ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಅದರ ಹೆಸರು ಸುಜಲಾನ್ ಎನೆರ್ಜಿ ಲಿಮಿಟೆಡ್ ಕಂಪೆನಿ. ನೈಸರ್ಗಿಕವಾಗಿ ದೊರೆಯುವ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಬೆಳಕು ನೀಡುವ ಸಂಸ್ಥೆ. ಆದರೆ, ‘ಸಮುದ್ರದ ನೆಂಟಸ್ತನ; ಉಪ್ಪಿಗೆ ಬಡತನ’ ಎಂಬಂತಾಗಿದೆ ಕಂಪೆನಿಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಕಾರ್ಮಿಕರ ಬದುಕು. ಪ್ರಾಣದ ಹಂಗು ತೊರೆದು, ಅಪಾಯಕಾರಿ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ನೌಕಕರು ಶ್ರಮದ ಬೆವರು ಬಸಿಯದಿದ್ದರೇ, ಕಂಪೆನಿಗೆ ಕತ್ತಲು ಆವರಿಸಿಕೊಳ್ಳುತ್ತಿತ್ತು. ಆದರೆ, ಜೀವವನ್ನು ಅಂಗೈಯಲ್ಲಿಡಿದು, ಕಂಪೆನಿಯ ಅಭಿವೃದ್ಧಿಗಾಗಿ ಜೀವಸವೆಸಿದ ಕಾರ್ಮಿಕರ ಸಂಖ್ಯೆಯನ್ನು ವಿನಾಕಾರಣ ಕಡಿತಗೊಳಿಸಲಾಗುತ್ತಿದೆ. ಜತೆಗೆ, ಉಳಿದ ಸಿಬ್ಬಂದಿಗೆ ಕಾರ್ಯಭಾರದ ಅಧಿಕ ಹೊರೆಯನ್ನು ಹೊರೆಸುವ ಮೂಲಕ ಸುಜಲಾನ್ ಎನರ್ಜಿ ಪ್ರವೇಟ್ ಲಿಮಿಟೆಡ್ ಕಂಪೆನಿ ಅಕ್ಷರಶಃ ಈಗ ಕಾರ್ಮಿಕ ವಿರೋಧಿ ನೀತಿಗೆ ಕೈಹಾಕಿದೆ. ಹೀಗಾಗಿ, ಇಂದು ಕರ್ತವ್ಯದ ಹಾಜರಿ ಪುಸ್ತಕಕ್ಕೆ ಸಹಿ ಹಾಕುವ ಕಾರ್ಮಿಕರು, ನಾಳೆಗೆ ಇಲ್ಲಿ ಇರುತ್ತೇನೋ ಇಲ್ಲವೋ ಎಂಬ ಆತಂಕ ಆವರಿಸಿಕೊಂಡಿದೆ. ಅಂದರೆ, ನಾಳೆಯ ಬದುಕಿನ ಭರವಸೆಯನ್ನೂ ಕಂಪೆನಿ ಕಿತ್ತುಕೊಳ್ಳುತ್ತಿದೆ. ಹೀಗಾಗಿ, ಇಲ್ಲಿನ ಉದ್ಯೋಗಕ್ಕೆ ಖಾತರಿ ಇಲ್ಲವೇ ಇಲ್ಲದಂತಾಗಿದೆ
ಸುಜಲಾನ್ ಎನೆರ್ಜಿ ಪ್ರವೇಟ್ ಲಿಮಿಟೆಡ್ ಕಂಪೆನಿ ಕಳೆದ ಎರಡೂವರೆ ಮೂರು ದಶಕಗಳಿಂದ ಈ ಭಾಗದಲ್ಲಿ ಅಂದರೆ, ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲ್ಲೂಕಿನ ವಿವಿಧೆಡೆ ಪವನ ವಿದ್ಯುತ್ ಘಟಕಗಳನನ್ನು ಸ್ಥಾಪಿಸಿದೆ. ಆದರಲ್ಲಿ ಕಾರ್ಯನಿರ್ವಹಿಸಲು ಕೌಶಲ್ಯಾಧರಿತ ಹಾಗೂ ತಾಂತ್ರಿಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದೆ. ಕಳೆದ ಎಂಟತ್ತು ವರ್ಷಗಳಿಗೆ ಅಧಿಕ ಸುದೀರ್ಘಾವಧಿಯವರೆಗೂ ಇಲ್ಲಿನ ಕಾರ್ಮಿಕರು ಕಂಪೆನಿಯ ಏಳ್ಗೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಹಜವಾಗಿಯೇ ಗುಡ್ಡಗಾಡು ಪ್ರದೇಶದ ಸೇರಿದಂತೆ ಉಳಿದ ವಿದ್ಯುತ್ ಸರಬರಾಜು ಕೇಂದ್ರಗಳಂತ ಅಪಾಯಕಾರಿ ಪ್ರದೇಶದಲ್ಲಿ ಜೀವದ ಹಂಗು ತೊರೆಯುವ ಮೂಲಕ ಇಲ್ಲಿನ ಕಾರ್ಮಿಕರು ಹಗಲಿರಳು ಸರದಿಯ ಅವಧಿಯಂತೆ ಜೀವಸವೆಸುತ್ತಿದ್ದಾರೆ. ಜತೆಗೆ, ತಮ್ಮ ಬದುಕನ್ನು ಕೂಡ ಕಟ್ಟಿಕೊಂಡಿದ್ದಾರೆ. ಆದರೆ, ಯಾವಾಗ ಕಂಪೆನಿ ಹೊಳೆ ದಾಟಿದ ಮೇಲೆ ಅಂಬಿಗನ ಹಂಗು ಏಕೆ ಎಂಬಂತೆ ಕಂಪೆನಿ ಸದೃಢವಾಗುತ್ತಿದ್ದಂತಿಯೇ, ಬೇರೊಂದು ಕಂಪೆನಿಗೆ ಉಪಗುತ್ತಿಗೆ ನೀಡಲಾಗಿದೆ ಎಂಬ ಸುದ್ದಿಗಳು, ಊಹಾಪೋಹಗಳು ಹರಿದಾಡುತ್ತಿವೆ. ಹೀಗಾಗಿ, ಈಗ, ಸಿಬ್ಬಂದಿಯ ಉದ್ಯೋಗಕ್ಕೆ ಅಭದ್ರತೆಯ ಆತಂಕ ಎದುರಾಗಿದೆ. ಅಂದರೆ, ಸಿಬ್ಬಂದಿಯನ್ನು ಕಾರಣವೇ ಇಲ್ಲದೇ, ವಿನಾಕಾರಣ ಕೆಲಸದಿಂದ ಕಿತ್ತು ಹಾಕುವ ಮೂಲಕ, ಉಳಿದ ಬೆರಳೆಣಿಕೆಯ ಸಂಖ್ಯೆ ಸಿಬ್ಬಂದಿಗೆ ಅಧಿಕ ಕಾರ್ಯಭಾರದ ಹೊರೆ ಹೊರೆಸುವ ಮೂಲಕ ಕಾರ್ಮಿಕ ಸಿಬ್ಬಂದಿಯನ್ನು ಜೀವಹಿಂಡುವ ಕೆಲಸಕ್ಕೆ ಕಂಪೆನಿ ಮುಂದಾಗಿದೆ ಎಂಬ ಗುರುತರ ಆರೋಪಗಳು ಸಹ ಕಂಪೆನಿ ಸುತ್ತಲೂ ಗಿರಕಿ ಹೊಡೆಯುತ್ತಿವೆ.
ಆರಂಭದಲ್ಲಿ ಕಂಪೆನಿಯಲ್ಲಿ ಮೇಲ್ವಿಚಾರಣೆ, ತಾಂತ್ರಿಕ ವಿಭಾಗ ಸೇರಿದಂತೆ ವಿವಿಧ ವಿಭಾಗದಲ್ಲಿ 50ಕ್ಕೂ ಅಧಿಕ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು. ಪ್ರತಿದಿನ ಏಳು ಕಾರ್ಮಿಕರನ್ನು ಸರದಿಯ ಅವಧಿಯಂತೆ ಘಟಕಗಳ ನಿರ್ವಹಣೆಗೆ ನಿಯೋಜನೆ ಮಾಡಲಾಗುತ್ತಿತ್ತು. ಕಂಪೆನಿ ಆರಂಭವಾದಗಿನಿಂದಲೂ ನಡೆದುಬಂದಿರುವ ನಿಯಮ. ಆದರೆ, ಎಂಟತ್ತು ವರ್ಷಗಳಿಂದಲೂ ಎನೆರ್ಜಿ ಕಂಪೆನಿಗೆ ಬೆವರುಬಸಿದು ಎನರ್ಜಿ ಒದಗಿಸಿದ್ದ ಸಿಬ್ಬಂದಿಯ ಸಂಖ್ಯೆಯನ್ನು ಯಾವ ಸಕಾರಣವೂ ಇಲ್ಲದೇ ಒಬ್ಬರನ್ನೇ ಕಡಿತಗೊಳಿಸಲು ಮುಂದಾಗಿದೆ. ಜತೆಗೆ, ಆರಂಭದಲ್ಲಿ ಸರದಿಯಂತೆ ಕರ್ತವ್ಯನಿರ್ವಹಿಸುತ್ತಿದ್ದ ಏಳು ಕಾರ್ಮಿಕರ ಬದಲಿಗೆ, ಅದೇ ಕಾರ್ಯಭಾರವನ್ನು ಯಥಾಸ್ಥಿತಿಯಲ್ಲಿಯೇ ನಿರ್ವಹಿಸಲು ಆರು ಜನರಂತೆ, ಕೊನೆಗೆ ಈಗ, ಐದು ಜನ ಕಾರ್ಮಿಕರು ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ.
ಆರಂಭದಲ್ಲಿ ಅಷ್ಟೊಂದು ಸಿಬ್ಬಂದಿ ನಿರ್ವಹಿಸುತ್ತಿದ್ದ ಕಾರ್ಯಭಾರವನ್ನು ಐದೇ ಜನ ನಿರ್ವಹಿಸಬೇಕೆಂದು ಅಧಿಕ ಕಾರ್ಯಭಾರದ ಒತ್ತಡ ಹಾಕುತ್ತಿದ್ದಾರೆ. ಇದು, ಕಂಪೆನಿಯ ಕಾರ್ಮಿಕ ವಿರೋಧಿನೀತಿ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿಯೇ ಸಾಬೀತಗುತ್ತದೆ ಎನ್ನುತ್ತಾರೆ ಹಿರಿಯ ಕಾರ್ಮಿಕ ಮುಖಂಡ ಗುಡಿಹಳ್ಳಿ ಹಾಲೇಶ್.
ಕಂಪೆನಿಯ ಈ ಕಾರ್ಮಿಕ ವಿರೋಧಿನೀತಿ ಹಾಗೂ ಅಧಿಕ ಕಾರ್ಯಭಾರದ ಹೊರೆಯನ್ನು ವಿರೋಧಿಸಿ ಅಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸಂಘಟನೆಯ ನೇತೃತ್ವದಲ್ಲಿ ಕಂಪೆನಿಯ ಸಿಬ್ಬಂದಿ ಮಂಗಳವಾರ ಹರಪನಹಳ್ಳಿ ನಗರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಪ್ರವಾಸಿಮಂದಿರ ಆವರಣದಿಂದ ಹೊರಟ ಪ್ರತಿಭಟನಾಕಾರರು, ಬಳಿಕ, ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ, ಬಹಿರಂಗ ಸಭೆ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಹಿರಿಯ ಕಾರ್ಮಿಕ ಮುಖಂಡ ಗುಡಿಹಳ್ಳಿ ಹಾಲೇಶ್ ಅವರು ಮಾತನಾಡಿ, ಕಳೆದ ದಶಕದ ಅವಧಿಯಲ್ಲಿ ಕಂಪೆನಿಯ ಬೆಳವಣಿಗೆಯ ಹಿಂದೆ ಹಾಗೂ ಅದರ ಆರ್ಥಿಕ ಸದೃಢತೆಯ ಹಿಂದೆ ಸಿಬ್ಬಂದಿಯ ಬೆವರಿನ ಹನಿಗಳ ಶ್ರಮವಿದೆ ಎಂಬ ಸಾಮಾನ್ಯ ತಿಳುವಳಿಕೆಯೂ ಇಲ್ಲದ ಕಂಪೆನಿಯ ಮೇಲಧಿಕಾರಿಗಳು, ವಿನಾಕಾರಣ, ಸಿಬ್ಬಂದಿಯ ಸಂಖ್ಯೆಯನ್ನು ಕಡಿತಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಜತೆಗೆ, ಉಳಿದಿರುವ ಕಾರ್ಮಿಕರಿಗೆ, ಅಧಿಕ ಕಾರ್ಯಭಾರವನ್ನು ಹೊರೆಸುವ ಮೂಲಕ ಕಂಪೆನಿ ಒಂದು ರೀತಿಯಲ್ಲಿ ಜೀತಪದ್ಧತಿಯ ಅಲಿಖಿತ ನೀತಿನಿಯಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಭವಿಷ್ಯದ ಉದ್ಯೋಗದ ಭರವಸೆ ಇಲ್ಲದೇ, ಆತಂಕವನ್ನು ಸೃಷ್ಟಿಸಿದೆ. ಇಂಥಹ ಕಾರ್ಮಿಕ ವಿರೋಧಿನೀತಿಯನ್ನು ಕೂಡಲೇ ಕಂಪೆನಿ ಕೈಬಿಡಬೇಕು ಎಂದು ಗುಡಿಹಳ್ಳಿ ಹಾಲೇಶ್ ಗುಡುಗಿದರು.
ಈಗಾಗಲೇ ಕಡಿತಗೊಳಿಸಿರುವ ಸಿಬ್ಬಂದಿಯನ್ನು ಮರುನೇಮಕ ಮಾಡಿಕೊಳ್ಳಬೇಕು. ಕಾರ್ಯಭಾರದ ಒತ್ತಡದ ಅಧಿಕ ಹೊರೆಯನ್ನು ಕಡಿತಗೊಳಿಸಬೇಕು. ಕಂಪೆನಿಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರು ಹಾಗೂ ತಾಂತ್ರಿಕ ಸಿಬ್ಬಂದಿಗೆ ಕಾರ್ಮಿಕ ಕಾಯ್ದೆ ಅಡಿಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ದೊರಕಿಸಿಕೊಡಬೇಕು. ವಿನಾಕಾರಣ ಸಿಬ್ಬಂದಿಯನ್ನು ತೆಗೆದುಹಾಕುವ ಸರ್ವಾಧಿಕಾರ ಧೋರಣೆಯ ಕೆಟ್ಟಪರಂಪರೆಯನ್ನು ಕಂಪೆನಿ ಕೈಬಿಡಬೇಕು. ಜತೆಗೆ, ಭವಿಷ್ಯನಿಧಿ, ವೈದ್ಯಕೀಯ ಸೇವಾಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮತ್ತು ವೇತನ ಪಾವತಿಯನ್ನು ವಿನಾಕಾರಣ ವಿಳಂಬ ಮಾಡದೇ, ಸಕಾಲದಲ್ಲಿಯೇ ಪಾವತಿಸಲು ಮುಂದಾಗಬೇಕು. ಸರ್ಕಾರದ ಸುತ್ತೋಲೆ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಹೊರಗುತ್ತಿಗೆ ನೌಕರರಿಗೆ ನಿಗದಿಪಡಿಸಲಾದ ಕನಿಷ್ಠ ವೇತನವನ್ನು ಕೂಡಲೇ ಪಾವತಿಸಬೇಕು. ಕಾಲಕಾಲಕ್ಕೆ ವೇತನ ಹಾಗೂ ಇನ್ನಿತರ ಭತ್ಯೆಗಳನ್ನು ಪರಿಷ್ಕರಿಸುವಂತೆ ಗುಡಿಹಳ್ಳಿ ಹಾಲೇಶ್ ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಂಗಸAಸ್ಥೆಗಳ ಪದಾಧಿಕಾರಿಗಳಾದ ಎಚ್.ಎಂ. ಸಂತೋಷ್, ಬಳಿಗಾನೂರು ಕೊಟ್ರೇಶ್, ಎಸ್. ನಟರಾಜಪ್ಪ, ಹಗರಿಗುಡಿಹಳ್ಳಿ ಶಿವರಾಮ್, ಉದ್ಗಟ್ಟಿದೊಡ್ಡತಾಂಡ ಹನುಮಂತನಾಯ್ಕ್, ಜ್ಞಾನಯೋಗಿ, ಸಿಬ್ಬಂದಿ ಸರಸಪ್ಪ, ಬಿ. ಪ್ರಶಾಂತ್, ಶ್ರೀಕಾಂತ್, ಮಂಜುನಾಥ, ನಾಗೇಂದ್ರ, ಅನ್ನಪ್ಪ, ರವೀಂದ್ರ, ಮುಸ್ತಫಾ ಹಾಗೂ ನವೀನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

