ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ, ಅಗತ್ಯ ಮೂಲಸೌಕರ್ಯಗಳ ಕೊರತೆ ಸೇರಿದಂತೆ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಮರೆಮಾಚಿ, ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುವ ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಡಾ. ಸಿದ್ದನಗೌಡ ಪಾಟೀಲ್ ಕಿಡಿಕಾರಿದರು.
ನಗರದ ಶಾದಿಮಹಲ್‌ನಲ್ಲಿ ಈಚೆಗೆ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ವಿಜಯನಗರ ಜಿಲ್ಲಾ ಘಟಕದ 2ನೇ ಸಮ್ಮೇಳನದ ಬಹಿರಂಗಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೋಮುದ್ವೇಷ, ಮತೀಯವಾದದಂತ ಭಾವನಾತ್ಮಕ ವಿಷಯಗಳನ್ನು ಯುವಜನತೆಯಲ್ಲಿ ತುಂಬುವ ಮೂಲಕ ರಕ್ತದ ರಾಜಕಾರಣವನ್ನೇ ತನ್ನ ಪ್ರಮುಖ ಅಂಶವನ್ನಾಗಿ ಅಂಗೀಕರಿಸಿಕೊಂಡಿರುವ ಬಿಜೆಪಿ, ಯುವಜನಾಂಗವನ್ನು ದಿಕ್ಕುತಪ್ಪಿಸುವ ವ್ಯವಸ್ಥಿತ ಪಿತೂರಿಯನ್ನು ಸದಾ ಜೀವಂತಿಕೆ ತುಂಬಿಕೊಂಡಿರುವಂತೆ ನೋಡಿಕೊಳ್ಳುತ್ತಿದೆ. ಇತ್ತೀಚೆಗೆ ಕರಾವಳಿ ಪ್ರಾಂತ್ಯದಲ್ಲಿ ನಡೆದ ಸರಣಿ ಕೊಲೆಗಳೇ ಇದಕ್ಕೆ ತಾಜಾ ನಿದರ್ಶನ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ಅದರ ಕುರಿತು ನಮ್ಮ ಪ್ರಧಾನಿಯವರು ಮಾತೇ ಆಡುತ್ತಿಲ್ಲ. ನಿರುದ್ಯೋಗ ಸಮಸ್ಯೆ ಇಡೀ ದೇಶವನ್ನೇ ತಲ್ಲಣಿಸುತ್ತಿದ್ದರೂ, ಉದ್ಯೋಗಸೃಷ್ಠಿಗೆ ಸಂಬಂಧಿಸಿದಂತೆ ಯಾವ ಯೋಜನೆಗಳು ಜಾರಿಯಾಗುತ್ತಿಲ್ಲ. ಕೃಷಿ ಹಾಗೂ ಕೃಷಿ ಸಂಬಂಧಿತ ಉಪಕರಣಗಳು, ರಸಗೊಬ್ಬರಗಳ ಬೆಲೆಯೂ ಕೃಷಿಕರ ಕೈಸುಡುತ್ತಿವೆ. ಆದರೆ, ರಸಗೊಬ್ಬರ ಮತ್ತು ಕೀಟನಾಶಕದಂತ ವಸ್ತುಗಳ ಮೇಲೂ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸುವ ಮೂಲಕ ರೈತರ ಬದುಕಿಗೆ ಬರೆ ಎಳೆಯುತ್ತಿದೆ ಎಂದು ಡಾ. ಸಿದ್ಧನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಅಚ್ಛಾದಿನ್… ಎಂಬ ಬಿಸಿಲುಗುದುರೆಯನ್ನು ತೋರಿಸುತ್ತಲೇ ಸಾಗಿರುವ ಮೋದಿ ಅವರ ಆಡಳಿತ, ಕೇವಲ ಅಂಬಾನಿ, ಆದಾನಿಯಂತ ಬಂಡವಾಳಶಾಹಿಗಳಿಗೆ ಪೂರಕವಾಗಿ ಆಡಳಿತ ನಡೆಸುವ ಮೂಲಕ ಈ ದೇಶದ ಶ್ರೀಸಾಮಾನ್ಯನ ಬದುಕಿನ ಮೇಲೆ ಸಮಾಧಿ ಕಟ್ಟುತ್ತಿದೆ ಎಂದು ಹರಿಹಾಯ್ದರು.
ಇದಕ್ಕೂ ಮೊದಲು ನಗರದ ಪ್ರವಾಸಿಮಂದಿರ ವೃತ್ತದಿಂದ ಆರಂಭವಾದ ಮೆರವಣಿಗೆಗೆ ಪಕ್ಷದ ರಾಜ್ಯಘಟಕದ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು ಚಾಲನೆ ನೀಡಿ ಮಾತನಾಡಿ, ಕೃಷಿಕೂಲಿ ಕಾರ್ಮಿಕರು, ಗುಳೇ ಹೋಗುವುದನ್ನು ತಪ್ಪಿಸುವ ಮೂಲಕ ಅವರು ವಾಸಿಸುತ್ತಿರುವ ಪ್ರದೇಶದಲ್ಲಿಯೇ, ವಾರ್ಷಿಕ ಕನಿಷ್ಠ ನೂರು ದಿನಗಳ ಕೆಲಸ ಕೊಡುವ ನಿಟ್ಟಿನಲ್ಲಿ ಜಾರಿಯಾದ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ಕೀಮ್ ರೂಪದಲ್ಲಿ ಬದಲಾಯಿಸಲು ಮುಂದಾಗಿದೆ. ಈ ಯೋಜನೆ ಕಾಯ್ದೆಯ ಸ್ವರೂಪದಲ್ಲಿಯೇ ಇರಬೇಕೆ ಹೊರತು, ಸ್ಕೀಮ್ ರೂಪಾಂತರ ಪಡೆಯಬಾರದು. ಉದ್ಯೋಗ ಖಾತರಿ ಯೋಜನೆಯ ಅಡಿ ವಾರ್ಷಿಕ ಕನಿಷ್ಠ 200 ದಿನಗಳ ಕೆಲಸ ನೀಡುವಂತೆ ಪರಿಷ್ಕರಿಸಬೇಕು ಎಂದು ಸುಂದರೇಶ್ ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಅವರು ಮಾತನಾಡಿ, ನಮ್ಮದು ಬಹುತ್ವದ ಭಾರತ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಸದೃಢವಾಗಿದೆ. ಇಂಥಹ ಪವಿತ್ರ ನೆಲದಲ್ಲಿ ಜಾತಿ, ಕೋಮುದ್ವೇಷ, ಮತೀಯವಾದಕ್ಕೆ ಅವಕಾಶ ನೀಡದೇ, ಬಹುತ್ವದ ನೆಲೆಗಟ್ಟಿನಲ್ಲಿ ಸೌಹಾರ್ದ ಭಾರತ ಕಟ್ಟುವಲ್ಲಿ ನಮ್ಮ ಯುವಜನತೆ ಮುಂದಾಗಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಪಕ್ಷದ ನಿಕಟಪೂರ್ವ ಜಿಲ್ಲಾಘಟಕದ ಕಾರ್ಯದರ್ಶಿ ಎಚ್. ವೀರಣ್ಣ ಅವರು ವಹಿಸಿದ್ದರು. ಪಕ್ಷದ ಹಿರಿಯ ಮುಖಂಡರಾದ ಕೆ.ಎಸ್ ಹಡಗಲಿಮಠ್, ಹೊಸಳ್ಳಿ ಮಲ್ಲೇಶ್, ಗುಡಿಹಳ್ಳಿ ಹಾಲೇಶ್, ರಮೇಶ್‌ನಾಯ್ಕ, ಬಳಿಗನೂರು ಕೊಟ್ರೇಶ್, ಪುಷ್ಪ, ರೇಣುಕಮ್ಮ, ಹಲಗಿ ಸುರೇಶ್, ದೊಡ್ಡಬಸಪ್ಪ, ಜಂಗ್ಲಿಸಾಬ್, ಗಂಗಾಧರ್, ಭಾಗ್ಯಮ್ಮ, ನೀಲಮ್ಮ, ಪಾಲವ್ವನಹಳ್ಳಿ ಪ್ರಸನ್ನಕುಮಾರ್ ಸೇರಿದಂತೆ ಇತರರ ಇದ್ದರು.

