ್ನು ಮಾಡಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅದಾವ ದಿಕ್ಕಿಗೆ ತಿರುಗಿ, ಅದೇನನ್ನ ಕಾಯೋತ್ತಾರೋ ಭಗವಂತನೇ ಬಲ್ಲ ಎಂಬುದು ಸಾರ್ವಜನಿಕ ಆಕ್ರೋಶದ ಮಾತುಗಳು.
ಬೈಕ್ ಸವಾರರು, ಒಣಮೆಣಸಿನಕಾಯಿ ತುಂಬಿದ ಲಾರಿಗಳು ಹಾಗೂ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯವೂ ಅನುಭವಿಸುತ್ತಿರುವ ಗೋಳನ್ನು ನೋಡಲಾಗದ ಹಿರೇಹಡಗಲಿ ಪೊಲೀಸರು, ಹಗರನೂರು ಹೊರವಲಯದಲ್ಲಿ ಗುಂಡಿಬಿದ್ದಿರುವ ರಸ್ತೆಗಳನ್ನು ತಾವೇ ತಮ್ಮ ಕೈಯಾರೇ, ದುರಸ್ಥಿಪಡಿಸುವ ಕೆಲಸಕ್ಕೆ ಮುಂದಾಗಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ನಗೆಪಾಟಲಿಗೆ ಈಡುಮಾಡಿದೆ.
ಹಿರೇಹಡಗಲಿ ಪೊಲೀಸ್ ಠಾಣೆಯ ಪಿಎಸ್‌ಐ ಭರತ್‌ರೆಡ್ಡಿ ಅವರ ನೇತೃತ್ವದಲ್ಲಿ ಠಾಣೆಯ ಪೊಲೀಸ್ ಸಿಬ್ಬಂದಿ ಭಾನುವಾರ ರಸ್ತೆಯಲ್ಲಿ ಸೃಷ್ಟಿಯಾಗಿರುವ ಆಳದ ಗುಂಡಿಗಳಿಗೆ ಮಣ್ಣುತುಂಬುವ ಮೂಲಕ, ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಥಳೀಯರ ಒಂದೆರಡು ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರಗಳ ಸಹಕಾರ ಪಡೆಯುವ ಮೂಲಕ ಸುಮಾರು 40ಕ್ಕೂ ಅಧಿಕ ಟ್ರ್ಯಾಕ್ಟರ್ ಲೋಡ್ ಮಣ್ಣನ್ನು ತರಿಸುವ ಮೂಲಕ ಆಳವಾದ ಗುಂಡಿಗಳನ್ನು ತಾವೇ ಸಲಕೆ ಹಾಗೂ ಬುಟ್ಟಿಗಳನ್ನು ಹಿಡಿದು, ಮಣ್ಣು ಹೊರುವ ಮೂಲಕ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಜತೆಗೆ, ಪೊಲೀಸರೆಂದರೆ, ಕಾನೂನು ರಕ್ಷಣೆಗೆ ಸದಾಸಿದ್ಧ. ಜತೆಗೆ, ಸಮಾಜಸೇವೆಗೂ ಸಿದ್ಧ ಎಂದು ಸಂದೇಶ ಸಾರುವ ಮೂಲಕ ಸಾರ್ವಜನಿಕರ ಅಚ್ಚರಿಗೆ ಕಾರಣರಾಗಿದ್ದಾರೆ.
ಅವ್ಯವಸ್ಥೆಗೆ ಒಳಗಾಗಿದ್ದ ರಾಜ್ಯಹೆದ್ದಾರಿಯ ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಪೊಲೀಸರ ತಂಡಕ್ಕೆ ಸ್ಥಳೀಯರಾದ ಹಗರನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ರುದ್ರಾನಾಯ್ಕ್, ಮುಖಂಡರರಾದ ಬಂದ್ರಕಳ್ಳಿ ಕೋಟೆಪ್ಪ, ಹಿರೇಹಡಗಲಿ ಚರಣ್ ಗುಂಡಿ ಸೇರಿದಂತೆ ಇತರರು ಕೈಜೋಡಿಸಿದ್ದಾರೆ.
ನಿಜಕ್ಕೂ ಹಿರೇಹಡಗಲಿ ಪೊಲೀಸ್ ಠಾಣೆಯ ಪಿಎಸ್‌ಐ ಭರತ್‌ರೆಡ್ಡಿ ಅವರ ತಂಡದ ಸಿಬ್ಬಂದಿಯಾದ ಸಿದ್ದಪ್ಪ, ನಾಗರಾಜ, ರಾಘವೇಂದ್ರ, ಚನ್ನಬಸವನಗೌಡ ಸೇರಿದಂತೆ ಇತರರ ಈ ರಸ್ತೆ ದುರಸ್ಥಿಗೆ ಇಳಿದ ಕಾರ್ಯ ನಿಜಕ್ಕೂ ಶ್ಲಾಘನೀಯ. ಈಗಲಾದರೂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಒಂದಿಷ್ಟು ಕಣ್ಣುತೆರೆಯುವ ಮೂಲಕ ಹದಗೆಟ್ಟು ಹೋಗಿರುವ ರಸ್ತೆಗಳನ್ನು ದುರಸ್ಥಿಪಡಿಸಲು ಮುಂದಾಗಬೇಕು. ಇಲ್ಲವಾದರೆ, ನಿಮ್ಮ ಕಾರ್ಯವೈಖರಿ ಹೀಗೆ, ಸಾರ್ವಜನಿಕ ವಲಯದಲ್ಲಿ ಅಸಹ್ಯ ಹುಟ್ಟಿಸುತ್ತವೆ ಎಂಬ ಸಂಗತಿ ನೆನಪಿಗೆ ಬಂದರೆ ಸಾಕಲ್ಲವೇ?

ಸುದ್ದಿಯನ್ನ ಯೂಟ್ಯೂಬ್ ನಲ್ಲಿ ವೀಕ್ಷಿಸಲು 👇👇 ಇಲ್ಲಿ ಒತ್ತಿ

Related posts

|| ಕೆರೆಗುಡಿಹಳ್ಳಿ: ಗ್ರಾಮಸ್ಥರ ಪಾಲಿಗೆ ಕಂಟಕವಾಗಿದ್ದ ಹೂಳು ತುಂಬಿದ ಚರಂಡಿ || ಕೊನೆಗೂ ಹೂಳು ತೆರೆವುಗೊಳಿಸಲು ಮುಂದಾದ ಪಂಚಾಯ್ತಿ ಸದಸ್ಯ

Vijayasiri News

ಹರಪನಹಳ್ಳಿಯಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ಅಸಹಾಯಕ ಕುಟುಂಬದ ಬದುಕಿನಲ್ಲಿ ಪಂಚಗ್ಯಾರಂಟಿ ಯೋಜನೆಗಳು ಭರವಸೆ ಮೂಡಿಸಿವೆ: ಶಾಸಕಿ ಲತಾ ಮಲ್ಲಿಕಾರ್ಜುನ

Vijayasiri News

ಸುಜಲಾನ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಕತ್ತರಿ; ಬದುಕಿಗೆ ಇಲ್ಲವೇ ಇಲ್ಲ ಇಲ್ಲಿ ಖಾತರಿ…!!! |ಹರಪನಹಳ್ಳಿ: ಪವನ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಾರ್ಮಿಕರಿಗೆ ಕಾರ್ಯಭಾರದ ಅಧಿಕ ಹೊರೆ |

Vijayasiri News

ತಲೆಕೂದಲನ್ನು ಬೋಳಿಸಿಕೊಂಡು ಆಕ್ರೋಶ, ನ್ಯಾ. ನಾಗಮೋಹನದಾಸ್ ವರದಿ ಅಂಗೀಕಾರಕ್ಕೆ ವಿರೋಧ ಅವಕಾಶ ವಂಚಿತ ಸಮುದಾಯಗಳಿಗೆ ಮರಣ ಶಾಸನವಾದ ವರದಿ ಕೈಬಿಡಿ

Vijayasiri News

ಒಕ್ಕಲುತನ ಪರಂಪರೆಯ ವಿಶಿಷ್ಟ ಉತ್ಸವ, ಭೂಲೋಕಕ್ಕೆ ಮಳೆ ತರಿಸುವ ಮಹಾದೇವ ನಮ್ಮ ಈ ಜೋಕುಮಾರಸ್ವಾಮಿ.

Vijayasiri News

ವಿಜಯನಗರ ಜಿಲ್ಲೆಯಲ್ಲೊಂದು ಮಾದರಿ ಸಮಾರಂಭ: ಧ್ವಜಾರೋಹಣ ನೆರವೇರಿಸಿದ ಅಲೆಮಾರಿ ಸಮಾಜದ 98ರ ವಯೋವೃದ್ಧೆ ಮರಿಯಮ್ಮ

Vijayasiri News
error: Content is protected !!