ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಲಾಗಿದ್ದು, ವಿಜಯನಗರ ಜಿಲ್ಲಾ ಸಮಿತಿಯ ನೂತನ ಅಧಿಕಾರೇತರ ಸದಸ್ಯರನ್ನಾಗಿ ಹರಪನಹಳ್ಳಿ ವಕೀಲ ಬಸವರಾಜ ಸಂಗಪ್ಪನವರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳ ಮತ್ತು ಭಾಷನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಿಕೆವಂತೆ ಪ್ರೇರೇಪಿಸುವ ಹಿನ್ನೆಲೆಯಲ್ಲಿ 2020ರಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯುವ ಮೂಲಕ ಸರ್ಕಾರ ಹೊಸದಾಗಿ ಜಿಲ್ಲಾಮಟ್ಟದಲ್ಲಿ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಿ ಮತ್ತು ಸಮಿತಿಗೆ ನೂತನ ಅಧಿಕಾರೇತರ ಸದಸ್ಯರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ (ಆಡಳಿತ ಕನ್ನಡ) ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ಅವರು ಸೆ. 10ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ನೂತನ ಕನ್ನಡ ಜಾಗೃತಿ ಸಮಿತಿಗೆ ಸದಸ್ಯರಾಗಿ ನೇಮಕವಾಗಿರುವ ಹರಪನಹಳ್ಳಿ ನಗರದ ಬಸವರಾಜ ಸಂಗಪ್ಪನವರ್ ವೃತ್ತಿಯಲ್ಲಿ ಸದ್ಯಕ್ಕೆ ವಕೀಲರು. ‘ಆಡುಮುಟ್ಟದ ಸೊಪ್ಪಿಲ್ಲ ; ಬಸವರಾಜ ಸಂಗಪ್ಪನವರ್ ತೊಡಗಿಸಿಕೊಳ್ಳದ ಕ್ಷೇತ್ರವಿಲ್ಲ ಎಂಬಂತೆ, ತಮ್ಮ ಕಾರ್ಯಕ್ಷೇತ್ರವಾಗಿರುವ ಹರಪನಹಳ್ಳಿಯೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ವಿವಿಧ ಸಮಾಜಮುಖಿ ಸಂಘಟನೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೂ ನಾಡು- ನುಡಿ, ನೆಲ, ಜಲ, ವಿಜ್ಞಾನ, ಶಿಕ್ಷಣ, ಸಂಘಟನೆ, ಹೋರಾಟ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಾವ ಪ್ರತಿಫಲವನ್ನು ಆಪೇಕ್ಷಿಸದೇ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಇಡೀ ಬದುಕನ್ನು ಸಮಾಜಮುಖಿ ಕಾರ್ಯಕ್ರಮಗಳಿಗಾಗಿಯೇ ಸವೆಸುತ್ತಲೇ ಬಂದಿದ್ದಾರೆ. ಆರಂಭದಲ್ಲಿ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಬಸವರಾಜ ಸಂಗಪ್ಪನವರ್ ಅವರು, ಬಳಿಕ, ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದರು. ಸುಮಾರು 27 ವರ್ಷಗಳ ಕಾಲ, ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ನಿಜಕ್ಕೂ ಅವಿಸ್ಮರಣೀಯ ಹಾಗೂ ಅನುಕರಣೀಯ ಸಂಗತಿ ಎಂದರೆ ಉತ್ಪ್ರೇಕ್ಷೆ ಆಗಲಾರದು.

ಹರಿದು, ಹಂಚಿಹೋಗಿದ್ದ ಶಿಕ್ಷಕ ಸಮುದಾಯವನ್ನು ಜತೆಗೆ, ಸರ್ಕಾರಿ ನೌಕರರನ್ನು ಒಂದು ವೇದಿಕೆಯಲ್ಲಿ ಸದೃಢವಾಗಿ ಸಂಘಟಿಸುವ ಮೂಲಕ ಅವರ ಸಮಸ್ಯೆ, ಸಂಕಟ, ನೋವು- ನಲಿವುಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ನೆಚ್ಚಿನ ಅಪದ್ಭಾಂದರೆಂದೇ ನೌಕರರ ವಲಯದ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ವೃತ್ತಿ ಬದುಕಿನ ಜತೆಗೆ, ಭಾರತ ಜ್ಞಾನವಿಜ್ಞಾನ ಸಮಿತಿಯ ತಾಲ್ಲೂಕು ಘಟಕಕ್ಕೆ ಪುನಶ್ಚೇತನಕ್ಕೆ ಮುಂದಾದರು. ಆದರೆ, ಸಮಿತಿಯಲ್ಲಿನ ವ್ಯಕ್ತಿಗತ ವೈಭವೀಕರಣದಿಂದ ಬೇಸತ್ತು. ರಾಜ್ಯದ ಬುದ್ಧಿಜೀವಿ ವಲಯವನ್ನು ಸಮರ್ಥವಾಗಿ ಸಂಘಟಿಸುವ ಮೂಲಕ ರಾಜ್ಯದಲ್ಲಿ ಕರ್ನಾಟಕ ಜ್ಞಾನವಿಜ್ಞಾನ ಸಮಿತಿ(ಕೆಜಿವಿಎಸ್)ಯನ್ನು ರಾಜ್ಯದಲ್ಲಿ ಪ್ರಬಲವಾಗಿ ಕಟ್ಟುವಿಕೆಯಲ್ಲಿ ಬಸವರಾಜ ಸಂಗಪ್ಪನವರ್ ಅವರ ಕಾರ್ಯ ಅಮೋಘವಾದದು. ಈ ಸಂಘಟನೆಯಲ್ಲಿ ಹರಪನಹಳ್ಳಿ ಸೇರಿದಂತೆ ನಾಡಿನ ನಾನಾ ಭಾಗದಲ್ಲಿ ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ, ಕಂದಾಚಾರಗಳ ಕುರಿತಂತೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕೆಜಿವಿಎಸ್ ಸಂಘಟನೆಗೆ ಹೊಸಭಾಷ್ಯ ಬರೆದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಎರಡು ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಇಡೀ ನೌಕರರ ವಲಯದಲ್ಲಿ ಸಂಘಟನೆಯ ಹೊಸ ಸಂಚಲನಕ್ಕೆ ಕಾರಣೀಭೂತರಾದರು. ಜತೆಗೆ, ತಮ್ಮ ವೃತ್ತಿಯನ್ನು ಪ್ರತಿನಿಧಿಸುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಗೂ ಬಸವರಾಜ ಸಂಗಪ್ಪನವರ್ ಅವರು ಛಾಪು ಮೂಡಿಸುವ ಮೂಲಕ ಶಿಕ್ಷಕರ ಸಮುದಾಯ ಬೇಕು, ಬೇಡಿಕೆಗಳಿಗೆ, ನೋವು- ನಲಿವುಗಳಿಗೆ ಸ್ಪಂದಿಸುವ ಮೂಲಕ ಶಿಕ್ಷಕರ ಮೆಚ್ಚಿನ ನೇತಾರರಾಗಿದ್ದಾರೆ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ವಿಜಯನಗರ ಜಿಲ್ಲಾಘಟಕದ ಅಧ್ಯಕ್ಷರಾಗಿಯೂ ಅವರು ಸಲ್ಲಿಸಿದ ಸೇವೆ ಅನುಪಮ.

ಕಳೆದ ಜನವರಿಯಲ್ಲಿ ಬಸವರಾಜ ಸಂಗಪ್ಪನವರ್ ಅವರು ತಮ್ಮ ಶಿಕ್ಷಕ ವೃತ್ತಿಗೆ ಸ್ವಯಂ ರಾಜೀನಾಮೆ ಸಲ್ಲಿಸುವ ಮೂಲಕ ಸಕ್ರೀಯವಾಗಿ ಸಮಾಜಮುಖಿ ಕಾರ್ಯಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜೀನಾಮೆಯನ್ನು ನೀಡಿದ್ದರೂ ಇಡೀ ಶಿಕ್ಷಕರ ವಲಯದಲ್ಲಿ ಇವರ ಛಾಪು ಇನ್ನೂ ಮಾಸದೇ ಉಳಿದಿದೆ ಎಂಬುದಕ್ಕೆ ಇತ್ತೀಚೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಸಮಿತಿ ಪದಾಧಿಕಾರಿಗಳ ಆಯ್ಕೆಯಲ್ಲಿ ಬಸವರಾಜ ಸಂಗಪ್ಪನವರ್ ತೊಡಗಿಸಿಕೊಳ್ಳುವಿಕೆಯೇ ತಾಜಾ ಉದಾಹರಣೆ.
ಬಸವರಾಜ ಅವರು ಬಯಸಿದ್ದರೇ, ನೆಮ್ಮದಿಯ ಬದುಕು ನಡೆಸಬಹುದಿತ್ತು. ಆದರೆ, ಈ 54ರ ವಯಸ್ಸಿನಲ್ಲಿಯೂ ಸಮಾಜಸೇವೆಗಾಗಿ ಅವರು ಪಾದರಸದಂತೆ ತುಡಿಯುತ್ತಿದ್ದಾರೆ. ವಕೀಲ ವೃತ್ತಿಯ ಜತೆಗೆ, ಸಮಾಜಮುಖಿ ಕಾರ್ಯಕ್ರಮಗಳಲ್ಲಿಯೂ ತಮ್ಮನ್ನು ಸಮರ್ಪಣಾ ಮನೋಭಾವನೆಯಿಂದ ತೊಡಗಿಸಿಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಅವರು ‘ಜನದನಿ ವೇದಿಕೆ- ಹರಪನಹಳ್ಳಿ’ ಹೆಸರಿನ ಸಂಘಟನೆಯನ್ನು ಹುಟ್ಟುಹಾಕುವ ಮೂಲಕ ಅದರ ‘ನ್ಯಾಯ ಮತ್ತು ಸೌಹಾರ್ದತೆಗಾಗಿ…’ ಎಂಬ ಘೋಷವಾಕ್ಯವೇ ಹೇಳುವಂತೆ ಶೋಷಿತ ಹಾಗೂ ಸೌಹಾರ್ದತ ಸಮಾಜ ನಿರ್ಮಾಣಕ್ಕಾಗಿ ಹಾತೊರೆಯುತ್ತಿದ್ದಾರೆ. ಇದಕ್ಕಾಗಿ, ಅವರು, ತಮ್ಮ ಜತೆ ಹೆಜ್ಜೆ ಹಾಕುವ ಒಡನಾಡಿ ಗೆಳೆಯರ ತಂಡವನ್ನು ಕಟ್ಟಿಕೊಂಡಿದ್ದಾರೆ.
ಕೈಹಾಕಿದ ಯಾವ ಕೆಲಸವನ್ನು ಬಿಡದೇ ಹಿಂದೆ ಸರಿಯುವ ಜಾಯಮಾನವನ್ನೇ ತನ್ನ ರಕ್ತದಲ್ಲಿ ಅಳವಡಿಸಿಕೊಂಡಿರದ ಬಸವರಾಜ ಅವರಂಥ ಸಂಘಟನಾ ಚತುರ, ನಾಡು- ನುಡಿಯ ಬಗ್ಗೆ ಅಪಾರ ಕಳಕಳಿ, ಕಾಳಜಿ ಹೊಂದಿರುವ ಸಮರ್ಥ ವ್ಯಕ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸುವ ಮೂಲಕ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ ಮಾಡಿರುವುದು ಸ್ತುತ್ಯಾರ್ಹ.

