Vijayasiri News
ನಮ್ಮೂರ ಸುದ್ದಿರಾಜ್ಯಹರಪನಹಳ್ಳಿ ಸುದ್ದಿ

ಕೋಟ್ಯಂತರ ಮೌಲ್ಯದ ಆಸ್ತಿಯ ಕಾನೂನುಬಾಹಿರ ಮಂಜೂರಾತಿ.!, ಹರಪನಹಳ್ಳಿ: ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈಗ ವಾಣಿಜ್ಯ ವಹಿವಾಟಿನ ಘಾಟು…!!!

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಅದು ನಗರದ ಹೃದಯ ಭಾಗದಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ದೊಡ್ಡ ಕಿಮ್ಮತ್ತಿನ ನಿವೇಶನ!. ಇಂಥಹ ಆಯಕಟ್ಟಿನ ನಿವೇಶನವನ್ನು ಯಾರೋ ಕೇಳಿದರು ಅಂಥ, ಸರ್ಕಾರದ ನೀತಿ, ನಿಯಮಗಳನ್ನು, ರೀತಿ- ರಿವಾಜುಗಳನ್ನೆಲ್ಲಾ ಗಾಳಿಗೆ ತೂರಿ, ಕಾನೂನುಬಾಹಿರವಾಗಿ ಮಂಜೂರಾತಿ ಆದೇಶ ನೀಡುವ ಮೂಲಕ ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡಿದೆ ಅಲ್ಲಿನ ತಾಲ್ಲೂಕು ಆಡಳಿತ.
ಇದು ಆ ನಿವೇಶನಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆಡಳಿತ ಮಾಡಿದ ಮೊದಲ ಕಾನೂನುಬಾಹಿರ ನಡೆಯಾದರೆ, ಇನ್ನೂ ಎರಡನೆಯ ಕಾನೂನುಬಾಹಿರ ಚಟುವಟಿಕೆ ಎಂದರೆ ಆ ನಿವೇಶನವನ್ನು ಪಡೆದ ಸಂಘದ ಪ್ರಮಾದ. ಮಂಜೂರಾತಿ ಆದೇಶದ ಪ್ರತಿಯಲ್ಲಿ ನಮೂದಿಸಿರುವ ಎಲ್ಲಾ ಷರತ್ತುಗಳನ್ನು ಗಂಟುಮೂಟೆ ಕಟ್ಟಿ ಪಕ್ಕದ ಅಯ್ಯನಕೆರೆ ಕೊಳಚೆನೀರಿಗೆ ಎಸೆಯುವ ಮೂಲಕ ಆ ಜಾಗದಲ್ಲಿ ಈಗ ಖಾತೆ- ಕೀರ್ದಿ ತೆರೆದು, ಗಲ್ಲಾಪೆಟ್ಟಿಗೆ ಇಟ್ಟುಕೊಂಡು, ಅಧಿಕೃತ ಹಣಕಾಸು ವಹಿವಾಟು ನಡೆಸುವ ಮೂಲಕ ಅಪಾರ್ಟ್ಮೆಂಟ್ ಸಂಸ್ಕೃತಿಯನ್ನೇ ನಾಚಿ; ನೀರಾಗಿಸುವಂತೆ ಅಲ್ಲಿ ಬಾಡಿಗೆಯ ಹೆಸರಿನಲ್ಲಿ ಕಾಸಿನ ದಂಧೆ ಆರಂಭವಾಗಿದೆ. ಹೀಗಾಗಿಯೇ, ಅಲ್ಲಿನ ನೌಕರರ ವಲಯ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಈ ಕರಾಳ ದಂಧೆಯ ವಿರುದ್ಧ ತೋಳೆರಿಸಿಕೊಂಡು ತಿರುಗಿಬಿದ್ದಿದ್ದಾರೆ. ಜತೆಗೆ ಸಾರ್ವಜನಿಕರ ಆಕ್ರೋಶದ ಕಟ್ಟೆಯೂ ಒಡೆದಿದೆ. ಪಕ್ಕದಲ್ಲಿರುವ ವೀರಭದ್ರೇಶ್ವರ ದೇಗುಲದಲ್ಲಿನ ಗಂಟೆಯ ಶಬ್ದಕ್ಕಿಂತಲೂ ಈಗ ಅಲ್ಲಿ ಆಕ್ರೋಶದ ಸದ್ದು ಜೋರಾಗಿ ಕೇಳಿಸತೊಡಗಿದೆ.
ಈ ವಿವಾದದ ಸದ್ದಿನ ಸುದ್ದಿ ಎಲ್ಲಿಯದು ಅಂತೀರಾ…? ಹಾಗಾದರೆ, ಈ ಸ್ಟೋರಿ ಓದಿ.


ವಿಜಯನಗರ ಜಿಲ್ಲೆಯ ಹರಪನಹಳ್ಳಿ ನಗರದಲ್ಲಿ ನಿವೇಶನ ಒಂದಕ್ಕೆ ಸಂಬಂಧಿಸಿದಂತೆ ವಿವಾದ ತಾರಕ್ಕಕ್ಕೇರಿದೆ. ತಾಲ್ಲೂಕಿನ ಸರ್ಕಾರಿ ನೌಕರರ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡೆ, ವಿಚಾರಗೋಷ್ಠಿ, ಸಂಗೀತ ಕಾರ್ಯಕ್ರಮ, ರಕ್ತದಾನ ಶಿಬಿರದಂತ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕಕ್ಕೆ ನಗರದ 10ನೇ ವಾರ್ಡಿನ ವ್ಯಾಪ್ತಿಗೆ ಒಳಪಡುವ ಆಯಕಟ್ಟಿನ ಪ್ರದೇಶದಲ್ಲಿ ಅಂದರೆ, ಹಳೆಬಸ್‌ನಿಲ್ದಾಣಕ್ಕೆ ಹೊಂದಿಕೊಂಡಂತೆ ಕಂದಾಯ ಇಲಾಖೆಗೆ ಸೇರಿದ ಸರ್ವೇ ನಂಬರ್ 154/1/1, ಡೋರ್ ನಂಬರ್ 382/1854/382ಕ್ಕೆ ಸಂಭಂಧಿಸಿದಂತೆ ಒಟ್ಟು 3,869.88ಚದರಿ ಅಡಿಗಳಷ್ಟು ವಿಶಾಲ ಜಾಗೆಯನ್ನು 2011ರ ಜೂನ್ 15ರಂದು ತಾಲ್ಲೂಕು ಆಡಳಿತ ಮಂಜೂರು ಮಾಡಿತು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ನಗರ ಅಥವಾ ಪಟ್ಟಣ ಪ್ರದೇಶ ವ್ಯಾಪ್ತಿಗೆ ಒಳಪಡುವ ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರಿದ ಜಾಗೆಯನ್ನು ತಾಲ್ಲೂಕು ಆಡಳಿತ ಹೀಗೆ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲವೇ ಇಲ್ಲ. ಆದರೂ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಸಹಾಯಕ ಆಯುಕ್ತರ ಹೆಸರನ್ನು ಜ್ಞಾಪನಪತ್ರದಲ್ಲಿ ಉಲ್ಲೇಖಿಸುವ ಮೂಲಕ ಜಾಗೆಯನ್ನು ಕಾನೂನುಬಾಹಿರವಾಗಿ ನೌಕರರ ಸಂಘಕ್ಕೆ ಮಂಜೂರು ಮಾಡಿದೆ ಎನ್ನಲಾಗಿದೆ.
1964ರ ಸರ್ಕಾರಿ ಭೂಕಂದಾಯ ಕಾಯ್ದೆಯ ಕಲಂ 71ರ ಅನ್ವಯ ಇಂಥಹ ಸರ್ಕಾರಿ ಜಾಗವನ್ನು ಮಂಜೂರು ಮಾಡುವ ಅಧಿಕಾರ ಏನಿದ್ದರೂ ಜಿಲ್ಲಾಧಿಕಾರಿಗೆ ಮಾತ್ರ ಇದೆ. ಆದರೂ, ತಾಲ್ಲೂಕು ಆಡಳಿತ ಈ ಕಾಯ್ದೆಯನ್ನು ಸರಾಸಗಟಾಗಿ ಉಲ್ಲಂಘಿಸುವ ಮೂಲಕ ಜಾಗವನ್ನ ನೌಕರರ ಸಂಘಕ್ಕೆ ನೀಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ನೌಕರರ ಸಂಘಕ್ಕೆ ಮಂಜೂರಾತಿ ನೀಡುವ ಸಂದರ್ಭದಲ್ಲಿ ನೀಡಿದ ಅಧಿಕೃತ ಜ್ಞಾಪನ ಪತ್ರದಲ್ಲಿ ಷರತ್ತುಗಳನ್ನು ವಿಧಿಸಲಾಗಿದ್ದು, ಮೊದಲ ಷರತ್ತು ಏನೆಂದರೆ, ಆಸ್ತಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿರುತ್ತದೆಯೋ ಅದೇ ಉದ್ದೇಶಕ್ಕೆ ಮಾತ್ರ ಉಪಯೋಗಿಸತಕ್ಕದ್ದು ಹಾಗೂ ಪ್ರಾಧಿಕಾರಕ್ಕೆ ಸುಳ್ಳುಮಾಹಿತಿ ನೀಡಿ ಆಸ್ತಿಯನ್ನು ಮಂಜೂರು ಮಾಡಿಸಿಕೊಂಡಿರುವುದು ಕಂಡುಬಂದಲ್ಲಿ ಯಾವುದೇ ಮುನ್ಸೂಚನೆಯನ್ನು ನೀಡದೇ, ಪ್ರಸ್ತಾಪಿತ ಆಸ್ತಿಯನ್ನು ಕಂದಾಯ ಇಲಾಖೆಗೆ ವಿಲೀನಗೊಳಿಸಲಾಗುವುದು ಎಂದು ಎರಡನೇ ಷರತ್ತಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಆಡಳಿತ ನಡೆಸುತ್ತಿದ್ದ ಆಡಳಿತ ಮಂಡಳಿ ಅಧಿಕಾರಾವಧಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘ- ಸಂಸ್ಥೆಗಳ ಕಾರ್ಯಕ್ರಮಗಳಿಗೆ ಸಭಾಂಗಣ ಉಚಿತವಾಗಿ ದೊರೆಯುತ್ತಿತ್ತು. ಆದರೆ, ಈಗಿನ ಆಡಳಿತ ಮಂಡಳಿ, ಸಂಘ- ಸಂಸ್ಥೆಗಳ ಕಾರ್ಯಕ್ರಮಗಳಿಗೆ ಕೊಡಬೇಕಾದರೂ, ಇಂತಿಷ್ಟು ರೇಟ್ ಫಿಕ್ಸ್ ಮಾಡಿದೆ. ಜತೆಗೆ, ಸದರಿ ನಿವೇಶನವನ್ನು ನೌಕರರ ಸಾಮಾಜಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶಕ್ಕಾಗಿ ಎಂದು ಪಡೆದುಕೊಂಡಿರುವ ಸರ್ಕಾರಿ ನೌಕರರ ಸಂಘ, ಈಗ, ಅಲ್ಲಿ ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು “ಅಚ್ಛಾ ನಡಿ…. ಅತ್ಲಾಗೆ” ಎಂದು ಹೊರದಬ್ಬುವ ಮೂಲಕ ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಪಕ್ಕಾ ವ್ಯವಹಾರಕ್ಕೆ ಇಳಿದಿದೆ. ಸಭಾಭವನಕ್ಕೂ ಇಂತಿಷ್ಟು ರೇಟ್ ಎಂದು ವಸೂಲಿಗೆ ಇಳಿಯುವ ಮೂಲಕ ಆಡಳಿತ ಮಂಡಳಿಯ ಮುಖ್ಯಸ್ಥರು ವೈಯಕ್ತಿಕ ಲಾಭ ಮಾಡಿಕೊಳ್ಳುವ ವಹಿವಾಟು ಆರಂಭಿಸಿದ್ದಾರೆ ಎಂದು ಆರೋಪಿಸುತ್ತಾರೆ ಸ್ಥಳೀಯರಾದ ಅಲ್ಪಸಂಖ್ಯಾತರ ಆಸೋಷಿಯೇಷನ್ ತಾಲ್ಲೂಕು ಅಧ್ಯಕ್ಷ ಎ. ಮೂಸಾಸಾಬ್.

ಸದರಿ ವಿವಾದಿತ ನಿವೇಶನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೂ ಸಾರ್ವಜನಿಕ ದೂರು ಸಲ್ಲಿಕೆಯಾಗಿತ್ತು. ಸಾರ್ವಜನಿಕರು ಸಲ್ಲಿಸಿದ ದೂರಿನ ಪ್ವಕರಣವನ್ನ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ನಿಷ್ಕರ್ಷೆ ಮಾಡಿ, ಸಾರ್ವಜನಿಕ ಉಪಯೋಗಕ್ಕೆ ಸದರಿ ಆಸ್ತಿಯನ್ನು ಉಪಯೋಗಿಸಲು ಸಂಬಂಧಿಸಿದವರು ನೀಡಬಹುದು ಎಂಬ ನಿರ್ದೇಶನ ನೀಡಿದ್ದಾರೆ, ಈ ಕುರಿತಂತೆ ಲೋಕಾಯುಕ್ತ ನಿರ್ದೇಶನದ ಪತ್ರವೂ ಸಹ ಹರಪನಹಳ್ಳಿಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿದೆ. ಆದಾಗ್ಯೂ, ಸಹ ಕಂದಾಯ ಇಲಾಖೆ ಸದರಿ ನಿವೇಶವನ್ನು ವಾಪಾಸ್ ಪಡೆಯುವಲ್ಲಿ ಗಟ್ಟಿತನ ತೋರದೇ, ನಿಸ್ಸೀಮ ನಿರ್ಲಕ್ಷತೆಗೆ ಒಳಗಾಗಿರುವುದು ಸಾರ್ವಜನಿಕ ಸಂಶಯಕ್ಕೆ ಕಾರಣವಾಗಿದೆ.
ಈಗಾಗಲೇ ಸಂಘ- ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಸಾರ್ವಜನಿಕರು, ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಸೇರಿದಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು ಹಾಗೂ ಸ್ಥಳೀಯ ಪುರಸಭಾ ಆಡಳಿತಕ್ಕೂ ಮನವಿ ಮಾಡುವ ಮೂಲಕ ಕಾನೂನುಬಾಹಿರವಾಗಿ ಮಂಜೂರಾತಿ ಮಾಡಿರುವ ಮತ್ತು ಷರತ್ತುಗಳನ್ನು ಉಲ್ಲಂಘಿಸಿರುವ ವಿವಾದಿತ ಕಟ್ಟಡವನ್ನು ಕೂಡಲೇ ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಜತೆಗೆ, ಈ ಕುರಿತಂತೆ ಕಸಬಾ ಹೋಬಳಿ ವೃತ್ತ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿ ಕೂಡ ಸ್ಥಳ ತಪಾಸಣೆ ನಡೆಸಿ, ಸಾರ್ವಜನಿಕ ಮಹಜರು ಮಾಡಿದ್ದು, ಸಂಘವು ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಮತ್ತು ಕಾನೂನುರೀತ್ಯಾ ಕಂದಾಯ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲು ಕ್ರಮಕೈಗೊಳ್ಳುವಂತೆ ತಪಾಸಣಾ ವರದಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದ್ದಾರೆ.
ಸಾರ್ವಜನಿಕರ ದೂರು ಮತ್ತು ಇಲಾಖೆ ಅಧೀನ ಸಿಬ್ಬಂದಿಯ ಸ್ಥಳ ತಪಾಸಣೆ ಮತ್ತು ಮಹಜರು ವರದಿ ಇದ್ದಾಗಲೂ, ವಿವಾದಿತ ಸ್ಥಳವನ್ನು ಸುಪರ್ದಿಗೆ ಪಡೆಯಲು ತಹಶೀಲ್ದಾರ್ ಅವರು ಮೀನಮೇಷ ಎಣಿಸುತ್ತಿದ್ದಾರೆ. ಜತೆಗೆ, ಸರ್ಕಾರಕ್ಕೆ ವಾಪಾಸ್ ಪಡೆಯಲು ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಮೇಲ್ಮನವಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳುವಂತೆ ಅರ್ಜಿದಾರರಿಗೆ ಹಿಂಬರಹ ನೀಡಿ ಕೈತೊಳೆದುಕೊಳ್ಳುವ ಮೂಲಕ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿರುವುದು ಹಿಂಬರಹದಲ್ಲಿ ಎದ್ದುಕಾಣುತ್ತದೆ. ಸಾರ್ವಜನಿಕರ ದೂರು ಒಂದೆಡೆ ಇರಲಿ, ತಮ್ಮ ಇಲಾಖೆಯ ಅಧೀನದ ಸಿಬ್ಬಂದಿ ಸಲ್ಲಿಸಿದ ತಪಾಸಣಾ ವರದಿ ಹಾಗೂ ಸ್ಥಳ ಮಹಜರು ವರದಿಯನ್ನೇ ಗಂಭೀರವಾಗಿ ಪರಿಗಣಿಸಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಮೂಲಕ ವಾಪಾಸ್ ಪಡೆಯಲು ಬೇಕಾದ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಜರುಗಿಸಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಿದರು ಸಾಕಿತ್ತು. ತಹಶೀಲ್ದಾರ್ ಅವರ ಕಾರ್ಯವೈಖರಿಗೆ ಜನ ಜೋರಾಗಿ ಚಪ್ಪಾಳೆ ಹೊಡೆದು, ಕೇಕೇ ಹಾಕುತ್ತಿದ್ದರು. . ಆದರೆ, ಹೀಗೆ ಹಿಂಬರಹ ನೀಡಿ ಕೈತೊಳೆದುಕೊಂಡಿರುವುದು ಕೂಡ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಂಶಯಗಳನ್ನು ಹುಟ್ಟುಹಾಕಿದೆ.
ಇಷ್ಟೆಲ್ಲಾ ವಿವಾದಗಳು ಸೃಷ್ಟಿಯಾಗಿ ಸಾರ್ವಜನಿಕ ಹಾಗೂ ನೌಕರರ ಆಕ್ರೋಶಕ್ಕೆ ಕಾರಣವಾಗಿರುವ ಸದರಿ ಕಟ್ಟಡವನ್ನು ಈಗಲಾದರೂ ಅಧಿಕಾರಿಗಳು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಮೂಲಕ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗುತ್ತಾರಾ? ಕಾದುನೋಡಬೇಕಿದೆ.

ಸುದ್ದಿಯನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಲು 👇 ಇಲ್ಲಿ ಒತ್ತಿ

Related posts

||ಅರಸೀಕೆರೆ: ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ|| ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆಟೋಟ ಅತ್ಯಗತ್ಯ: ಜೆ. ಪದ್ಮಲತಾ

Vijayasiri News

ಅರಸೀಕೆರೆ: ಕಲುಷಿತ ಕುಡಿಯುವ ನೀರು ಪೂರೈಕೆ; ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ, ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ಕೊರೆಯಿಸಿ ಕೊಡುವುದಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಭರವಸೆ; ಪ್ರತಿಭಟನೆ ಸ್ಥಗಿತ

Vijayasiri News

ಪಂಚಾಯ್ತಿ ಆಡಳಿತದ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಕಲುಷಿತ ನೀರು ಪೂರೈಕೆ; ಸಾಂಕ್ರಾಮಿಕ ರೋಗದ ಆತಂಕದಲ್ಲಿ ಗ್ರಾಮಸ್ಥರು…!

Vijayasiri News

|| ತೆಲಿಗಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ || ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾನ ಶಿಕ್ಷಣದಿಂದ ಮಾತ್ರ ಮಗುವಿನ ಸಮಗ್ರ ಬೆಳವಣಿಗೆ ಸಾಧ್ಯ

Vijayasiri News

ಆಹಾ… ರಸ್ತೆಯೇ…? ಏನೀದು ನಿನ್ನ ಅವ್ಯವಸ್ಥೆ…!! ಇದು ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ, ಯಾಮಾರಿದರೆ ‘ಯಮನ’ ಸವಾರಿ…!!!

Vijayasiri News

₹. 50ಲಕ್ಷ ವೆಚ್ಚದ ಮೊತ್ತದಲ್ಲಿ ನಿರ್ಮಾಣವಾಗಿರುವ ಆಕರ್ಷಕ ಬೆಳ್ಳಿಪಲ್ಲಕ್ಕಿ, ಹರಪನಹಳ್ಳಿ: ಅರಸೀಕೆರೆ ಕೋಲಶಾಂತೇಶ್ವರಸ್ವಾಮಿ ಬೆಳ್ಳಿಪಲ್ಲಕ್ಕಿ ಪುರ ಪ್ರವೇಶ; ಭರ್ಜರಿ ಮೆರವಣಿಗೆ

Vijayasiri News
error: Content is protected !!