ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ನಾಡಿನಾದ್ಯಂತ ಹಲವು ಜಿಲ್ಲೆಗಳ ಅಪಾರ ಭಕ್ತರ ಪವಿತ್ರ ಧಾರ್ಮಿಕ ಸಂಗ್ರಮವಾದ ಹಾಗೂ ತಪೋನಿಧಿಗಳ ತಾಣವಾಗಿರುವ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ‘ಶಿವನಾರದಮುನಿಸ್ವಾಮಿ ಸಮುದಾಯ ಭವನ’ ನಿರ್ಮಿಸುವ ಮೂಲಕ ಭಕ್ತರ ಧಾರ್ಮಿಕ ಚಟುವಟಿಕೆ, ವಾಸ್ತವ್ಯ ಹಾಗೂ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ನಾರದಮುನಿಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಉದ್ಯಮಿ ಅಣಬೇರು ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಚಿಗಟೇರಿ ಗ್ರಾಮದ ಶಿವನಾರದಮುನಿಸ್ವಾಮಿ ದೇವಸ್ಥಾನದ ಎದುರು ಶಿವನಾರದಮುನಿಸೇವಾ ಟ್ರಸ್ಟ್ ಹಾಗೂ ವಿಧಾನ ಪರಿಷತ್ ಸದಸ್ಯರ ಅನುದಾನದ ಅಡಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಮಹಾ ಸಮುದಾಯ ಭವನದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿಯ ದರ್ಶನಕ್ಕಾಗಿ ನಾಡಿನ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಪ್ರತಿ ವರ್ಷದ ರಥೋತ್ಸವ, ಕಾರ್ತಿಕೋತ್ಸವ, ಶ್ರಾವಣಮಾಸ ಸೇರಿದಂತೆ ಪ್ರತಿ ಹುಣ್ಣಿಮೆ, ಅಮವಾಸ್ಯೆ ವಿಶೇಷ ದಿನಗಳಲ್ಲಿ ದೇಗುಲಕ್ಕೆ ಆಗಮಿಸುವ ಮೂಲಕ ಸ್ವಾಮಿಯ ದರ್ಶನ ಪಡೆಯುತ್ತಾರೆ. ದೂರದ ನಗರ ಹಾಗೂ ಹಳ್ಳಿಗಳಲ್ಲಿನ ಭಕ್ತರೂ ಸ್ವಾಮಿಯ ದೇಗುಲದಲ್ಲಿ ವಿಶೇಷ ಪೂಜೆ, ಮಹಾಭಿಷೇಕ ಸೇರಿದಂತೆ ವಿವಿಧ ಪೂಜಾಧಿಗಳ ಹರಕೆ ತೀರಿಸಲು ಒಂದು ದಿನದ ಮುನ್ನವೇ ದೈವಸನ್ನಿಧಿಗೆ ಆಗಮಿಸುತ್ತಾರೆ. ಅಂಥಹ, ಭಕ್ತರಿಗೆ ಇಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಪರಿಣಾಮ, ಅನಾನುಕೂಲತೆ ಎದುರಾಗುತ್ತಿದ್ದವು. ಹೀಗಾಗಿ, ಭಕ್ತರಿಗೆ ಅಗತ್ಯ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಈ ಸಮುದಾಯ ಭವನ ಲೋಕಾರ್ಪಣೆ ಮಾಡಲಾಗಿದೆ. ಇದರಿಂದ ಭಕ್ತರಿಗೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗಿದೆ ಎಂದರು.

ಶಿವನಾರದಮುನಿಸ್ವಾಮಿ ಸಮುದಾಯ ಭವನ ಪರಸ್ಥಳದ ಭಕ್ತರಿಗೂ ಅಲ್ಲದೇ, ಸ್ಥಳೀಯರಿಗೂ ನೆರವಾಗಲಿದೆ. ವೈವಾಹಿಕ ಕಾರ್ಯಕ್ರಮ ಸೇರಿದಂತೆ ಇತರೆ ಕಲ್ಯಾಣ ಕಾರ್ಯಕ್ರಮ, ಸಾರ್ವಜನಿಕ ಸಭೆ, ಸಮಾರಂಭ ನಡೆಸಲು ಸಹ, ಸಮುದಾಯ ಭವನ ನೆರವಾಗಲಿದೆ. ಈ ಸುಸಜ್ಜಿತ ಸಮುದಾಯ ಭವನ ನಿರ್ಮಾಣದ ಹಿಂದೆ, ಗ್ರಾಮಸ್ಥರು ನೀಡಿದ ನೆರವು, ಸಹಕಾರ ಹಾಗೂ ಸಲಹೆಗಳು ಸಹ ಅಪಾರವಾಗಿದ್ದು, ನಾವು ಸ್ಮರಣೀಯವಾಗಿದ್ದೇವೆ. ಭವಿಷ್ಯದ ದಿನಗಳಲ್ಲಿ ಭಕ್ತರು ಸಾಂಗೋಪಾAಗವಾಗಿ ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ಹೀಗಾಗಿ, ಭವನ ಭಕ್ತಸಮೂಹದಲ್ಲಿ ಸಂತಸವನ್ನು ಉಂಟುಮಾಡಿದೆ ಎಂದು ಅಣಬೇರು ರಾಜಣ್ಣ ಹರ್ಷ ವ್ಯಕ್ತಪಡಿಸಿದರು.
ಆಧುನಿಕತೆಯ ಹೆಸರಿನಲ್ಲಿ ಇಂದು ಧಾರ್ಮಿಕ ಚಟುವಟಿಕೆಗಳು ಹಾಗೂ ಮಾನವೀಯಮೌಲ್ಯಗಳು ಕ್ರಮೇಣ ತೆರೆಮರೆ ಸರಿಯುತ್ತಿವೆ. ಈ ಪರಂಪರೆ ನಾಗರಿಕ ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ದೇಗುಲ, ದೈವತ್ವ, ದೇವರು, ಆಧ್ಯಾತ್ಮ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ನಮ್ಮನ್ನು ಸಮರ್ಪಿಸಿಕೊಂಡಾಗ, ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವ ಜತೆಗೆ, ಉತ್ತಮ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಲು ಸಹಕಾರಿಯಾಗುತ್ತದೆ ಎಂದರು.
ಸಮುದಾಯ ಭವನವನ್ನು ಅಗತ್ಯಕ್ಕೆ ಅನುಗುಣವಾಗಿ ಉಪಯೋಗಿಸಿಕೊಳ್ಳುವ ಜತೆಗೆ, ಶುಚಿತ್ವವಾಗಿಟ್ಟುವ ಜತೆಗೆ, ಕಟ್ಟಡವನ್ನು ವಿರೂಪಗೊಳಿಸದಂತೆ ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಪ್ರತಿಯೊಬ್ಬರ ಮೇಲಿದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ್, ಶಿವನಾರದಮುನಿಸ್ವಾಮಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪಲ್ಲಾಗಟ್ಟೆ ನಾಗರಾಜ, ಪದಾಧಿಕಾರಿಗಳಾದ ವಡ್ಡಿನಹಳ್ಳಿ ಷಡಕ್ಷರಪ್ಪ, ಸುರೇಶ್, ಶಾಮನೂರು ಬಸಪ್ಪ, ಪರಮೇಶ್ವರಪ್ಪ ಕಕ್ಕರಗೊಳ್ಳ, ಕಲ್ಪನಹಳ್ಳಿ ಬಸವಲಿಂಗಪ್ಪ, ವೇದಮೂರ್ತಿ ಹುಲಿಕಟ್ಟೆ, ಆಸಗೋಡು ಅಶೋಕ್, ಗಾಂಧಿನಗರ ಜಯಣ್ಣ, ಸ್ಥಳೀಯ ಮುಖಂಡರಾದ ದ್ಯಾಮನಗೌಡ, ಪಿ. ಹಾಲಪ್ಪ, ಜಯಣ್ಣ, ಬಳಿಗಾನೂರು ರಾಮನಗೌಡ, ಹುಣಿಸಿಹಳ್ಳಿ ಹನುಮಂತಪ್ಪ, ಹುಲಿಯಾಳ್ ನಾರಪ್ಪ, ಸೇರಿದಂತೆ ಗ್ರಾಮದ ಮುಖಂಡರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಈ ಸಂದರ್ಭದಲ್ಲಿ ಇದ್ದರು.

