Vijayasiri News
ನಮ್ಮೂರ ಸುದ್ದಿವಿಜಯನಗರಹರಪನಹಳ್ಳಿ ಸುದ್ದಿ

ಹರಪನಹಳ್ಳಿ: ಒಳಮೀಸಲಾತಿ ಹಂಚಿಕೆಯಲ್ಲಿ ಘೋರ ಅನ್ಯಾಯ, ಬಲಾಢ್ಯ ಸಮುದಾಯಗಳ ಪಟ್ಟಿಯಲ್ಲಿ ಅಲೆಮಾರಿಗಳ ಸೇರ್ಪಡೆ, ಜೀವಿಸುವ ಹಕ್ಕನ್ನೂ ಕಸಿದ ಸರ್ಕಾರ: ಪ್ರತಿಭಟನಾಕಾರರ ಆಕ್ರೋಶ

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಪರಿಶಿಷ್ಟರ ಒಳಮೀಸಲಾತಿ ವರ್ಗೀಕರಣದಲ್ಲಿ ಬಲಾಢ್ಯ ಸಮುದಾಯಗಳ ಪಟ್ಟಿಯಲ್ಲಿ ಅಲೆಮಾರಿ ಸಮುದಾಯಗಳನ್ನು ಸೇರ್ಪಡೆ ಮಾಡುವ ಮೂಲಕ ಸರ್ಕಾರ ಅಲೆಮಾರಿಗಳ ಬದುಕಿನ ಮೇಲೆ ಘನಘೋರ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಹಾಗೂ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಒದಗಿಸುವಂತೆ ಒತ್ತಾಯಿಸಿ, ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳ ಮೀಸಲಾತಿ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅಲೆಮಾರಿ ಸಮುದಾಯ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ನಗರದ ರಾಜಸೋಮಶೇಖರನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಇಜಾರಿ ಸಿರಸಪ್ಪ ವೃತ್ತ, ಹಳೇ ಬಸ್‌ನಿಲ್ದಾಣದ ಮೂಲಕ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಬಳಿಕ ಪ್ರವಾಸಿಮಂದಿರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯಘಟಕದ ಅಧ್ಯಕ್ಷ ವಿ. ಸಣ್ಣಅಜ್ಜಯ್ಯ ಅವರು ಮಾತನಾಡಿ, ಸ್ವಾತಂತ್ರö್ಯ ಬಂದು, ಮುಕ್ಕಾಲು ಶತಮಾನಗಳು ಗತಿಸಿದರೂ ಸಹ, ನಮ್ಮ ಅಲೆಮಾರಿ ಜನಾಂಗಕ್ಕೆ ಶಾಶ್ವತವಾದ ಸೂರು ಒದಗಿಸಲು ಆಳುವ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ, ಗುಡಿ ಗುಂಡಾರಗಳು ಹಾಗೂ ಹಂದಿ, ನಾಯಿಗಳು ವಾಸಿಸಲು ಯೋಗ್ಯವಲ್ಲದ ಪ್ರದೇಶಗಳಲ್ಲಿ ಜೋಪಡಿ ಕಟ್ಟಿಕೊಂಡು ಜೀವಿಸುತ್ತಿದ್ದೇವೆ. ಊರೂರು ತಿರುಗಿ ಕೂದಲು ಸಂಗ್ರಹಿಸುವ ಹಾಗೂ ಸಣ್ಣಪುಟ್ಟ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೇವೆ. ಇನ್ನೂ ಎಷ್ಟೋ ಕುಟುಂಬಗಳಿಗೆ ಪಡಿತರ ಚೀಟಿ ದೊರಕಿಲ್ಲ, ಗುರುತಿನ ಚೀಟಿಯೂ ಸಿಕ್ಕಿಲ್ಲ. ವಾಸ್ತವವಾಗಿ ಅತೀ ನಿಕೃಷ್ಟವಾಗಿ ಬದುಕುತ್ತಿರುವ ಸಮುದಾಯಕ್ಕೆ ಸಾಮಾಜಿಕನ್ಯಾಯ ಒದಗಿಸುವ ಮೂಲಕ ಮುಖ್ಯವಾಹಿನಿಗೆ ಕರೆತರುವ ಬದಲು, ಬಲಾಢ್ಯ ಜಾತಿಗಳ ಪಟ್ಟಿಯಲ್ಲಿ ಅಲೆಮಾರಿಗಳನ್ನು ಸೇರಿಸುವ ಮೂಲಕ ಸರ್ಕಾರ ಗಾಯದ ಮೇಲೆ ಮತ್ತೆ ಬರೆದಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ವಾಸಿಸಲು ಅಂಗೈಯಗಲದ ನಿವೇಶನವೂ ಇಲ್ಲದೇ, ಕೊನೆಗೆ ಸತ್ತಾಗಲೂ ಹೂಳುವುದಕ್ಕೂ ಆರಡಿ- ಮೂರಡಿ ಜಾಗವೂ ಇಲ್ಲದೇ, ಜೀವಂತ ಹೆಣವಾಗಿರುವ ನಮ್ಮ ಸಮುದಾಯ ಹೊಟ್ಟೆ ಹೊರೆಯುವುದಕ್ಕೆ ಹರಸಾಹಸ ಪಡುತ್ತಿರುವಾಗ, ಅಲ್ಲಲ್ಲಿ ಚದುರಿಹೋಗಿ, ಅಸಂಘಟಿತವಾಗಿದ್ದೇವೆ. ಈ ಅಸಂಘಟಿತ ಅವಕಾಶವನ್ನೇ ನಮ್ಮ ಅಸಹಾಯಕತೆ ಎಂದು ಭಾವಿಸಿರುವ ಸರ್ಕಾರ, ನಮ್ಮ ಶೋಷಿತರಲ್ಲಿಯೇ ಅತೀಶೋಷಣೆಗೆ ಒಳಗಾಗಿರುವ ನಮ್ಮ ಅಲೆಮಾರಿ ಬದುಕಿನ ಮೇಲೆ ಸಮಾಧಿ ಕಟ್ಟಲು ಹೊರಟಿದೆ. ಸರ್ಕಾರದ ಈ ನಡೆ ಅಕ್ಷಮ್ಯವಾದದು. ಕೂಡಲೇ, ಸಂವಿಧಾನಬದ್ಧವಾಗಿ ಸರ್ಕಾರ ಅಲೆಮಾರಿ ಜನಾಂಗಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ಹೊರಡಿಸುವ ಮೂಲಕ ನಮಗೂ ಜೀವಿಸಲು ಅವಕಾಶ ನೀಡಿ ಎಂದು ಅಗ್ರಹಿಸಿದರು

ಹಗಲುವೇಷ, ಸುಡುಗಾಡುಸಿದ್ಧ, ಕೌದಿ ಹೆಣೆಯುವುದು, ದೇವರಮೂರ್ತಿ ಹೊತ್ತು, ಭಿಕ್ಷೆ ಬೇಡುವುದು ಸೇರಿದಂತೆ ಹೊಟ್ಟೆ ಹೊರೆಯಲು ಹೆಣಗಾಡುತ್ತಿದ್ದೇವೆ. ಇಂಥಹ ನಿಕೃಷ್ಟ ಸಮುದಾಯಗಳನ್ನು ಸರ್ಕಾರ ಕಡೆಗಣಿಸಿರುವುದು, ನಾಚಿಕೆಗೇಡಿನ ಸಂಗತಿ. ನಾವು, ಬದುಕು, ಬವಣೆಗಳನ್ನು ಸರ್ಕಾರ ಒಮ್ಮೆ ಕಣ್ಣು ತೆರೆದುನೋಡುವ ಮೂಲಕ ಹಂಚಿಕೆ ಸೂತ್ರಕ್ಕೆ ಮುಂದಾಗಬೇಕಿತ್ತು. ಆದರೆ, ನಮ್ಮ ಅಸಹಾಯಕತೆಯನ್ನು ಬಳಸಿಕೊಂಡು, ನಮ್ಮ ಮೇಲೆ ಈ ರೀತಿಯ ಚಪ್ಪಡೆಕಲ್ಲು ಹಾಕುವುದು ನ್ಯಾಯವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಚೆನ್ನದಾಸರ ಅಲೆಮಾರಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಾಬಣ್ಣ, ವಿವಿಧ ಸಂಘಟನೆಗಳ ಮುಖಂಡರಾದ ಎಸ್.ಬಿ. ಮಂಜುನಾಥ, ಬದಾದಿಗಿ ಅಣ್ಣಪ್ಪ, ಗೋಸಂಗಿ ಪೋತರಾಜು, ಎಚ್.ಜಿ. ನಾಗಪ್ಪ, ದುರಗೇಶ್, ಎಸ್. ಭೀಮಪ್ಪ, ಎಚ್. ಗುರುಸ್ವಾಮಿ, ಮಲ್ಲಮ್ಮ, ಮಂಜುನಾಥ, ಲಲಿತಮ್ಮ, ವಿ. ಹನುಮಂತ, ವಿಠಲದಾಸಪ್ಪ, ಕೆ. ರಾಮಚಂದ್ರಪ್ಪ, ಕೆ. ಕೃಷ್ಣ ಸೇರಿದಂತೆ ಇತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

ಅರೆಬೆತ್ತಲೆಯಾಗಿ ಮೈಗೆ ಚಾಟಿ ಏಟು ಬಾರಿಸಿಕೊಳ್ಳುವ ಮೂಲಕ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕೆಲವರು ತಮ್ಮ ಸಾಂಪ್ರದಾಯಿಕ ದೇವರ ಮೂರ್ತಿ ಹೊತ್ತಿದ್ದರೆ, ಕೆಲವರು ವಾದ್ಯಗಳನ್ನ ನುಡಿಸಿ ಪ್ರತಿಭಟನೆ ನಡೆಸಿದರು.

ಸಿಂಧೋಳ್, ಹಂಡಿಜೋಗಿ, ಮೇದಾರ, ಚನ್ನದಾಸ, ಸಿಳ್ಳೆಕ್ಯಾತ, ಗೋಸಂಗಿ, ಸುಡುಗಾಡುಸಿದ್ದ ಹಾಗೂ ದೊಂಬರು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Related posts

ವಿಜಯನಗರ ಜಿಲ್ಲೆಯಲ್ಲೊಂದು ಮಾದರಿ ಸಮಾರಂಭ: ಧ್ವಜಾರೋಹಣ ನೆರವೇರಿಸಿದ ಅಲೆಮಾರಿ ಸಮಾಜದ 98ರ ವಯೋವೃದ್ಧೆ ಮರಿಯಮ್ಮ

Vijayasiri News

ಪಂಚಾಯ್ತಿ ಆಡಳಿತದ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಕಲುಷಿತ ನೀರು ಪೂರೈಕೆ; ಸಾಂಕ್ರಾಮಿಕ ರೋಗದ ಆತಂಕದಲ್ಲಿ ಗ್ರಾಮಸ್ಥರು…!

Vijayasiri News

ಸಿದ್ಧರಾಟ, ಶಿವನಾಟ,…. ಜ… ಜ… ಜ… ಜ… ಜ…, ಹೊಸಪೇಟೆ: ಸುಡುಗಾಡು ಸಿದ್ಧರ ಕೈಚಳಕದ ಚಮತ್ಕಾರಕ್ಕೆ ಬೆರಗಾದ ಸಭಿಕರು

Vijayasiri News

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿದ ದೂರುದಾರ ಹರಪನಹಳ್ಳಿ ತಾಲ್ಲೂಕಿನವನಾ…? ಈ ಸುದ್ದಿ ಹರಿಬಿಟ್ಟು ಪ್ರಕರಣ ಮೈಮೇಲೆಳೆದುಕೊಂಡ ಬಿಜೆಪಿ ಮುಖಂಡ…!

Vijayasiri News

ಹರಪನಹಳ್ಳಿ: ಪಾಳೇಗಾರರ ಕಾಲದ ಅಪ್ರಕಟಿತ ಶಿಲಾಶಾಸನ ಪತ್ತೆ

admin

||ಅರಸೀಕೆರೆ: ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ|| ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆಟೋಟ ಅತ್ಯಗತ್ಯ: ಜೆ. ಪದ್ಮಲತಾ

Vijayasiri News
error: Content is protected !!