ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಬಾಲ್ಯದಲ್ಲಿಯೇ ಮುಖಕ್ಕೆ ಬಣ್ಣ ಬಳಿದುಕೊಂಡು, ನಾಟಕದ ರಂಗಸಜ್ಜಿಕೆ ಮೇಲೆ ಕಾಣಿಸಿಕೊಳ್ಳುವ ಮೂಲಕ ನಾಟಕದಲ್ಲಿನ ಪಾತ್ರಗಳಿಗೆ ಸಹಜತೆಯ ಜೀವಂತಿಕೆ ತುಂಬಿ, ಸ್ತಿçà ಪಾತ್ರಗಳಿಗೆ ಘನತೆ- ಗೌರವಗಳನ್ನು ತಂದುಕೊಡುವ ಜತೆಗೆ ಕಲಾಭಿಮಾನಿಗಳನ್ನು, ಕಲಾರಸಿಕರನ್ನು ರಂಜಿಸಿದ ಅಪರೂಪದ ಅಭಿಜಾತ ಕಲಾವಿದೆ ಸೋಗಿ ನಾಗರತ್ನಾ.
ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಸೋಗಿ ಗ್ರಾಮದವರಾದ ನಾಗರತ್ನಾ ಅವರು ಕಳೆದ ದಶಕದಿಂದ ಹರಪನಹಳ್ಳಿ ಪಟ್ಟಣದ ಶಿಕ್ಷಕರ ಕಾಲೊನಿಯಲ್ಲಿ ವಾಸವಾಗಿದ್ದಾರೆ. ಕನ್ನಡ ವೃತ್ತಿ ರಂಗಭೂಮಿ ಶ್ರೇಷ್ಠ ನಟಿಯರ ಸಾಲಿನಲ್ಲಿ ನಾಗರತ್ನಾ ಪ್ರಮುಖರು. ನಾಟಕದ ಪಾತ್ರ ಯಾವುದೇ ಇರಲಿ; ಅದಕ್ಕೆ ಸಹಜತೆಯ ಸ್ಪರ್ಶ ಬೆರೆಸಿ, ಜೀವಂತಿಕೆ ತುಂಬುವ ಅಪ್ರತಿಮ ಕಲಾನೈಪುಣ್ಯತೆ ಅವರಲ್ಲಿ ಕರಗತ. ನೂರಾರು ಪಾತ್ರಗಳನ್ನು ತಮ್ಮ ಪ್ರತಿಭೆಯ ಗಾರುಡಿಯಲ್ಲಿ ಪಳಗಿಸುವ ಮೂಲಕ ಪಾತ್ರಗಳನ್ನು ಅವಿಸ್ಮರಣೀಯಗೊಳಿಸಿದ ಅವರು, ನಾಡಿನ ರಂಗಭೂಮಿ ಚರಿತ್ರೆಯಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಹೊಂದಿದ್ದಾರೆ.
ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ವೃತ್ತಿ ರಂಗಭೂಮಿಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ನಾಗರತ್ನಾ, ರಂಗಭೂಮಿಯ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ. ಪಾತ್ರಕ್ಕೆ ತಕ್ಕ ಅಭಿನಯ, ಹಾಡು ಹಾಗೂ ನೃತ್ಯದಲ್ಲಿ ಅಪಾರ ಪರಿಣಿತಿ ಹೊಂದಿರುವ ಅವರು, ಗಾಯನ ಹಾಗೂ ಅಭಿನಯ ಎರಡೂ ಪ್ರಕಾರದ ಕಲೆಗಳನ್ನು ಮೇಳೈಸಿಕೊಂಡಿರುವ ಅಪರೂಪದ ಕಲಾವಿದೆಯಾಗಿ ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಜತೆಗೆ, ರಂಗಭೂಮಿಯ ಹಿರಿಮೆಗೂ ಕಾರಣೀಭೂತರಾಗಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.
ಸೋಗಿ ಗ್ರಾಮದ ತುಮುನೆಪ್ಪ- ಕಾಳಮ್ಮ ದಂಪತಿ ಇಬ್ಬರು ಪುತ್ರಿಯರಲ್ಲಿ ನಾಗರತ್ನಾ ಮೊದಲನೆಯವರು. ಮನೆಯಲ್ಲಿ ಹಾಸಿಹೊದ್ದಿದ್ದ ಬಡತನ ನಾಗರತ್ನಾ ಅವರನ್ನು ಶಾಲೆಯ ಮೆಟ್ಟಿಲು ಹತ್ತಲು ಅವಕಾಶ ನೀಡಲೇ ಇಲ್ಲ. ಓದಿದ್ದು ಕೇವಲ ೨ನೇ ತರಗತಿ. ಹೀಗಿದ್ದರೂ, ವಿಶ್ವವಿದ್ಯಾಲಯದಿಂದ ಹೊರಹೊಮ್ಮಿದ ಕಲಾವಿದರನ್ನು ಮೀರಿಸುವಷ್ಟು ಅಪಾರ ನಾಟ್ಯ ಸರಸ್ವತಿ ಅವರಲ್ಲಿ ಮನೆ ಮಾಡಿದ್ದಾಳೆ. ತಂದೆ ಊರಿನ ಧನಿಕರ ಹೊಲ- ಮನೆಗಳಲ್ಲಿ ಕೆಲಸ ಮಾಡಿದರೆ, ತಾಯಿ ಕಾಳಮ್ಮ ತರಕಾರಿ ಬುಟ್ಟಿಯನ್ನು ತಲೆಯ ಮೇಲೊತ್ತು ಮಗಳ ರಂಗಭೂಮಿಯ ಭವಿಷ್ಯಕ್ಕೆ ನೀರಿರೆದಿದ್ದಾರೆ.
ನಾಗರತ್ನಾ ಅವರಿಗೆ ರಂಗಭೂಮಿಯೊAದಿಗಿನ ನಂಟು ಬೆಳೆದಿದ್ದು ಸಹ ಒಂದು ಸೋಜಿಗದ ಪ್ರಸಂಗದ ಮೂಲಕವೇ. ಹುಟ್ಟೂರು ಸೋಗಿ ಗ್ರಾಮದಲ್ಲಿ ನಡೆಯುತ್ತಿದ್ದ ಹಸ್ಯಾಸಿ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಲು ಆಗಮಿಸುತ್ತಿದ್ದ ರಂಗಭೂಮಿಯ ದಿಗ್ಗಜರಾದ ಮರಿಯಮ್ಮನಹಳ್ಳಿ ನಾಗರತ್ನಮ್ಮ, ಮುನ್ಸೂರು ಸುಭದ್ರಮ್ಮ ಅವರಂತ ನಟಿಯರ, ನಟನೆಯ ಸೆಳೆತಕ್ಕೆ ಪ್ರಭಾವಿತಳಾದ ನಾಗರತ್ನಾ, ರಂಗಭೂಮಿಯೇ ತನ್ನ ಉಸಿರು ಎಂದು ತೀರ್ಮಾನಿಸಿ, ತಮ್ಮನ್ನು ಸಮರ್ಪಿಸಿಕೊಂಡೇ ಬಿಟ್ಟರು. ಕೇವಲ ೧೦ನೇ ವಯಸ್ಸಿನಲ್ಲಿಯೇ ಊರಿನ ಹವ್ಯಾಸಿ ರಂಗಭೂಮಿ ಕಲಾವಿದರು ಅಭಿನಯಿಸಿದ ‘ದಕ್ಷಬ್ರಹ್ಮ’ ನಾಟಕದಲ್ಲಿ ಪಾತ್ರಾಭಿನಯ ಮಾಡಿದ ನಾಗರತ್ನಾ ಅವರು, ಇಡೀ ಊರಿನ ಮನೆ ಮಾತಾದರು. ಹೋಟೆಲ್ ಕಟ್ಟೆ, ಊರಮುಂದಿನ ಕಟ್ಟೆಯಲ್ಲಿ ನಾಗರತ್ನಾ ಅವರ ಅಭಿನಯದ್ದೇ ಮಾತು. ಇದು ಬಾಲಕಿ ನಾಗರತ್ನಾ ಅವರ ಮನಸ್ಸಿನಲ್ಲಿ ಮತ್ತಷ್ಟು ಪ್ರಚೋದಿಸಿತು. ತಾಯಿ ಕಾಳಮ್ಮನ ತಕರಾರಿನ ನಡುವೆಯೂ ಚಂದ್ರಶೇಖರ ಕಂಬಾರರ ‘ಕರೋಕರ್’, ‘ಮಲಮಗಳು’ ನಾಟಕಗಳಲ್ಲಿ ಮುಖಕ್ಕೆ ಬಣ್ಣ ಬಳಿದುಕೊಂಡು ಲೀಲಾಜಾಲವಾಗಿ ಅಭಿನಯಿಸುವ ಮೂಲಕ ರಂಗಭೂಮಿಯ ಕಾಯಂ ಅತಿಥಿಯಾಗಿ ಪ್ರವೇಶ ಪಡೆದರು.
ಊರಿನ ಹಿರಿಯ ಪ್ರೋತ್ಸಾಹದ ಮಾತಿಗೆ ಮರುಮಾತನಾಡದೆ ಮನಸೋತ ತಾಯಿ ಕಾಳಮ್ಮ ಮಗಳ ಬಣ್ಣದ ಬದುಕಿಗೆ ಸಮ್ಮತಿ ಸೂಚಿಸಿದರು. ಹೀಗಾಗಿ, ರಂಗಭೂಮಿ ತರಬೇತಿಗಾಗಿ ಹಾವೇರಿ ಜಿಲ್ಲೆಯ ಮರೋಳ(ಬೆಳವಗಿ) ಶರೀಫ ಶಿವಯೋಗಿ ನಾಟ್ಯಸಂಘಕ್ಕೆ ಸೇರ್ಪಡೆಯಾದರು. ರಾತ್ರಿ ಮುಖಕ್ಕೆ ಬಣ್ಣ ಬಳಿದುಕೊಂಡು ನೆರೆದ ಸಹಸ್ರಾರು ಕಲಾಭಿಮಾನಗಳನ್ನು ರಂಜಿಸಲು ಅಣಿಯಾಗುತ್ತಿದ್ದ ನಾಗರತ್ನ ಅವರು, ಹಗಲು ನಾಟ್ಯಸಂಘದ ಕಲಾವಿದರಿಗೆ ಅಡುಗೆ ತಯಾರಿಸುವುದು, ಬಟ್ಟೆ ತೊಳೆಯುವುದು, ಇತ್ಯಾದಿ ಕೆಲಸ ಕಾರ್ಯಗಳನ್ನು ಮಾಡುವುದು ಅನಿವಾರ್ಯ ಆಗಿತ್ತು. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಶ್ರದ್ಧೆ ಹಾಗೂ ಸಾಧನೆ ಮೂಲಕ ರಂಗಭೂಮಿಯ ನುರಿತ ಕಲಾವಿದೆಯಾಗಿ ನಾಗರತ್ನಾ ಹೊರಹೊಮ್ಮಿದರು.
ಚಿತ್ರದುರ್ಗದ ಕುಮಾರಸ್ವಾಮಿ ಅವರ ಕುಮಾರೇಶ್ವರ ನಾಟ್ಯಸಂಘ, ಪ್ರಕಾಶ ಕಡಪಟ್ಟಿ ಅವರ ಕಡಪಟ್ಟಿ ನಾಟ್ಯಸಂಘ, ಸೂಡಿ ಶೇಖರಯ್ಯ ಅವರ ಸೂಡಿನಾಟ್ಯ ಸಂಘ ಸೇರಿದಂತೆ ಹತ್ತಾರು ವೃತ್ತಿ ರಂಗಭೂಮಿ ಕಂಪೆನಿಯಲ್ಲಿ ನಾಗರತ್ನಾ ನಟಿಸಿದ್ದಾರೆ. ಹಂಪಿ ಉತ್ಸವದ ಸಂದರ್ಭದಲ್ಲಿ ಸ್ವಗ್ರಾಮದ ವೀರೇಶ್ವರ ಜಾನಪದ ದೊಡ್ಡಾಟ ಸಂಘ ಪ್ರದರ್ಶಿಸಿದ ‘ಪ್ರಮೀಳಾ ದರ್ಬಾರ್’ ದೊಡ್ಡಾಟದಲ್ಲಿ ಅಭಿನಯಿಸಿದ್ದರು. ಸುಮಧುರ ಕಂಠ, ಸ್ಪಟಿಕಸ್ಪಷ್ಟ ಮಾತಿನ ಮೂಲಕ ಸಹೃದಯರ ಗಮನ ಸೆಳೆಯುತ್ತಿದ್ದ ಕಲಾವಿದೆ ನಾಗರತ್ನಾ ಅವರ ಪಾತ್ರ ಕಿರುತೆರೆ ನಿರ್ದೇಶಕ ಟಿ.ಎಸ್. ನಾಗಭರಣ ಅವರನ್ನು ಆಕರ್ಷಿಸಿತು. ಹೀಗಾಗಿ, ಕಿರುತೆರೆಯಲ್ಲಿಯೂ ಅವಕಾಶ ಹುಡುಕಿ ಬಂದ ಆಹ್ವಾನವನ್ನು ಅತ್ಯಂತ ಶ್ರದ್ಧೆಯಿಂದಲೇ ಸ್ವೀಕರಿಸಿದ ನಾಗರತ್ನಾ ಅವರು ‘ಆವೂರು- ಈವೂರು’, ‘ಆರುಂಧತಿ’, ‘ರಂಗೋಲಿ’, ‘ಮಾಂಗಲ್ಯ’, ‘ಕಲ್ಯಾಣಿ’ ಸೇರಿದಂತೆ ಹಲವು ಧಾರವಾಹಿಗಳಲ್ಲಿಯೂ ಅಭಿನಯಿಸುವ ಮೂಲಕ ನಾಡಿನಾದ್ಯಂತ ಜನಮನ ಗೆದ್ದಿದ್ದಾರೆ.
ರಕ್ತರಾತ್ರಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ಕ್ರಮವಾಗಿ ದ್ರೌಪತಿ ಮತ್ತು ಮಲ್ಲಮ್ಮನ ಪಾತ್ರ ನಟಿ ನಾಗರತ್ನಾ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿವೆ. ಹೆಸರಾಂತ ನಾಟಕಕಾರ ಬಿ.ವಿ. ಈಶರ ‘ಕಲಿತ ಕಳ್ಳ’, ‘ಕೆಟ್ಟಮೇಲೆ ಬುದ್ಧಿ ಬಂತು’, ಸೇರಿದಂತೆ ಗೌರಿಗೆದ್ದಳು, ಬದುಕು ಬಂಗಾರವಾಯುತು, ದಾರಿದೀಪ, ರೈತ ನಗಲಿಲ್ಲ ಸರ್ಕಾರ ಉಳಿಯಲಿಲ್ಲ ಸೇರಿ ನೂರಾರು ಸಾಮಾಜಿಕ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಸಾಮಾಜಿಕ; ಪೌರಾಣಿಕ ಯಾವುದೇ ಆಗಿರಲಿ ಧ್ಯಾನಸ್ಥ ಸ್ಥಿತಿಗೆ ಜಾರಿ ಪಾತ್ರದ ಪರಕಾಯ ಪ್ರವೇಶ ಮಾಡುವ ಅಭಿಜಾತ ಪ್ರತಿಭೆ ನಾಗರತ್ನಾ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಗಳಿಗೆ ಭಾಜನರಾಗಿರುವ ನಾಗರತ್ನ ಅವರು ಹಂಪಿ ಉತ್ಸವ, ವಿಶ್ವ ಕನ್ನಡ ಸಮ್ಮೇಳನ, ಮೈಸೂರ ದಸರಾ ಉತ್ಸವ, ಜಿಲ್ಲಾ ಉತ್ಸವ ಸೇರಿದಂತೆ ನೂರಾರು ವೇದಿಕೆಗಲ್ಲಿಯೂ ಅಭಿನಯಿಸಿದ್ದಾರೆ. ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ನಾಗರತ್ನಾ ಅವರು ಭಾಜನರಾಗಿದ್ದಾರೆ.

