ವಿಜಯಸಿರಿನ್ಯೂಸ್.ಕಾಂ/ ಹೊಸಪೇಟೆ
ಸಿದ್ಧರಾಟ, ಶಿವನಾಟ ಎಂದು ಉದ್ಗರಿಸುವ ಮೂಲಕ ತಮ್ಮ ಆರಾಧ್ಯದೈವ ರೇವಣಸಿದ್ಧನನ್ನು ಜಪಿಸುತ್ತಲೇ, ಜ… ಜ… ಜ… ಜ… ಜ… ಎಂದು ಆಟ ಆರಂಭಿಸುವ ಮೂಲಕ, ತಮ್ಮ ಜೋಳಿಗೆಯಲ್ಲಿ ಕೈಯಾಡಿಸುತ್ತಿದ್ದಂತಿಯೇ, ಅಲ್ಲಿಂದ ಹೊರಬರುತ್ತಿದ್ದ ಕುಂಯ್, ಕುಂಯ್ ಸದ್ದು, ನೆರೆದಿದ್ದಿ ಇಡೀ ಜನಸ್ತೋಮವನ್ನು ಒಂದು ಕ್ಷಣ ಅಚ್ಚರಿ, ರೋಮಾಂಚನದಲ್ಲಿ ತೇಲಾಡಿಸಿತು. ಜತೆಗೆ, ಸಭಿಕರ, ಮುದ್ದುಮಕ್ಕಳ, ಜೋರಾದ ಚಪ್ಪಾಳೆಯ ಕರತಾಡನ ಮುಗಿಲುಮುಟ್ಟಿತು. ಇಂಥಹ ಕೌತುಕದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು, ಗಣೇಶೋತ್ಸವದ ಮನೋರಂಜನಾ ಕಾರ್ಯಕ್ರಮ.
ವಿಜಯನಗರ ಜಿಲ್ಲಾ ಕೇಂದ್ರಸ್ಥಾನವಾದ ಹೊಸಪೇಟೆ ನಗರದ ಶರಣಬಸವೇಶ್ವರ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಮನೋರಂಜನ ಕಾರ್ಯಕ್ರಮದಲ್ಲಿ ‘ಸುಡುಗಾಡು ಸಿದ್ಧರ ಜಾನಪದ ಕೈಚಳಕ’ದ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಶಿಸಿಹೋಗುತ್ತಿರುವ ಈ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ಜತೆಗೆ, ಇಂದಿನ ಪೀಳಿಗೆಗೆ ಆ ವಿಶಿಷ್ಟ ಕಲೆಯನ್ನು ಪರಿಚಯಿಸುವ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುಡುಗಾಡುಸಿದ್ಧರ ಹಿರಿಯ ಜಾನಪದ ಕಲಾವಿದ ಬಳ್ಳಾರಿಯ ಬಾದಿಗಿ ಬಸಪ್ಪ ಹಾಗೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣದ ಸುಡುಗಾಡುಸಿದ್ಧರ ಜಾನಪದ ಯುವ ಕಲಾವಿದ ನಾಗರಾಜ್ ಗಂಟಿ ಜೋಡಿ ಈ ಸುಡುಗಾಡುಸಿದ್ಧರ ಕೈಚಳಕದ ಜಾನಪದ ಕಲೆಯನ್ನು ಪ್ರಸ್ತುತಪಡಿಸುವ ಮೂಲಕ ನೆರೆದ ಸಭಿಕ ವೃಂದವನ್ನು ರಂಜಿಸಿದರು. ಅವರ ಕೈಚಳಕದ ಚಮತ್ಕಾರದ ಮೋಡಿಯಲ್ಲಿ ಅನಾವರಣಗೊಳ್ಳುತ್ತಿದ್ದ ಪ್ರಸಂಗಗಳು ಸಭಿಕರನ್ನು ಒಮ್ಮೊಮ್ಮೆ ಭೀತಿಗೆ ಒಳಪಡಿಸುವಂತೆ ಕಂಡರೂ, ಕ್ಷಣಾರ್ಧದಲ್ಲಿಯೇ, ತಮ್ಮ ವಿಶಿಷ್ಟ ಮಾತುಗಳಿಂದ ಹಾರಿಸುತ್ತಿದ್ದ ನಗೆ ಚಟಾಕಿಗೆ ಜೋರಾಗಿ ನಗುವ ಮೂಲಕ, ಚಪ್ಪಾಳೆ ಬಾರಿಸಿ, ಸಂಭ್ರಮಿಸುತ್ತಿದ್ದರು.
ಮುಖಕ್ಕೆ ವಿಭೂತಿ, ಕುಂಕುಮ ಲೇಪಿಸಿಕೊಂಡು, ಕೊರಳ ತುಂಬಾ ದೊಡ್ಡಗಾತ್ರದ ರುದ್ರಾಕ್ಷಿಮಾಲೆ, ಲಿಂಗವನ್ನ ಧರಿಸಿ, ತಲೆಯ ಮೇಲೆ ಪೇಟಾ, ಆ ಪೇಟಕ್ಕೆ ಮುತ್ತಿನಹಾರ ಮೇಲೆ, ನವಿಲುಗರಿ ಅಲಂಕಾರ ಧರಿಸಿದ್ದ ಸುಡುಗಾಡು ಸಿದ್ದರ ಹಿರಿಯ ಜಾನಪದ ಕಲಾವಿದ ಬಳ್ಳಾರಿಯ ಬಾದಿಗಿ ಬಸಪ್ಪ ‘ಶಿವನಾಟ, ಸಿದ್ದರಾಟ ಎಂದು ಜಪಿಸುತ್ತಲೇ, ಇದು ಗಾಳಿ ವಿದ್ಯೆ, ಮಂತ್ರವಿದ್ಯೆ, ಚಮತ್ಕಾರ ವಿದ್ಯೆ ಎಂದು ತಮ್ಮದೇ ಶೈಲಿಯಲ್ಲಿ ಪಠಿಸುವ ಮೂಲಕ, ತಮ್ಮ ಜೋಳಿಗೆಯಲ್ಲಿ ಕೈಹಾಕಿ, ಮಲೆನಾಡ ಜೋಡಿ, ನುಡುಪುಡಿ ಮಲ್ಲಮ್ಮ, ಉರ್ಕಡ್ಡಿ ಬಸಮ್ಮ ಎನ್ನುತ್ತಿದ್ದಂತಿಯೇ ಚಿಂವ್, ಚಿಂವ್ ಜೋರಾದ ಸದ್ದು ಅಪ್ಪಳಿಸಿತು.

ಥರಹೇವಾರಿ ಮಂತ್ರಗಳನ್ನು ಪಠಿಸುವ ಮೂಲಕ ತಮ್ಮ ಚಮತ್ಕಾರದಿಂದಲೇ ಬೀಜಗಳಿಂದ ಬಸವಣ್ಣ, ಮತ್ತೊಂದು ವಸ್ತುವಿನಿಂದ ಗಣಪತಿ, ಇನ್ನೊಂದರಿಂದ ತಿರುಪತಿ ತಿಮ್ಮಪ್ಪ ಹೀಗೆ ಕೈಚಳಕದಿಂದಲೇ ಸೃಷ್ಟಿಸಿದ ವಿಸ್ಮಯ, ದೊಡ್ಡ ಗಾತ್ರದ ಕಲ್ಲುಗಳನ್ನು ನುಂಗುವ ಮತ್ತು ಹೊರತೆಗೆಯುವ ರೋಮಾಂಚನದ ದೃಶ್ಯ ಹಾಗೂ ದಾರದಲ್ಲಿ ಪೋಣಿಸಲಾದ ಬುರುಡೆ ಇಳಿಯೆಂದರೆ ಇಳಿಯುವ, ನಿಲ್ಲು ಎಂದರೆ ನಿಲ್ಲುವ ಕೌತುಕದ ದೃಶ್ಯಗಳು ಸೇರಿದ್ದ ಜನಸ್ತೋಮವನ್ನು ಒಂದುಕ್ಷಣ ಚಕಿತಗೊಳಿಸಿದರೆ, ಮತ್ತೊಮ್ಮೆ ರಂಜಿಸಿ, ನಗೆಗಡಲಲ್ಲಿ ನೇಲಾಡಿಸಿದವು.
ಕಾರ್ಯಕ್ರಮ ಪ್ರಸ್ತುತಿಪೂರ್ವದಲ್ಲಿ ಸುಡುಗಾಡು ಸಿದ್ದರ ಕೈಚಳದ ಈ ಜಾನಪದ ಕಲೆಯ ಕುರಿತು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣದ ಯುವಕಲಾವಿದ ನಾಗರಾಜ್ ಗಂಟಿ ಆಶಯ ನುಡಿಗಳ ರೂಪದಲ್ಲಿ ಮಾತನಾಡಿ, ನಮ್ಮ ಸುಡುಗಾಡುಸಿದ್ದ ಸಮುದಾಯದ ಈ ಕಲೆ, ಅನಾದಿ ಕಾಲದಿಂದಲೂ ಅನೂಚಾನವಾಗಿ ನಡೆದುಬಂದಿದೆ. ಬುದ್ಧನ ಕಾಲದಿಂದಲೂ ಸಿದ್ಧಿಯನ್ನು ಪಡೆದುಕೊಂಡಿರುವ ಈ ಸಿದ್ದರ ಕಲೆ, ಬುದ್ಧ, ಬಸವಾದಿ ಶರಣರ ನಂಟು ಬೆಸೆದುಕೊಂಡಿದೆ. ಸ್ಮಶಾನವನ್ನೇ ನಮ್ಮ ಆರಾಧನೆಯ ಸ್ಥಳವನ್ನಾಗಿ ಮಾಡಿಕೊಂಡಿರುವ ನಾವು, ಮನೋರಂಜನೆ ಜತೆಗೆ, ಜಾನಪದ ಸಾಂಸ್ಕೃತಿಕ ಪರಂಪರೆಗೆ ಬಹುದೊಡ್ಡ ಕೊಡುಗೆಯನ್ನು ಈ ಸಿದ್ದರ ಕೈಚಳಕದ ಕಲೆ ನೀಡಿದೆ. ಅದರ ಜತೆಯಲ್ಲಿ ಶರಣರ ಕಾಯಕತತ್ವ, ವೈಚಾರಿಕ ಪ್ರಜ್ಞೆ, ಏಕತೆ ಹಾಗೂ ಸಾಮರಸ್ಯಕ್ಕೂ ನಮ್ಮ ಈ ಸುಡುಗಾಡುಸಿದ್ದರ ಕೈಚಳಕದ ಜಾನಪದ ಕಲೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಆಸ್ವಾದಿಸಿದ ಸ್ಥಳೀಯ ಎಸ್‌ಬಿಬಿಎನ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಅಧ್ಯಾಪಕ ಹಾಗೂ ಉತ್ಸವ ಸಮಿತಿ ಸದಸ್ಯ ಡಾ. ಜಗದೀಶ್ ಶೇಖರಯ್ಯ ಹಿರೇಮಠ್ ಅವರು ಮಾತನಾಡಿ, ಈ ಜಾನಪದ ಕಲೆ ಈಗ ನಮ್ಮಂದಿ ದೂರ ಸರಿಯುವ ಮೂಲಕ ಅಳಿವಿನಂಚಿಗೆ ಸೇರುತ್ತಿದೆ. ಹೀಗಾಗಿ, ನಮ್ಮ ನಡುವಿನ ಇಂಥಹ ಕೌತುಕ ಕೈಚಳಕದ ವಿದ್ಯೆಯನ್ನು ಮುಂದಿನ ತಲೆಮಾರಿಗೂ ಉಳಿಸುವ ಹಾಗೂ ಆ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಗೆ ವಿಶಿಷ್ಟ ಕೊಡುಗೆ ನೀಡಿದ ಕಲೆಯನ್ನು ಪೋಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಉತ್ಸವ ಸಮಿತಿ, ಈ ಕಲಾರೂಪ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಮೂಲಕ ಸುಡುಗಾಡು ಸಿದ್ದರ ಕೈಚಳಕ ಜಾನಪದ ಕಲೆಯನ್ನು ಆಯೋಜಿಸಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಸುಡುಗಾಡು ಸಿದ್ಧರ ಕೈಚಳಕದ ಜಾನಪದ ಕಲಾವಿದರಾದ ಬಳ್ಳಾರಿ ಬಾದಿಗಿ ಬಸಪ್ಪ ಹಾಗೂ ಯುವ ಕಲಾವಿದ ಹಂಪಾಪಟ್ಟಣದ ನಾಗರಾಜ್ ಗಂಟಿ ಅವರನ್ನು ಸಮಿತಿ ವತಿಯಿಂದ ಹೃದಯಸ್ಪರ್ಶಿಯಾಗಿ ಸತ್ಕರಿಸಲಾಯಿತು.
ಶರಣಬಸವೇಶ್ವರ ನಗರ, ಅಮರಜ್ಯೋತಿ ನಗರದ ಶರಣಬಸವೇಶ್ವರ ಸಮಿತಿಯ ಸದಸ್ಯರಾದ ಸಿದ್ದಲಿಂಗಪ್ಪ, ಪೂಜಾರಪ್ಪ, ಮಲ್ಲಿಕಾರ್ಜುನ ಹಿರೇಮಠ್, ರೋಹಿತ್, ದಿವಾಕರ್, ಶಿವರಾಜ್ ಜವಳಿ, ಬಿರಾದಾರ್, ಅಯ್ಯಪ್ಪ, ಸನತ್‌ಕುಮಾರ್, ಮಧುರ ಚೆನ್ನಶಾಸ್ತ್ರೀ, ಜಗದೀಶ್ ಹಿರೇಮಠ್, ಶಿಕ್ಷಕ ಮಂಜಪ್ಪ ಗಂಟಿ ಸೇರಿದಂತೆ ಇತರರು ಹಾಜರದಿದರು.

