ವಿಜಯಸಿರಿನ್ಯೂಸ್.ಕಾಂ
ಮಳೆಯ ಜೂಜಾಟದ ಹಿನ್ನೆಲೆಯಲ್ಲಿ ಪದೇ ಪದೇ ತೀವ್ರಸ್ವರೂಪದ ಬರಗಾಲದ ಕಡುಕೋಪಕ್ಕೆ ತುತ್ತಾಗಿತ್ತಿರುವ ಹಾಗೂ ತಾಲ್ಲೂಕಿಗೆ ವರದಾನವಾಗಬಹುದಾದ ‘ಗರ್ಭಗುಡಿ ಬ್ರಿಜ್ ಕಂ ಬ್ಯಾರೇಜ್’ ಯೋಜನೆ ಮೂರೂವರೆ ದಶಕಗಳು ಗತಿಸುತ್ತಿದ್ದರೂ. ಇನ್ನೂ ನೆಲಬಿಟ್ಟು ಮೇಲೇಳದಿರುವುದು ಕ್ಷೇತ್ರವನ್ನಾಳಿದ ಜನಪ್ರತಿನಿಧಿಗಳ ಅಸಡ್ಡೆತನಕ್ಕೆ ಹಿಡಿದ ಕೈಕನ್ನಡಿಯಾಗಿದೆ.
ರಾಜಪ್ರಭುತ್ವದ ಕಾಲಘಟ್ಟದಿಂದಲೂ ನಮ್ಮನ್ನು ಆಳಿದ ರಾಜ ಮಹಾರಾಜರು, ಪಾಳೇಗಾರರು, ಅರಸರು, ಸಾವiಂತ ದೊರೆಗಳು ಕೆರೆ- ಕಟ್ಟೆ, ಕಲ್ಯಾಣಿಗಳು, ಕಾಲುವೆಗಳು, ಸರೋವರ ಹಾಗೂ ಜಲಾಶಯಗಳು ಸೇರಿದಂತೆ ವಿವಿಧ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಆಯಾ ಪ್ರಾಂತ್ಯಗಳ ಪ್ರಜೆಗಳ ಕಲ್ಯಾಣಕ್ಕಾಗಿ ಮುಂದಾಗಿರುವುದನ್ನು ನಾವು ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಆಳುವ ಪ್ರತಿನಿಧಿಗಳ ಪರಮ ನಿರ್ಲಕ್ಷö್ಯತನದ ಪರಮಾವಧಿ ಪರಿಣಾಮ, ಇಂಥಹ ನೀರಾವರಿ ಯೋಜನೆಗಳು ಕೇವಲ ಓಟ್‌ಬ್ಯಾಂಕ್ ರಾಜಕಾರಣಕ್ಕೆ ಬಳಕೆಯಾಗುತ್ತಿವೆ. ಈ ತಾಲ್ಲೂಕಿನ ಕೃಷಿಕರ ಬದುಕನ್ನು ಹಸನಗೊಳಿಸಬಹುದಾದ ಹಾಗೂ ರಾಣೆಬೆನ್ನೂರು ಮತ್ತು ಹರಪನಹಳ್ಳಿ ತಾಲ್ಲೂಕಿನ ಸಂಪರ್ಕವನ್ನು ಬೆಸೆಯಬಹುದಾದ ಮಹತ್ವದ ಯೋಜನೆಯನ್ನು ಜಾರಿಗೊಳಿಸುವಲ್ಲಿ ಇಚ್ಛಾಶಕ್ತಿ ತೋರದಿರುವುದು ನಾಚಿಕೆಗೇಡಿನ ಸಂಗತಿ. ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿರುವ ಹರಪನಹಳ್ಳಿ ತಾಲ್ಲೂಕಿಗೆ ಗರ್ಭಗುಡಿ ಬ್ರಿಜ್ ಕಂ ಬಾರೇಜ್ ಯೋಜನೆ ಒಂದಿಷ್ಟು ಅನುಕೂಲತೆ ಒದಗಿಸಲಿದೆ. ತಾಲ್ಲೂಕಿನ ಸರಹದ್ದಿನಲ್ಲಿ ಸುಮಾರು ೨೦ಕಿಲೋ ಮೀಟರ್‌ಗೂ ಅಧಿಕ ಅಂತರದಲ್ಲಿ ಹಾದುಹೋಗಿರುವ ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ನದಿಗೆ ಗರ್ಭಗುಡಿ ಗ್ರಾಮದ ಬಳಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ ತೊಂಬತ್ತರ ದಶಕದಲ್ಲಿಯೇ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಶಂಕುಸ್ಥಾಪನೆ ನೇರವೇರಿಸಿದ್ದರು. ಅವರ ಯುಗಮುಗಿದು, ಅನೇಕ ಜನ ಮುಖ್ಯಮಂತ್ರಿಗಳು ಆಳ್ವಿಕೆ ನಡೆಸಿದರೂ ಸಹ ಇನ್ನೂ ಆರಂಭವಾಗುವ ಭಾಗ್ಯ ಕೂಡಿಬಂದಿಲ್ಲ. ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನಾವೆಚ್ಚವೂ ಸಹ, ಏರಿಕೆಯಾಗುತ್ತಲೇ ಸಾಗುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು, ನಿರ್ಮಾಣದ ಹೊಣೆಹೊತ್ತಿರುವ ಗುತ್ತಿಗೆದಾರರು, ನಿರ್ಮಾಣಕ್ಕೆ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ನದಿಯಲ್ಲಿ ನೀರು ಬೋರ್ಗರೆಯುತ್ತಿರುವ ಪರಿಣಾಮ ಕಾಮಗಾರಿ ಕೈಗೆತ್ತಿಕೊಳ್ಳುವುದು ಅಸಾಧ್ಯ. ಹೀಗಾಗಿ, ಬೇಸಿಗೆಯಲ್ಲಿ ನೀರಿನ ಹರಿವಿನ ಪ್ರಮಾಣ ಕ್ಷೀಣಿಸಿರುವುದರಿಂದ ಕಾಮಗಾರಿ ಕೈಗೆತ್ತಿಕೊಂಡು, ಸಕಾಲದಲ್ಲಿ ಪೂರ್ಣಗೊಳಿಸಲು ಸೂಕ್ತಸಮಯವಾಗಿದೆ. ನಿಗದಿತ ಕಾಲವಾವಧಿಯಲ್ಲಿಯೇ ಯೋಜನೆ ಪೂರ್ಣಗೊಂಡಿದ್ದರೇ, ತಾಲ್ಲೂಕಿನ ಸುಮಾರು ಸಹಸ್ರಾರು ಹೆಕ್ಟೇರ್ ಭೂಮಿ ನೀರಾವರಿ ಆಶ್ರಯಕ್ಕೆ ಒಳಪಡಲಿದೆ. ಜತೆಗೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಹರಪನಹಳ್ಳಿ ತಾಲ್ಲೂಕಿನ ನಡುವೆ ಸಂಪರ್ಕ ಬೆಸೆಯಲಿದ್ದು, ಪ್ರಯಾಣದ ಅಂತರವೂ ಕಡಿಮೆಯಾಗಲಿದೆ. ಜತೆಗೆ, ವಾಣಿಜ್ಯ ವಹಿವಾಟಿಗೂ ನೆರವಾಗಲಿದೆ.
ಯೋಜನೆ ಅನುಷ್ಠಾನದಿಂದಾಗಿ ತಾಲ್ಲೂಕಿನ ೫೦ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸಲು ಯೋಜನೆಯಲ್ಲಿ ಅಳವಡಿಸಲಾಗಿದೆ. ಜತೆಗೆ, ಬೇಸಿಗೆಯ ಹಂಗಾಮಿನಲ್ಲಿ ಕುಡಿಯುವ ನೀರಿನ ತಾಪತ್ರಯ ಎದುರಿಸುತ್ತಿರುವ ೧೩೨ಕ್ಕೂ ಅಧಿಕ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ನೆರವಾಗಲಿದೆ. ಇಂಥಹ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕ್ಷೇತ್ರವನ್ನಾಳಿದ ಶಾಸಕ. ಮಂತ್ರಿಗಳು ಮುಂದಾಗಿದಿರುವುದು ಖೇದಕರ ಸಂಗತಿ.
ಉಳಿದ ಅವಧಿಯಲ್ಲಾದರೂ ಶಾಸಕಿ ಲತಾಮಲ್ಲಿಕಾರ್ಜುನ ಅವರು, ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ಈ ಭಾಗದ ರೈತಾಪಿ ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸಕ್ಕೆ ಮುಂದಾಗಬೇಕಿದೆ.

