Vijayasiri News
ರಾಜ್ಯಹರಪನಹಳ್ಳಿ ಸುದ್ದಿ

ಆಹಾ… ರಸ್ತೆಯೇ…? ಏನೀದು ನಿನ್ನ ಅವ್ಯವಸ್ಥೆ…!! ಇದು ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ, ಯಾಮಾರಿದರೆ ‘ಯಮನ’ ಸವಾರಿ…!!!

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ವಿಜಯನಗರ ಜಿಲ್ಲೆಯ ಹರಪನಹಳ್ಳಿ ನಗರದಿಂದ ಅರಸೀಕೆರೆ, ಉಚ್ಚಂಗಿದುರ್ಗ ಮಾರ್ಗವಾಗಿ ದಾವಣಗೆರೆ ಜಿಲ್ಲೆಗೆ ಸಂಪರ್ಕ ಬೆಸೆಯುವ ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ-47ರ ಪ್ರಯಾಣ, ಈಗ ಸುರಕ್ಷತೆಗಿಂತ, ಪ್ರಯಾಣಕ್ಕೆ ಕಂಕಟವಾಗಿ ಬದಲಾಗಿದೆ. ಹೆದ್ದಾರಿಯ ಕೆಲಕಡೆಗಳಲ್ಲಿ ಅಡಿಯುದ್ದದ ಆಳದ ಗುಂಡಿಗಳು ಯಮಸ್ವರೂಪಿಯಂತೆ ಬಲಿಗಾಗಿ ಬಾಯಿತೆರೆದು ಕುಳಿತಿವೆ. ಹೀಗಾಗಿ, ಸದ್ಯ ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ- 47ರಲ್ಲಿ ಯಾಮಾರಿ ಸಂಚರಿಸಿದರೆ, ‘ಯಮನ ಸವಾರಿ’ ಎಂಬಂತಾಗಿದೆ !.
ಹರಪನಹಳ್ಳಿ ತಾಲ್ಲೂಕಿನ ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೇ ನಂಬರ್ 215ರಿಂದ ಆರಂಭವಾಗುವ ಈ ಹೆದ್ದಾರಿ, ಮಾಡಲಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೇ ನಂಬರ್ 298ರ ವರೆಗೂ, ಅಂದರೆ, ಸುಮಾರು 49ಕಿ.ಮೀ.ನಷ್ಟು ಉದ್ದಕ್ಕೆ ವ್ಯಾಪಿಸಿಕೊಂಡಿದೆ. ಒಟ್ಟಾರೆ ಸುಮಾರು, 136ಕಿ.ಮೀ. ಅಂತರದಲ್ಲಿ ನಿರ್ಮಾಣವಾಗಿರುವ ಈ ಹೆದ್ದಾರಿ, ಅರಸೀಕೆರೆ ಗ್ರಾಮದಿಂದ, ಉಚ್ಚಂಗಿದುರ್ಗ ಮಾರ್ಗವಾಗಿ ದಾವಣಗೆರೆ ತಾಲ್ಲೂಕಿನ ಅಣಜಿ ಕ್ರಾಸ್‌ವರೆಗೂ ಈ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಪ್ರಯಾಣಿಕರ ಜೀವಕ್ಕೆ ಕಂಟಕವಾಗಿ ಸುರಕ್ಷಿತ ಪ್ರಯಾಣಕ್ಕೆ ಕಾರಣವಾಗಬೇಕಿದ್ದ ಈ ರಸ್ತೆ ಈಗ ಅಪಾಯಕ್ಕೆ ಸ್ವಾಗತಿಸುತ್ತಿದೆ.
ಈ ಹೆದ್ದಾರಿಗೆ ಹೊಂದಿಕೊಂಡಿರುವ ಐತಿಹಾಸಿಕ ಉಚ್ಚಂಗಿದುರ್ಗ ರಾಜ್ಯದ ಪ್ರಮುಖ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಕ್ಷೇತ್ರದ ಅಧಿದೇವತೆ ಉಚ್ಚಂಗೆಮ್ಮದೇವಿಯ ದರ್ಶನಕ್ಕಾಗಿ ಪ್ರತಿ ಹುಣ್ಣಿಮೆ, ಶ್ರಾವಣಮಾಸ ಸೇರಿದಂತೆ ವಿಶೇಷ ದಿನಮಾನಗಳು ಸೇರಿದಂತೆ ಜಾತ್ರೋತ್ಸವಕ್ಕಾಗಿ ನಾಡಿನ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜತೆಗೆ, ಇದೇ ರಸ್ತೆಮಾರ್ಗಕ್ಕೆ ಹೊಂದಿಕೊಂಡಿರುವ ಅರಸೀಕೆರೆಯೂ ಕೂಡ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ನೆಲೆಯೂರಿರುವ ದಂಡಿನದುರ್ಗಮ್ಮದೇವಿ ಹಾಗೂ ಪಂಚಗಣಾಧೀಶ ಪರಂಪರೆಯ ಪ್ರಮುಖರಲ್ಲಿ ಒಬ್ಬರಾದ ಕೋಲಶಾಂತೇಶ್ವರರ ನೆಲೆಬೀಡು ಈ ಅರಸೀಕೆರೆ. ಹೀಗಾಗಿ, ಇಲ್ಲಿಯೂ ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಭಕ್ತರ ದಂಡೆ ನೆರೆಯುತ್ತದೆ. ಜತೆಗೆ, ತಾಲ್ಲೂಕಿನಲ್ಲಿಯೇ ಅತಿದೊಡ್ಡ ಹೋಬಳಿ ಕೇಂದ್ರಸ್ಥಾನವೂ ಇದಾಗಿದೆ. ಹೀಗಾಗಿ, ಸಹಜವಾಗಿಯೇ ಶಾಲಾ- ಕಾಲೇಜುಗಳು ಇಲ್ಲಿವೆ. ಹೀಗಾಗಿಯೇ ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯಕ್ಕಾಗಿ, ಇಲ್ಲಿಗೆ ಬಂದರೆ, ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನೆಗೆ ಆಗಮಿಸುತ್ತಾರೆ.
ಜತೆಗೆ, ಪ್ರಮುಖ ವಾಣಿಜ್ಯ ನಗರವಾದ ದಾವಣಗೆರೆಗೂ ಬಹುತೇಕ ಈ ಹೋಬಳಿಯ ವ್ಯಾಪ್ತಿಯ ಹಳ್ಳಿಗಳ ಜನ, ಈ ರಸ್ತೆಯ ಮಾರ್ಗವನ್ನೇ ಅವಲಂಬಿಸಿದ್ದಾರೆ. ಅಷ್ಟೇ ಅಲ್ಲ, ಹರಪನಹಳ್ಳಿ ಭಾಗದಿಂದ ಬೆಂಗಳೂರುಗೆ ಪ್ರಯಾಣಿಸುವ ಲಘುವಾಹನಗಳ ಪ್ರಯಾಣಿಕರು, ಈ ರಸ್ತೆ ಮಾರ್ಗದ ಮೂಲಕವೇ ಸಂಚರಿಸುತ್ತಾರೆ. ಜತೆಗೆ, ಕೊಟ್ಟೂರು, ಜಗಳೂರು, ಹರಪನಹಳ್ಳಿ ಸೇರಿದಂತೆ ಸುತ್ತಲಿನ ನಾಲ್ಕಾರು ತಾಲ್ಲೂಕಿನ ಸಂಪರ್ಕ ಬೆಸೆಯುವ ಸಂಪರ್ಕಸೇತುವೆಯಾಗಿರುವ ಈ ರಸ್ತೆ. ಈಗ, ಗುಂಡಿ ಮಯವಾಗಿರುವ ಪರಿಣಾಮ, ಇಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಸವಾರರು, ಲಘುವಾಹನಗಳ ಪ್ರಯಾಣಿಕರು ಜತೆಗೆ, ಬಸ್ಸಿನಲ್ಲಿಯೂ ಪ್ರಯಾಣಿಸುವ ಪ್ರಯಾಣಿಕರಿಗೂ ನಿತ್ಯವೂ ಕಿರಿಕಿರಿ ಉಂಟುಮಾಡುತ್ತಿದೆ. ಸ್ವಲ್ಪ ಎಚ್ಚರಿಕೆ ತಪ್ಪಿದರೂ, ಅಪಾಯ ಕಟ್ಟಿಟ್ಟ ಬುತ್ತಿ.
ಹೆದ್ದಾರಿ ಎಂಬ ಕಾರಣಕ್ಕಾಗಿ, ಈ ಮಾರ್ಗವನ್ನು ಅನುಸರಿಸಿಕೊಂಡು ಪ್ರಯಾಣಿಸುವ ಪ್ರಯಾಣಿಕರು ನಿತ್ಯವೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಇಲ್ಲಿನ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಲೇ ಪ್ರಯಾಣಿಸುತ್ತಾರೆ. ಎಷ್ಟೋ ಸಂದರ್ಭದಲ್ಲಿ ಬೈಕ್ ಸೇರಿದಂತೆ ಲಘುವಾಹನಗಳು ಅಪಘಾತ ಸಂಭವಿಸಿದ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.


ಈ ರಸ್ತೆಮಾರ್ಗದ ಮೂಲಕ ಸಂಚರಿಸುವ ಬೈಕ್ ಸವಾರರು ಗುಂಡಿಬಿದ್ದ ರಸ್ತೆಯಲ್ಲಿ ಸಂಚರಿಸುವಾಗ ಸಾಕಷ್ಟು ಅವಘಡಗಳು ಸಂಭವಿಸಿವೆ. ಜತೆಗೆ, ಗುಂಡಿಗಳಲ್ಲಿ ಬೈಕ್ ಸಂಚರಿಸುತ್ತಿರುವಾಗ, ಮೈಯಲ್ಲ ಕಣ್ಣಾಗಿಸಿಕೊಂಡೇ ಬೈಕ್ ಚಾಲನೆ ಮಾಡಬೇಕಾಗಿದೆ. ಜತೆಗೆ, ಗುಂಡಿಬಿದ್ದ ರಸ್ತೆಯಲ್ಲಿ ಬೈಕ್ ಮೇಲಿಂದ ಮೇಲೆ ತಗ್ಗುಗಳಲ್ಲಿ ಇಳಿದು- ಮೇಲತ್ತುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಬೆನ್ನುನೋವಿನಂತ ಗಂಭೀರ ಸ್ವರೂಪದ ಕಾಯಿಲೆಗಳನ್ನು ಇಲ್ಲಿ ಸಂಚರಿಸುವ ಸವಾರರನ್ನು ಬಾಧಿಸುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಬಸವರಾಜಪ್ಪ.
ಒಟ್ಟಾರೆ ಹೆದ್ದಾರಿಯ ಈ ಭಾಗದ ಪ್ರಯಾಣ ಎಂಬುದು ಬೈಕ್ ಸವಾರಿಗೆ ಬೇಸಿಗೆಯಲ್ಲಿನ ಧೂಳಿನ ಅಭಿಷೇಕ, ಮಳೆಗಾಲದಲ್ಲಿ ಕೆಸರಿನ ಮಜ್ಜನ ಮಾಡಿಕೊಂಡೇ ಹೋಗಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎಂಬುದು ಪ್ರಯಾಣಿಕರ ಸಂಕಷ್ಟದ ಮಾತು.
ಜಗಳೂರು ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಈ ಭಾಗ ಎಸ್.ವಿ. ರಾಮಚಂದ್ರ ಅವರಂಥ ಜನಪರ ಕಾಳಜಿ ಜನಪ್ರತಿನಿಧಿಯನ್ನು ಕಳೆದುಕೊಂಡು, ಈಗ ಪರಿತಪಿಸುತ್ತಿದೆ. ಈಗಲಾದರೂ ಇಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯತೆಯ ಪೊರೆಯನ್ನು ಕಳಚಿ, ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚವ ಮೂಲಕ ರಸ್ತೆ ದುರಸ್ಥಿಗೆ ಮುಂದಾಗಿ, ಸಂಭವನೀಯ ಅವಘಡಗಳನ್ನು ತಪ್ಪಿಸಬೇಕು ಎಂಬುದು ಈ ಭಾಗದ ಸಾರ್ವಜನಿಕರ ಆಶಯ.

Related posts

ಮೂಗ ಮತ್ತು ಕಿವುಡ ಸ್ನೇಹಿತರ ಮಾದರಿ ಗಣೇಶ ಪ್ರತಿಷ್ಠಾಪನೆ, ವಿಶೇಷಚೇತನರ ವೈಭವದ ಉತ್ಸವಕ್ಕೆ ಈಗ ದಶಮಾನದ ಸಂಭ್ರಮ

Vijayasiri News

ಹರಪನಹಳ್ಳಿ: ಪಾಳೇಗಾರರ ಕಾಲದ ಅಪ್ರಕಟಿತ ಶಿಲಾಶಾಸನ ಪತ್ತೆ

admin

ಹರಪನಹಳ್ಳಿ: ‘ಮನೆ- ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ, ಅಪರಾಧಮುಕ್ತ ಸಮಾಜ ಕಟ್ಟುವಿಕೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಎಸ್‌ಪಿ ಜಾಹ್ನವಿ

Vijayasiri News

ಹರಪನಹಳ್ಳಿಯಲ್ಲಿ ಜೈನಧರ್ಮದ ಸಂಘದ ನೇತೃತ್ವದಲ್ಲಿ ಪ್ರತಿಭಟನೆ, ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹ

Vijayasiri News

ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಹಕ್ಕುಮಂಡಿಸಿದ ಸಮಾಜದ ನಿಯೋಗ, ವಾಲ್ಮೀಕಿನಾಯಕ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಿ; ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟಕ್ಕೆ ಅಣಿ: ಎಚ್ಚರಿಕೆ

Vijayasiri News

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿದ ದೂರುದಾರ ಹರಪನಹಳ್ಳಿ ತಾಲ್ಲೂಕಿನವನಾ…? ಈ ಸುದ್ದಿ ಹರಿಬಿಟ್ಟು ಪ್ರಕರಣ ಮೈಮೇಲೆಳೆದುಕೊಂಡ ಬಿಜೆಪಿ ಮುಖಂಡ…!

Vijayasiri News
error: Content is protected !!