ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಪ್ರತಿಭಾನ್ವಿತ ಮಕ್ಕಳಿಗೆ ಕೊಡಮಾಡುವ ಪ್ರಶಸ್ತಿ, ಪುರಸ್ಕಾರಗಳು ಅವರ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸುವ ಜತೆಗೆ, ಅವರ ಉದ್ದೇಶಿತ ಗುರಿ ತಲುಪಲು ಮತ್ತಷ್ಟು ಉತ್ತೇಜನ ನೀಡುತ್ತದೆ. ಜತೆಗೆ, ಇತರೆ ಮಕ್ಕಳಿಗೂ ಸ್ಫೂರ್ತಿ, ಪ್ರೇರಣೆ ನೀಡುತ್ತದೆ. ಹೀಗಾಗಿ, ಪ್ರತಿಭಾಪುರಸ್ಕಾರ ಸಮಾರಂಭಗಳು ಅತ್ಯಂತ ಔಚಿತ್ಯಪೂರ್ಣ ಎಂದು ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಡಾ. ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಕೊಟ್ಟೂರು ರಸ್ತೆಯ ವಾಸವಿ ಕಲ್ಯಾಣಮಂಟಪದ ಸಭಾಂಗಣದಲ್ಲಿ ಸ್ಥಳೀಯ ವಾಲ್ಮೀಕಿನಾಯಕ ನೌಕರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಪ್ರತಿ ಮಕ್ಕಳಲ್ಲಿಯೂ ಅಗೋಚರವಾದ ಅಗಾದ ಪ್ರತಿಭೆ ಮನೆಮಾಡಿರುತ್ತದೆ. ಅಂಥಹ ಪ್ರತಿಭೆಗಳನ್ನು ಗುರುತಿಸುವ ಮೂಲಕ ಅವರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ನೀಡುವ ಮೂಲಕ ಪ್ರೋತ್ಸಾಹಿಸುವ ಕೆಲಸವನ್ನು ಪ್ರತಿ ಪಾಲಕರು ಹಾಗೂ ಶಿಕ್ಷಕರು ಮಾಡಿದಾಗ, ಆ ಪ್ರತಿಭೆ ಉಜ್ವಲವಾಗಿ ಬೆಳಗಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಈ ಎರಡು ಕಲಿಕೆಯ ಸಂದರ್ಭಗಳು ಅತ್ಯಂತ ಮಹತ್ವಪೂರ್ಣವಾದ ಕಾಲಘಟ್ಟ. ಈ ಎರಡರಲ್ಲಿಯೂ ಶ್ರದ್ಧೆ, ಶ್ರಮ, ಏಕಾಗ್ರತೆಯಿಂದ ಯಶಸ್ಸನ್ನು ಸಾಧಿಸಿದರೆ, ಮುಂದಿನ ಶೈಕ್ಷಣಿಕಪಥ ಎಂಬುದು ಸರಳ ಹಾಗೂ ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಡಾ. ಪ್ರಸನ್ನಾನಂದ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಂದಾರ್ಭಿಕ ಸನ್ನೀವೇಶ ಹಾಗೂ ಕಾಲಮಾನಕ್ಕೆ ಅನುಗುಣವಾಗಿ ಜಗತ್ತು ನಾಗಲೋಟದಲ್ಲಿ ಓಡುತ್ತಿರುವ ಪರಿಣಾಮ, ಸಂಸ್ಕೃತಿ, ಸಂಸ್ಕಾರ ಹಾಗೂ ನೈತಿಕಮೌಲ್ಯಗಳು ನಮ್ಮ ಮಕ್ಕಳಲ್ಲಿ ನೇಪಥ್ಯಕ್ಕೆ ಸರಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಸ್ವಾಮೀಜಿ ಅವರು, ಕಾಲದ ಪ್ರಭಾವಳಿಗಳಿಗೆ ಒಳಗಾಗದೆ, ಕಾಲಮಾನಕ್ಕೆ ಅನುಗುಣವಾದ ಜ್ಞಾನಾರ್ಜನೆ ಪಡೆಯುವ ಜತೆಗೆ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಕೌಟುಂಬಿಕ ಪದ್ಧತಿಗಳ ಸಾರವಾದ ಸಂಸ್ಕೃತಿ, ಸಂಸ್ಕಾರ, ಆದರ್ಶ, ಪರಂಪರೆಗಳನ್ನು ನಾವು ಅಳವಡಿಸಿಕೊಳ್ಳುವ ಮೂಲಕ ನಮ್ಮ ತನಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಸ್ವಾಮೀಜಿ ಅವರು ಸೂಚ್ಯವಾಗಿ ಹೇಳಿದರು.
ಅತಿಥಿಯಾಗಿ ಆಗಮಿಸಿದ ದಾವಣಗೆರೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರು ಮಾತನಾಡಿ, ತಲಾತಲಾಂತರಗಳಿಂದಲೂ ಶೋಷಣೆಯ ಕುಲುಮೆಯಲ್ಲಿ ನಲುಗಿಹೋಗಿದ್ದ ಸಮುದಾಯದಲ್ಲಿ ಈಗ ಒಂದಿಷ್ಟು ಹೊಂಗಿರಣದ ಬೆಳಕು ಮೂಡಲಾರಂಭಿಸಿರುವುದು ಆಶಾದಾಯಕ ಬೆಳವಣಿಗೆ. ಇದರ ಹಿಂದೆ, ಸಮಾಜದ ಸಂಘಟನೆ, ಶೈಕ್ಷಣಿಕ ಸಂಸ್ಕಾರದ ಅತ್ಯಗತ್ಯತೆ ಸೇರಿದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ತರ ಕಾಯಕದಲ್ಲಿ ರಾಜನಹಳ್ಳಿ ಗುರುಪೀಠದ ಡಾ. ಪ್ರಸನ್ನಾನಂದ ಸ್ವಾಮೀಜಿ ಅವರ ಅವಿರತ ಪ್ರಯತ್ನವನ್ನು ನಾವು ಮುಕ್ತಕಂಠದಿಂದಲೇ ಸ್ಮರಿಸಬೇಕಾಗಿದೆ ಎಂದ ಪಿ.ಎನ್. ಲೋಕೇಶ್ ಅವರು, ಶ್ರಮ, ಶ್ರದ್ಧೆ ಹಾಗೂ ನಿರಂತರವಾದ ಪ್ರಯತ್ನಗಳ ಫಲ ಎಂದಿಗೂ ಹುಸಿಗೊಳಿಸುವುದಿಲ್ಲ. ಹೀಗಾಗಿ, ವಿದ್ಯಾರ್ಥಿಗಳು, ಈ ನಿಟ್ಟಿನಲ್ಲಿ ತಮ್ಮನ್ನು ಸತತವಾಗಿ ತೊಡಗಿಸಿಕೊಳ್ಳುವ ಮೂಲಕ ಗುರಿಸಾಧನೆಯನ್ನು ತಲುಪುವ ಮೂಲಕ, ಜನ್ಮನೀಡಿದ ನೆಲ, ಕುಟುಂಬ ಹಾಗೂ ಹುಟ್ಟಿದ ಸಮುದಾಯದ ಕೀರ್ತಿಪತಾಕೆಯನ್ನು ಎತ್ತಿಹಿಡಿಯುವ ಮೂಲಕ ಸಮುದಾಯದ ಮುಖ್ಯವಾಹಿನಿಯನ್ನು ಪ್ರತಿನಿಧಿಸಬೇಕಿದೆ ಎಂದರು.

ಡಿವೈಎಸ್‌ಪಿ ಡಾ. ವೆಂಕಟಪ್ಪನಾಯಕ ಅವರು ಮಾತನಾಡಿ, ನಮ್ಮ ಕುಟುಂಬದ ತೊಂದರೆ, ತಾಪತ್ರಯಗಳು, ಆರ್ಥಿಕ ಸಂಕಷ್ಟಗಳ ನೆಪದಲ್ಲಿ ಶಿಕ್ಷಣವನ್ನು ತೊರೆಯುವಂತ ನಿರ್ಧಾರವನ್ನು ನಾವು ಮೊದಲು ಕೈಬಿಡಬೇಕು. ಈಗ, ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ಅಂಥಹ ಸೌಲಭ್ಯಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕವಾಗಿ ನಾವು ಪ್ರಗತಿಸಾಧಿಸಬೇಕು. ಆದಾಗ್ಯೂ, ಘಟಿಸುವ ಸಮಸ್ಯೆಗಳಿಗೆ ಸಮುದಾಯದ ಸಂಘಟನೆ, ಉದಾರಮನಸ್ಸಿನ ದಾನಿಗಳು, ಸಂಘ- ಸಂಸ್ಥೆಗಳು ನಮ್ಮ ನೆರವಿಗೆ ನಿಲ್ಲುತ್ತವೆ ಎಂದರು.
ಹೊಸಪೇಟೆ ಉಪವಿಭಾಗದ ಡಿವೈಎಸ್‌ಪಿ ಟಿ. ಮಂಜುನಾಥ ಅವರು ಮಾತನಾಡಿ, ಯಾವುದೇ ಒಂದು ಶೋಷಿತ ಸಮುದಾಯ ಸಮುದಾಯದ ಮುಖ್ಯವಾಹಿನಿಗೆ ತಲುಪಬೇಕಾದರೆ, ಆ ಸಮುದಾಯ ಸಂಘಟನೆ ಹಾಗೂ ಶಿಕ್ಷಣದ ಈ ಎರಡು ಮೂಲಮಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಂಘಟನೆ ಸಮಾಜದ ಸಂವಿಧಾನಬದ್ಧ ಹಕ್ಕುಗಳ ಜಾಗೃತಿಗೆ ಪ್ರೇರೇಪಿಸಿದರೆ, ಶಿಕ್ಷಣ ಬದುಕಿನ ಬದಲಾವಣೆಗೆ ಪೂರಕವಾಗಲಿದೆ ಎಂದರು.
ಶಾಸಕಿ ಎಂ.ಪಿ. ಲತಾಮಲ್ಲಿಕಾರ್ಜುನ ಅವರು ಪ್ರತಿಭಾಪುರಸ್ಕಾರ ಸಮಾರಂಭ ಉದ್ಘಾಟಿಸಿದರು. ವಾಲ್ಮೀಕಿನಾಯಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಡಿ. ಅಣ್ಣಪ್ಪ, ಹೊಸಪೇಟೆ ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ, ವಕೀಲ ಬಸವರಾಜ ಸಂಗಪ್ಪನವರ್, ಶಾಂತಿನಾಥ ದಿಗಂಬರ ಜೈನಧರ್ಮದ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಪದ್ಮರಾಜಜೈನ್, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಜಿ. ಪದ್ಮಲತಾ, ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಸಿದ್ದಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಎಚ್.ಟಿ. ವನಜಾಕ್ಷಮ್ಮ ಅವರು ಸಮಾರಂಭದಲ್ಲಿ ಮಾತನಾಡಿದರು.
ವಾಲ್ಮೀಕಿನಾಯಕ ಸಮಾಜದ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ನಾಗಪ್ಪ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ವಾಲ್ಮೀಕಿನಾಯಕ ಸಮಾಜದ ತಾಲ್ಲೂಕು ಘಟಕದ ಮಾಜಿ ಕೆ. ಉಚ್ಚಂಗೆಪ್ಪ, ಮುಖಂಡರಾದ ಎಚ್.ಟಿ. ಗಿರೀಶಪ್ಪ, ಆಲದಹಳ್ಳಿ ಷಣ್ಮುಖಪ್ಪ, ತೆಲಿಗಿ ಉಮಾಕಾಂತ್, ಶಿಕ್ಷಣ ಇಲಾಖೆಯ ಮಂಜುನಾಥ ಗಿರಜ್ಜಿ, ಉಚ್ಚಂಗಿದುರ್ಗ ಮಂಜುನಾಥ, ಹಾರಾಳ್ ಬುಳ್ಳಪ್ಪ, ಬಿ. ಕೊಟ್ರೇಶ್, ಬಿ. ವಾಗೀಶ್, ಎಸ್. ಹನುಮಂತಪ್ಪ, ಪಿಎಸ್‌ಐ ನಾಗರತ್ಮಮ್ಮ, ಗಿರಜ್ಜಿ ಕಾಂತರಾಜ್ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತರಗತಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

