ವಿಜಯಸಿರಿನ್ಯೂಸ್.ಕಾಂ/ ಹೂವಿನಹಡಗಲಿ
ಜನಸಾಮಾನ್ಯರ ಸಮಸ್ಯೆ ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಹಡಗಲಿ ತಾಲೂಕಿನ ಮಾಗಳ ಹಾಗೂ ಹಿರೇಹಡಗಲಿಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಜಿಲ್ಲಾಧಿಕಾರಿಗಳು ಹಿರೇಹಡಗಲಿ ನಾಡ ಕಚೇರಿಗೆ ಭೇಟಿ ನೀಡಿದ ವೇಳೆ ಸಾಲು-ಸಾಲು ಅಹವಾಲು ಸಲ್ಲಿಕೆಯಾಗಿ ಕೆಲವು ಅಹವಾಲುಗಳಿಗೆ ತಹಸೀಲ್ದಾರರು, ತಾಪಂ ಇಒ ಹಾಗೂ ಪಿಡಿಒ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಿದರು.
ಮಾಗಳ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡ ಪರಿಶೀಳಿಸಿದರಲ್ಲದೇ ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿ ಉತ್ತಮ ಅಂಕ ಗಳಿಸಲು ಸೂಚಿಸಿದರು.
580ಕುಟುಂಬಕ್ಕೆ ಮನೆಗಳಿಲ್ಲ:
ಹಿರೇಹಡಗಲಿ ಮಹಿಳೆಯೊಬ್ಬರು ಮನೆ ಇಲ್ಲದೇ ಇದ್ದು, ಮನೆ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವೇಳೆ ಸ್ಥಳದಲ್ಲಿದ್ದ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿಗಳನ್ನು ಈ ಕುರಿತು ವಿಚಾರಿಸಿ ನಿವೇಶನ ರಹಿತರ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಹಿರೇಹಡಗಲಿಯಲ್ಲಿ 580 ಕುಟುಂಬಗಳಿಗೆ ಪಿಎಂ ಆವಾಸ್ ಯೋಜನೆಯಡಿ ನಿವೇಶನ ಒದಗಿಸಲು ಮುಂದಾಗಬೇಕು. ಹಾಗೆಯೇ ನಿವೇಶನದ ಕುರಿತು ಇಲಾಖಾ ವೆಬ್ ಸೈಟ್ ನಲ್ಲಿ ಸಂಪೂರ್ಣ ವಿವರ ದಾಖಲಿಸುವಂತೆ ತಾಕೀತು ಮಾಡಿದರು.
ಹಿರೇಹಡಗಲಿ ಸಾರ್ವಜನಿಕರೊಬ್ಬರು ಶುದ್ಧ ಕುಡಿಯುವ ನೀರು ಒದಗಿಸುವಂತೆ ಮನವಿ ಸಲ್ಲಿಸಿದಾಗ ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ಪೂರೈಕೆಯಲ್ಲಿ ವಿಳಂಬ ಆಗದಂತೆ ಕ್ರಮ ವಹಿಸಬೇಕು. ಹಾಗೆಯೇ ಹೆಚ್ಚು ನೈರ್ಮಲ್ಯತೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಒತ್ತುವರಿ ತೆರವಿಗೆ ಮನವಿ:
ಬಹುತೇಕ ರಸ್ತೆಗಳ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದೆ. ಜಾಗವನ್ನು ಅಂಗಡಿಗಳವರು ಒತ್ತುವರಿ ಮಾಡಿಕೊಂಡು ಸಾಮಗ್ರಿಗಳನ್ನು ಜೋಡಿಸಿ ಇಟ್ಟುಕೊಂಡಿರುತ್ತಾರೆ. ಜನರ ಓಡಾಟಕ್ಕೆ ಹಾಗೂ ಬಸ್ ನಿಲುಗಡೆಗೆ ಸಮಸ್ಯೆಯಾಗಿದೆ. ಚರಂಡಿ ಮೇಲಿನ ಅಂಗಡಿಗಳನ್ನು ತೆರವುಗೊಳಿಸಿ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಹೊಳಲು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದಾರಿ ಒದಗಿಸಲು ರೈತರ ಮನವಿ:
ಕೃಷಿ ಚಟುವಟಿಕೆಗಾಗಿ ಜಮೀನುಗಳಿಗೆ ಜನ, ಜಾನುವಾರು, ಎತ್ತಿನ ಗಾಡಿ, ಟ್ರ‍್ಯಾಕ್ರ‍್ಗಳು ಹೋಗಿಬರಲು ದಾರಿಯಿಲ್ಲದೆ ಈ ಭಾಗದ ರೈತರಿಗೆ ತೊಂದರೆಯಾಗಿದೆ. ಕೂಡಲೆ ರೈತರ ಜಮೀನುಗಳಿಗೆ ಹೋಗಲು ದಾರಿ ವ್ಯವಸ್ಥೆ ಮಾಡಿಸುವಂತೆ ರೈತರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಜಾಗ ಅಥವಾ ಈಗಾಗಲೇ ನಕ್ಷೆಗಳಲ್ಲಿ ದಾರಿ ಇದ್ದರೆ ಕೂಡಲೇ ಮಾಡಿಕೊಡಲಾಗುವುದು. ಇಲ್ಲದಿದ್ದರೆ ನಮ್ಮಿಂದ ದಾರಿ ಮಾಡಿಕೊಡಲು ಸಾಧ್ಯವಿಲ್ಲ. ಬೇಕಿದ್ದರೆ ಮನವಿ ಸಲ್ಲಿಸಿ ಸಂಬಂಧಿಸಿದ ಅಧಿಕಾರಿಗಳು ಹಿಂಬರಹ ಬರೆದುಕೊಡುತ್ತಾರೆ. ಆನಂತರ ರೈತರೊಂದಿಗೆ ಚರ್ಚಿಸಿ ದಾರಿ ಮಾಡಿಕೊಳ್ಳಬೇಕೆಂದು ಇದೇ ವೇಳೆ ರೈತರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷಕುಮಾರ್, ತಾಲೂಕು ಪಂಚಾಯ್ತಿ ಇಒ ಜಿ. ಪರಮೇಶ್ವರ್ ಸೇರಿದಂತೆ ಹಿರೆಹಡಗಲಿ ನಾಡಕಚೆರಿ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
80ಕ್ಕೂ ಅಧಿಕ ರ‍್ಜಿಗಳ ಸ್ವೀಕಾರ
ಹಿರೇಹಡಗಲಿ ಹೋಬಳಿ ವ್ಯಾಪ್ತಿಯಲ್ಲಿ ಸರ‍್ವಜನಿಕರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ೮೦ಕ್ಕೂ ಅಧಿಕ ರ‍್ಜಿಗಳನ್ನು ಸಲ್ಲಿಸಿದ್ದು, ಇವುಗಳಲ್ಲಿ ಕೆಲವು ಸಮಸ್ಯೆಗಳಿಗೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಸುಧಾಕರ್ ಅವರು ಮಾಹಿತಿ ನೀಡಿ, ಸರ‍್ವಜನಿಕರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ‍್ವಜನಿಕರಿಂದ ಮನೆಗಳನ್ನು ಒದಗಿಸುವ ಕುರಿತು ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ. ಬಡಾವಣೆ ಅಥವಾ ಉಪ ಗ್ರಾಮ ಮಾಡಲು ಅವಕಾಶವಿದೆ. ಇದು ಈಗಾಗಲೇ ಪರಿಶೀಲನೆ ಹಂತದಲ್ಲಿದೆ. ಸರ್ಕಾರಿ ಜಾಗ ಗುರುತಿಸಿ ನಿವೇಶನ ರಹಿತರಿಗೆ ಮನೆ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.

