ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಈ ಗ್ರಾಮದಲ್ಲಿ ಹೇರಳವಾದ ಜಲಮೂಲಗಳು ಇವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಗಾಗ್ಗೆ ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರುತ್ತದೆ. ನೀರು ಪೂರೈಸುವ ಪೈಪ್‌ಲೈನ್ ಮಾರ್ಗಗಳ ಅಲ್ಲಲ್ಲಿ ಪೈಪ್ ಒಡೆದುಹೋಗಿರುವ ಪರಿಣಾಮ, ಗ್ರಾಮಸ್ಥರಿಗೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ, ಅಶುದ್ಧ ನೀರು ಸೇವಿಸುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರಲ್ಲಿ ಆವರಿಸಿಕೊಂಡಿದೆ.
ಹೌದು. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದ ಗ್ರಾಮಸ್ಥರು, ಸದ್ಯಕ್ಕೆ ಇಂಥಹದೊಂದು ಆತಂಕಕ್ಕೆ ಒಳಗಾಗಿದ್ದಾರೆ. ಅದು, ಅಲ್ಲಿನ ಪಂಚಾಯ್ತಿ ಆಡಳಿತ ವ್ಯವಸ್ಥೆ ಹಾಗೂ ನೀರು ಪೂರೈಕೆಯ ನೀರಗಂಟಿ ಸಿಬ್ಬಂದಿ ಪರಮ ನಿರ್ಲಕ್ಷ್ಯತೆಯಿಂದ ಈ ಆತಂಕದಲ್ಲಿದ್ದಾರೆ.
ಕಸಬಾ ಹೋಬಳಿ ವ್ಯಾಪ್ತಿಯ ಅತಿದೊಡ್ಡ ಗ್ರಾಮ ಬಾಗಳಿ. ಸುಮಾರು 2000ಕ್ಕೂ ಅಧಿಕ ಮನೆಗಳು ಇಲ್ಲಿವೆ. ದೊಡ್ಡಗಾತ್ರದ 3ವಾರ್ಡ್ಗಳನ್ನು ರಚಿಸಲಾಗಿದೆ. ಜತೆಗೆ, ಐತಿಹಾಸಿಕ ಕಲ್ಲೇಶ್ವರದೇಗುಲ ಇರುವುದರಿಂದ ಪ್ರವಾಸಿತಾಣವೂ ಹೌದು. ಆದರೆ, ಇಂಥಹ ಬಹುದೊಡ್ಡ ಗ್ರಾಮಕ್ಕೆ ಅಗತ್ಯವಾಗಿ ಬೇಕಾಗುವಷ್ಟು ನೀರು ಪೂರೈಸಬಲ್ಲ ಜಲಮೂಲಗಳು ಇಲ್ಲಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಮತ್ತು ನಿರ್ವಹಣೆಯ ಕೊರತೆ ಪರಿಣಾಮ, ಗ್ರಾಮಸ್ಥರು ನೀರಿನ ಕೊರತೆಯನ್ನು ಆಗಾಗ್ಗೆ ಎದುರಿಸುತ್ತಲೇ ಇದ್ದಾರೆ. ಅವರ ಈ ಸಮಸ್ಯೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕಾದ ಸಂಬಂಧಿಸಿದ ಇಲಾಖೆಗಳು ಹಾಗೂ ಸ್ಥಳೀಯ ನೀರಗಂಟಿಗಳು ಮಾತ್ರ ಸಮಸ್ಯೆಯನ್ನು ಮತ್ತಷ್ಟು ಬೆಳೆಯಲು ಕಾರಣವಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಇಡೀ ಗ್ರಾಮಕ್ಕೆ ನೀರು ಪೂರೈಕೆಗಾಗಿ ಅಳವಡಿಸಲಾಗಿರುವ ಪೈಪ್‌ಲೈನ್‌ಗಳ ಮೇಲ್ಭಾಗದಲ್ಲಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಸಂಚಾರದ ಒತ್ತಡದಲ್ಲಿ ಪೈಪ್‌ಲೈನ್ ಮಾರ್ಗದಲ್ಲಿ ಕೆಲ ಕಡೆಗಳಲ್ಲಿ ಒಡೆದು ಹಾಳಾಗಿವೆ. ಇನ್ನೂ ಕೆಲ ಕಡೆಗಳಲ್ಲಿ ಓಬಿರಾಯನ ಕಾಲದಲ್ಲಿ ಹಾಕಲಾಗಿರುವ ಪೈಪ್‌ಗಳು ತುಕ್ಕುಹಿಡಿದ ಪರಿಣಾಮ ಪೈಪ್‌ಗಳಲ್ಲಿ ದೊಡ್ಡ ಗಾತ್ರದ ರಂಧ್ರಗಳು ನಿರ್ಮಾಣವಾಗಿದ್ದು, ಅದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಈ ಕುರಿತು, ಸಂಬಂಧಿಸಿದ ನೀರು ಪೂರೈಕೆ ಸಿಬ್ಬಂದಿ ನೀರಗಂಟಿಗಳ ಗಮನಕ್ಕೆ ತಂದರೂ, ಆರೇಳು ತಿಂಗಳಿನಿಂದಲೂ ಅವುಗಳ ದುರಸ್ಥಿಗೆ ನೀರಗಂಟಿ ಸಿಬ್ಬಂದಿ ನಿರ್ಲಕ್ಷ್ಯತೆ ತೋರಿದ ಪರಿಣಾಮ, ಗ್ರಾಮಸ್ಥರು, ಕಲುಷಿತ ನೀರನ್ನೇ ಸೇವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಹೀಗಾಗಿ, ಸಾಂಕ್ರಾಮಿಕ ರೋಗಗಳು ಆವರಿಸಿಕೊಳ್ಳುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.
ಗ್ರಾಮದಲ್ಲಿ ಕಳೆದ ತಿಂಗಳು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಸೋರಿಕೆಯಾಗಿ ಪೋಲಾಗುತ್ತಿರುವ ನೀರಿನ ಕುರಿತಂತೆ ಹಾಗೂ ಪುನಃ ಅದೇ ನೀರು ಕಲುಷಿತ ರೂಪ ಪಡೆದು, ಪೈಪ್‌ಲೈನ್ ಸಹಾಯದಿಂದ ಕುಡಿಯಲು ಪೂರೈಕೆಯಾಗುತ್ತಿರುವ ಕುರಿತಂತೆ. ಜತೆಗೆ, ಗ್ರಾಮದ ವ್ಯಾಪ್ತಿಪ್ರದೇಶದ ವಿಸ್ತಾರವಾಗಿರುವುದರಿಂದ ಪ್ರತಿ ವಾರ್ಡಿಗೆ, ಒಬ್ಬರಂತೆ ನೀರಗಂಟಿ ನೇಮಕ ಮಾಡಿಕೊಳ್ಳುವಂತೆ ಸಾರ್ವಜನಿಕರ ಆಹವಾಲು, ಅಗತ್ಯತೆ ಅರಿತು, ಪ್ರತಿ ವಾರ್ಡಿಗೂ ಒಬ್ಬರಂತೆ ನೀರಗಂಟಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಆದರೆ, ನೀರಿನ ಸಮಸ್ಯೆ ಹಾಗೂ ಕಲುಷಿತ ನೀರು ಪೂರೈಕೆ ಕುರಿತಂತೆ ನೀರಗಂಟಿ ಸಿಬ್ಬಂದಿ ಗಮನಕ್ಕೆ ತರಲಾಗಿದೆ. ಜತೆಗೆ, ಪಂಚಾಯ್ತಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಅಧ್ಯಕ್ಷರು ಪೈಪ್‌ಲೈನ್ ದುರಸ್ಥಿ ಪಡಿಸುವಂತೆ ಸೂಚಿಸಿದರೂ, ಇದುವರೆಗೂ, ಅದರ ದುರಸ್ಥಿ ಕಾರ್ಯಕ್ಕೆ ನೀರಗಂಟಿ ಸಿಬ್ಬಂದಿ ಮುಂದಾಗದೇ, ನಿಸ್ಸೀಮ ನಿರ್ಲಕ್ಷö್ಯತೆವಹಿಸಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಕಲುಷಿತ ನೀರು ಸರಬರಾಜು ಆಗುತ್ತಿದೆ. ಪೈಪ್‌ಲೈನ್‌ಗಳನ್ನು ರಿಪೇರಿಪಡಿಸಿ, ಶುದ್ಧ ನೀರುಪೂರೈಸುವಂತೆ ಗ್ರಾಮದ ಜನ ನೀರಗಂಟಿಗಳಿಗೆ ತಿಳಿಸಿದರೆ, ಅವರ ಮೇಲೆಯೇ ನೀರಗಂಟಿಗಳು ಎಗರಾಡುವ ಮೂಲಕ ದೌರ್ಜನ್ಯ ತೋರುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ.
ಗ್ರಾಮದ ಮಂಡಿ ದುರುಗಮ್ಮದೇವಿ ದೇವಸ್ಥಾನ ಹಿಂಭಾದಲ್ಲಿ ವಾಲ್ವ್, ಶೃಂಗಾರತೋಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಾಗೂ ಕೆರೆಕೋಡಿ ಮೇಲ್ಭಾಗ, ಪಶು ಆಸ್ಪತ್ರೆ ಮುಂಭಾಗ, ಚೌಡಮ್ಮದೇವಸ್ಥಾನದ ಸಮೀಪ ಮತ್ತು ಕಲ್ಲೇಶ್ದವರ ದೇವಸ್ಥಾನದ ದಾರಿಯಲ್ಲಿ ಅಳವಡಿಸಲಾಗಿರುವ ಪೈಪ್‌ಲೈನ್‌ಗಳು ಅಲ್ಲಲ್ಲಿ ಹೊಡೆದುಹೋಗಿವೆ. ನೀರು ಪೂರೈಕೆಯ ಮೋಟಾರ್‌ಗಳು ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ ಒಡೆದುಹೋಗಿರುವ ಪೈಪ್‌ಗಳಲ್ಲಿ ನೀರು ಸಂಗ್ರಹವಾಗಿ, ಪುನಃ ಮೋಟಾರ್‌ಗಳು, ಸ್ಥಗಿತಗೊಳ್ಳುತ್ತಿದ್ದಂತಿಯೇ, ಕಲುಷಿತಗೊಂಡಿರುವ ನೀರು ಪೈಪ್‌ಲೈನ್ ಒಳಭಾಗಕ್ಕೆ ಹರಿದುಹೋಗುತ್ತದೆ. ಮತ್ತೊಂದು ಅವಧಿಯಲ್ಲಿ ಮೋಟಾರ್‌ಗಳು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅದೇ ನೀರು ಗ್ರಾಮಸ್ಥರಿಗೆ ಕುಡಿಯಲು ಪೂರೈಕೆಯಾಗುತ್ತಿದೆ. ಇದರಿಂದಾಗಿ, ಚರ್ಮಸಂಬಂಧಿತ ಕಾಯಿಲೆಗಳು ಸೇರಿದಂತೆ ಕಾಲರ ರೋಗ ಆವರಿಸಿಕೊಳ್ಳುವ ಭೀತಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಶುದ್ಧ ಕುಡಿಯುವ ನೀರು ಪೂರೈಸಲು ಹಾಗೂ ಪೈಪ್‌ಲೈನ್‌ಗಳ ದುರಸ್ಥಿಗೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು. ಜತೆಗೆ, ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರಿರುವ ಹಾಗೂ ಗ್ರಾಮಸ್ಥರ ಮೇಲೆ ದೌರ್ಜನ್ಯದ ರೀತಿಯಲ್ಲಿ ವರ್ತಿಸುತ್ತಿರುವ ನೀರಗಂಟಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಆಗ್ರಹ.
ಗ್ರಾಮದಲ್ಲಿ ಉದ್ಬವಿಸಿರುವ ನೀರಿನ ಸಮಸ್ಯೆ ಹಾಗೂ ನಿರ್ವಹಣೆ ಕುರಿತಂತೆ ಶೀಘ್ರವೇ ಇತ್ಯರ್ಥಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ವೈ.ಎಚ್. ಚಂದ್ರಶೇಖರ್, ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯ್ತಿ ಹರಪನಹಳ್ಳಿ.

