ಮಹಿಳಾ ಅಧಿಕಾರಿಗಳ ಕುರಿತು ಅವಹೇಳನಾಕಾರಿ ಪದಪ್ರಯೋಗ: ಕಾಂಗ್ರೆಸ್ ಆಕ್ರೋಶ
ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರ ಕುರಿತು, ವಿಧಾನ ಪರಿಷತ್‌ನ ಬಿಜೆಪಿಯ ಮುಖ್ಯಸಚೇತಕ ಎನ್. ರವಿಕುಮಾರ ನೀಡಿರುವ ಹೇಳಿಕೆ ಖಂಡಿಸಿ, ಹರಪನಹಳ್ಳಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿ, ಸ್ಥಳೀಯ ಪೊಲೀಸ್ ಠಾಣೆ ದೂರು ಸಲ್ಲಿಸಿದರು.
ಗುರುವಾರ ನಗರದ ಪ್ರವಾಸಿಮಂದಿರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬಿಜೆಪಿ ಹಾಗೂ ಆ ಪಕ್ಷವನ್ನು ಪ್ರತಿನಿಧಿಸುತ್ತಿರುವ ಮೇಲ್ಮನೆಯ ಮುಖ್ಯಸಚೇತಕ ಎನ್. ರವಿಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಬಳಿಕ, ಬಹಿರಂಗ ಸಭೆ ನಡೆಸಿ, ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಮೆರವಣಿಗೆ ಮೂಲಕ ತೆರಳಿ, ದೂರು ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಅವರು ಮಾತನಾಡಿ, ಮಹಿಳೆಯರನ್ನು ನಾವು ಪೂಜ್ಯನೀಯ ಸ್ಥಾನದಲ್ಲಿಟ್ಟಿದ್ದೇವೆ. ಮಾತೆಯ ಸ್ವರೂಪದಲ್ಲಿ ಕಾಣುತ್ತೇವೆ. ಆದರೆ, ಮಹಿಳೆಯರು, ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಪುಂಖಾನುಪುAಕವಾಗಿ ಭಾಷಣ ಬಿಗಿಯುವ ಬಿಜೆಪಿಗರು, ಭಾಷಣದ ಧ್ವನಿ ಇನ್ನೂ ನೇಪಥ್ಯಕ್ಕೆ ಸರಿಯುವ ಮುನ್ನವೇ, ಮಹಿಳೆಯರ ಘನತೆ, ಗೌರವಗಳನ್ನು ಗಾಳಿಗೆ ತೂರಿ, ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಬಿಜೆಪಿ ಗೋಸುಂಬೆತನವನ್ನು ಪ್ರದರ್ಶಿಸುತ್ತಿದೆ ಎಂದು ಹರಿಹಾಯ್ದರು.
ಚಿಂತಕರ ಚಾವಡಿ ಆಗಬೇಕಿದ್ದ ಮೇಲ್ಮನೆ ಎಂಬುದು ಬಿಜೆಪಿಯ ಹರಕುಬಾಯಿಯ ರವಿಕುಮಾರ್, ಸಿ.ಟಿ. ರವಿ, ಚಲುವಾದಿ ನಾರಾಯಣಸ್ವಾಮಿ ಅಂಥ ಕೊಳಕು ಮನಸ್ಥಿತಿ ತಾಣವಾಗಿರುವುದು ಖೇದಕರ ಸಂಗತಿ. ಮೊನ್ನೆ ಮೊನ್ನೆ ಕಲಬುರ್ಗಿಯ ಜಿಲ್ಲೆಯ ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿ ಎಂದು ಸಾರ್ವಜನಿಕವಾಗಿ ಹೆಗ್ಗಳಿಕೆ ಪಡೆದುಕೊಂಡಿರುವ ಡಾ.ಫೌಜಿಯಾ ತರನ್ನುಮ್ ಅವರ ಕುರಿತು, ಇವರೇನು ಪಾಕಿಸ್ತಾನದಿಂದ ಬಂದಿದ್ದಾರೋ? ಇಲ್ಲವೇ ಇಲ್ಲಿನ ಐಎಎಸ್ ಅಧಿಕಾರಿಯೋ ನನಗೆ ಗೊತ್ತಾಗುತ್ತಿಲ್ಲ. ನಿಮ್ಮ ಚಪ್ಪಾಳೆಯನ್ನು ನೋಡಿದರೆ, ಇವರು ಪಾಕಿಸ್ತಾನದಿಂದ ಬಂದಿದ್ದಾರೆ ಎನಿಸುತ್ತದೆ ಎಂದು ರವಿಕುಮಾರ್ ತಮ್ಮ ಕೊಳಕುತನ ಪ್ರದರ್ಶಿಸಿದ್ದರು. ಇದು ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ, ಕೋರ್ಟ್ ಕ್ಷಮಾಪಣೆ ಕೇಳುವಂತೆ ರವಿಕುಮಾರ್ ಮುಖಕ್ಕೆ ತಪರಾಕಿ ಕೊಟ್ಟಿತು. ಆದರೂ, ಸುಧಾರಿಸಿಕೊಳ್ಳದ ರವಿಕುಮಾರ್, ಆ ಪ್ರಕರಣ ಇನ್ನೂ ಮರೆಮಾಚುವ ಮುನ್ನವೇ, ಇನ್ನೊಬ್ಬ ಹಿರಿಯ ಐಎಎಸ್ ಅಧಿಕಾರಿಯೂ ಆಗಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಉದ್ದೇಶಿಸಿ, ‘ಶಾಲಿನಿ ರಜನೀಶ್ ಅವರು ರಾತ್ರಿ ಇಡೀ ರಾಜ್ಯ ಸರ್ಕಾರಕ್ಕಾಗಿ ಹಾಗೂ ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಅಸಭ್ಯವಾಗಿ ಹೇಳಿಕೆ ನೀಡುವ ಮೂಲಕ ದಕ್ಷ ಹಾಗೂ ಪ್ರಾಮಾಣಿಕ ಮಹಿಳಾ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುವ ಯತ್ನ ನಡೆಸುತ್ತಿದ್ದಾರೆ. ರವಿಕುಮಾರ್ ಅವರ ಈ ಹೇಳಿಕೆ, ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಇಂಥಹ ಕೊಳಕುತನದ ಹೇಳಿಕೆಗಳು ಪುನರಾವರ್ತನೆಯಾದರೆ, ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಂ.ವಿ. ಅಂಜಿನಪ್ಪ ಅವರು ಎಚ್ಚರಿಕೆ ನೀಡಿದರು.
ಬಳಿಕ, ಪ್ರತಿಭಟನಾಕಾರರು, ನಗರದ ಪೊಲೀಸ್ ಠಾಣೆಗೆ ತೆರಳಿ, ವಿಧಾನ ಪರಿಷತ್‌ನ ಬಿಜೆಪಿಯ ಮುಖ್ಯಸಚೇತಕ ಎನ್. ರವಿಕುಮಾರ್ ವಿರುದ್ಧ ದೂರು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಬಸವರಾಜ್ ಸಂಗಪ್ಪನವರ್, ನೀಲಗುಂದ ವಾಗೀಶ್, ಲಾಟಿ ದಾದಾಪೀರ್, ಉದ್ದಾರ್ ಗಣೇಶ್, ಹುಲಿಕಟ್ಟಿ ಚಂದ್ರöಪ್ಪ, ಎಲ್. ಮಂಜ್ಯಾನಾಯ್ಕ್, ಎಚ್. ವಸಂತಪ್ಪ, ಇಸ್ಮಾಯಿಲ್ ಎಲಿಗಾರ್, ಎಚ್. ದೇವೇಂದ್ರಗೌಡ, ಓ. ರಾಮಪ್ಪ, ಅಲಗಿಲವಾಡ ವಿಶ್ವನಾಥ, ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ಜಯಲಕ್ಷಿö್ಮÃ ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಭಾಗಿಯಾಗಿದ್ದರು.

