ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಸರ್ಕಾರದ ಮಹತ್ವಾಕಾಂಕ್ಷಿಯ ಪಂಚಗ್ಯಾರಂಟಿ ಯೋಜನೆಯನ್ನು ತಾಲ್ಲೂಕಿನ ಸಮಸ್ತ ಕುಟುಂಬಗಳಿಗೆ ತಲುಪಿಸುವ ಮೂಲಕ ಕ್ಷೇತ್ರದ ಸಮಗ್ರ ನೀರಾವರಿ, ರಸ್ತೆ ಅಭಿವೃದ್ಧಿ, ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿ ಕಾರ್ಯದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣವರ ಹೇಳಿದರು.
ಶುಕ್ರವಾರ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 79ನೇ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕ್ಷೇತ್ರದ ರೈತಾಪಿ ಸಮುದಾಯಗಳ ಬದುಕನ್ನು ಹಸನಗೊಳಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳು, ವಸತಿರಹಿತ ಕುಟುಂಬಗಳ ತಲೆಯ ಮೇಲೊಂದು ಸೂರು ಒದಗಿಸುವ ನಿಟ್ಟಿನಲ್ಲಿ ಆಶ್ರಯ ಯೋಜನೆ, ಸಂಪರ್ಕ ಬೆಸುಗೆಯ ಕೊಂಡಿಯಾದ ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ದಿ ಯೋಜನೆಗಳಿಗೆ ಇನ್ನಷ್ಟು ಅನುದಾನ ಒದಗಿಸಿ, ಜನಪರ ಕಾರ್ಯಕ್ರಮ ಜಾರಿಗೊಳಿಸುವೆ. ತಮ್ಮ ಆಡಳಿತ ಅವಧಿಯಲ್ಲಿ ಗುಡ್ಡದಮಲ್ಲಾಪುರ, ಅಣೂರು, ಬುಡಪನಹಳ್ಳಿ ಏತನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಿತರ ಪ್ರಯತ್ನ ಮಾಡಿರುವೆ. ಹೊಸದಾಗಿ ಗುಡ್ಡಮಮಲ್ಲಾಪುರ ಏತನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸುವ ಮೂಲಕ ರೈತಾಪಿ ಸಮುದಾಯದ ಕೃಷಿ ಕ್ಷೇತ್ರಕ್ಕೆ ನೀರಾವರಿಯ ಸ್ಪರ್ಶ ನೀಡಲು ಅವಿರತವಾಗಿ ಶ್ರಮಿಸುತ್ತಿದ್ದೇನೆ ಎಂದರು.
ದೇಶದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ರಚಿಸಿದ ಸಂವಿಧಾನದಿಂದಾಗಿ ಎಲ್ಲ ಧರ್ಮ, ವರ್ಗಗಳಿಗೂ ಧ್ವನಿ ದೊರಕಿದೆ. ನಮ್ಮ ಹಕ್ಕುಗಳಂತೆ, ಕರ್ತವ್ಯಗಳಿದ್ದು, ಎಲ್ಲರೂ ಅನುಸರಿಸಬೇಕು. ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಆಯಾ ಪ್ರಾಂತೀಯ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಮಾಡಲು ಅವಕಾಶವಿದೆ. ರಾಷ್ಟçತಾಂತ್ರಿಕ, ಕೃಷಿ, ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ಎಲ್ಲರ ಸಹಕಾರ ಬೆಕು. ಮಕ್ಕಳಲ್ಲಿ ದೇಶಭಕ್ತಿ ಹಾಗೂ ಸಾಮಾಜಿಕ ಸ್ವಾಮರಸ್ಯವನ್ನು ಶೈಕ್ಷಣಿಕವಾಗಿ ಅಳವಡಿಸಬೇಕಾಗಿದೆ ಎಂದರು.
ತಹಶೀಲ್ದಾರ ಫೀರೋಜ್‌ಷಾ ಸೋಮನಕಟ್ಟೆ ಮಾತನಾಡಿ, 1857ರಿಂದ ಆರಂಭವಾದ ಸ್ವಾತಂತ್ರ‍್ಯ ಚಳುವಳಿ 1947ಕ್ಕೆ ಅಂತ್ಯವಾಯಿತು. ಆಗ ಭಾರತ ಪರಾಕೀಯರ ಆಡಳಿತದಿಂದ ಮುಕ್ತಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ. ಡಾ.ಬಾಬಾಸಾಹೇಬ ಅಂಬೇಡ್ಕರ ನೇತೃತ್ವದಲ್ಲಿ ವಿಶ್ವವೇ ಗೌರವಿಸುವಂತ ಭಾರತೀಯರಿಗೆ ವಿಶಿಷ್ಟ ಸಂವಿಧಾನ ರಚನೆಯಾಗಿದೆ. ಬಲಿಷ್ಠ ಭಾರತ ಕಟ್ಟುವಲ್ಲಿ ಸ್ವಾತಂತ್ರ‍್ಯ ಸಂಗ್ರಾಮ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ವಿಶ್ವದಲ್ಲಿ ಭಾರತ ಆರ್ಥಿಕವಾಗಿ ಬಲಿಷ್ಠರಾಷ್ಟçದ ಪಂಕ್ತಿಯಲ್ಲಿದ್ದು, ದೇಶದ ಅಖಂಡತೆ, ಏಕತೆ, ಸ್ವಾಮ್ಯತೆ ಎತ್ತಿ ಹಿಡಿಯುವಲ್ಲಿ ನಾವೆಲ್ಲ ಒಂದಾಗಿದ್ದೇವೆ.ರಾಷ್ಟ್ರೀಯ ಹಬ್ಬದಾಚರಣೆಗಳು ಬಂದಾಗ ನಾವೆಲ್ಲ ಒಗ್ಗಟ್ಟಿನಿಂದ ಸಂಭ್ರಮಿಸಬೇಕು. ದೇಶದ ಅಭಿವೃದ್ದಿಯಲ್ಲಿ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಸರ್ಕಾರದ ಎಲ್ಲ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್‌ಸಾಬ್ ಎರೆಸೀಮೆ, ಪುರಸಭೆ ಉಪಾಧ್ಯಕ್ಷ ಸುಭಾಷ್ ಮಾಳಗಿ, ಸದಸ್ಯರಾದ ಬಸವರಾಜ ಛತ್ರದ, ಚಂದ್ರಪ್ಪ ಶೆಟ್ಟರ, ಶಂಕರ ಕುಸಗೂರು, ಈರಣ್ಣ ಬಣಕಾರ, ಮುಖಂಡರಾದ ನಾಗರಾಜ ಆನ್ವೇರಿ, ದಾನಪ್ಪ ಚೂರಿ, ಬೀರಪ್ಪ ಬಣಕಾರ, ದುರ್ಗೇಶ ಗೋಣೆಮ್ಮನವರ, ಗಿರೀಶಸ್ವಾಮಿ ಇಂಡಿಮಠ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ, ಖಾದರಸಾಬ ದೊಡ್ಡಮನಿ, ಶಿಕ್ಷಕ ಮಹದೇವ ಕರಿಯಣ್ಣನವರ ಇದ್ದರು.

