Vijayasiri News
ನಮ್ಮೂರ ಸುದ್ದಿವಿಜಯನಗರಹರಪನಹಳ್ಳಿ ಸುದ್ದಿ

ಹರಪನಹಳ್ಳಿ: ರೈತರ ಪಾಲಿಗೆ ಶಾಪವಾದ ನಿರಂತರ ಮಳೆ, ‘ಸಿಡಿ’ ರೋಗಬಾಧೆಗೆ ತುತ್ತಾದ ಬೆಳೆ, ವೈಜ್ಞಾನಿಕ ಬೆಳೆ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಎಐಕೆಎಸ್ ಪ್ರತಿಭಟನೆ

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಅಲ್ಲಿನ ರೈತರ ಪಾಲಿಗೆ ‘ಅನಾವೃಷ್ಟಿ’ ಎಂಬುದು ಕಾಯಂ ನೆಂಟ…!, ಆದರೆ, ಅತೀವೃಷ್ಟಿ ಎಂಬುದು ಮಾತ್ರ ಆಗೊಮ್ಮೆ, ಈಗೊಮ್ಮೆ ಬಂದುಹೋಗುವ ಅತಿಥಿ. ಈ ವರ್ಷದ ಹಂಗಾಮಿನಲ್ಲಿ ಅತಿಥಿಯಂತೆ ಆಗಮಿಸಿದ ಮಳೆರಾಯ ನಿರಂತರವಾಗಿ ಸುರಿದ ಹಿನ್ನೆಲೆಯಲ್ಲಿ ಅತೀವೃಷ್ಟಿ ಸಂಭವಿಸಿದೆ. ಜತೆಗೆ, ಅಲ್ಲಿನ ರೈತರ ಬದುಕಿನ ಮೇಲೆ ಬರೆ ಎಳೆದಿದೆ. ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ಸುರಿದ ಮಳೆಯಿಂದಾಗಿ, ಸಮೃದ್ಧವಾಗಿ ಬೆಳೆದ ಬೆಳೆ ರೈತರ ಮೊಗದಲ್ಲಿ ಮಂದಹಾಸ ಸೃಷ್ಟಿಸಿದ್ದವು. ಭರಾಪೂರ ಬೆಳೆ, ಕೈಹಿಡಿದು, ಬದುಕು ಹಸನವಾಗಬಹುದು ಎಂಬ ಸಂತಸದ ಅಲೆಗಳು ತೇಲಾಡುತ್ತಿದ್ದವು. ಆದರೆ, ಯಾವಾಗ, ಕಳೆದೆರಡು ತಿಂಗಳನಿಂದ ನಿರಂತರವಾಗಿ ಸುರಿದ ಮಳೆ, ರೈತರ ಮುಖದ ಮೇಲಿನ ಮಂದಹಾಸದ ನಗುವನ್ನು ಹೊಸಕಿ ಹಾಕಿದೆ. ಸಂತಸದ ಅಲೆಗಳನ್ನು ಗುಡಿಸಿಗುಂಡಾಂತರಿಸಿದೆ. ಹೀಗಾಗಿ, ಅಕ್ಷರಶಃ ಅಲ್ಲಿನ ರೈತರ ಬದುಕು ಈಗ, ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ!.
ಅದು ಎಲ್ಲಿ ಅಂತೀರಾ…? ಹಾಗಾದರೆ, ಈ ಸುದ್ದಿಯನ್ನು ಓದಿ…
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ವ್ಯಾಪಕ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಳೆಗಳು ನೆಲಕಚ್ಚಿವೆ. ಬಿಟ್ಟುಬಿಡದೆ ಸುರಿದ ಮಳೆಯಿಂದಾಗಿ, ಭೂಮಿಯಲ್ಲಿನ ತೇವಾಂಶ ಅಧಿಕವಾದ ಪರಿಣಾಮ, ಬೆಳೆಗಳು ಸಿಡಿ ಬಾಧೆಗೆ ತುತ್ತಾಗಿವೆ. ಒಂದೆಡೆ ಮಳೆಯ ಕಡುಕೋಪ; ಇನ್ನೊಂದೆಡೆ ಸರ್ಕಾರದ ಬೇಜವಾಬ್ದಾರಿತ ಹಾಗೂ ಅಧಿಕಾರಿಗಳ ಪರಮ ನಿರ್ಲಕ್ಷ್ಯತೆಯಿಂದಾಗಿ, ಬೆಳೆಗಳಿಗೆ ಮೇಲ್ಗೊಬ್ಬರದ ರೂಪದಲ್ಲಿ ಕೊಡಬೇಕಾದ ಯೂರಿಯಾ ರಸಗೊಬ್ಬರ ಸಕಾಲದಲ್ಲಿ ದೊರಕಲಿಲ್ಲ. ಕನಿಷ್ಠಪಕ್ಷ ಯೂರಿಯಾವನ್ನು ಬೆಳೆಗಳಿಗೆ ಕೊಟ್ಟಿದ್ದರೆ, ಬೆಳೆಗಳಿಗೆ ತಡೆದುಕೊಳ್ಳುವ ಶಕ್ತಿ ಬರುತ್ತಿತ್ತೇನೋ. ಆದರೆ, ಕೈಯಲ್ಲಿ ಹಣ ಹಿಡಿದುಕೊಂಡು, ಗಣಗಣ ತಿರುಗಿದರೂ, ಯೂರಿಯಾ ರಸಗೊಬ್ಬರ ದೊರೆಯಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ಕೈಚೆಲ್ಲಿದ ರೈತನ ಮುಂದೆ, ಈಗ ಸಿಡಿಬಾಧೆ ಬೆಳೆ ಕಣ್ಣೀರು ತರಿಸುತ್ತಿದೆ. ಮುಂದೇನು ಎಂಬ ಚಿಂತೆ ಆವರಿಸಿಕೊಂಡಿದೆ.
ಅತಿವೃಷ್ಟಿಯಿಂದ ಬೆಳೆಹಾನಿಗೊಳಗಾದ ರೈತರ ನೆರವಿಗೆ ತಕ್ಷಣ ಧಾವಿಸುವಂತೆ ಹಾಗೂ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ರಸ್ತೆ ದುರಸ್ಥಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಹಾಗೂ ರೈತಸಂಘಟನೆ ನೇತೃತ್ವದಲ್ಲಿ ಸೋಮವಾರ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವಹಿಸಿದ್ದ ಎಐಕೆಎಸ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗುಡಿಹಳ್ಳಿ ಹಾಲೇಶ್ ಅವರು ಮಾತನಾಡಿ, ರೈತರ ಬದುಕನ್ನು ಕಟ್ಟಿಕೊಡಬೇಕಾಗಿದ್ದ ಮಳೆ, ಅದರ ಬದುಕಿನ ಮೇಲೆ ಬರೆ ಎಳೆದಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ, ಭೂಮಿಯಲ್ಲಿನ ತೇವಾಂಶದ ಪ್ರಮಾಣ ಅತ್ಯಧಿಕವಾದ ಹಿನ್ನೆಲೆಯಲ್ಲಿ ಬೆಳೆಗಳು ಸಿಡಿರೋಗ ಬಾಧೆಗೆ ಒಳಗಾಗಿವೆ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ರೈತ ಕುಟುಂಬಗಳನ್ನು ಆವರಿಸಿಕೊಂಡಿದೆ. ಸಾಲಸೋಲ ಮಾಡಿ, ಬಿತ್ತನೆ ಮಾಡಿದ ಜೀಜ, ಗೊಬ್ಬರ, ಆಳು ಸೇರಿದಂತೆ ಇಪ್ಪತೈದು ಮೂವತ್ತು ಸಾವಿರದಂತೆ ಖರ್ಚು ಮಾಡಿದ ಹಣ, ಮಳೆಯ ನೀರಿನಲ್ಲಿ ಕೊಚ್ಚಿಹೋದಂತಾಗಿದೆ. ಹೀಗಾಗಿ, ಸಾಲದ ಮೇಲಿನ ಬಡ್ಡಿ, ಚಕ್ರಬಡ್ಡಿ ಬೆಳೆಯುವ ಚಿಂತೆ ರೈತರನ್ನು ಆವರಿಸಿಕೊಂಡಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಳೆಹಾನಿಗೊಳಗಾದ ರೈತಾಪಿ ಕುಟುಂಬಗಳಿಗೆ ತಕ್ಷಣ ವೈಜ್ಞಾನಿಕ ತಳಹದಿಯ ಮೇಲೆ ಸಮೀಕ್ಷೆ ಕಾರ್ಯಕೈಗೊಳ್ಳುವ ಮೂಲಕ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಭೂಮಿಯಲ್ಲಿನ ಮೆಕ್ಕೆಜೋಳ, ಶೇಂಗಾ, ರಾಗಿ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳು ಸಂಪೂರ್ಣ ಹಾನಿಗೆ ಈಡಾಗಿವೆ. ಸಕಾಲದಲ್ಲಿ ಬೆಳೆಗಳಿಗೆ ಯೂರಿಯಾ ರಸಗೊಬ್ಬರ ಒದಗಿಸಿದ್ದರೇ, ಇನ್ನಷ್ಟು ದಿನ ತಡೆಯುತ್ತಿದ್ದವು. ಆದರೆ, ಒಂದೆಡೆ ಹಣಕೊಟ್ಟರೂ, ಕೈಗೆ ಸಿಗದ ಯೂರಿಯ ರಸಗೊಬ್ಬರ, ಮತ್ತೊಂದೆಡೆ ಮಳೆಯ ಕಡುಕೋಪ. ಇವರೆಡರ ಸುಳಿಗೆ ಸಿಲುಕಿದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜತೆಗೆ, ಮಾಡಿದ ಸಾಲ ಬಡ್ಡಿ, ಚಕ್ರಬಡ್ಡಿಯ ರೂಪದಲ್ಲಿ ಏರುತ್ತಿದೆ. ಹೀಗಾಗಿ, ರೈತಾಪಿ ಕುಟುಂಬ ದಾರಿ ತೋಚದೆ, ಚಿಂತೆಯಲ್ಲಿ ಮುಳುಗಿದ್ದಾರೆ. ಕೂಡಲೇ ಸರ್ಕಾರ ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವ ಮೂಲಕ ರೈತರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬೆಳೆವಿಮೆ ಯೋಜನೆಯನ್ನು ವಿಮಾಕಂಪೆನಿಗಳ ಆಶ್ರಯದಲ್ಲಿ ಸರ್ಕಾರ ಯೋಜನೆಯನ್ನು ಜಾರಿಮಾಡಿದೆಯಾದರೂ, ಅದು, ನೈಜ ಫಲಾನುಭವಿ ರೈತರಿಗೆ ದೊರೆಯುತ್ತಿಲ್ಲ. ವಿಮೆಯ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದಕ್ಕೆ ಅಧಿಕಾರಿಗಳ ಹೊಣೆಗೇಡಿತನವೇ ಸಾಕ್ಷಿಯಾಗಿದೆ ಎಂದು ಹಾಲೇಶ್ ಅವರು ಕಿಡಿಕಾರಿದರು.
ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳು ಗುಂಡಿಮಯವಾಗಿವೆ. ರಸ್ತೆಯಲ್ಲಿ ಗುಂಡಿಗಳೋ? ಗುಂಡಿಯಲ್ಲಿ ರಸ್ತೆಗಳೋ? ಎಂಬಷ್ಟರ ಮಟ್ಟಿಗೆ ಹಾಳಾಗಿವೆ. ಉಚ್ಚಂಗಿದುರ್ಗ- ಅರಸೀಕೆರೆ ಮೂಲಕ ಹಾದುಹೋಗಿರುವ ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ, ಕಸವನಹಳ್ಳಿ, ಹೊಸಕೋಟೆ- ಗುಡಿಹಳ್ಳಿ ರಸ್ತೆಗಳು ಸೇರಿದಂತೆ ವಿವಿಧ ರಸ್ತೆಗಳು ಹದಗೆಟ್ಟುಹೋಗಿವೆ. ಬೈಕ್ ಸವಾರರು ಸೇರಿದಂತೆ ಪ್ರಯಾಣಿಕರು, ನಿತ್ಯವೂ ಒಂದಿಲ್ಲೊಂದು ಅವಘಡಗಳನ್ನು ಅನುಭವಿಸುತ್ತಿದ್ದಾರೆ. ಸಾವು-ನೋವುಗಳು ಸಂಭವಿಸುವ ಮುನ್ನ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು, ರಸ್ತೆ ದುರಸ್ಥಿಗೆ ಮುಂದಾಗಬೇಕು. ಜತೆಗೆ, ರಾತ್ರಿ 8ಗಂಟೆಯ ಅವಧಿಯಲ್ಲಿ ಹರಪನಹಳ್ಳಿಯಿಂದ ಅರಸೀಕೆರೆ ಗ್ರಾಮಕ್ಕೆ ಬಸ್ ಆರಂಭಿಸುವ ಮೂಲಕ ಈ ಭಾಗದ ಸಾರ್ವಜನಿಕರಿಗೆ ಅನುಕೂಲತೆ ಕಲ್ಪಿಸುವಂತೆ ಹಾಲೇಶ್ ಒತ್ತಾಯಿಸಿದರು.
ವೈಜ್ಞಾನಿಕ ಬೆಳೆ ಪರಿಹಾರ, ರಸ್ತೆ ದುರಸ್ಥಿ, ಸಾರಿಗೆ ಬಸ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದ ಮನವಿಯನ್ನು ಅರಸೀಕೆರೆ ನಾಡಕಚೇರಿ ಉಪತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಅಧ್ಯಕ್ಷ ಎಚ್. ಹಾಲಪ್ಪ, ಉಭಯ ಸಂಘಟನೆಗಳ ಮುಖಂಡರಾದ ಎ.ಬಿ. ನಾಗರಾಜಗೌಡ, ಹಗರಿಗುಡಿಹಳ್ಳಿ ಶಿವರಾಮ್, ಯು.ಎಂ. ಬಸಯ್ಯ, ಎನ್. ಮಲ್ಲೇಶಪ್ಪ, ಎಂ. ಶಿವಪ್ಪ ಬಣಕಾರ್, ಪಾಟೀಲ್ ಬಸವನಗೌಡ, ಜಿ. ನಾಗೇಂದ್ರಪ್ಪ, ಮಂಜಪ್ಪ, ಆರ್. ಮಧು, ರೇವಣಸಿದ್ದಪ್ಪ, ಪ್ರಕಾಶ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

ಕಂಚಿಕೆರೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗೆ ಮನವಿ

admin

ಹರಪನಹಳ್ಳಿ: ಒಳಮೀಸಲಾತಿ ಹಂಚಿಕೆಯಲ್ಲಿ ಘೋರ ಅನ್ಯಾಯ, ಬಲಾಢ್ಯ ಸಮುದಾಯಗಳ ಪಟ್ಟಿಯಲ್ಲಿ ಅಲೆಮಾರಿಗಳ ಸೇರ್ಪಡೆ, ಜೀವಿಸುವ ಹಕ್ಕನ್ನೂ ಕಸಿದ ಸರ್ಕಾರ: ಪ್ರತಿಭಟನಾಕಾರರ ಆಕ್ರೋಶ

Vijayasiri News

ತಲೆಕೂದಲನ್ನು ಬೋಳಿಸಿಕೊಂಡು ಆಕ್ರೋಶ, ನ್ಯಾ. ನಾಗಮೋಹನದಾಸ್ ವರದಿ ಅಂಗೀಕಾರಕ್ಕೆ ವಿರೋಧ ಅವಕಾಶ ವಂಚಿತ ಸಮುದಾಯಗಳಿಗೆ ಮರಣ ಶಾಸನವಾದ ವರದಿ ಕೈಬಿಡಿ

Vijayasiri News

ಹೂವಿನಹಡಗಲಿ: ನಾಡಕಚೇರಿಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಸಾರ್ವಜನಿಕರ ಅಹವಾಲು ಸ್ವೀಕಾರ: ನಿವೇಶನರಹಿತ ಕುಟುಂಬಗಳಿಗೆ ನಿವೇಶನ ಒದಗಿಸಲು ಕ್ರಮಕ್ಕೆ ಸೂಚನೆ

Vijayasiri News

ಹರಪನಹಳ್ಳಿಯಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ಅಸಹಾಯಕ ಕುಟುಂಬದ ಬದುಕಿನಲ್ಲಿ ಪಂಚಗ್ಯಾರಂಟಿ ಯೋಜನೆಗಳು ಭರವಸೆ ಮೂಡಿಸಿವೆ: ಶಾಸಕಿ ಲತಾ ಮಲ್ಲಿಕಾರ್ಜುನ

Vijayasiri News

ಹೂವಿನಹಡಗಲಿ ಮೂಲದ ಎಎಸ್‌ಐ ಹೃದಯಾಘಾತದಿಂದ ಸಾವು

Vijayasiri News
error: Content is protected !!