ಟಿಪ್ಪುಸುಲ್ತಾನ ಹುಲಮನಿ
ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಪ್ರಥಮಪೂಜಿತ ವಿಘ್ನೇಶ್ವರ, ವಿನಾಯಕ, ಗೌರಿಗಣೇಶ, ಲಂಬೋಧರ… ಹೀಗೆ ವಿಭಿನ್ನ ಹೆಸರುಗಳಿಂದ ಭಕ್ತರ ಮನದಲ್ಲಿ ನೆಲೆಯೂರಿರುವ ಗಣೇಶನ ಉತ್ಸವಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ, ಉತ್ಸವದ ಹಿನ್ನೆಲೆಯಲ್ಲಿ ಗಣೇಶಮೂರ್ತಿ ತಯಾರಿಸುವ ಕಾರ್ಯ ತಾಲ್ಲೂಕಿನ ವಿವಿಧೆಡೆಗಳಲ್ಲಿ ಭರದಿಂದ ಸಾಗಿದೆ.
ತಾಲ್ಲೂಕಿನ ಬಿಸಲಹಳ್ಳಿ, ಬನ್ನಿಹಟ್ಟಿ, ಕದರಮಂಡಲಗಿ, ಮಾಸಣಗಿ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗಣೇಶಮೂರ್ತಿ ತಯಾರಿಕೆಯ ಚಟುವಟಿಕೆ ಭರದಿಂದ ಸಾಗಿದ್ದು, ಜನತೆ ಗೌರಿಗಣೇಶ ಹಬ್ಬ ಆಚರಣೆಗೆ ಸಿದ್ಧತೆಯಲ್ಲಿದ್ದಾರೆ.
ಗಣೇಶನ ಮಣ್ಣಿನಮೂರ್ತಿ ತಯಾರಿಸುವ ಕೆಲಸವನ್ನು ಜೂನ್ ತಿಂಗಳಿನಿಂದಲೇ ಪ್ರಾರಂಭವಾಗಿ, ಪ್ರತಿಷ್ಠಾಪನೆಯ ಕೊನೆಯ ಕ್ಷಣದವರೆಗೂ, ಮೂರ್ತಿ ತಯಾರಿಕೆಯ ಕಾರ್ಯ ನಿರಂತರವಾಗಿ ನಡೆಯುತ್ತದೆ. ಮೂರ್ತಿ ತಯಾರಿಕೆ ಎಂಬುದು ಕೆಲ ಕಲಾವಿದರಿಗೆ ಉಪಕಸಬು. ಮಣ್ಣಿನಮೂರ್ತಿ ತಯಾರಿಸುವ ಜೊತೆಗೆ ವಿವಿಧ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ನಿರಂತರ ಕಾಯಕದಲ್ಲಿ ತೊಡಗಿದ್ದಾರೆ. ಮೂರ್ತಿ ತಯಾರಿಸಲು ಬೇಕಾಗುವ ವಿವಿಧ ನವನಾವಿನ್ಯದ ವರ್ಣಗಳ ಜತೆಗೆ, ಕಾಲಮಾನಕ್ಕೆ ಅನುಗುಣವಾಗಿ ಮಾರುಕಟ್ಟೆ ಪ್ರವೇಶಿಸುವ ಅಲಂಕಾರಿಕ ಸಾಮಗ್ರಿಗಳನ್ನು ಅಳವಡಿಸಿ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಮೂರ್ತಿ ತಯಾರಿಸಿ, ಅದಕ್ಕೊಪ್ಪುವ ಅಂದ ವರ್ಣ ಹಾಗೂ ಅಲಂಕಾರವನ್ನು ಮಾಡಿಕೊಡಬೇಕಾಗುತ್ತದೆ. ಜತೆಗೆ, ಮೂರ್ತಿ ತಯಾರಿಕೆಗೂ ಸಹ ನೈಪುಣ್ಯತೆ ಪಡೆಯಬೇಕಾಗುತ್ತದೆ. ಅಲಂಕಾರ, ಅಂದ, ಬಣ್ಣದ ಲೇಪನ ಎಲ್ಲವನ್ನೂ ಗ್ರಾಹಕರ ಅಭಿರುಚಿಗೆ ಅನುಗುಣವಾಗಿಯೇ ತಯಾರಿಸಿದರೆ ಮಾತ್ರ, ಗಣೇಶನಮೂರ್ತಿಯನ್ನು ಕೊಳ್ಳಲು ಗ್ರಾಹಕ ಮುಂದಾಗುತ್ತಾನೆ. ಹೀಗಾಗಿ, ವಿನ್ಯಾಸಕ್ಕೆ ಬೇಕಾಗುವ ಅಲಂಕಾರಿಕ ಸಾಮಾಗ್ರಿಗಳ ವೆಚ್ಚವೂ ಈಗ ಕಲಾವಿದನ ಕೈಸುಡುತ್ತಿದೆ. ಅಷ್ಟೊಂದು ದುಬಾರಿ ಬೆಲೆ ತೆತ್ತು ಖರೀದಿಸಿ, ಮೂರ್ತಿ ತಯಾರಿಸಿದರೂ, ಕೆಲ ಗ್ರಾಹಕರು, ವೆಚ್ಚಕ್ಕಿಂತಲೂ ಕಡಿಮೆ ಮೊತ್ತಕ್ಕೆ ಕೇಳುತ್ತಾರೆ. ಹೀಗಾಗಿ, ಗ್ರಾಹಕರ ಚೌಕಾಸಿಯ ನಡುವೆಯೂ ಈ ಉಪಕಸುಬನ್ನು ಉಳಿಸಿಕೊಳ್ಳಲು ಕಲಾವಿದರು ಈಗ ಹರಸಾಹಸ ಪಡೆಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.

ಜೇಡಿ ಮಣ್ಣಿನಿಂದ ಗೌರಿಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಪರಿಸರಕ್ಕೆ ಹಾನಿಯಾಗದಂತೆ ವರ್ಣಗಳ ರಂಗುರAಗಿನ ಲೇಪನ ಮಾಡಲಾಗುತ್ತಿದೆ. ಅತ್ಯಾಧುನಿಕ ವಿಧಾನ ಅನುಸರಿಸುತ್ತಿದ್ದಾರೆ. ಮೂರ್ತಿ ತಯಾರಕರು ಗ್ರಾಹಕರಿಗೆ ಎತ್ತರ ಮತ್ತು ಅಳತೆಗೆ ತಕ್ಕಂತೆ ತಯಾರು ಮಾಡಿ ಬೆಲೆ ನಿಗದಿಪಡಿಸುತ್ತಾರೆ. ಆದರೆ ಐದರಿಂದ ಆರು ಅಡಿ ಎತ್ತರದ ಗೌರಿಗಣೇಶ ಮೂರ್ತಿಗೆ ಸುಮಾರು ಐದಾರು ಸಾವಿರ ರೂಗಳು ವೆಚ್ಚವಾಗುತ್ತಿದ್ದು ಮಾರಾಟ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಳೆದ ನೂರಾರು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಅಚ್ಚುಮೆಚ್ಚಿನ ಗಣೇಶಮೂರ್ತಿಗಳನ್ನು ತಯಾರುಮಾಡುವ ಕಾಯಕ ಇಂದಿಗೂ ಮುಂದುವರೆದುಕೊಂಡು ಬಂದಿದ್ದು, ಈಗಲೂ ಕೂಡ ಪರಿಸರಸ್ನೇಹಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಈ ಮೂರ್ತಿಗಳನ್ನು ಕೊಂಡೊಯ್ಯಲು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸುತ್ತಾರೆ.
ಉಪಕಸುಬನ್ನು ಅವಲಂಬಿಸಿರುವ ಕಲಾವಿದರಿಗೆ ಸರ್ಕಾದ ಸಹಾಯಧನ ಮರಿಚಿಕೆಯಾಗಿದೆ. ಸರ್ಕಾರಗಳು ಮಾತ್ರ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುತ್ತವೆಯೇ ವಿನಃ, ಉಪಕಸುಬುಗಳ ಗುಡಿಕೈಗಾರಿಕೆಗಳಿಗೆ ಮಾನ್ಯತೆ ಒದಗಿಸುತ್ತಿಲ್ಲ. ಗುಡಿಕೈಗಾರಿಕೆ ಹಾಗೂ ಅದರ ಭಾಗವಾಗಿರುವ ಕುಲಾಕುಶರಿಯನ್ನು ಮೈಗೂಡಿಸಿಕೊಂಡಿರುವ ಕಲಾವಿದನ ಕೈಚಳಕದಲ್ಲಿ ಅರಳಿದ ಕಲೆಗಳು, ನಶಿಸಿ ಹೋಗುತ್ತಿರುವುದು ವಿಪರ್ಯಾಸದ ಸಂಗತಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ಉಪಕಸುಬು ಮಾಡುವ ಕುಶಲಕರ್ಮಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ನಮ್ಮ ತಾತಾ, ಮುತ್ತಜ್ಜರಿಂದಲೂ ಗಣೇಶಮೂರ್ತಿ ತಯಾರಿಕೆಯನ್ನು ನಮ್ಮ ಉಪಕಸುಬನ್ನಾಗಿ ಮಾಡಿಕೊಂಡು ಬಂದಿದ್ದೇವೆ. ಹಬ್ಬ ಮರ್ನಾಲ್ಕೂ ತಿಂಗಳ ಮುಂಚೆಯೇ ಮೂರ್ತಿ ತಯಾರಿಕೆ ಕಾರ್ಯವನ್ನು ಪ್ರಾರಂಭಿಸುತ್ತೇವೆ. ಈ ವರ್ಷ ನೂರಾ ಐವತ್ತು ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ತಯಾರಿಸಿದ್ದೇವೆ. ಹಿಂದಿನ ಕಾಲದಿಂದಲೂ ಪರಿಸರ ಸ್ನೇಹಿ ಗಣೇಶಮೂರ್ತಿಗಳನ್ನು ಮಾಡುತ್ತ ಬಂದಿದ್ದೆವೆ. ಮೂರ್ತಿಗಳನ್ನು ಕೆರೆಗಳಲ್ಲಿ ಹಾಕಿದರು ಕೂಡ ಯಾವುದೇ ಹಾನಿಯಾಗದಂತೆ ಮೂರ್ತಿಗಳನ್ನು ತಯಾರು ಮಾಡಲಾಗಿದೆ.
– ಬಸವರಾಜ ಮರಿಯಪ್ಪನವರ. ಗೌರಿಗಣೇಶ ಮೂರ್ತಿ ತಯಾರಕ.

