ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಅದು ಸರ್ಕಾರವೇ ಭೂರಹಿತ ಕುಟುಂಬಗಳ ಜೀವನಕ್ಕೆ ನೆರವಾಗಲೆಂದು ಭೂಒಡೆತನದ ಮಂಜೂರಾತಿ ನೀಡಿದ ಜಮೀನು. ಪರಿಶಿಷ್ಟ ಜಾತಿಯ ಬುಡಕಟ್ಟು ಸಮುದಾಯಗಳ ನೂರಾರು ಕುಟುಂಬಗಳು, ನಾಲ್ಕಾರು ದಶಕಗಳಿಂದಲೂ ಆ ಜಮೀನನ್ನ ಸಾಗುವಳಿ ಮಾಡಿಕೊಳ್ಳುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಮೊನ್ನೆ ಏಕಾಏಕಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಬೆಳೆದುನಿಂತಿದ್ದ ಬೆಳೆಯನ್ನು ಹತ್ತಾರು ಜೆಸಿಬಿ ಯಂತ್ರಗಳ ಮೂಲಕ ನೆಲಸಮಗೊಳಿಸಿದ್ದಾರೆ. ಅಧಿಕಾರಿಗಳ ಈ ನಡೆಯಿಂದ ಬುಡಕಟ್ಟು ಕುಟುಂಬಗಳ ಬದುಕು, ಬೀದಿಪಾಲಾಗಿದೆ. ಬೆಳೆದುನಿಂತಿರುವ ಬೆಳೆ, ಕಣ್ಮುಂದೆಯೇ, ನಾಶಪಡಿಸಿದ ಹಿನ್ನೆಲೆಯಲ್ಲಿ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ ಇಬ್ಬರು ರೈತ ಮಹಿಳೆಯರು, ಶನಿವಾರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಘಾತಕಾರಿ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹರಪನಹಳ್ಳಿ ತಾಲ್ಲೂಕಿನ ತೆಲಿಗಿ ಹೋಬಳಿ ವ್ಯಾಪ್ತಿಗೆ ಒಳಪಡುವ ಮಾಚಿಹಳ್ಳಿ ಕೊರಚರಹಟ್ಟಿ ಮತ್ತು ತಾಳೇದಹಳ್ಳಿ ತಾಂಡದಲ್ಲಿ ಪರಿಶಿಷ್ಟ ಜನಾಂಗದ ಬುಡಕಟ್ಟು ಸಮುದಾಯದ ಜನರೇ ವಾಸಿಸುತ್ತಿದ್ದಾರೆ. ಬಹುತೇಕ ಇಲ್ಲಿ ವಾಸಿಸುತ್ತಿರುವವರೆಲ್ಲರೂ ಭೂರಹಿತ ಕುಟುಂಬಗಳೇ ಅಧಿಕ. ಕಾಡಂಚಿನ ಪಾಳುಬಿದ್ದಿದ್ದ ಸರ್ವೇ ನಂಬರ್ 382 ಹಾಗೂ 31ರಲ್ಲಿನ ಸರ್ಕಾರಿ ಜಮೀನನ್ನು ಉಳುಮೆ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಈ ಮಧ್ಯೆ, ಭೂರಹಿತರಾಗಿದ್ದ ಈ ಸಾಗುವಳಿ ಕುಟುಂಬಗಳಿಗೆ ಸರ್ಕಾರವೇ, ಕಳೆದ ನಾಲ್ಕು ದಶಕಗಳ ಹಿಂದೇ, ಅವರು ಉಳುಮೆ ಮಾಡುತ್ತಿದ್ದ ಭೂಮಿಗೆ ಭೂಒಡೆತನದ ಹಕ್ಕುಪತ್ರ ನೀಡಿದೆ. ಅದರ, ಭಾಗವಾಗಿ, ಆ ಭೂಮಿಗೆ ಸಂಬಂಧಿಸಿದಂತೆ ಸರ್ಕಾರಿ ದಾಖಲೆಗಳಲ್ಲಿ ಅಂದರೆ, ಪಹಣಿಪತ್ರದಲ್ಲಿ ನೂರಾರು ರೈತರ ಹೆಸರುಗಳು ದಾಖಲಾಗಿವೆ.
ಎರಡ್ಮೂರು ಎಕರೆ ವಿಸ್ತೀರ್ಣದ ಭೂಮಿಯನ್ನು ಸರ್ಕಾರವೇ ಮಂಜೂರಾತಿ ನೀಡಿದೆ. ಮಂಜೂರಾತಿ ನೀಡಿದ ಜಮೀನುಗಳಿಗೆ ಪೋಡಿ, ನಕ್ಷೆ ಹಾಗೂ ಹದ್ದುಬಸ್ತು ಮಾಡಿಕೊಡುವಂತೆ ಇಲ್ಲಿ ಭೂಮಂಜೂರಾತಿ ಪಡೆದ ಫಲಾನುಭವಿಗಳು, ಕಳೆದ ನಾಲ್ಕಾರು ವರ್ಷಗಳಿಂದಲೂ ತಾಲ್ಲೂಕು ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಆದರೆ, ಸಂಬಂಧಿಸಿದ ಇಲಾಖೆಗಳು, ಇವರ ಅಹವಾಲು ಕೇಳಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿಲ್ಲ. ಹೀಗಾಗಿ, ಸರ್ಕಾರ ಮಂಜೂರಾತಿ ನೀಡಿರುವ ಜಮೀನಿನ ಅಳತೆ, ಹದ್ದುಬಸ್ತು, ಗಡಿರೇಖೆ ಗುರುತಿಸದ ಹಿನ್ನೆಲೆಯಲ್ಲಿ, ಅಕ್ಕಪಕ್ಕದ ಪಾಳುಬಿದ್ದಿದ್ದ ಸರ್ಕಾರಿ ಹಾಗೂ ಅರಣ್ಯ ಭೂಮಿಯನ್ನು ಒಂದಿಷ್ಟು ಹೆಚ್ಚುವರಿಯಾಗಿ ಸಾಗುವಳಿ ಮಾಡುತ್ತಿದ್ದಾರೆ. ಇದು, ನಾಲ್ಕಾರು ದಶಕಗಳಿಂದಲೂ ಹೀಗೆ ಸಾಗಿದೆ. ಆದರೆ, ಒತ್ತುವರಿ ಜಮೀನನ್ನು ಉಳುಮೆ ಮಾಡದಂತೆ ನೆನಪಾದಗೊಮ್ಮೆ ನೋಟೀಸ್ ಕಳುಹಿಸಿ, ಬಾಯ್ಮುಚ್ಚಿಕೊಂಡಿರುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಅಲ್ಲಿನ ಒತ್ತುವರಿಗೆ ಒಂದು ಅರ್ಥದಲ್ಲಿ ಇವರೇ, ನೆರವಾಗುತ್ತಿದ್ದರು ಎಂಬ ಆರೋಪಗಳು ಸಹ ಕೇಳಿಬರುತ್ತಿವೆ. ಜತೆಗೆ, ಒತ್ತುವರಿ ಮಾಡಿಕೊಂಡಿರುವ ರೈತರಿಂದ ಇಲಾಖೆ ಯಾವ ಸಂದರ್ಭದಲ್ಲಾದರೂ, ಒತ್ತುವರಿ ತೆರವು ಕಾರ್ಯಕೈಗೊಂಡರೆ, ಸ್ವಯಂಕೃತವಾಗಿ ಬಿಟ್ಟುಕೊಡುತ್ತೇವೆ ಎಂಬ ಮುಚ್ಚಳಿಕೆಯನ್ನು ಅಧಿಕಾರಿಗಳು ಜಾಣ್ಮೆಯಿಂದ ಬರೆಸಿಕೊಳ್ಳುವ ಮೂಲಕ ಅಮಾಯಕ ರೈತರನ್ನು ಶೋಷಿಸುತ್ತಲೇ ಬಂದಿದ್ದಾರೆ.
ಮುಂಗಾರು ಮಳೆ ಸಕಾಲದಲ್ಲಿ ಹಸನಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸಾಗುವಳಿಯೂ ಸೇರಿದಂತೆ ಒಂದಿಷ್ಟು ಆಗಿದೆ ಎನ್ನಲಾದ ಒತ್ತುವರಿ ಜಮೀನುಗಳಲ್ಲಿಯೂ ಈಗಾಗಲೇ ಬಿತ್ತನೆ ಕಾರ್ಯ ಸಂಪೂರ್ಣವಾಗಿ ಮುಗಿದಿದೆ. ಬ್ಯಾಂಕುಗಳು, ಖಾಸಗೀ ಫೈನಾನ್ಸ್ಗಳು ಹಾಗೂ ಕೆಲ ಶ್ರೀಮಂತರ ಬಳಿಯೂ ಸೇರಿದಂತೆ ಸಾಲಸೋಲ ಮಾಡುವ ಮೂಲಕ, ಜಮೀನಿನ ಉಳುಮೆ, ಬಿತ್ತನೆ, ಬೀಜ, ರಸಗೊಬ್ಬರ, ಆಳು-ಹೋಳು ಸೇರಿದಂತೆೆ ಪ್ರತಿ ಎಕರೆಗೆ ಇಪ್ಪತೈದರಿಂದ ಮೂವತ್ತು ಸಾವಿರದವರೆಗೂ, ರೈತರು ವೆಚ್ಚಮಾಡಿದ್ದಾರೆ. ಈ ಮಧ್ಯೆ, ಮೊನ್ನೆ ಏಕಾಏಕಿ, ಒತ್ತುವರಿ ಜಮೀನುಗಳನ್ನು ತೆರವುಗೊಳಿಸುವಂತೆ ಸೂಚಿಸಿ, ಅರಣ್ಯ ಇಲಾಖೆ ನೋಟೀಸ್ ಜಾರಿಮಾಡಿದೆ. ನೋಟೀಸ್‌ಗೆ ಪ್ರತಿಯಾಗಿ, ಈಗಾಗಲೇ ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದೇವೆ. ಇನ್ನೆರಡು ತಿಂಗಳು ಸಮಯಾವಕಾಶ ಕೊಡಿ, ಅಷ್ಟರೊಳಗೆ ಬೆಳೆ ಕಟಾವು ಮಾಡಿಕೊಂಡು, ಭೂಮಿಯನ್ನು ತೆರವುಗೊಳಿಸುತ್ತೇವೆ ಎಂದು, ಸಮಜಾಯಿಷಿ ನೀಡಿದ್ದಾರೆ. ಆದರೂ, ರೈತರ ಅಹವಾಲುಗಳಿಗೆ, ಆಲಿಸದ ಅರಣ್ಯ ಇಲಾಖೆ ಅಧಿಕಾರಿಗಳು, ಏಕಾಏಕಿ ಜೆಸಿಬಿ ಯಂತ್ರಗಳ ಸಮೇತ, ಜಮೀನುಗಳಿಗೆ ನುಗ್ಗಿದ್ದಾರೆ. ರೈತರು, ರೈತ ಮಹಿಳೆಯರು, ಪರಿಪರಿಯಾಗಿ ಸೆರಗೊಡ್ಡಿ ಬೇಡಿಕೊಂಡರು, ಕೇಳದ ಅಧಿಕಾರಿಗಳು, ಅವರನ್ನು ಬಲವಂತವಾಗಿ, ತಳ್ಳುವ ಮೂಲಕ, ದೌರ್ಜನ್ಯ ಎಸಗಿ, ಎರಡ್ಮೂರು ತಿಂಗಳ ಅವಧಿಯ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸುತ್ತಾರೆ ಗ್ರಾಮದ ವಕೀಲರಾದ ಪ್ರಕಾಶ್‌ನಾಯ್ಕ್.
ನಾಲ್ಕಾರು ದಶಕಗಳಿಂದಲೂ ಜೀವನ ನಿರ್ವಹಣೆಗೆ ಆಸರೆಯಾಗಿದ್ದ ಭೂಮಿಯಲ್ಲಿ ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದ ಬೆಳೆ ಅಧಿಕಾರಿಗಳ ದೌರ್ಜನ್ಯಕ್ಕೆ ತುತ್ತಾಗಿ, ಮಣ್ಣುಪಾಲದ ಹಿನ್ನೆಲೆಯಲ್ಲಿ, ಮಾಡಿದ ಸಾಲ ತೀರಿಸುವುದಾದರೂ ಹೇಗೆ ಎಂಬ ಮಾನಸಿಕ ತೊಳಲಾಟಕ್ಕೆ ಸಿಲುಕಿದ ಮಾಚಿಹಳ್ಳಿ ಕೊರಚರಹಟ್ಟಿಯ ರೈತ ಕುಟುಂಬದ ಮಹಿಳೆಯರಾದ ಲೋಕಮ್ಮ ಮತ್ತು ದುರುಗಮ್ಮ ಎಂಬ ಇಬ್ಬರು ಮಹಿಳೆಯರು ಶನಿವಾರ ಸಂಜೆ ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಣ್ಯ ಇಲಾಖೆ ಅಧೀನದಲ್ಲಿನ ಭೂಮಿ ಒತ್ತುವರಿ ತೆರವು, ಅರಣ್ಯ ಸಂರಕ್ಷಣೆ ಹಾಗೂ ಗಿಡ- ಮರಗಳ ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಅಧಿಕಾರಿಗಳ ಈ ಕ್ರಮ ಕಾನೂನು ರೀತ್ಯ ಸರಿಯಾಗಿಯೇ ಇರಬಹುದು. ಆದರೆ, ಮುಂಗಾರು ಮಳೆಯ ಪೂರ್ವದಲ್ಲಿಯೇ ಇಲಾಖೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗುವ ಮೂಲಕ, ಸರ್ಕಾರಿ ಭೂಮಿಯ ಸಂರಕ್ಷಣೆಗೆ ಮುಂದಾಗಿದ್ದರೇ, ಅಧಿಕಾರಿಗಳ ನಡೆ ವ್ಯಾಪಕ ಪ್ರಶಂಸೆಗೆ ಕಾರಣವಾಗುತ್ತಿತ್ತು. ಆದರೆ, ತೆರವು ನೆಪದಲ್ಲಿ ಬಿತ್ತನೆಯಾಗಿರುವ ಹಾಗೂ ಒಂದರೆಡು ತಿಂಗಳ ಕಾಲಾವಕಾಶಕ್ಕೂ ಅವಕಾಶ ನೀಡದೇ, ಬೆಳೆದುನಿಂತ ಬೆಳೆಯನ್ನೆಲ್ಲಾ, ನಾಶಪಡಿಸಿರುವ ಅಧಿಕಾರಿಗಳ ಕ್ರಮಕ್ಕೆ ಬುಡಕಟ್ಟು ಸಮುದಾಯದ ಬದುಕು ಸಾಲದ ಶೂಲಕ್ಕೆ ತುತ್ತಾಗುವಂತಾಗಿದೆ. ಜತೆಗೆ, ಇಬ್ಬರು ಮಹಿಳೆಯರು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕಸ್ಮಿಕ ದುರ್ಘಟನೆ ಸಂಭವಿಸಿದ್ದರೇ, ಆ ಕುಟುಂಬಗಳ ಗತಿ ಏನು ಎಂಬ ವಿವೇಚನೆ ಅಧಿಕಾರಿಗಳಿಗೆ ಇಲ್ಲದರಿರುವುದು ದುರಂತದ ಸಂಗತಿ.
ಮಾಚಿಹಳ್ಳಿ ಕೊರಚರಹಟ್ಟಿ ಹಾಗೂ ತಾಳೇದಹಳ್ಳಿ ತಾಂಡದ ಬುಡಕಟ್ಟು ಸಮುದಾಯದ ಸುಮಾರು ನೂರಾರು ಕುಟುಂಬಗಳು ಸರ್ಕಾರಿ ಜಮೀನನ್ನು ಸಾಗುವಳಿ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯಭೂಮಿ ಒತ್ತುವರಿ ನೆಪದಲ್ಲಿ ಯಾವುದೇ ನೋಟೀಸ್ ಜಾರಿಮಾಡದೇ, ಏಕಾಏಕಿ, ಜೆಸಿಬಿ ಯಂತ್ರಗಳ ಮೂಲಕ ಜಮೀನುಗಳಿಗೆ ನುಗ್ಗಿ, ಬೆಳೆಯನ್ನು ನಾಶಪಡಿಸಿರುವುದು ಅಧಿಕಾರಿಗಳ ದೌರ್ಜನ್ಯದ ಪರಮಾವಧಿ. ಒಂದು ವೇಳೆ ಅರಣ್ಯಭೂಮಿ ಒತ್ತುವರಿಯಾಗಿದ್ದರೇ, ಮುಂಗಾರು ಮಳೆಯ ಆರಂಭದಲ್ಲಿಯೇ ಅಧಿಕಾರಿಗಳು ಈ ಕ್ರಮ ಅನುಸರಿಸಬೇಕಿತ್ತು. ಆದರೆ, ಈಗ, ಈ ಕ್ರಮಕ್ಕೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದೆಡೆ ರಸಗೊಬ್ಬರದ ಅಭಾವ, ಮತ್ತೊಂದೆಡೆ ಬಿತ್ತನೆಗೆ ಹಾಕಿದ ಬಂಡವಾಳ ಎರಡಕ್ಕೂ ಸಾಲ ಮಾಡಿರುವ ಬುಡುಕಟ್ಟು ಕುಟುಂಬಗಳು ಈಗ ದಿಕ್ಕು ತೋಚದ ರೀತಿಯಲ್ಲಿವೆ. ಕೂಡಲೇ, ಸರ್ಕಾರ ರೈತರನ್ನು ಬಲವಂತವಾಗಿ ಹಾಗೂ ಅಕ್ರಮ, ದೌರ್ಜನ್ಯವಾಗಿ ಒತ್ತುವರಿಗೆ ಮುಂದಾಗಿರುವ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು. ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದರೂ, ಸ್ಥಳೀಯ ಶಾಸಕರು, ಕನಿಷ್ಠ ಸೌಜನ್ಯಕ್ಕಾದರೂ, ಭೇಟಿ ನೀಡಿ, ಸಾಂತ್ವಾನ ಹೇಳದಿರುವುದು ಕಾಂಗ್ರೆಸ್ ಪಕ್ಷದ ರೈತವಿರೋಧಿ ನೀತಿಯನ್ನು ಎತ್ತಿ ತೋರುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ ಹಾಗೂ ತಾಳೇದಹಳ್ಳಿ ತಾಂಡದ ಬುಡಕಟ್ಟು ಸಮುದಾಯದ ಸುಮಾರು ನೂರಾರು ಕುಟುಂಬಗಳು ಸರ್ಕಾರಿ ಜಮೀನನ್ನು ಸಾಗುವಳಿ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯಭೂಮಿ ಒತ್ತುವರಿ ನೆಪದಲ್ಲಿ ಯಾವುದೇ ನೋಟೀಸ್ ಜಾರಿಮಾಡದೇ, ಏಕಾಏಕಿ, ಜೆಸಿಬಿ ಯಂತ್ರಗಳ ಮೂಲಕ ಜಮೀನುಗಳಿಗೆ ನುಗ್ಗಿ, ಬೆಳೆಯನ್ನು ನಾಶಪಡಿಸಿರುವುದು ಅಧಿಕಾರಿಗಳ ದೌರ್ಜನ್ಯದ ಪರಮಾವಧಿ. ಒಂದು ವೇಳೆ ಅರಣ್ಯಭೂಮಿ ಒತ್ತುವರಿಯಾಗಿದ್ದರೇ, ಮುಂಗಾರು ಮಳೆಯ ಆರಂಭದಲ್ಲಿಯೇ ಅಧಿಕಾರಿಗಳು ಈ ಕ್ರಮ ಅನುಸರಿಸಬೇಕಿತ್ತು. ಆದರೆ, ಈಗ, ಈ ಕ್ರಮಕ್ಕೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದೆಡೆ ರಸಗೊಬ್ಬರದ ಅಭಾವ, ಮತ್ತೊಂದೆಡೆ ಬಿತ್ತನೆಗೆ ಹಾಕಿದ ಬಂಡವಾಳ ಎರಡಕ್ಕೂ ಸಾಲ ಮಾಡಿರುವ ಬುಡುಕಟ್ಟು ಕುಟುಂಬಗಳು ಈಗ ದಿಕ್ಕು ತೋಚದ ರೀತಿಯಲ್ಲಿವೆ. ಕೂಡಲೇ, ಸರ್ಕಾರ ರೈತರನ್ನು ಬಲವಂತವಾಗಿ ಹಾಗೂ ಅಕ್ರಮ, ದೌರ್ಜನ್ಯವಾಗಿ ಒತ್ತುವರಿಗೆ ಮುಂದಾಗಿರುವ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು. ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದರೂ, ಸ್ಥಳೀಯ ಶಾಸಕರು, ಕನಿಷ್ಠ ಸೌಜನ್ಯಕ್ಕಾದರೂ, ಭೇಟಿ ನೀಡಿ, ಸಾಂತ್ವಾನ ಹೇಳದಿರುವುದು ಕಾಂಗ್ರೆಸ್ ಪಕ್ಷದ ರೈತವಿರೋಧಿ ನೀತಿಯನ್ನು ಎತ್ತಿ ತೋರುತ್ತಿದೆ.

ಎಸ್.ಪಿ. ಲಿಂಬ್ಯಾನಾಯ್ಕ್, ವಕೀಲರು ಹಾಗೂ ರಾಜ್ಯ ಘಟಕದ ಕಾರ್ಯದರ್ಶಿ, ಭಾರತೀಯ ಜನತಾ ಪಕ್ಷ ಎಸ್ಸಿ ಮೋರ್ಚಾ,

