Vijayasiri News
ಬ್ಯಾಡಗಿಹಾವೇರಿ

ಬ್ಯಾಡಗಿ: ಗೋವಿಗೆ ಸಂಭ್ರಮದ ಸೀಮಂತ ! || ಹೊಸ ಸೀರೆ; ಹೂವಿನ ದಂಡೆ ಮುಡಿಸಿ ಗೋವಿನ ಸಿಂಗಾರ ! ||

ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಅಲ್ಲಿ, ಇಡೀ ಊರೆಂಬ ಊರೇ ಸಡಗರ, ಸಂಭ್ರಮದಲ್ಲಿ ಮಿಂದೆದಿತ್ತು. ತುಂಬು ಗರ್ಭಿಣಿ ವಿವಾಹಿತ ಮನೆಯ ಮಗಳಿಗೆ ಸೀಮಂತ ಕಾರ್ಯ ನೆರವೇರಿಸಿದ ಸಂದರ್ಭದಲ್ಲಿ ಪುಟಿದೇಳುತ್ತಿದ್ದ ಸಂತಸದ ಅಲೆಗಳು ಆ ಊರಿನ ರಾಜಬೀದಿಗಳಲ್ಲಿ ಹರಿದಾಡಿದವು. ಸೀಮಂತ ಕಾರ್ಯದಲ್ಲಿ ನಡೆಯುವ ಎಲ್ಲಾ ಸಂಪ್ರದಾಯಗಳು, ಆಚಾರ, ವಿಚಾರಗಳು, ಊಟೋಪಚಾರಗಳು ಎಲ್ಲವೂ ಥೇಟ್ ಸೀಮಂತ ಕಾರ್ಯದ ಪ್ರತಿರೂಪ. ಇದರೆಲ್ಲೇನು ವಿಶೇಷ ಅಂತೀರಾ? ಹೌದು. ವಿಶೇಷತೆ ಇರುವುದೇ ಇಲ್ಲಿ. ಆ ಊರಲ್ಲಿ ನಡೆದ ಸೀಮಂತ ಕಾರ್ಯ ವಿವಾಹಿತ ತುಂಬು ಗರ್ಭಿಣಿ ಮಹಿಳೆಗೆ ಅಲ್ಲ; ಬದಲಾಗಿ, ದೇವರ ಹೆಸರಿನಲ್ಲಿ ಬಿಟ್ಟಿರುವ ಗೋವು (ಪ್ಯಾಟಿ ಬಸವಿ ) ಈಗ, ತುಂಬು ಗರ್ಭಿಣಿ …! ಹೀಗಾಗಿ, ತಮ್ಮೂರಿನ ದೇವರ ಹೆಸರಿನಲ್ಲಿ ಸಂಪ್ರದಾಯ ಹಾಗೂ ಪರಂಪರೆಯ ಪದ್ಧತಿಯಲ್ಲಿ ಬಿಟ್ಟಿರುವ ಗೋವು ಈಗ ಗರ್ಭ ಧರಿಸಿರುವುದರಿಂದ, ಆ ಗೋವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಅಲ್ಲಿನ ಗ್ರಾಮಸ್ಥರು ಸಂತಸ ಪಟ್ಟಿದ್ದಾರೆ, ಸಂಭ್ರಮಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹೊಸ ಶಿಡೇನೂರು ಗ್ರಾಮಸ್ಥರು ಇಂಥಹ ವಿಶೇಷ ಸಂಪ್ರದಾಯ ಕಾರ್ಯ ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕಡೆ ತಮ್ಮೂರಿನ ಅಧಿದೇವತೆ ಹೆಸರಿನಲ್ಲಿ ಬಸವಿ (ಪ್ಯಾಟಿ ಬಸವಿ) ಬಿಡುವುದು ಸಾಮಾನ್ಯ. ಹೀಗೆ ಬಿಡುವುದರಿಂದ, ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ, ಮಳೆ- ಬೆಳೆಗಳು ಸಮೃದ್ಧಿಯಾಗಿ, ರೈಪಾಪಿ ಕುಟುಂಬಗಳ ಬದುಕು ಹಸನವಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದು. ಹೀಗಾಗಿಯೇ, ಹೊಸಶಿಡೇನೂರು ಗ್ರಾಮದಲ್ಲಿಯೂ ಮೂರುವರೆ ವರ್ಷದ ಆಕಳನ್ನು ಖರೀದಿಸಿ ತರುವ ಮೂಲಕ ಬಸವಿ ಆಕಳನ್ನು ದೇವರ ಹೆಸರಿಗೆ ಹರಕೆ ಬಿಟ್ಟಿದ್ದರು. ಆ ಗೋವು ಈಗ, ತುಂಬು ಗರ್ಭ ಧರಿಸಿದೆ. 8ತಿಂಗಳು ಗರ್ಭಾವಧಿ ಪೂರೈಸಿದ್ದು, ಇನ್ನೇನು ಒಂದು- ಒಂದೂವರೆ ತಿಂಗಳಲ್ಲಿ ಕರುವಿಗೆ ಜನ್ಮನೀಡುವ ಸಾಧ್ಯತೆ ಇದೆ ಎಂದು ಪಶು ವೈದ್ಯರು ದೃಢೀಕರಿಸಿದ್ದಾರೆ. ಹೀಗಾಗಿ, ತಮ್ಮೂರಿನ ದೈವದ ಹೆಸರಿನಲ್ಲಿರುವ ಈ ತುಂಬು ಗರ್ಭಿಣಿ ಬಸವಿ ಗೋವಿಗೆ ಸೀಮಂತ ಕಾರ್ಯ ನೆರವೇರಿಸಿದ್ದಾರೆ.
ಗರ್ಭಿಣಿ ಮಹಿಳೆಯರಿಗೆ ಸಂಪ್ರದಾಯದಂತೆ ನೆರವೇರಿಸುವ ಸೀಮಂತ ಕಾರ್ಯದ ಪ್ರತಿರೂಪದಂತೆ ಈ ಗೋವಿಗೂ, ಐದು ಜನ ಮುತೈದೆಯರು, ಬೆಳಿಗ್ಗೆ 8ಗಂಟೆಗೆ ಊರಿನ ವೀರಭದ್ರೇಶ್ವರಸ್ವಾಮಿ ದೇಗುಲದ ಮುಂಭಾಗದಲ್ಲಿ ಬಿಸಿ ನೀರಿಗೆ ಅರಸಿಣ ಬೆರೆಸುವ ಮೂಲಕ ಗೋವನ್ನು ಎರೆದಿದ್ದಾರೆ. ಬಳಿಕ, ಮಲ್ಲಿಗೆ ಹೂವಿನಲ್ಲಿ ಸಿದ್ಧಪಡಿಸಲಾಗಿದ್ದ ದಂಡಿಯನ್ನು ಗೋವಿಗೆ ಅಲಂಕರಿಸಿದ್ದಾರೆ. ಜತೆಗೆ, ಹಸಿರುಬಣ್ಣದ ಸೀರೆಯನ್ನೂ ಕೊರಳಿಗೆ ಹಾಕಿದ್ದಾರೆ. ಅದರಲ್ಲಿ ಗೋಧಿಸರ, ಉಡಿಅಕ್ಕಿ ತುಂಬಿದ್ದಾರೆ. ದೇವಸ್ಥಾನದಲ್ಲಿ ಅರ್ಚಕರು, ಪೂಜಾಧಿ ಕಾರ್ಯಗಳನ್ನು ನೆರವೇರಿಸಿದ ಬಳಿ, ಮಂತ್ರಘೋಷಣೆಗಳನ್ನು ಮೊಳಗಿಸುವ ಮೂಲಕ ಸೀಮಂತ ಕಾರ್ಯವನ್ನು ನೆರವೇರಿಸಿದ್ದಾರೆ.
ಗ್ರಾಮದಲ್ಲಿಯೇ ಒಂದು ಗುಂಪು ಗಂಡನ ಮನೆಯವರ ಕಡೆಯದಾಗಿದ್ದರೆ, ಇನ್ನೊಂದು ಗುಂಪು ತವರುಮನೆಯ ಪ್ರತಿರೂದಲ್ಲಿ ಸಮಾಗಮವಾಗುವ ಮೂಲಕ ಅತ್ಯಂತ ಸಂಪ್ರದಾಯದ ಪ್ರಕಾರವೇ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಸಂತಸ ಪಟ್ಟಿದ್ದಾರೆ. ಜತೆಗೆ, ಗೋಧಿ ಹುಗ್ಗಿ, ಅನ್ನ- ಸಾಂಬಾರ್ ತಯಾರಿಸುವ ಮೂಲಕ ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು. ನೆರೆದ ಸಹಸ್ರಾರು ಜನ, ಅನ್ನಸಂತರ್ಪಣೆಯ ಪ್ರಸಾದವನ್ನು ಸೇವಿಸುವ ಮೂಲಕ ಗೋವಿನ ಸೀಮಂತ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

Related posts

|| ಬ್ಯಾಡಗಿ: ಕಲ್ಲೆದೇವರ ಗ್ರಾಮದಲ್ಲಿ ಗ್ರಂಥಾಲಯ ಪಿತಾಮಹ ಡಾ. ರಂಗನಾಥನ್ ಜಯಂತ್ಯುತ್ಸವ ||ಪುಸ್ತಕಗಳಿಂದ ದೊರೆಯುವ ಜ್ಞಾನದ ಮುಂದೆ ಇನ್ನಾವ ಸಾಧನೂ ಸರಿಸಾಟಿಯಾಗಲಾರದು: ಪ್ರವೀಣ

Vijayasiri News

|| ಬ್ಯಾಡಗಿ || ಹೆಚ್ಚಿದ ಬೀದಿ ನಾಯಿಗಳ ಹಾವಳಿ; ಸಾರ್ವಜನಿಕರ ಆಕ್ರೋಶ

Vijayasiri News

ಬ್ಯಾಡಗಿ: ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತಾಪಿ ಸಮುದಾಯದ ಬದುಕನ್ನು ಹಸನಾಗಿಸಲು ಕಂಕಣಬದ್ಧ: ಶಾಸಕ ಶಿವಣ್ಣವರ

Vijayasiri News

ಬ್ಯಾಡಗಿ: ಸಂಕಷ್ಟಕ್ಕೆ ಸಿಲುಕಿದ ರೈತಾಪಿ ಸಮುದಾಯ, ಕಾಡುಹಂದಿಗಳ ದಾಳಿ; ಕಾಳುಕಟ್ಟುವ ಹಂತದಲ್ಲಿದ್ದ ಗೋವಿನಜೋಳ ಬೆಳೆ ನಾಶ

Vijayasiri News

ಬ್ಯಾಡಗಿ|| ಸಮ ಸಮಾಜದ ಸಾಮಾಜಿಕ ವ್ಯವಸ್ಥೆಗೆ ನುಲಿಯ ಚಂದಯ್ಯ ಬದುಕು; ಬರಹ ಸಾರ್ವಕಾಲಿಕ ಮಾದರಿ: ಶಾಸಕ ಶಿವಣ್ಣವರ

Vijayasiri News

ಬ್ಯಾಡಗಿ:ಇಷ್ಟಾರ್ಥಸಿದ್ಧಿಗಾಗಿ ಮಠ- ಮಂದಿರಗಳಿಗೆ ನಡೆದುಕೊಳ್ಳುವ ಭಕ್ತರೇ ಅಧಿಕ: ರೇವಣಸಿದ್ದೇಶ್ವರ ಸ್ವಾಮೀಜಿ

Vijayasiri News
error: Content is protected !!