Vijayasiri News
ಒಕ್ಕಲುತನ

ಇಳುವರಿ ಕುಂಠಿತಗೊಳ್ಳುವ ಭೀತಿಯಲ್ಲಿ ರೈತಾಪಿ ಸಮುದಾಯ; ಯೂರಿಯಾ ರಸಗೊಬ್ಬರ ಕೊರತೆ; ಅನ್ನದಾತರ ಪರದಾಟ…

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ

ಮುಂಗಾರು ಹಂಗಾಮಿನಲ್ಲಿ ಕಾಲಕಾಲಕ್ಕೆ ಉತ್ತಮವಾದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಗುವಳಿ ಭೂಪ್ರದೇಶದಲ್ಲಿ ಈಗಾಗಲೇ, ಭರ್ಜರಿಯಾಗಿ ಬಿತ್ತನೆಯಾಗಿದೆ. ಜತೆಗೆ, ಕಳೆದ ಒಂದು ತಿಂಗಳಿನಿಂದಲೂ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ, ಜಮೀನುಗಳಲ್ಲಿ ಭಿತ್ತನೆಯಾಗಿರುವ ಫಸಲು, ಸಹ ನಳನಳಿಸುತ್ತಿದೆ. ಆದರೆ, ಬೆಳವಣಿಗೆಯ ಹಂತದಲ್ಲಿರುವ ಬೆಳೆಗಳಿಗೆ ಮೇಲ್ಗೊಬ್ಬರದ ರೂಪದಲ್ಲಿ ಯೂರಿಯಾ ರಸಗೊಬ್ಬರವನ್ನು  ಬೆಳೆಗಳಿಗೆ ಪೂರೈಸದಿರುವ ಹಿನ್ನೆಲೆಯಲ್ಲಿ ಬಿತ್ತನೆಯಾಗಿರುವ ಫಸಲಿನ ಬೆಳವಣಿಗೆ ಭರಾಪೂರ ಕುಂಠಿತವಾಗಿದೆ. ಹೀಗಾಗಿ, ಬೆಳೆಗಳಿಗೆ ಯೂರಿಯಾ ರಸಗೊಬ್ಬರ ಪೂರೈಕೆ ಮಾಡುವ ನಿಟ್ಟಿನಲ್ಲಿ ರೈತಾಪಿ ಸಮುದಾಯ ಪರದಾಟ ನಡೆಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಯೂರಿಯಾ ಗೊಬ್ಬರಕ್ಕಾಗಿ, ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಘಗಳು ಸೇರಿದಂತೆ ಖಾಸಗೀ ರಸಗೊಬ್ಬರ ಮಾರಾಟದ ಅಂಗಡಿಗಳ ಮುಂದೆ ದಿನಗಟ್ಟಲೇ ಸಾಲುಗಟ್ಟಿ ನಿಲ್ಲುವ ದೃಶ್ಯ ಈಗ ಎಲ್ಲೆಲ್ಲೋ ಸಾಮಾನ್ಯವಾಗಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹೋಬಳಿಯಾದಾದ್ಯಂತ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರದಾಟ ನಡೆಸುತ್ತಿರುವ ಸನ್ನೀವೇಶ ಸೃಷ್ಟಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆರಾಯ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸಾಗುವಳಿ ಪ್ರದೇಶ ಬಹುತೇಕ ಬಿತ್ತನೆಯಾಗಿದೆ. ಬೆಳೆಗಳು ಸಹ, ಬೆಳೆದುನಿಂತಿವೆ. ಆದರೆ, ಭೂಮಿಯಲ್ಲಿನ ಫಲವತ್ತತೆಯ ಕೊರತೆಯಿಂದಾಗಿ, ಬೆಳೆದುನಿಂತಿರುವ ಪೈರು, ಬೆಳವಣಿಗೆಯಲ್ಲಿ ಮಾತ್ರ ಕುಂಠಿತಗೊಂಡಿದೆ. ಹೀಗಾಗಿ, ರೈತರು, ತಮ್ಮ ಬೆಳೆಗಳಿಗೆ ಯೂರಿಯಾ ರಸಗೊಬ್ಬರ ಪೂರೈಸಲು ಮುಂದಾಗಿದ್ದಾರೆ. ಆದರೆ, ಯೂರಿಯಾ ರಸಗೊಬ್ಬರದ ಕೊರತೆ, ರೈತಾಪಿ ಸಮುದಾಯದ ಮೇಲೆ ಬರೆ ಎಳೆದಂತಾಗಿದೆ.

ಹೋಬಳಿ ವ್ಯಾಪ್ತಿಯ ಅರಸೀಕೆರೆ, ಉಚ್ಚಂಗಿದುರ್ಗ, ತೌಡೂರು, ಪುಣಭಗಟ್ಟ ಹಾಗೂ ಹೊಸಕೋಟೆ ಗ್ರಾಮಗಳ ಸಹಕಾರಿ ಸಂಘಗಳಲ್ಲಿ ಯೂರಿಯಾ ರಸಗೊಬ್ಬರದ ದಾಸ್ತಾನು ಇಲ್ಲದಂತಾಗಿದೆ. ಜತೆಗೆ, ಈ ಭಾಗದ ಬಹುತೇಕ ಖಾಸಗೀ ರಸಗೊಬ್ಬರ ಮಾರಾಟಗಾರರ ಅಂಗಡಿಗಳಲ್ಲಿಯೂ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ. ವಾರದಲ್ಲಿ ಒಂದೋ ಎರಡೋ ಲಾರಿ ಲೋಡ್ ಬಂದರೆ ಸಾಕು, ಕಣ್ಮುಚ್ಚಿ ತೆರೆಯುವುದರೊಳಗಾಗಿ, ಯೂರಿಯಾ ರಸಗೊಬ್ಬರ ಖಾಲಿಯಾಗುತ್ತದೆ. ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಹೊಣೆಗೇಡಿತನದ ಪರಿಣಾಮ ಅನ್ನದಾತರು ಅಲೆದಾಟ ನಡೆಸಬೇಕಾದ ಸ್ಥಿತಿ ಒಂದೆಡೆಯಾದರೆ, ಮತ್ತೊಂದೆಡೆ ಜಮೀನುಗಳಲ್ಲಿ ಬೆಳೆದುನಿಂತಿರುವ ಬೆಳೆಯ ಇಳುವರಿ ಕುಂಠಿತಗೊಳ್ಳುವ ಆತಂಕ ಅನ್ನದಾತರಲ್ಲಿ ಮನೆಮಾಡಿದೆ.

ಕಳೆದ ಹದಿನೈದು ದಿನಗಳಿಂದಲೂ ತುಂತುರು ಮಳೆ ಸುರಿಯುತ್ತಲೇ ಇದೆ. ಜತೆಗೆ, ಮೋಡ ಮುಸುಕಿದ ವಾತಾವರಣವೂ ಆವರಿಸಿಕೊಂಡಿದೆ. ಆದರೆ, ಜಮೀನುಗಳಲ್ಲಿ ಫಲವತ್ತತೆ ಕೊರತೆ ಪರಿಣಾಮ, ಬೆಳೆದುನಿಂತಿರುವ ಫಸಲು ಹಸಿರುಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿನಿಂತಿವೆ. ಬೆಳೆಯ ಈ ಸ್ಥಿತಿ ಕಣ್ಣಿಂದ ನೋಡಲಾಗದ ರೈತರು, ಹಣ ಕೊಟ್ಟಾದರೂ, ಖರೀದಿಸಿ, ಬೆಳೆಗಳಿಗೆ ಮೇಲ್ಗೊಬ್ಬರವನ್ನಾಗಿ ಯೂರಿಯಾ ರಸಗೊಬ್ಬರ ಪೂರೈಸಬೇಕೆಂದರೆ, ಮಾರುಕಟ್ಟೆಯಲ್ಲಿ ಯೂರಿಯಾ ದೊರೆಕುತ್ತಿಲ್ಲ. ಹೀಗಾಗಿ, ರೈತರ ಸ್ಥಿತಿ ಅತಂತ್ರಕ್ಕೆ ಸಿಲುಕಿದೆ.

ಅರಸೀಕೆರೆ ಹೋಬಳಿ ಸೇರಿದಂತೆ ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿಯೂ ಅತಿಹೆಚ್ಚು ಮಳೆಯಾಗುತ್ತಿದೆ. ಬಿತ್ತನೆಯಾಗಿರುವ ಮೆಕ್ಕೆಜೋಳ, ರಾಗಿ, ಹೈಬ್ರೀಡ್‍ಜೋಳ ಹಾಗೂ ಶೇಂಗಾ ಸೇರಿದಂತೆ ವಿವಿಧ ಫಸಲನ್ನು ರೈತರು ಬೆಳೆದಿದ್ದಾರೆ. ಆದರೆ, ಮೇಲ್ಗೊಬ್ಬರವನ್ನಾಗಿ ಬೆಳೆಗಳಿಗೆ ಪೂರೈಸಿದರೆ ಮಾತ್ರ, ಫಸಲು ಉತ್ತಮ ಇಳುವರಿ ಪಡೆಯಲು ಸಾಧ್ಯ. ಆದರೆ, ಮಾರುಕಟ್ಟೆಯಲ್ಲಿ ಯೂರಿಯಾ ರಸಗೊಬ್ಬರವೇ ದೊರಕುತ್ತಿಲ್ಲ. ಆದರೆ, ಅಧಿಕಾರಿಗಳು ಮಾತ್ರ ಯೂರಿಯಾ ರಸಗೊಬ್ಬರದ ಕೊರತೆ ಇಲ್ಲ ಎಂದು ಹೇಳುತ್ತಾರೆ. ಆದರೆ, ಅಧಿಕಾರಿಗಳ ಹೇಳಿಕೆಗೂ, ವಾಸ್ತವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಕೂಡಲೇ, ಇಂಥಹ ಉಢಾಫೆ ಹೇಳಿಕೆಗಳನ್ನು ನೀಡುವುದನ್ನು ತಕ್ಷಣ ನಿಲ್ಲಿಸಿ, ಯೂರಿಯಾ ರಸಗೊಬ್ಬರ ಸಮರ್ಪಕವಾಗಿ ದೊರೆಯುವಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ, ಹೋರಾಟ ಉಗ್ರಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಘಟಕದ ಅಧ್ಯಕ್ಷ ಗುಡಿಹಳ್ಳಿ ಹಾಲೇಶ್.

ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ಹದವಾದ ಮಳೆ ಸುರಿಯುತ್ತಿದೆ. ಬೆಳವಣಿಗೆ ಹಂತದಲ್ಲಿರುವ ಫಸಲು ಭರ್ಜರಿ ಇಳುವರಿ ಕೊಡಬಹುದು ಎಂಬ ರೈತರ ಆಸೆಯ ಮೇಲೆ ‘ಯೂರಿಯಾ ರಸಗೊಬ್ಬರ ಕೊರತೆ’ ಬರೆ ಎಳೆದಿದೆ. ಇಂಥಹ ಪ್ರತಿಕೂಲ ಸನ್ನೀವೇಶಕ್ಕೆ  ಆಡಳಿತರೂಢ ಸರ್ಕಾರ ಹಾಗೂ ತಾಲೂಕು ಆಡಳಿತದ  ಬೇಜವಾಬ್ದಾರಿತನಕ್ಕೆ ಎದ್ದುಕಾಣುತ್ತಿದೆ. ಇನ್ನಾದರೂ, ಅಧಿಕಾರಿಗಳು ನಿದ್ದೆಯ ಮಂಪರಿನಿಂದ ಎಚ್ಚೆತ್ತು, ಯೂರಿಯಾ ರಸಗೊಬ್ಬರ ಪೂರೈಕೆಗೆ ಕ್ರಮವಹಿಸಬೇಕು ಎಂಬುದು ರೈತರ ಅಭಿಪ್ರಾಯ.

Related posts

ಬ್ಯಾಡಗಿ: ಬೆಳೆಯಲ್ಲಿ ನಿಯಂತ್ರಣಕ್ಕೆ ಬಾರದ ಕಳೆ, ಮೆಕ್ಕೆಜೋಳದ ಬೆಳೆಯಲ್ಲಿ ಮಹಾಮಾರಿ ‘ಮುಳ್ಳುಸಜ್ಜೆ’ ಕಳೆ: ಕಂಗಾಲಾದ ಅನ್ನದಾತ

Vijayasiri News

ಬ್ಯಾಡಗಿ: ಸಂಕಷ್ಟಕ್ಕೆ ಸಿಲುಕಿದ ರೈತಾಪಿ ಸಮುದಾಯ, ಕಾಡುಹಂದಿಗಳ ದಾಳಿ; ಕಾಳುಕಟ್ಟುವ ಹಂತದಲ್ಲಿದ್ದ ಗೋವಿನಜೋಳ ಬೆಳೆ ನಾಶ

Vijayasiri News
error: Content is protected !!