Vijayasiri News
ನಮ್ಮೂರ ಸುದ್ದಿರಾಜ್ಯವಿಜಯನಗರ

ಜೋಕುಮಾರಮೂರ್ತಿಯ ಮೇಲೆ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರಾಧನೆ ಸ್ಥಗಿತ; ಅಂದಿನಿಂದಲೇ ಊರ ಹೆಸರು ನಾಮಾಂಕಿತ, ಹುಲಿಕಟ್ಟೆ: ಈ ಊರಲ್ಲಿ ಜೋಕುಮಾರಸ್ವಾಮಿ ಆರಾಧನೆ ನಿಷಿದ್ಧ!

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ನಮ್ಮ ಕೃಷಿ ಪರಂಪರೆಯ ಜತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಜಾನಪದ ಸಂಸ್ಕೃತಿಯ ಜೋಕುಮಾರಸ್ವಾಮಿ ಹಬ್ಬದ ಸಡಗರ, ಸಂಭ್ರಮ ಈಗ ಗ್ರಾಮೀಣ ಪ್ರದೇಶದಲ್ಲಿ ಜೋರಾಗಿಯೇ ನಡೆದಿದೆ. ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳೂ ಸೇರಿದಂತೆ ಮಧ್ಯ ಕರ್ನಾಟಕ ಹಲವು ಭಾಗಗಳಲ್ಲಿ ಜೋಕುಮಾರಸ್ವಾಮಿ ಹಬ್ಬ ಆರಂಭವಾಗಿದೆ. ಆದರೆ, ಈ ಊರಲ್ಲಿ ಮಾತ್ರ ಜೋಕುಮಾರಸ್ವಾಮಿ ಉತ್ಸವದ ಆಚರಣೆ, ಆರಾಧನೆ ಮಾತ್ರ ನಡೆಯುವುದಿಲ್ಲ. ಇದು ಶತಶತಮಾನಗಳಿಂದಲೂ ನಡೆದುಬಂದಿರುವ ಸಂಪ್ರದಾಯ.
ಹೌದು. ಆ ಗ್ರಾಮದ ಹೆಸರು ಹುಲಿಕಟ್ಟೆ.!. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಈ ಗ್ರಾಮದಲ್ಲಿ ನೆಲಮೂಲ ಸಂಸ್ಕೃತಿಯ ಪ್ರತೀಕವಾಗಿರುವ ಜೋಕುಮಾರಸ್ವಾಮಿ ಆರಾಧನೆ ನಡೆಯುವುದಿಲ್ಲ. ತಾಲ್ಲೂಕಿನಾದ್ಯಂತ ಎಲ್ಲೆಡೆಯಲ್ಲಿಯೂ ಉತ್ಸವದ ಆಚರಣೆ ಸಂಭ್ರಮದಿಂದ ನಡೆಯುತ್ತಿದ್ದರೂ, ಇಲ್ಲಿ ಮಾತ್ರ ಆ ಸಂಭ್ರಮಕ್ಕೆ ಅವಕಾಶ ಇಲ್ಲ. ಇಂಥಹ ಸಂಪ್ರದಾಯದ ಆಚರಣೆಯ ಹಿಂದೆಯೂ ಒಂದು ಕೌತುಕ ಅಡಗಿದೆ. ಒಂದು ಸಾಂದಾರ್ಭಿಕ ಹಿನ್ನೆಲೆಯೂ ಇದೆ.
ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಗ್ರಾಮದ ಗಂಗಾಮತ ಸಮುದಾಯಕ್ಕೆ ಸೇರಿದ ಜೋಕುಮಾರಸ್ವಾಮಿ ಆರಾಧಕರ ವ್ಯಾಪ್ತಿಗೆ ಈ ಹುಲಿಕಟ್ಟೆ ಗ್ರಾಮ ಒಳಪಡುತ್ತಿತ್ತು. ಆದರೆ, ನಾಲ್ಕಾರು ಶತಮಾನಗಳ ಹಿಂದೆ, ಈ ಹಳ್ಳಿಗೆ ಜೋಕುಮಾರಸ್ವಾಮಿಯನ್ನು ಹೊತ್ತ, ಆರಾಧಕರು, ಊರ ಹೊರವಲಯದಲ್ಲಿನ ನೀರಿನ ಕಟ್ಟೆ ಒಂದರ ಬಳಿ, ಜೋಕುಮಾರಸ್ವಾಮಿ ಮೂರ್ತಿಯನ್ನು ಇಳಿಸಿ, ಆತನ ಕುರಿತು, ಹಾಡುಗಳನ್ನು ಹೇಳುವ ಮೂಲಕ, ಅಕ್ಕಪಕ್ಕದ ಮನೆಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಲು ಹೋಗಿದ್ದರಂತೆ. ಈ ಸಂದರ್ಭದಲ್ಲಿ ಪಕ್ಕದಲ್ಲಿಯೇ ಅರಣ್ಯ ಪ್ರದೇಶದಿಂದ ನುಸುಳಿದ ಹುಲಿ ಒಂದು, ಜೋಕುಮಾರಸ್ವಾಮಿ ಮೂರ್ತಿಯ ಮೇಲೆ ದಾಳಿ ನಡೆಸಿ, ಆತನ ಬಾಯಲ್ಲಿ ಲೇಪಿಸಲಾಗಿದ್ದ ಬೆಣ್ಣಿಯನ್ನು ತಿಂದು, ಹೋಗಿತ್ತಂತೆ. ಹುಲಿಯ ದಾಳಿಗೆ ಬೆದರಿದ ಆರಾಧಕರು, ಅಲ್ಲಿಂದಲೇ, ಮರಳಿ ಹೊರಟು ಹೋದರಂತೆ. ಆ ದಿನಮಾನಗಳ ತಲೆಮಾರುಗಳ ಆರಾಧಕರು ತೆಗೆದುಕೊಂಡ ನಿರ್ಧಾರವನ್ನು ಈಗಲೂ ಅನುಸರಿಸಿಕೊಂಡು ಬರಲಾಗುತ್ತದೆ. ಹೀಗಾಗಿ, ಜೋಕುಮಾರಸ್ವಾಮಿ ಹೊತ್ತ ಆರಾಧಕರು ಅಂದಿನಿಂದಲೂ, ಈ ಗ್ರಾಮಕ್ಕೆ ಪ್ರವೇಶಿಸುವುದಿಲ್ಲ. ಆರಾಧನೆಯೂ ಇಲ್ಲ; ಆಚರಣೆಯೂ ಇಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಗ್ರಾಮದ ಹಿರಿಕರಾದ ಕೊಟ್ರಪ್ಪ, ಬಣಕಾರ ಗಂಗಾಧರಪ್ಪ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ದುಷ್ಯಂತ್ ಅವರು.
ಜೋಕುಮಾರಸ್ವಾಮಿಗೆ ಪ್ರಿಯವಾದ ಖಾದ್ಯ ಎಂದರೆ ಬೆಣ್ಣೆ. ಹೀಗಾಗಿಯೇ, ಈತನಿಗಿಂತಲೂ ಮುಂಚೆ ಜನಿಸುವ ವಿಘ್ನಗಳ ನಿವಾರಕೆ ಎಂದೇ ಲೋಕವಿಖ್ಯಾತ ಪಡೆದಿರುವ ಗಣೇಶನಿಗೂ ಹಾಗೂ ನೆಲಮೂಲ ಹಾಗೂ ಒಕ್ಕಲುತನ ಪರಂಪರೆಯ ವಾರಸುದಾರನಾದ ಜೋಕುಮಾರಸ್ವಾಮಿ ಕುರಿತಂತೆ ‘ಹೊಟ್ಟೆ ನೋಡಿ ಬುತ್ತಿ ಕಟ್ಟು ಗಣಪ್ಪಗೇ, ಬಾಯಿ ನೋಡಿ ಬೆಣ್ಣೆ ತುರುಕು ಜೋಕಪ್ಪಗೆ’ ಎಂಬ ನಾಡ್ನುಡಿಗಳು ಚಾಲ್ತಿಯಲ್ಲಿವೆ. ಹೀಗಾಗಿಯೇ, ಆತನ ಆರಾಧಕರು, ಮೂರ್ತಿಯನ್ನು ತಯಾರಿಸುವ ಮೂಲಕ ಆತನ ಬಾಯಿ ತುಂಬ ಬೆಣ್ಣೆಯ ಉಂಡೆಯನ್ನು ಮೆತ್ತಿರುತ್ತಾರೆ. ಹುಲಿಕಟ್ಟೆ ಗ್ರಾಮದ ಕಟ್ಟೆಯ ಬಳಿ, ಜೋಕುಮಾರಸ್ವಾಮಿಮೂರ್ತಿ ಮೇಲೆ ದಾಳಿ ನಡೆಸಿದ ಹುಲಿ, ಆತನ ಬಾಯಿ ಒಳಗೆ ಇದ್ದ ಬೆಣ್ಣೆ ಉಂಡೆಯನ್ನು ತಿಂದು ಹಾಕಿತ್ತಂತೆ. ಹೀಗಾಗಿ, ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹುಲಿಯ ಬಾಯಿಂದ ಪಾರಾದ ಆರಾಧಕರು, ಅಂದಿನಿಂದಲೂ ಈ ಊರಲ್ಲಿ, ಜೋಕುಮಾರಸ್ವಾಮಿ ಆರಾಧನೆಗೆ ಆಗಮಿಸುವುದಿಲ್ಲ. ಇದು, ಅನಾದಿಕಾಲದಿಂದಲೂ ಅನುಚಾನವಾಗಿ ನಡೆದುಬಂದಿರುವ ಪರಂಪರೆ. ಕೌತುಕದ ಸಂಗತಿ ಎಂದರೆ, ಜೋಕುಮಾರಸ್ವಾಮಿ ಮೂರ್ತಿಯ ಮೇಲೆ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ಹುಲಿಕಟ್ಟೆ ಎಂದು ನಾಮಾಂಕಿತವಾಗಿರಬೇಕು ಎಂದು ಘಟನೆ ಕುರಿತಂತೆ ವಿಶ್ಲೇಷಿಸುತ್ತಾರೆ ಬಣಕಾರ ಗಂಗಾಧರಪ್ಪ.
ಊರ ಹೊರವಲಯದ ‘ಕಟ್ಟೆ’ ಮತ್ತು ಅದರ ಬಳಿ ಇದ್ದ ಜೋಕುಮಾರಸ್ವಾಮಿಮೂರ್ತಿ ಮೇಲೆ ದಾಳಿ ನಡೆಸಿದ ‘ಹುಲಿ’; ಹುಲಿ ಮತ್ತು ಕಟ್ಟೆ ಈ ಎರಡು ಪದಗಳು ಸೇರಿ ಹುಲಿಕಟ್ಟೆ ಆಗಿರಬಹುದು ಎಂಬುದು ಕೂಡ ಗ್ರಾಮದ ಬಹುತೇಕರ ಅಭಿಪ್ರಾಯ.
ಹುಲಿಕಟ್ಟೆ ಗ್ರಾಮದ ಅಕ್ಕಪಕ್ಕದಲ್ಲಿರುವ ಹಾರಕನಾಳು, ಈಶಾಪುರ, ಅಗ್ರಹಾರ, ತೊಗರಿಕಟ್ಟೆ, ಹಂಪಾಪುರ, ಮಜ್ಜಿಗೇರಿ ಮತ್ತು ಕಲ್ಲಹಳ್ಳಿ ಸೇರಿದಂತೆ ನಾನಾ ಊರುಗಳಲ್ಲಿ ಜೋಕುಮಾರಸ್ವಾಮಿಯನ್ನು ಆರಾಧಿಸಲಾಗುತ್ತದೆ. ಆದರೆ, ಹುಲಿಕಟ್ಟೆ ಗ್ರಾಮದಲ್ಲಿ ಮಾತ್ರ ಈ ಆರಾಧನೆ ನಡೆಯುವುದಿಲ್ಲ.
ಹಲವು ವಿಸ್ಮಯಕಾರಿ ಸಂಗತಿಗಳು, ಪೌರಾಣಿಕ ಘಟನೆಗಳು, ಚಾರಿತ್ರಿಕ ಕುರುಹುಗಳು ಹಾಗೂ ಕೌತುಕದ ಸನ್ನಿವೇಶಗಳು ನಮ್ಮ ಪ್ರಾದೇಶಿಕತೆ ಜತೆಗೆ, ಹೀಗೆ ಬೆಸೆದುಕೊಳ್ಳುವ ಮೂಲಕ ಹಬ್ಬ- ಹರಿದಿನಗಳು, ಆಚರಣೆಗಳು, ಸಂಪ್ರದಾಯಗಳ ತುಸು ಭಿನ್ನತೆಯನ್ನು ಕಾಣಬಹುದು ಎಂಬುದಕ್ಕೆ ಈ ಆಚರಣೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಒಕ್ಕಲುತನ ಪರಂಪರೆಯ ವಿಶಿಷ್ಟ ಉತ್ಸವ, ಭೂಲೋಕಕ್ಕೆ ಮಳೆ ತರಿಸುವ ಮಹಾದೇವ ನಮ್ಮ ಈ ಜೋಕುಮಾರಸ್ವಾಮಿ.

Related posts

₹. 50ಲಕ್ಷ ವೆಚ್ಚದ ಮೊತ್ತದಲ್ಲಿ ನಿರ್ಮಾಣವಾಗಿರುವ ಆಕರ್ಷಕ ಬೆಳ್ಳಿಪಲ್ಲಕ್ಕಿ, ಹರಪನಹಳ್ಳಿ: ಅರಸೀಕೆರೆ ಕೋಲಶಾಂತೇಶ್ವರಸ್ವಾಮಿ ಬೆಳ್ಳಿಪಲ್ಲಕ್ಕಿ ಪುರ ಪ್ರವೇಶ; ಭರ್ಜರಿ ಮೆರವಣಿಗೆ

Vijayasiri News

ಸುಜಲಾನ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಕತ್ತರಿ; ಬದುಕಿಗೆ ಇಲ್ಲವೇ ಇಲ್ಲ ಇಲ್ಲಿ ಖಾತರಿ…!!! |ಹರಪನಹಳ್ಳಿ: ಪವನ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಾರ್ಮಿಕರಿಗೆ ಕಾರ್ಯಭಾರದ ಅಧಿಕ ಹೊರೆ |

Vijayasiri News

ಕೊನ್ನಾಪುರ ಚೌಡೇಶ್ವರಿದೇವಿ ಕಾಪಾಡಮ್ಮ…ಈ ದೇವಸ್ಥಾನಕ್ಕೆ ತಲುಪಲು ರಸ್ತೆಯೋ… ಇಲ್ಲವೇ ಕೆಸರು ಗದ್ದೆಯೋ…?

admin

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News

ಹರಪನಹಳ್ಳಿ: ಆ. 21ರಂದು ನಗರ ಮತ್ತು ವಿವಿಧೆಡೆ ವಿದ್ಯುತ್ ನಿಲುಗಡೆ

Vijayasiri News

ಭಾವೈಕ್ಯತ ತಪೋಭೂಮಿ ಚೌಕಿಮಠದಲ್ಲಿ ಮಹಾ ಕಾರ್ತೀಕೋತ್ಸವ ಹಾಗೂ ದೀಪೋತ್ಸವ

Vijayasiri News
error: Content is protected !!