Vijayasiri News
ಒಕ್ಕಲುತನಹಾವೇರಿ

ಬ್ಯಾಡಗಿ: ಸಂಕಷ್ಟಕ್ಕೆ ಸಿಲುಕಿದ ರೈತಾಪಿ ಸಮುದಾಯ, ಕಾಡುಹಂದಿಗಳ ದಾಳಿ; ಕಾಳುಕಟ್ಟುವ ಹಂತದಲ್ಲಿದ್ದ ಗೋವಿನಜೋಳ ಬೆಳೆ ನಾಶ

ಟಿಪ್ಪುಸುಲ್ತಾನ್ ಹುಲಮನಿ

ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಕಾಡಂಚಿನ ಜಮೀನುಗಳು ಸೇರಿದಂತೆ ವಿವಿಧ ಜಮೀನುಗಳ ಮೇಲೆ ದಾಳಿ ನಡೆಸುವ ಕಾಡುಹಂದಿಗಳ ಹಿಂಡು, ರೈತರ ಜಮೀನುಗಳಲ್ಲಿ ಈಗಾಗಲೇ ಕಾಳುಬಲಿಯುವ ಹಂತದಲ್ಲಿರುವ ಗೋವಿನಜೋಳದ ಫಸಲನ್ನು ನಾಶಪಡಿಸುತ್ತಿವೆ. ಆದರೂ, ಕಾಡುಹಂದಿಗಳ ನಿಯಂತ್ರಣಕ್ಕೆ ಮುಂದಾಗದ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಶಿಡೇನೂರು ಗ್ರಾಮದಲ್ಲಿ ವಿವಿಧ ರೈತರಿಗೆ ಸೇರಿದ ಸುಮಾರು 50ಕ್ಕೂ ಎಕರೆಗೂ ಅಧಿಕ ವಿಸ್ತೀರ್ಣದಷ್ಟು ಕಾಳುಬಲಿಯುವ ಹಂತದಲ್ಲಿರುವ ಗೋವಿನಜೋಳದ ಬೆಳೆಯನ್ನು ಕಾಡುಹಂದಿಗಳು ನಾಶಪಡಿಸಿ ರೈತಾಪಿ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಗ್ರಾಮದಲ್ಲಿ ಹಂದಿಗಳ ಹಾವಳಿಯಿಂದಾಗಿ ನಾಶಕ್ಕೆ ಒಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಕಿರಣಕುಮಾರ ಗಡಿಗೋಳ ಈ ಸಂದರ್ಭದಲ್ಲಿ ಮಾತನಾಡಿ, ಕಾಡು ಪ್ರಾಣಿಗಳ ಹಾವಳಿಗೆ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿರುವ ಪ್ರಕರಣಗಳು ಹೊಸವೇನಲ್ಲ. ಕೃಷ್ಣಮೃಗ, ಚಿರತೆ, ಸೈನಿಕಹುಳು ಸೇರಿದಂತೆ ಇನ್ನಿತರೆ ಜೀವ ಸಂಕುಲಗಳ ಉಪಟಳಕ್ಕೆ ರೈತರು ಕೃಷಿಯೇ ಸಾಕಪ್ಪ ಸಾಕು ಎಂಬಂತಾಗಿದೆ. ಜತೆಗೆ, ಈಗ, ಕಾಡು ಹಂದಿಗಳ ದಾಳಿ ಆರಂಭವಾಗಿದ್ದು, ಇದರಿಂದಾಗಿ, ಗ್ರಾಮದ ವಿವಿಧ ರೈತರಿಗೆ ಸೇರಿದ ಸುಮಾರು 50ಎಕರೆಗೂ ಅಧಿಕ ಪ್ರಮಾಣದ ಜಮೀನುಗಳಲ್ಲಿ ಈಗಾಗಲೇ ಕಾಳುಬಲಿಯುವ ಹಂತದಲ್ಲಿದ್ದ ಗೋವಿನಜೋಳ ನಾಶವಾಗಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು, ಹಂದಿಗಳ ಹಾವಳಿಯ ಮೇಲೆ ನಿಯಂತ್ರಣ ಹಾಕುವಂತೆ ಆಗ್ರಹಿಸಿದರು.


ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಂಚಿನ ಜಮೀನುಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಡುಹಂದಿಗಳ ದಾಳಿಯ ಪ್ರಕರಣಗಳು ಕೇಳಿಬರುತ್ತಿವೆ. ಕಾಡು ಪ್ರಾಣಿಗಳಿಂದ ರೈತರ ಜೀವಗಳು ಸೇರಿದಂತೆ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ವಿಷಯದಲ್ಲಿ ಸರ್ಕಾರ ಹಾಗೂ ಸಂಬಂಧಿಸಿದ ಅರಣ್ಯ ಇಲಾಖೆ ನಿರ್ಲಕ್ಷ್ಯತೆ ತೋರಿದೆ. ಇದರಿಂದ ರೈತರು ಬೆಳೆದಂತಹ ಬೆಳೆಯನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಲೂಕಿನ ವಿವಿಧೆಡೆ ಚಿರತೆಗಳ ದಾಳಿ ಸೇರಿದಂತೆ ಇತ್ತೀಚೆಗೆ ಕಾಡು ಹಂದಿಗಳ ದಾಳಿಗಳು ಪ್ರಾರಂಭವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ವಿಷಯ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ, ಜಾಣ ಕುರುಡು ನೀತಿಯನ್ನು ಅನುಸರಿಸುವ ಮೂಲಕ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ ಎಂದು ಆರೋಪಿಸಿದರು.
ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುವ ರೈತರ ಬೆಳೆಗಳಿಗೆ ಸರ್ಕಾರ ಪ್ರತಿ ಹೆಕ್ಟೇರಗೆ ಕೇವಲ ₹. 2,250 ಪರಿಹಾರ ನೀಡುತ್ತಿದೆ. ಇದರಿಂದ ಸಂತ್ರಸ್ತ ರೈತ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಿಲ್ಲ, ಕೂಡಲೇ ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೊದಲು ಕಾಡು ಹಂದಿಗಳ ನಿಯಂತ್ರಣಕ್ಕೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ ಅರಣ್ಯ ಇಲಾಖೆಯ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನುಗಳನ್ನು ಸಾಗುವಳಿ ಮಾಡುವುದೇ ದುಸ್ತರವಾಗಿದೆ. ಈ ಕುರಿತು ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಕೊಟ್ಟು ಸಾಕಾಗಿದೆ. ಕಾಡುಹಂದಿಯ ದಾಳಿಯನ್ನು ತಪ್ಪಿಸುವ ಹಿನ್ನೆಲೆಯಲ್ಲಿ ರೈತರು ಜಮೀನುಗಳಿಗೆ ತೆರಳಿದರೆ, ಆ ಹಂದಿ ಕ್ರೂರ ಪ್ರಾಣಿಯಾಗಿದ್ದು, ರೈತರ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ, ರೈತರು ಜೀವ ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ, ಇಲಾಖೆ ಅಧಿಕಾರಿಗಳು ಹಂದಿಗಳನ್ನು ಹಿಡಿಯುವ ಮೂಲಕ ಬೇರೆಡೆಗೆ ಸಾಗಿಸುವಂತೆ ಕಿರಣ್‌ಕುಮಾರ್ ಗಡಿಗೋಳ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಮಪ್ಪ ದೊಡ್ಮನಿ, ಭೀಮಪ್ಪ ದೊಡ್ಮನಿ, ಹನುಮಂತಪ್ಪ ದೊಡ್ಮನಿ, ಭೀಮಪ್ಪ ದೊಡ್ಮನಿ, ನಾಗಪ್ಪ ಕರೂರು, ಸೋಮಶೇಖರ ಬೆಟಗೇರಿ, ಶಿವನಾಗಪ್ಪ ದೇಸಾಯಿ, ದೇವೆಂದ್ರಪ್ಪ ದೊಡ್ಮನಿ, ತಿರಕಪ್ಪ ಮತ್ತಿಹಳ್ಳಿ, ಶಿವಪ್ಪ ದೊಡ್ಮನಿ, ಶೋಭಕ್ಕ ಕರೂರು, ಶಿವಪ್ಪ ನೆಲ್ಲಿಕೊಪ್ಪ, ಹನುಮಂತಪ್ಪ ಶಿಡೇನೂರ ಸೇರಿದಂತೆ ಇನ್ನಿತರರು ಇದ್ದರು.

ಇದನ್ನೂ ಓದಿ: ಬ್ಯಾಡಗಿ: ಬೆಳೆಯಲ್ಲಿ ನಿಯಂತ್ರಣಕ್ಕೆ ಬಾರದ ಕಳೆ, ಮೆಕ್ಕೆಜೋಳದ ಬೆಳೆಯಲ್ಲಿ ಮಹಾಮಾರಿ ‘ಮುಳ್ಳುಸಜ್ಜೆ’ ಕಳೆ: ಕಂಗಾಲಾದ ಅನ್ನದಾತ

Related posts

ಬ್ಯಾಡಗಿ: ಗೋವಿಗೆ ಸಂಭ್ರಮದ ಸೀಮಂತ ! || ಹೊಸ ಸೀರೆ; ಹೂವಿನ ದಂಡೆ ಮುಡಿಸಿ ಗೋವಿನ ಸಿಂಗಾರ ! ||

Vijayasiri News

ಬ್ಯಾಡಗಿ: ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತಾಪಿ ಸಮುದಾಯದ ಬದುಕನ್ನು ಹಸನಾಗಿಸಲು ಕಂಕಣಬದ್ಧ: ಶಾಸಕ ಶಿವಣ್ಣವರ

Vijayasiri News

|| ಬ್ಯಾಡಗಿ || ಹೆಚ್ಚಿದ ಬೀದಿ ನಾಯಿಗಳ ಹಾವಳಿ; ಸಾರ್ವಜನಿಕರ ಆಕ್ರೋಶ

Vijayasiri News

ಬ್ಯಾಡಗಿ: ಖಾಸಗೀ ಬಸ್ ಉರುಳಿ ಇಬ್ಬರು ಪ್ರಯಾಣಿಕರ ಸಾವು, ಆರು ಜನರಿಗೆ ಗಂಭೀರ ಗಾಯ

Vijayasiri News

|| ಬ್ಯಾಡಗಿ: ಬನ್ನಿಹಟ್ಟಿ ಗ್ರಾಮದಲ್ಲಿ ಮರಡಿಬಸವೇಶ್ವರ ಸಮುದಾಯಭವನ ಲೋಕಾರ್ಪಣೆ || ದೇವಾಲಯಗಳು ನಮ್ಮ ಧಾರ್ಮಿಕ- ಸಾಂಸ್ಕೃತಿಕ ಪರಂಪರೆ ಪ್ರತೀಕ: ಶಾಸಕ ಶಿವಣ್ಣವರ

Vijayasiri News

ಬ್ಯಾಡಗಿ: ಬೆಳೆಯಲ್ಲಿ ನಿಯಂತ್ರಣಕ್ಕೆ ಬಾರದ ಕಳೆ, ಮೆಕ್ಕೆಜೋಳದ ಬೆಳೆಯಲ್ಲಿ ಮಹಾಮಾರಿ ‘ಮುಳ್ಳುಸಜ್ಜೆ’ ಕಳೆ: ಕಂಗಾಲಾದ ಅನ್ನದಾತ

Vijayasiri News
error: Content is protected !!