Vijayasiri News
ರಾಜ್ಯವಿಜಯನಗರ

ಒಕ್ಕಲುತನ ಪರಂಪರೆಯ ವಿಶಿಷ್ಟ ಉತ್ಸವ, ಭೂಲೋಕಕ್ಕೆ ಮಳೆ ತರಿಸುವ ಮಹಾದೇವ ನಮ್ಮ ಈ ಜೋಕುಮಾರಸ್ವಾಮಿ.

ವಿಜಯಸಿರಿನ್ಯೂಸ್.ಕಾಂ/ ಹಗರಿಬೊಮ್ಮನಹಳ್ಳಿ
ನಮ್ಮ ಒಕ್ಕಲುತನ ಪರಂಪರೆಯ ಜತೆಗೆ ಅವಿನಾಭಾವವಾಗಿ ಬೆಸೆದುಕೊಂಡಿರುವ ಜಾನಪದ ಸಂಸ್ಕೃತಿಯ ಜೋಕುಮಾರಸ್ವಾಮಿ ಉತ್ಸವ ಈಗ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿಯೇ ನಡೆದಿದೆ. ಜಾನಪದ ಸಂಸ್ಕೃತಿಯ ವಾರಾಸುದಾರನಾದ ಜೋಕುಮಾರಸ್ವಾಮಿ ಉತ್ಸವವೇ ಒಂದು ವಿಶಿಷ್ಟ, ವಿಭಿನ್ನ ಹಾಗೂ ವಿಶೇಷ ಆಚರಣೆಯ ಹಬ್ಬ. ಈ ಜೋಕುಮಾರಸ್ವಾಮಿಯನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಿದರೆ, ಮಳೆ- ಬೆಳೆ ಸಮೃದ್ಧಿಯಾಗುತ್ತದೆ. ರೈತಾಪಿ ಕುಟುಂಬಗಳ ಬದುಕು ಹಸನಾಗುತ್ತದೆ ಎಂಬ ಬಲವಾದ ನಂಬಿಕೆ ಕೃಷಿ ಪರಂಪರೆಯಲ್ಲಿ ಹಾಸುಹೊಕ್ಕಿರುವ ನಂಬಿಕೆ.
ಮುAಗಾರು ಹಂಗಾಮಿನ ಆರಂಭದ ಕಾರಹುಣ್ಣಿಮೆಯಿಂದ ಹಿಡಿದು, ಅನಂತನ ಹುಣ್ಣಿಮೆಯವರೆಗೂ ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಹಲವು ವಿಶಿಷ್ಟ ದೈವತ್ವದ ಹಬ್ಬ- ಹರಿದಿನಗಳು, ಆಚರಣೆಗಳು ಅನಾದಿಕಾಲದಿಂದಲೂ ನಡೆದುಬಂದಿವೆ. ಆ ಪೈಕಿ, ಜೋಕುಮಾರಸ್ವಾಮಿ ಹಬ್ಬ ಒಕ್ಕಲುತನದ ಪರಂಪರೆಯಲ್ಲಿ ವಿಶೇಷ ಹಬ್ಬವಾಗಿಯೂ ಆರಾಧಿಸಿ, ಆಚರಿಸಲ್ಪಡುತ್ತಿದೆ. ಅದುವೇ ‘ಮಳೆ ತರಿಸುವ ಮಹಾಮಹಿಮಾ ನಮ್ಮ ಈ ಜೋಕುಮಾರಸ್ವಾಮಿ…’


ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ… ಜೋಕುಮಾರ… ಜೋಕುಮಾರ…’ ಹೀಗೆ ತಮ್ಮ ಗಾನಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತ ಜೋಕುಮಾರನನ್ನು ಆರಾಧಿಸುವ ಜಾನಪದೀಯ ಹಬ್ಬದ ಸಂಭ್ರಮ ಈಗ, ಹಳ್ಳಿಗಳಲ್ಲಿ ಮನೆಮಾಡಿದೆ. ಜತೆಗೆ, ಹೊಸ ತಲೆಮಾರಿನ ಪೀಳಿಗೆಯಲ್ಲಿ ಅಚ್ಚರಿ ಜತೆಗೆ, ಜಾನಪದ ಸಾಂಸ್ಕೃತಿಕ ಸೊಬಗಿನ ಸಿರಿಯನ್ನು ಪರಿಚಯಿಸುತ್ತಿದೆ.
ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ ವಿಶಿಷ್ಟ ಧಾರ್ಮಿಕ ಹಬ್ಬ. ಈತನನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸಿ, ಆರಾಧಿಸಿದರೆ ಮಳೆ, ಬೆಳೆಗಳೆಲ್ಲವೂ ನಳನಳಿಸುತ್ತವೆ ಎಂಬ ನಂಬಿಕೆ ನಮ್ಮ ಕೃಷಿಕರಲ್ಲಿ ಬಲವಾಗಿ ಬೇರೂರಿದೆ. ಈತನ ಹಬ್ಬಕ್ಕೂ ಮುನ್ನ ಭೂಲೋಕ ಗಣೇಶನ ಉತ್ಸವವನ್ನು ಆಚರಿಸುತ್ತದೆ. ಗಣೇಶ ಶಿಷ್ಟ ಸಂಸ್ಕೃತಿಯ ವಾರಾಸುದಾರನಾದರೆ, ಜೋಕುಮಾರಸ್ವಾಮಿ ಕೃಷಿ ಸಂಸ್ಕತಿಯ ಪ್ರತೀಕ. ವಾರಗಳ ಕಾಲ ಕಾಯಿ; ಕಡುಬಿನ ಭರ್ಜರಿ ಭೂರೀ ಭೋಜನ ಸವಿದ ಗಣೇಶ, ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ, ತಂದೆ- ತಾಯಿ, ಶಿವ; ಪಾರ್ವತಿಗೆ ವರದಿ ಸಲ್ಲಿಸಿದರೆ, ಜಾನಪದ ಹಾಗೂ ಒಕ್ಕಲುತನ ಪರಂಪರೆಯ ವಾರುಸುದಾರನಾದ ಜೋಕುಮಾರಸ್ವಾಮಿ ‘ಭೂಲೋಕದಲ್ಲಿ ಮಳೆ ಇಲ್ಲದೇ ಜೀವಸಂಕುಲ ತಲ್ಲಣಿಸುತ್ತಿದೆ. ಹನಿ ನೀರಿಗಾಗಿ ನರಮನುಷ್ಯ, ಪ್ರಾಣಿ- ಪಕ್ಷಿಗಳು ಹಾಹಾಕಾರ ಹಾಕುತ್ತಿವೆ. ಮಳೆ ಸುರಿಯದೇ ಹೋದರೆ, ಇಡೀ ಭೂಮಂಡಲ ನರಕಕೂಪವಾಗುತ್ತದೆ’ ಎಂದು ಜನರ ಕಷ್ಟ ಕಾರ್ಪಣ್ಯಗಳ ವರದಿ ಒಪ್ಪಿಸಿ, ಮಳೆ ಸುರಿಸುವಂತೆ ಭಿನ್ನಹಿಸಿಕೊಳ್ಳುತ್ತಾನೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿ ಮನೆಮಾಡಿದೆ.


ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ಗಂಗಾಮತ ಸಮುದಾಯ ವಂಶಪಾರಂಪರ್ಯ ಹಿರಿಯ ಅರಾಧಕರಾದ ಸುಣಗಾರ ಯಮುನಮ್ಮ, ಯಲ್ಲಮ್ಮ, ಬಸಮ್ಮ, ಅಂಬಮ್ಮ, ಹುಲಿಗೆಮ್ಮ, ಜತೆಗೆ, ಸುಣಗಾರ ಪದ್ಮಾವತಿ, ಹುಲಿಗೆಮ್ಮ, ರೇಣುಕಮ್ಮ, ನಾಗಮ್ಮ, ರೇಣುಕಾ, ನಿರ್ಮಲಾ ಸೇರಿದಂತೆ ಹಲವು ಮಹಿಳೆಯರ ತಂಡ, ಜೋಕುಮಾರಸ್ವಾಮಿಯನ್ನು ತಲೆಯ ಮೇಲೆ ಹೊತ್ತು, ಆತನ ಕುರಿತ, ಕಥೆ, ದಂತಕತೆ, ಪೌರಾಣಿಕ ಹಿನ್ನೆಲೆಯ ಸನ್ನಿವೇಶದ ಚಿತ್ರಣಗಳನ್ನು ಹಾಡುಗಳ ಮೂಲಕ ಸ್ವಾರಸ್ಯಕರವಾಗಿ ಪ್ರಸ್ತುತಿ ಪಡಿಸುವ ಮೂಲಕ ಈ ಧಾರ್ಮಿಕ ಆಚರಣೆಯನ್ನು ಆಚರಿಸಲಾಗುತ್ತಿದೆ. ಈ ತಂಡದ ಮಹಿಳೆಯರು ಊರೂರು ಸುತ್ತುವ ಮೂಲಕ ವಿಶೇಷವಾಗಿ ಆಚರಿಸುತ್ತಿದ್ದಾರೆ.
ಭಾದ್ರಪದ ಮಾಸದ ಅಷ್ಟಮಿಯ ದಿನ ಜೋಕುಮಾರಸ್ವಾಮಿ ಗಂಗಾಮತಸ್ಥರ ಸಮುದಾಯದ ಮನೆಯಲ್ಲಿಯೇ ಜನಿಸುತ್ತಾನೆ. ಜೋ ಹಾಗೂ ಜೇಷ್ಠದೇವಿಯ ಮುನಿಗಳ ಪುತ್ರನೆಂದು ಹೇಳಲಾಗುತ್ತದೆ. ಮಣ್ಣಿನಿಂದ ತಯಾರಿಸಲಾದ ಮೂರ್ತಿಯನ್ನು ಬೇವಿನ ಎಸಳುಗಳ ಉಡುಗೆಯೊಂದಿಗೆ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸುತ್ತಾರೆ. ಅಲಂಕೃತಗೊAಡ ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿಕೊಂಡು, ಆರಂಭದಲ್ಲಿ ಗ್ರಾಮದ ಗೌಡರಮನೆ ಇಲ್ಲವೇ ಶಾನಭೋಗರ, ಆಯಗಾರರ, ತಳವಾರರ, ಬಣಕಾರರ ಮನೆಗಳಿಗೆ ಭೇಟಿ ನೀಡಿ, ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾ, ಆಚರಣೆಯನ್ನು ಆರಂಭಿಸುತ್ತಾರೆ. ಹೀಗೆ, ೯ದಿನಗಳ ಕಾಲ ತಂಬ್ರಹಳ್ಳಿ ಉತ್ತರಭಾಗ, ಚಿಲಗೋಡು, ಯಡ್ರಾಮನಹಳ್ಳಿ, ಕ್ಯಾದಗಿಹಳ್ಳಿ, ಬಾಚಿಗೊಂಡನಹಳ್ಳಿ, ಆನಂದದೇವನಹಳ್ಳಿ, ಅಂಕ್ರಸಮುದ್ರ ಸೇರಿದಂತೆ ವಿವಿಧ ಊರುಗಳಲ್ಲಿ ಸಂಚರಿಸುತ್ತಾರೆ ಎನ್ನುತ್ತಾರೆ. ಈ ಪವಿತ್ರ ಧಾರ್ಮಿಕ ಆಚರಣೆ ಅನಾದಿ ಕಾಲದಿಂದಲೂ ನಮ್ಮ ಮನೆಯಲ್ಲಿಯೇ ನಡೆಯುತ್ತಿರುವುದು ನಮ್ಮ ಸೌಭಾಗ್ಯ ಎನ್ನುತ್ತಾರೆ ಆರಾಧಕ ಮನೆತನದವರಾದ ತಂಬ್ರಹಳ್ಳಿ ಪರಶುರಾಮ ಸುಣಗಾರ.
ಅನಂತನ ಹುಣ್ಣಿಮೆಯ ದಿನ, ಅಂದರೆ, ಒಂಭತ್ತನೇ ದಿನಕ್ಕೆ ಪರಿಶಿಷ್ಟರ ಕಾಲೊನಿಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಜೋಕುಮಾರಸ್ವಾಮಿ ಸಾಯುತ್ತಾನೆ. ಬಳಿಕ, ಜೋಕಪ್ಪನನ್ನು ಊರ ಹೊರವಲಯದಲ್ಲಿರುವ ಬಟ್ಟೆ ತೊಳೆಯುವ ಬಂಡೆಯ ಅಡಿಯಲ್ಲಿ ಹಾಕಿ ಬರುತ್ತಾರೆ. ಇದು, ಹುಣ್ಣಿಮೆಯ ದಿನದಂದು ನಡೆಯುವ ಧಾರ್ಮಿಕ ಆಚರಣೆಯಾಗಿರುವುದರಿಂದ, ಈ ಹುಣ್ಣಿಮೆಯನ್ನು ಜೋಕಪ್ಪನ ಹುಣ್ಣಿಮೆಯಂತಲೂ ಕರೆಯುವ ರೂಢಿ ಹಳ್ಳಿಗಳಲ್ಲಿ ಇದೆ.
ಹಳ್ಳಿಗಳ ಓಣಿಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಕೃಷಿಕರು ಕೊಡುವ ದವಸ, ಧಾನ್ಯಗಳನ್ನು ಆರಾಧಕರು ಸಂಗ್ರಹಿಸುವ ಮೂಲಕ, ಅವರಿಗೆ ಪ್ರತಿಯಾಗಿ ಜೋಕುಮಾರನ ಕಪ್ಪುಮಸಿ ಬೆರೆತ ಬೇವಿನಸೊಪ್ಪು ಹಾಗೂ ಧಾನ್ಯದ ಕಾಳುಗಳನ್ನು ಕೊಡುತ್ತಾರೆ. ಜೋಕುಮಾರನ ಈ ಕಪ್ಪುಮಸಿಯನ್ನು ಮಜ್ಜಿಗೆಯಲ್ಲಿ ಬೆರೆಸಿಕೊಂಡು, ಮಾರನೇ ದಿನ, ತಮ್ಮ ಜೋಳ ಹಾಗೂ ಇತರೆ ಬೆಳೆಗಳಿಗೆ ಚರಗದ ರೂಪದಲ್ಲಿ ಸಿಂಪಡಿಸುತ್ತಾರೆ. ಹೀಗೆ, ಚರಗ ಹೊಡೆಯುವುದರಿಂದ ಬೆಳೆಗಳು ಸಮೃದ್ಧಿಯಾಗಿ ಬೆಳೆದು, ಕೃಷಿಕರ ಕೈಹಿಡಿಯುತ್ತವೆ ಎಂಬುದು ಒಕ್ಕಲುತನ ಪರಂಪರೆಯಲ್ಲಿರುವ ನಂಬಿಕೆ.
ಜೋಕುಮಾರಸ್ವಾಮಿ ಕುರಿತಂತೆ ಹಲವು ಕಥೆ, ದಂತಕಥೆಗಳು ಪ್ರಚಲಿತದಲ್ಲಿವೆ. ಜೋಕುಮಾರ ಹಾಗೂ ಗೌರಿದಂಪತಿಗೆ ಸಂತಾನಭಾಗ್ಯ ಇಲ್ಲದೇ, ಸಂಸಾರಿಕ ಜೀವನವೇ ಜಿಗುಪ್ಸೆಯಾಗುತ್ತದೆ. ಕೊನೆಗೆ ದಂಪತಿಗಳು ಸಂತಾನಕ್ಕಾಗಿ ಶಿವನ ಮೊರೆ ಹೋಗುವ ಮೂಲಕ ಕಠಿಣ ವೃತ ಆಚರಿಸುತ್ತಾರೆ. ದಂಪತಿಗಳ ವೃತಕ್ಕೆ ಮಣಿದ ಶಿವವು ಪುತ್ರ ಸಂತಾನವನ್ನು ಕಲ್ಪಿಸುತ್ತಾನೆ. ವಿಚಿತ್ರ ಎಂದರೆ, ಆ ಮಗುವಿಗೆ ಕೇವಲ ಏಳೆ ದಿನಗಳ ಆಯುಸ್ಸು. ಒಂದೆಡೆ ಸಂತಾನಭಾಗ್ಯ ದೊರಕಿತು ಎಂಬ ಸಂಭ್ರಮ ಮನೆಮಾಡಿದ್ದರೆ, ಕೇವಲ ಏಳೇ ದಿನಗಳಲ್ಲಿ ಆ ಮಗು ನಮ್ಮಿಂದ ದೂರಾಗುತ್ತದೆ ಎಂಬ ಸಂಕಟ.
ಇಂಥಹ ಸಂದಗ್ಧತೆಯಲ್ಲಿ ಸಿಲುಕಿದ ಜೋಕುಮಾರಸ್ವಾಮಿ ಕುದುರೆಯನ್ನು ಏರಿ ಹೊರಡುತ್ತಾನೆ. ಮಾರ್ಗದಲ್ಲಿ ಮಳೆ ಇಲ್ಲದೇ, ಕಮರುತ್ತಿರುವ ಬೆಳೆ, ದಿಕ್ಕುತೋಚದೇ, ತಲೆಯಮೇಲೆ ಕೈಹೊತ್ತು ಚಿಂತ್ರಾಕ್ರಾಂತನಾಗಿ ಕಣ್ಣೀರು ಸುರಿಸುತ್ತಿರುವ ರೈತ. ಈ ದೃಶ್ಯಗಳು ಜೋಕುಮಾರಸ್ವಾಮಿಯನ್ನು ಘಾಸಿಗೊಳಿಸಿದವು. ಕೂಡಲೇ, ತನ್ನ ಹೆಗಲ ಮೇಲಿದ್ದ ಹೊದಿಕೆಯನ್ನು ಜೋರಾಗಿ ಬೀಸಿದನಂತೆ. ಕ್ಷಣಾರ್ಧದಲ್ಲಿಯೇ ಮಳೆ ಅರ್ಭಟಿಸುವ ಮೂಲಕ ಜೋರಾಗಿ ಸುರಿಯುತಂತೆ. ಒಣಗಿನಿಂತ ಪೈರು, ಜೀವಕಳೆ ಪಡೆದುಕೊಂಡು, ನಳನಳಿಸಲು ಆರಂಭಿಸಿತಂತೆ.
ಇದರಿಂದ ಸಂತೃಪ್ತಭಾವದೊಂದಿಗೆ ಮುಂದೆ ಸಾಗಿದ ಜೋಕುಮಾರಸ್ವಾಮಿ ಮುಂದೆ ಸಾಗುತ್ತಿದ್ದಾಗ, ಯುವತಿ ಒಬ್ಬಳ ಮೋಹಕ್ಕೆ ಒಳಗಾಗುತ್ತಾನೆ. ಸುದ್ದಿ ತಿಳಿದ ಯುವತಿಯ ತಂದೆ, ಜೋಕುಮಾರನನ್ನು ಎಳೆತಂದು, ಆತನ ರುಂಡ ಕತ್ತರಿಸಿ, ಹರಿಯುತ್ತಿದ್ದ ನದಿಯಲ್ಲಿ ಎಸೆದೆನಂತೆ. ನದಿಯಲ್ಲಿ ತೇಲಿ ಹೋಗುತ್ತಿದ್ದ ಜೋಕುಮಾರನ ರುಂಡ, ದೋಣಿ ನಡೆಸುತ್ತಿದ್ದ ಬೆಸ್ತನ ಕಣ್ಣಿಗೆ ಬೀಳುತ್ತದೆ. ಬರಗಾಲದ ಕಾರ್ಮೋಡದ ಕತ್ತಲನ್ನು ಸರಿಸಿ, ಬಾಡಿಹೋಗಿದ್ದ ಬೆಳೆಗಳಿಗೆ ಜೀವಕಳೆಯ ಮರಳಲು ಕಾರಣೀಭೂತನಾಗಿದ್ದ ಜೋಕುಮಾರನ ರುಂಡವನ್ನು ತಂದು, ಶ್ರದ್ಧಾ, ಭಕ್ತಿಯಿಂದ ಆಚರಿಸಲು ಮುಂದಾದನAತೆ. ಹೀಗಾಗಿ, ಮಳೆ ತರಿಸುವ ಮಹಾಮಹಿಮಾ ಜೋಕುಮಾರಸ್ವಾಮಿ ಗಂಗಾಮತಸ್ಥರೇ ಆರಾಧಿಸುತ್ತಿದ್ದಾರೆ ಎಂಬುದು ನಂಬಿಕೆ ಗ್ರಾಮೀಣ ಭಾಗದಲ್ಲಿ ಬೇರೂರಿದೆ.
ಜೋಕುಮಾರಸ್ವಾಮಿಯನ್ನು ಹೊತ್ತು, ಊರೂರು ಸಂಚರಿಸುತ್ತಿರುವ ಮಹಿಳೆಯರಿಗೆ ದೊರೆಯುವ ಆದಾಯ ಅಷ್ಟಕ್ಕಷ್ಟೇ. ಆದರೆ, ಅವರ ಉತ್ಸಾಹದ ಚಿಲುಮೆ ಮಾತ್ರ ಬತ್ತುವುದಿಲ್ಲ. ಕೃಷಿ ಪರಂಪರೆಯಲ್ಲಿ ಹಾಸುಹೊಕ್ಕಿರುವ ಈ ವಿಶಿಷ್ಟ ಆಚರಣೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಸಾಗುತ್ತಿರುವುದು ವಿಷಾದದ ಸಂಗತಿಯಾದರೂ, ಇನ್ನೂ ಅಲ್ಲಲ್ಲಿ ಜೀವಂತಿಕೆ ತುಂಬಿಕೊAಡಿರುವುದು ಆಶಾದಾಯಕ ಬೆಳವಣಿಗೆ. ನೆಲಮೂಲ ಸಂಸ್ಕೃತಿಯ ಆಚರಣೆಯ ಈ ಜೋಕುಮಾರಸ್ವಾಮಿ ಹಬ್ಬ, ಇನ್ನಷ್ಟು ವಿಸ್ತರಿಸಲಿ, ತನ್ನ ಸಾಂಸ್ಕೃತಿಕ ಸೊಬಗಿನ ವೈಭವ ಕಳೆದುಕೊಳ್ಳದಿರಲಿ ಎಂಬುದು ನಮ್ಮೆಲ್ಲರ ಆಶಯ.

ಜೋಕುಮಾರಸ್ವಾಮಿ ಕುರಿತ ಸುದ್ದಿಯನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಲು ಇಲ್ಲಿ ಒತ್ತಿ…

Related posts

ಹರಪನಹಳ್ಳಿ: ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ, ಅಪರಾಧಮುಕ್ತ ಸಮಾಜ ಕಟ್ಟುವಿಕೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಎಸ್‌ಪಿ ಜಾಹ್ನವಿ

Vijayasiri News

ಮಾನವೀಯಮೌಲ್ಯಗಳ ಮಾರ್ಗದರ್ಶಿ; ಪರಿಸರ ಚಾಕರಿಕೆ ಪ್ರವೃತ್ತಿಯ ಉಪನ್ಯಾಸಕ, ಹರಪನಹಳ್ಳಿ: ಉಪನ್ಯಾಸಕ ಶಿವಾನಂದ ಮುಡಿಗೇರಿದ ‘ರಾಜೀವ್‌ಗಾಂಧಿ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’

Vijayasiri News

ವಿಜಯನಗರ: ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ವಕೀಲ ಬಸವರಾಜ ಸಂಗಪ್ಪನವರ್ ನೇಮಕ

Vijayasiri News

ಭಾವೈಕ್ಯತ ತಪೋಭೂಮಿ ಚೌಕಿಮಠದಲ್ಲಿ ಮಹಾ ಕಾರ್ತೀಕೋತ್ಸವ ಹಾಗೂ ದೀಪೋತ್ಸವ

Vijayasiri News

ಆಹಾ… ರಸ್ತೆಯೇ…? ಏನೀದು ನಿನ್ನ ಅವ್ಯವಸ್ಥೆ…!! ಇದು ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ, ಯಾಮಾರಿದರೆ ‘ಯಮನ’ ಸವಾರಿ…!!!

Vijayasiri News

ಸಿದ್ಧರಾಟ, ಶಿವನಾಟ,…. ಜ… ಜ… ಜ… ಜ… ಜ…, ಹೊಸಪೇಟೆ: ಸುಡುಗಾಡು ಸಿದ್ಧರ ಕೈಚಳಕದ ಚಮತ್ಕಾರಕ್ಕೆ ಬೆರಗಾದ ಸಭಿಕರು

Vijayasiri News
error: Content is protected !!