Vijayasiri News
ರಾಜ್ಯವಿಜಯನಗರ

ತಲೆಕೂದಲನ್ನು ಬೋಳಿಸಿಕೊಂಡು ಆಕ್ರೋಶ, ನ್ಯಾ. ನಾಗಮೋಹನದಾಸ್ ವರದಿ ಅಂಗೀಕಾರಕ್ಕೆ ವಿರೋಧ ಅವಕಾಶ ವಂಚಿತ ಸಮುದಾಯಗಳಿಗೆ ಮರಣ ಶಾಸನವಾದ ವರದಿ ಕೈಬಿಡಿ

ವಿಜಯಸಿರಿನ್ಯೂಸ್.ಕಾಂ/ ವಿಜಯನಗರ(ಹೊಸಪೇಟೆ)
ಪರಿಶಿಷ್ಟರ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ವರದಿ ಅವೈಜ್ಞಾನಿಕ ಹಾಗೂ ಅಸಮರ್ಪಕ ಮಾಹಿತಿಗಳ ಹೂರಣವಾಗಿದ್ದು, ಆಯೋಗ ಸಲ್ಲಿಸಿರುವ ವರದಿಯನ್ನು ಸರ್ಕಾರ ಅಂಗೀಕರಿಸದಂತೆ ಆಗ್ರಹಿಸಿ, ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಒಳಗೊಂಡ ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಟಿಬಿ.ಡ್ಯಾಂ ರಸ್ತೆಯ ಸಣ್ಣಕ್ಕಿ ವೀರಭದ್ರೇಶ್ವರ ದೇವಾಲಯದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಕೆಲವರು ಅರೆಬೆತ್ತಲೆಯಾಗಿ, ಕೆಲವರು ಕೈಯಲ್ಲಿ ಪೊರಕೆ ಹಿಡಿದು, ಸರ್ಕಾರದ ವಿರುದ್ಧ ಹಾಗೂ ವರದಿ ಸಲ್ಲಿಸಿದ ನ್ಯಾ. ನಾಗಮೋಹನದಾಸ್ ಅವರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದ ಪ್ರತಿಭಟನಾಕಾರರು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುನೀತ್‌ರಾಜಕುಮಾರ್ ವೃತ್ತಕ್ಕೆ ತಲುಪಿದರು. ಅಲ್ಲಿ ಕೆಲಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಕೆಲವರು ವೃತ್ತದ ಮಧ್ಯದಲ್ಲಿಯೇ ತಲೆಕೂದಲನ್ನು ಬೋಳಿಸಿಕೊಂಡು ಲಬೋ….. ಲಬೋ…. ಬಾಯಿ ಬಡಿದುಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಒಳಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿನ ಅಂಕಿ ಅಂಶಗಳು, ಅವೈಜ್ಞಾನಿಕವಾಗಿವೆ. ಜತಗೆ, ಪರಿಶಿಷ್ಟ ವರ್ಗದ ವ್ಯಾಪ್ತಿಗೆ ಒಳಪಡುವ ಕೆಲ ಸಮುದಾಯಗಳನ್ನಷ್ಟೇ ಕೇಂದ್ರೀಕರಿಸಿರುವ ಆಯೋಗ, ಮೀಸಲಾತಿಗೆ ಒಳಪಡುವ ಎಲ್ಲಾ ಸಮುದಾಯಕ್ಕೂ ನ್ಯಾಯಸಮ್ಮತ, ಸಂವಿಧಾನಬದ್ಧ ಹಾಗೂ ವೈಜ್ಞಾನಿಕ ಮೀಸಲಾತಿ ಒದಗಿಸುವಲ್ಲಿ ಆಯೋಗ ವಿಫಲವಾಗಿದೆ. ಹೀಗಾಗಿ, ಆಯೋಗ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸುವಂತೆ ಪ್ರತಿಭಟನಾಕಾರರರು ಒತ್ತಾಯಿಸಿದರು.
ಒಳಮೀಸಲಾತಿಯಲ್ಲಿ ಎಡಗೈ- ಬಲಗೈ ಸಮುದಾಯಕ್ಕೆ ತಲಾ ಶೇ. 6ರಷ್ಟು ಮೀಸಲಾತಿ ಒದಗಿಸಲಾಗಿದೆ. ಉಳಿದ 59ಪರಿಶಿಷ್ಟ ಜಾತಿಗೆ ಒಳಪಡುವ ಸಮುದಾಯಕ್ಕೆ ಕೇವಲ ಶೇ. 5ರಷ್ಟು ಮೀಸಲಾತಿ ಹಂಚಿಕೆಗೆ ನಿಗದಿಪಡಿಸಲಾಗಿದೆ. ಆಯೋಗ ಸಲ್ಲಿಸಿರುವ ಹಾಗೂ ಸಂಪುಟಸಭೆ ಪರಿಷ್ಕರಿಸಿರುವ ಒಳಮೀಸಲಾತಿ ಸೂತ್ರವನ್ನು ಸುತಾರಾಂ ಒಪ್ಪಲು ಸಾಧ್ಯವೇ ಇಲ್ಲ. ಹೀಗಾಗಿ, ಕೂಡಲೇ, ಒಳಮೀಸಲಾತಿಗೆ ಸಂಬಂಧಿಸಿದ ಸಂಪುಟದ ನಿರ್ಣಯವನ್ನು ವಾಪಾಸ್ ಪಡೆಯುವಂತೆ ಹಾಗೂ ಆಯೋಗದ ವರದಿಯನ್ನು ಕೈಬಿಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಸರ್ಕಾರ ಈ ವಿಷಯದಲ್ಲಿ ಇದೇ ಧೋರಣೆಯನ್ನು ಮುಂದುವರೆಸಿದರೆ, ಹೋರಾಟದ ರೂಪುರೇಷಗಳ ಸ್ವರೂಪ ತೀವ್ರತೆಯನ್ನು ಪಡೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಚಿತ್ರದುರ್ಗ ಬಂಜಾರ ಸೇವಾಲಾಲ್ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರು, ದೂಪದಹಳ್ಳಿ ಮಠದ ಶಿವಪ್ರಕಾಶ ಮಹಾರಾಜ ಸ್ವಾಮೀಜಿ, ಮಂಜುಮಹಾರಾಜ, ತಿಪ್ಪೇಸ್ವಾಮಿ ಮಹಾರಾಜ, ಹನುಮಂತ ಮಹಾರಾಜ, ಬಂಜಾರ ಸಮಾಜದ ಜಿಲ್ಲಾಘಟಕದ ಅಧ್ಯಕ್ಷ ಲಾಲ್ಯನಾಯ್ಕ್, ಭೋವಿ ಸಮಾಜದ ಜಿಲ್ಲಾಘಟಕದ ಅಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಕೊರಚ ಸಮಾಜದ ಜಿಲ್ಲಾಘಟಕದ ಅಧ್ಯಕ್ಷ ಯಲ್ಲಾಪುರ ಪುರುಷೋತ್ತಮ, ಕೊರವ ಸಮಾಜದ ಜಿಲ್ಲಾಧ್ಯಕ್ಷ ಹುಲುಗಪ್ಪ, ಮುಖಂಡರಾದ ರಾಮಜಿನಾಯ್ಕ್, ತುಳಿಸಿನಾಯ್ಕ್, ಎಸ್.ಪಿ. ಲಿಂಬ್ಯನಾಯ್ಕ್, ಕುಮಾರನಾಯಕ್, ಹನುಮನಾಯ್ಕ್ ಮೋದಿ, ಕೆ. ಶಿವಕುಮಾರ, ತಿಪ್ಪಸರ್‌ನಾಯ್ಕ್, ಸುನೀಲ್‌ನಾಯ್ಕ್, ಹೊನ್ನಪ್ಪ, ಕೆಂಚಪ್ಪ, ವಾಸು, ಶೈಲಜಾಬಾಯಿ, ಪವಿತ್ರಾಬಾಯಿ, ರಾಮಾನಾಯ್ಕ್, ಈಶ್ವರನಾಯ್ಕ್, ಚೇತನರಾಜ್, ಅಲೋಕನಾಯ್ಕ್, ರಾಜಕುಮಾರ, ವಿನಾಯಕ್ ಭಜಂತ್ರಿ, ಶಮಾನಾಯ್ಕ್, ಗಂಗಾನಾಯ್ಕ್, ಪಂಪಾನಾಯ್ಕ್, ವೀರಸಿಂಗ್ ರಾಥೋಡ್, ವೆಂಕಟೇಶ್ ಸೇರಿದಂತೆ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಪಾಲ್ಗೊಂಡಿದ್ದರು.

Related posts

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಹೊಲಿಗೆ ತರಬೇತಿ ಸಮಾರೋಪ|| ಕುಟುಂಬದ ಆರ್ಥಿಕ ಸದೃಢತೆಗೆ ಸ್ವ- ಉದ್ಯೋಗ ಸಹಕಾರಿ: ಸತೀಶ್‍ಶೆಟ್ಟಿ

Vijayasiri News

ಹರಪನಹಳ್ಳಿ: ಒಳಮೀಸಲಾತಿ ಹಂಚಿಕೆಯಲ್ಲಿ ಘೋರ ಅನ್ಯಾಯ, ಬಲಾಢ್ಯ ಸಮುದಾಯಗಳ ಪಟ್ಟಿಯಲ್ಲಿ ಅಲೆಮಾರಿಗಳ ಸೇರ್ಪಡೆ, ಜೀವಿಸುವ ಹಕ್ಕನ್ನೂ ಕಸಿದ ಸರ್ಕಾರ: ಪ್ರತಿಭಟನಾಕಾರರ ಆಕ್ರೋಶ

Vijayasiri News

ಹೂವಿನಹಡಗಲಿ: ಪೊಲೀಸರ ಕೈಯಲ್ಲಿ ಸಲಕೆ, ಬುಟ್ಟಿ…!, ನಾವು ಕಾನೂನು ರಕ್ಷಣೆಗೂ ಸದಾ ಬದ್ಧ, ಸಮಾಜಸೇವೆಗೂ ಸಿದ್ಧ…!!

Vijayasiri News

ಹರಪನಹಳ್ಳಿಯಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ಅಸಹಾಯಕ ಕುಟುಂಬದ ಬದುಕಿನಲ್ಲಿ ಪಂಚಗ್ಯಾರಂಟಿ ಯೋಜನೆಗಳು ಭರವಸೆ ಮೂಡಿಸಿವೆ: ಶಾಸಕಿ ಲತಾ ಮಲ್ಲಿಕಾರ್ಜುನ

Vijayasiri News

ಹರಪನಹಳ್ಳಿ: ರೈತರ ಪಾಲಿಗೆ ಶಾಪವಾದ ನಿರಂತರ ಮಳೆ, ‘ಸಿಡಿ’ ರೋಗಬಾಧೆಗೆ ತುತ್ತಾದ ಬೆಳೆ, ವೈಜ್ಞಾನಿಕ ಬೆಳೆ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಎಐಕೆಎಸ್ ಪ್ರತಿಭಟನೆ

Vijayasiri News

ಒಕ್ಕಲುತನ ಪರಂಪರೆಯ ವಿಶಿಷ್ಟ ಉತ್ಸವ, ಭೂಲೋಕಕ್ಕೆ ಮಳೆ ತರಿಸುವ ಮಹಾದೇವ ನಮ್ಮ ಈ ಜೋಕುಮಾರಸ್ವಾಮಿ.

Vijayasiri News
error: Content is protected !!