Vijayasiri News
ನಮ್ಮೂರ ಸುದ್ದಿವಿಜಯನಗರಹರಪನಹಳ್ಳಿ ಸುದ್ದಿ

ಅರಸೀಕೆರೆ: ಕಲುಷಿತ ಕುಡಿಯುವ ನೀರು ಪೂರೈಕೆ; ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ, ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ಕೊರೆಯಿಸಿ ಕೊಡುವುದಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಭರವಸೆ; ಪ್ರತಿಭಟನೆ ಸ್ಥಗಿತ

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಕಲುಷಿತ ಹಾಗೂ ಅಸಮರ್ಪಕ ಕುಡಿಯುವ ನೀರು ಪೂರೈಸುತ್ತಿರುವ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಕಾರ್ಯವೈಖರಿ ವಿರೋಧಿಸಿ ಪರಿಶಿಷ್ಟರ ಕಾಲೊನಿಯ ನಿವಾಸಿಗಳು ತಾಲ್ಲೂಕಿನ ಅರಸೀಕೆರೆ ಗ್ರಾಮ ಪಂಚಾಯ್ತಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ, ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಕಾಲೊನಿಯ ಮುಖಂಡ ಬಸವರಾಜ ಮಾತನಾಡಿ, ಕಾಲೊನಿಯ ಎರಡನೇ ವಾರ್ಡಿನಲ್ಲಿ ಕಳೆದ ಮೂರು ವರ್ಷಗಳಿಂದಲೂ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸರಬರಾಜು ಆಗುತ್ತಿರುವ ಕುಡಿಯುವ ನೀರು ಯೋಗ್ಯವಾಗಿರದೇ ಕಲುಷಿತವಾಗಿವೆ. ಅನಿವಾರ್ಯವಾಗಿಯೇ ಅದನ್ನು ಕುಡಿಯುತ್ತಿದ್ದೇವೆ. ಹೀಗಾಗಿ, ಮನೆ ಮಂದಿಗೆಲ್ಲಾ ಚರ್ಮ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಈ ಕುರಿತು, ಸಾಕಷ್ಟು ಬಾರಿ, ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದಿದ್ದರೂ, ಕಾಲೊನಿಗೆ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಕಿಡಿಕಾರಿದರು.
ಕಲುಷಿತ ನೀರು ಪೂರೈಕೆಯಾಗುತ್ತಿರುವ ಪರಿಣಾಮ ಅದೇ ನೀರನ್ನೇ ಅನಿವಾರ್ಯ ಎಂಬಂತೆ ಕುಡಿಯುತ್ತಿದ್ದೇವೆ. ಆದರೆ, ಇದರಿಂದಾಗಿ, ಚಿಕ್ಕಪುಟ್ಟ ಮಕ್ಕಳು ಸೇರಿದಂತೆ ಇಡೀ ಕುಟುಂಬದ ಸದಸ್ಯರ ಮೈ- ಕೈ ಸೇರಿದಂತೆ ಎಲ್ಲೆಂದರಲ್ಲಿ ನೀರಿನ ಮೊಡವೆಗಳು ಕಾಣಿಸಿಕೊಂಡಿವೆ. ಜತೆಗೆ, ಅದರ ಬಾಧೆ ತಡೆದುಕೊಳ್ಳಲಾಗದೆ ಸಂಕಟದಿಂದ ಪರಚಿಕೊಳ್ಳುವಂತಾಗಿದೆ. ನಾವು ಪರಿಶಿಷ್ಟರು ಎಂಬ ಕಾರಣಕ್ಕಾಗಿ ನಮ್ಮನ್ನು ಹೀಗೆ ಉಪೇಕ್ಷಿಸುತ್ತಿದ್ದೀರಾ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮವಹಿಸದಿದ್ದರೇ, ಪ್ರತಿಭಟನೆ ಸ್ವರೂಪ ಬೇರೆ ರೂಪ ಪಡೆದುಕೊಳ್ಳುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಳಿಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಅವರ ಬಳಿ ಪ್ರತಿಭಟನಾಕಾರರು ಸಮಸ್ಯೆ ಕುರಿತಂತೆ ಮನವರಿಕೆ ಮಾಡಿದರು. ಪ್ರತಿಭಟನಾಕಾರರ ಮನವಿಗೆ ತಕ್ಷಣವೇ ಸ್ಪಂದಿಸಿದ ವೈ.ಡಿ. ಅಣ್ಣಪ್ಪ ಅವರು, ಸ್ವತಃ ವೆಚ್ಚ ಭರಿಸುವ ಮೂಲಕ ಪ್ರತ್ಯೇಕ ಕೊಳವೆಬಾವಿ ಕೊರೆಯಿಸಿ ಕೊಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.
ಮುಖಂಡರಾದ ಜಿ. ಹಾಲಪ್ಪ, ಪರಸಪ್ಪ, ನಾಗೇಂದ್ರಪ್ಪ, ನಿಂಗಪ್ಪ, ಹಾಲಪ್ಪ, ಪಿ. ದುರುಗಪ್ಪ, ಬಸವರಾಜ್, ಅಂಜಿನಪ್ಪ. ಎಂ. ನಾಗಪ್ಪ, ಅಣ್ಣಪ್ಪ, ಸೋಮಲಿಂಗಪ್ಪ ಹಾಗೂ ದಂಡೆಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

ಹರಪನಹಳ್ಳಿ: ನಾಳೆ ಬೆಸ್ಕಾಂ ಗ್ರಾಹಕರ ಸಂವಾದ ಸಭೆ

Vijayasiri News

ಕೊನ್ನಾಪುರ ಚೌಡೇಶ್ವರಿದೇವಿ ಕಾಪಾಡಮ್ಮ…ಈ ದೇವಸ್ಥಾನಕ್ಕೆ ತಲುಪಲು ರಸ್ತೆಯೋ… ಇಲ್ಲವೇ ಕೆಸರು ಗದ್ದೆಯೋ…?

admin

ಭಾವೈಕ್ಯತ ತಪೋಭೂಮಿ ಚೌಕಿಮಠದಲ್ಲಿ ಮಹಾ ಕಾರ್ತೀಕೋತ್ಸವ ಹಾಗೂ ದೀಪೋತ್ಸವ

Vijayasiri News

ಜೋಕುಮಾರಮೂರ್ತಿಯ ಮೇಲೆ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರಾಧನೆ ಸ್ಥಗಿತ; ಅಂದಿನಿಂದಲೇ ಊರ ಹೆಸರು ನಾಮಾಂಕಿತ, ಹುಲಿಕಟ್ಟೆ: ಈ ಊರಲ್ಲಿ ಜೋಕುಮಾರಸ್ವಾಮಿ ಆರಾಧನೆ ನಿಷಿದ್ಧ!

Vijayasiri News

|| ನ್ಯಾ. ನಾಗಮೋಹನದಾಸ್ ವರದಿ ಅನುಷ್ಠಾನ ಬೇಡ: ಸ್ವಾಮೀಜಿ|| ಅವೈಜ್ಞಾನಿಕ ವರದಿ ಜಾರಿಗೆ ಮುಂದಾದರೆ ಸಮುದಾಯದ ಶಾಪಕ್ಕೆ ಗುರಿಯಾಗಬೇಕಾದೀತು: ಸೇವಾಲಾಲ್ ಸ್ವಾಮೀಜಿ ಎಚ್ಚರಿಕೆ

Vijayasiri News

ಆಹಾ… ರಸ್ತೆಯೇ…? ಏನೀದು ನಿನ್ನ ಅವ್ಯವಸ್ಥೆ…!! ಇದು ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ, ಯಾಮಾರಿದರೆ ‘ಯಮನ’ ಸವಾರಿ…!!!

Vijayasiri News
error: Content is protected !!