Vijayasiri News
ರಾಜ್ಯ

ದಾವಣಗೆರೆ: ದಲಿತ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ, ನ್ಯಾ. ನಾಗಮೋಹನದಾಸ್ ಆಯೋಗದ ವರದಿ ಯಥಾವತ್ ಅನುಷ್ಠಾನಕ್ಕೆ ಆಗ್ರಹ

ವಿಜಯಸಿರಿನ್ಯೂಸ್.ಕಾಂ/ ದಾವಣಗೆರೆ
ಪರಿಶಿಷ್ಟರ ಒಳಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾ.ನಾಗಮೋಹನದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯೂ ವೈಜ್ಞಾನಿಕವಾಗಿದ್ದು, ನಿಖರ ಮಾಹಿತಿಯನ್ನು ಒಳಗೊಂಡಿದೆ. ಹೀಗಾಗಿ, ಈ ಅಧಿವೇಶದಲ್ಲಿಯೇ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ, ದಾವಣಗೆರೆ ನಗರದಲ್ಲಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಸೋಮವಾರ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಸಂಘಟನೆಗಳ ಮಹಾಒಕ್ಕೂಟದ ನೇತೃತ್ವದಲ್ಲಿ ಸಹಸ್ರಾರು ಕಾರ್ಯಕರ್ತರು, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭಿಸಿ, ಬಳಿಕ, ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಿದರು.
ದಲಿತ ಮುಖಂಡ ಆಲೂರು ನಿಂಗರಾಜ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಪರಿಶಿಷ್ಟ ಒಳಮೀಸಲಾತಿಗೆ ಸಂಬಂಧಿಸಿದಂತೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿಯೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಕೂಲಂಕಷವಾಗಿ ಅಧ್ಯಯನ ನಡೆಸಿದ ನ್ಯಾ. ನಾಗಮೋಹನದಾಸ್ ಅವರು, ಒಳಮೀಸಲಾತಿಯ ಹಂಚಿಕೆಗೆ ಸಂಬಂಧಿಸಿದಂತೆ ಸೂಕ್ತ ಹಾಗೂ ವೈಜ್ಞಾನಿಕವಾದ ಅಂಕಿ-ಅಂಶಗಳ ವರದಿಯನ್ನು ಸಲ್ಲಿಸಿದ್ದಾರೆ. ವರದಿಯೂ ವಾಸ್ತವದಲ್ಲಿ ಸತ್ಯಾಂಶದಿಂದ ಕೂಡಿದೆ. ಹೀಗಾಗಿ, ನಾಳೆಯ ಸಂಪುಟ ಸಭೆಯಲ್ಲಿಯೇ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದು ತಾರ್ಕೀಕ ಅಂತ್ಯಹಾಡುವ ಮೂಲಕ ನಿರ್ಣಯ ಅಂಗೀಕರಿಸಬೇಕು. ಇಲ್ಲವಾದಲ್ಲಿ, ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕುವ ಮೂಲಕ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿನಾಕಾರಣ ಮೀನಮೇಷಕ್ಕೆ ಮುಂದಾದರೆ, ಹೋರಾಟಗಳ ತೀವ್ರಸ್ವರೂಪ ಎದುರಿಸಬೇಕಾಗುತ್ತದೆ. ಜತೆಗೆ, ಅದರಿಂದಾಗುವ ಪರಿಣಾಮಗಳು ಹಾಗೂ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಹೋರಬೇಕಾಗುತ್ತದೆ ಎಂದು ನಿಂಗರಾಜ್ ಎಚ್ಚರಿಸಿದರು.


ಒಳಮೀಸಲಾತಿ ಅನುಷ್ಠಾನಗೊಳಿಸುವಿಕೆಯಲ್ಲಿ ಸರ್ಕಾರ ಸಮುದಾಯದ ಜತೆ ಚೆಲ್ಲಾಟ ನಡೆಸುತ್ತಿದೆ. ಸಮುದಾಯದ ಕಣ್ಣಿಗೆ ಮಣ್ಣೆರೆಚುವ ಹಾಗೂ ವ್ಯವಸ್ಥಿತವಾಗಿ ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿರುವ ಶಂಕೆ ಇದೆ. ಇದೇ ಪರಿಪಾಠವನ್ನು ಮುಂದುವರೆಸುವ ಮೂಲಕ ಸಮುದಾಯದ ಮೇಲೆ ಘೋರ ಅನ್ಯಾಯ ಎಸಗುತ್ತಿದೆ ಎಂದು ಆಲೂರು ನಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ರವಿನಾರಾಯಣ ಬಿ., ಎಚ್. ವೀರಭದ್ರಪ್ಪ, ನೀಲಗಿರಿಯಪ್ಪ, ಎಚ್.ಸಿ. ಗುಡ್ಡಪ್ಪ, ಹೆಗ್ಗೆರೆ ರಂಗಪ್ಪ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ನ್ಯಾ.ಎಚ್.ಎಸ್. ನಾಗಮೋಹನದಾಸ್ ಅವರ ಆಯೋಗ ಪರಿಶಿಷ್ಟ ವರ್ಗ ವ್ಯಾಪ್ತಿಯಲ್ಲಿ ಬರುವ 101 ಜಾತಿಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಕುರಿತು, ಜಾತಿವಾರು ವಿಸ್ತೃತ ಹಾಗೂ ವೈಜ್ಞಾನಿಕವಾದ ನೆಲೆಗಟ್ಟಿನಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಕೆಲವೇ ಕೆಲ ಪಟ್ಟಾಭದ್ರ ಹಿತಾಸಕ್ತಿಗಳು ಸಮುದಾಯದಲ್ಲಿ ಮತ್ತು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಕೈಹಾಕಿವೆ. ಸುಮಾರು ಮೂರು ದಶಕಗಳಿಂದಲೂ ಮಾದಿಗ ಹಾಗೂ ಮಾದಿಗ ಸಂಬಂಧಿತ ಸಮಶೋಷಿತ ಅತಿಹೆಚ್ಚು ತುಳಿತಕ್ಕೆ ಒಳಗಾದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗುತ್ತೀರಿ ಎಂದು ಭಾವಿಸಿದ್ದೇವೆ. ಹೀಗಾಗಿ, ನಾಳೆಯ ವಿಶೇಷ ಸಂಪುಟದ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಪ್ರಸಕ್ತ ಅಧಿವೇಶನದಲ್ಲಿಯೇ ಉಭಯ ಸದನಗಳಲ್ಲಿ ಮಂಡಿಸಿ, ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.

ಬಳಿಕ, ನ್ಯಾ. ನಾಗಮೋಹನದಾಸ್ ಅವರ ವರದಿಯನ್ನು ನಾಳೆಯ ಸಂಪುಟದ ವಿಶೇಷ ಸಭೆಯಲ್ಲಿಯೇ ಅಂಗೀಕರಿಸುವAತೆ ಸರ್ಕಾರಕ್ಕೆ ಒತ್ತಾಯಿಸಿದ ಮನವಿಯನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ. ಹಾಲೇಶ್, ಸಿ. ಬಸವರಾಜ್, ಕೆ.ಎಸ್. ಗೋವಿಂದರಾಜ್, ಎಲ್.ಡಿ. ಗೋಣೆಪ್ಪ, ದತ್ತ, ದುಗ್ಗಪ್ಪ, ರಾಘವೇಂದ್ರ ಕಡೆಮನಿ, ಶಾಮನೂರು ಅರ್ಜುನ್, ಚಿಕ್ಕನಹಳ್ಳಿ ನಿಂಗರಾಜ್, ಮಂಜು ಪೈಲ್ವಾನ್, ಎಂ. ಮಲ್ಲಪ್ಪ, ರಂಗಣ್ಣ ಸಿರಿಗೆರೆ, ಎಸ್. ಮಲ್ಲಿಕಾರ್ಜುನ್, ಹನುಮಂತಪ್ಪ. ಆಟೋ ರವಿ, ನಿರಂಜನಮೂರ್ತಿ, ಎಚ್. ಮಲ್ಲಿಕಾರ್ಜುನ, ವಾಲಿ ಮಲ್ಲಪ್ಪ, ಅಶೋಕ ಸೇರಿದಂತೆ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

ಮೂಗ ಮತ್ತು ಕಿವುಡ ಸ್ನೇಹಿತರ ಮಾದರಿ ಗಣೇಶ ಪ್ರತಿಷ್ಠಾಪನೆ, ವಿಶೇಷಚೇತನರ ವೈಭವದ ಉತ್ಸವಕ್ಕೆ ಈಗ ದಶಮಾನದ ಸಂಭ್ರಮ

Vijayasiri News

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿದ ದೂರುದಾರ ಹರಪನಹಳ್ಳಿ ತಾಲ್ಲೂಕಿನವನಾ…? ಈ ಸುದ್ದಿ ಹರಿಬಿಟ್ಟು ಪ್ರಕರಣ ಮೈಮೇಲೆಳೆದುಕೊಂಡ ಬಿಜೆಪಿ ಮುಖಂಡ…!

Vijayasiri News

ಜೋಕುಮಾರಮೂರ್ತಿಯ ಮೇಲೆ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರಾಧನೆ ಸ್ಥಗಿತ; ಅಂದಿನಿಂದಲೇ ಊರ ಹೆಸರು ನಾಮಾಂಕಿತ, ಹುಲಿಕಟ್ಟೆ: ಈ ಊರಲ್ಲಿ ಜೋಕುಮಾರಸ್ವಾಮಿ ಆರಾಧನೆ ನಿಷಿದ್ಧ!

Vijayasiri News

ಮಾನವೀಯಮೌಲ್ಯಗಳ ಮಾರ್ಗದರ್ಶಿ; ಪರಿಸರ ಚಾಕರಿಕೆ ಪ್ರವೃತ್ತಿಯ ಉಪನ್ಯಾಸಕ, ಹರಪನಹಳ್ಳಿ: ಉಪನ್ಯಾಸಕ ಶಿವಾನಂದ ಮುಡಿಗೇರಿದ ‘ರಾಜೀವ್‌ಗಾಂಧಿ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’

Vijayasiri News

ತಲೆಕೂದಲನ್ನು ಬೋಳಿಸಿಕೊಂಡು ಆಕ್ರೋಶ, ನ್ಯಾ. ನಾಗಮೋಹನದಾಸ್ ವರದಿ ಅಂಗೀಕಾರಕ್ಕೆ ವಿರೋಧ ಅವಕಾಶ ವಂಚಿತ ಸಮುದಾಯಗಳಿಗೆ ಮರಣ ಶಾಸನವಾದ ವರದಿ ಕೈಬಿಡಿ

Vijayasiri News

ಆಹಾ… ರಸ್ತೆಯೇ…? ಏನೀದು ನಿನ್ನ ಅವ್ಯವಸ್ಥೆ…!! ಇದು ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ, ಯಾಮಾರಿದರೆ ‘ಯಮನ’ ಸವಾರಿ…!!!

Vijayasiri News
error: Content is protected !!