ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಹನ್ನೆರಡನೇ ಶತಮಾನದ ಕಾಲಘಟ್ಟದಲ್ಲಿ ಬಸವಾದಿ ಪ್ರಮಥರ ಅನುಭವ ಮಂಟಪದಲ್ಲಿ ಕಾಯಕನಿಷ್ಠೆಯ ಶರಣ ನುಲಿಯ ಚಂದಯ್ಯ, ಬಸವಣ್ಣನವರ ಅತ್ಯಂತ ಪ್ರೀತಿಪಾತ್ರ ಶರಣರಾಗಿದ್ದರು ಎಂದು ಶಾಸಕ ಬಸವರಾಜ ಶಿವಣ್ಣವರ ಹೇಳಿದರು.
ಭಾನುವಾರ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತ್ಯುತ್ಸವ ಹಾಗೂ ಸಮುದಾಯಭವನಕ್ಕೆ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ ಪರಂಪರೆಯನ್ನೇ ಆರಾಧಿಸುತ್ತಿದ್ದ ನುಲಿಯ ಚಂದಯ್ಯ ಅವರು ತಮ್ಮ ವಚನಗಳಲ್ಲಿ ಕಾಯ, ವಾಚಾ, ಶುದ್ಧೀಖರಣದ ಮಾದರಿಯನ್ನು ಅತ್ಯಂತ ಸರಳ, ಸುಲಲಿತ ಭಾಷೆಯಲ್ಲಿ ಕಟ್ಟಿಕೊಡುವ ಮೂಲಕ ಸ್ವಾಸ್ಥö್ಯ ಸಮಾಜ ಅನುಸರಿಸಬೇಕಾದ ಸಾಹಿತ್ಯವನ್ನು ಅವರು ಕೊಟ್ಟಿದ್ದಾರೆ. ತನ್ನ ಕಾಯಕಕ್ಕೆ ಚ್ಯುತಿ ಉಂಟು ಮಾಡಿದ ಲಿಂಗವನ್ನೇ ತ್ಯಜಿಸಿದ ಭಾವಶುದ್ಧಿಯ ಅತ್ಯಂತ ಶ್ರೇಷ್ಠಶರಣ ಚಂದಯ್ಯನವರು. ಕಾಡು- ಮೇಡುಗಳಲ್ಲಿ ಬೆಳೆದ ಹುಲ್ಲನ್ನು ಸಂಗ್ರಹಿಸಿ, ಅದರಿಂದ ಹಗ್ಗ ನೇಯುವ ಹಾಗೂ ಅದನ್ನು ಮಾರುವ ಮೂಲಕ ಅದರಿಂದ ಬಂದ ಹಣದಿಂದಲೇ ಪ್ರಮಾಣಿಕವಾಗಿ ಜೀವಿಸುವ ಜತೆಗೆ, ಪ್ರಸಾದ ದಾಸೋಹದಂತಹ ಮಹಾಕಾಯಕಕ್ಕೂ ನೆರವಾಗಿದ್ದಾರೆ. ತನ್ನ ದುಡಿಮೆಯ ಹೊರತು, ಅನ್ಯಮಾರ್ಗದಿಂದ ಬರುವ ಹಣಕ್ಕೆ ಕಿಂಚಿತ್ತು ಹೊರಳಿ ನೋಡದೇ, ಅತ್ಯಂತ ಪ್ರಾಮಾಣಿಕತೆಯಿಂದ ಬದುಕಿದ ಮಹಾಚೇತನ ಚಂದಯ್ಯ ಅವರು ಎಂದು ಶಾಸಕ ಬಸವರಾಜ ಶಿವಣ್ಣವರ ಅವರು ಗುಣಗಾನ ಮಾಡಿದರು.
ನಾಗರಾಜ ಆನ್ವೇರಿ ಮಾತನಾಡಿ, ನುಲಿಯ ಚಂದಯ್ಯನವರು ಇಂದಿನ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದವರು. ಕ್ರಿ.ಶ.೧೧೬೦ ರಲ್ಲಿ ಬಸವಣ್ಣನವರ ಪ್ರಭಾವಳಿಯಿಂದಾಗಿ ಕಾಯಕಶ್ರದ್ದೆ ಜೀವನಕ್ಕಾಗಿ ಪುರ ಬಸವಕಲ್ಯಾಣದಲ್ಲಿ ನೆಲೆನಿಲ್ಲುವ ಮೂಲಕ ಅಲ್ಲಿಯೇ ತಮ್ಮ ಕಾಯಕ ಹಗ್ಗ ನೇಯುವ ಕಾಯಕದಲ್ಲಿ ನಿರತರರಾಗಿ, ಆ ಕಾಯಕದಿಂದಲೇ ಬಂದ ಹಣದಿಂದ ಪ್ರಸಾದ ವಿತರಣೆ ಮಾಡಿ ನೆಮ್ಮದಿಯಾಗಿ ಕಾಲ ಕಳೆಯುತ್ತ ನಂತರ ಬಸವಣ್ಣನರ ಸಂಪರ್ಕಕ್ಕೆ ಬಂದು ಅನುಭವ ಮಂಟಪವನ್ನು ಸೇರುತ್ತಾರೆ ಅವರ ವಚನಗಳೆಲ್ಲವೂ ‘ಚಂದಲಿಂಗೇಶ್ವರ’ ಎಂಬ ಅಂಕಿತನಾಮದೊಂದಿಗೆ ಕೊನೆಯಾಗುವುದು ವಿಶೇಷ ಎಂದರು.
ಈ ಸಂದರ್ಭದಲ್ಲಿ ಡಾ.ಬಸವರಾಜ ವೀರಾಪುರ, ದಾನಪ್ಪ ಚೂರಿ ಸೇರಿದಂತೆ ಸಮಾಜದ ಮುಖಂಡರಾದ ಮುತ್ತಣ್ಣ ಶಿಗ್ಗಾವಿ, ಪ್ರಶಾಂತ ಪೂಜಾರ, ವೀರರಭದ್ರಪ್ಪ ಬನ್ನಿಹಟ್ಟಿ, ಗ್ರಾಪಂ ಅಧ್ಯಕ್ಷರು ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಗೂ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ
ಎಸ್ಯುಜೆಎಂ ಕಾಲೇಜಿನಲ್ಲಿ ನಡೆದ ಅಭಿಯಾನ || ಹರಪನಹಳ್ಳಿ: ನಶಾಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಬೋಧನೆ

