Vijayasiri News
ಗದಗಮುಂಡರಗಿ

ಮುಂಡರಗಿ: ಕೆಲೂರು ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ, ರಂಜಿಸಿದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು

ವಿಜಯಸಿರಿನ್ಯೂಸ್.ಕಾಂ/ ಮುಂಡರಗಿ
ತಾಲ್ಲೂಕಿನ ಕೆಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ಸಂಭ್ರಮ, ಸಡಗರ, ದೇಶಭಕ್ತಿಯ ಪ್ರತೀಕವಾಗಿ ಅದ್ಧೂರಿಯಾಗಿ ನಡೆಯಿತು.
ಶಾಲಾ ಆವರಣದಲ್ಲಿ ವರ್ಣರಂಜಿತವಾಗಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಈರಪ್ಪ ಸೊರಟೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಹೆಮ್ಮೆಯ ಪ್ರತೀಕವಾದ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲಕ; ಪೋಷಕರು ಸಕ್ರೀಯವಾಗಿ ಸಹಭಾಗಿತ್ವ ಪಡೆದುಕೊಂಡಾಗ ಮಾತ್ರ ಹಬ್ಬದ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಲು ಸಾಧ್ಯವಾಗುತ್ತದೆ. ಶಾಲೆ ಎಂಬುದು ಒಂದು ದೇಗುಲಕ್ಕಿಂತಲೂ ಮೇಲ್ಪಂಕ್ತಿಯ ಸ್ಥಾನದಲ್ಲಿರುವ ದೈವಸನ್ನಿಧಿ. ಇಲ್ಲಿನ ಕೋಣೆಗಳಲ್ಲಿ ಕಲಿಯುತ್ತಿರುವ ಪ್ರತಿಮಗು, ದೇಶದ ಭವಿಷ್ಯತ್ತಿನ ನಿರ್ಮಾಣದ ರೂವಾರಿ ರೂಪದಲ್ಲಿ ಬೆಳೆಯುತ್ತದೆ ಎಂದರು.
ಲಕ್ಷಾಂತರ ಜನ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳ ಸಂಘರ್ಷದ ಫಲವಾಗಿ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದರು.
ಗ್ರಾಮದ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಲ್ಲವಿ ತಿಮ್ಮಾಪುರ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆ ವಿಜಯಲಕ್ಶ್ಮೀ ಒಂಟೇಲಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ದೇವಪ್ಪ ಕಲಿವಾಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಹಂಪಾದೇವನಹಳ್ಳಿ ಶಾಲೆಯ ಶಿಕ್ಷಕಿ ಪ್ಯಾರಿಜಾನ್ ಅವರು, ರೂ. 25 ಸಾವಿರ ಮೌಲ್ಯದ ಟೀ ಷರ್ಟ್ ಮತ್ತು ಪ್ಯಾಂಟ್‌ಗಳನ್ನು ದೇಣಿಗೆ ನೀಡುವ ಮೂಲಕ ಮಕ್ಕಳ ಸಾಂಸ್ಕೃತಿಕ ಅಭಿನಯಗಳಿಗೆ ಸ್ಫೂರ್ತಿ ತುಂಬಿದರು.
ಶಾಲೆಯ ಶಿಕ್ಷಕ ಸಿಬ್ಬಂದಿ ಮಕ್ಕಳಿಗೆ ಬೆಲ್ಟ್ ಹಾಗೂ ಟೈಗಳನ್ನು ಮತ್ತು ಊಟದ ತಾಟುಗಳನ್ನು ಹಾಗೂ ಅಡುಗೆ ಪರಿಕರಗಳನ್ನು ಶಾಲೆಗೆ ಊಡುಗೊರೆಯಾಗಿ ನೀಡಿದರು.
ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯ ಯಲ್ಲಪ್ಪ ಜಗದೂರ ಅವರು ಮಕ್ಕಳಿಗೆ ನೋಟ್‌ಪುಸ್ತಕ ಹಾಗೂ ಪೆನ್‌ಗಳನ್ನು ದೇಣಿಗೆ ನೀಡಿದರು.
ಸ್ವಾತಂತ್ರ್ಯ ಹೋರಾಟದ ಕಲಿಗಳಾದ ‘ಕ್ರಾಂತಿಯ ಕಿಡಿ ರಾಯಣ್ಣ’ ಹಾಗೂ ಸ್ವಾತಂತ್ರ್ಯದ ಸ್ಫೂರ್ತಿ ಭಗತ್‌ಸಿಂಗ್ ಕಿರುನಾಟಕಗಳು, ಕೊರವಂಜಿ ಕಣಿ ಹಾಸ್ಯಗೀತೆ, ಪರಿಸರ ಕಾಳಜಿಯನ್ನು ಪ್ರೇರೇಪಿಸುವ ಗೀತೆಗಳು ಸೇರಿದಂತೆ ಸ್ಫಟಿಕದಂತೆ ಮೊಳಗುವ ಮೂಲಕ ನೆರದ ಸಭಿಕರಲ್ಲಿ ಅಚ್ಚರಿ ಮೂಡಿಸುವ ಜತೆಗೆ, ಮನರಂಜಿಸಿದವು. ಸಂಗೊಳ್ಳಿ ರಾಯಣ್ಣ ಹಾಗೂ ಭಗತ್‌ಸಿಂಗ್ ಅವರ ನೈಜಜೀವನ ಕಥಾಚರಿತ್ರೆಗಳನ್ನು ಒಳಗೊಂಡ ನಾಟಕದ ದೃಶ್ಯಗಳು ಮಕ್ಕಳ ಮನಕಲಕುವ ಜತೆಗೆ, ಕಣ್ಣಂಚಿನಲ್ಲಿ ನೀರು ಜಿನುಗಿಸಿದವು. ಮಕ್ಕಳು ಅಭಿನಯಿಸಿ ಸಾದರಪಡಿಸಿದ ಕಿರುನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕ- ಪೋಷಕರನ್ನು ಮೂಕಸ್ಮಿತಗೊಳಿಸಿದವು.
ಕು.ನಯನ ತಿಮ್ಮಾಪುರ ಅಭಿನಯದ ಕೊರವಂಜಿ ಪಾತ್ರ, ಕು.ಶಿಲ್ಪಾ ಕಲಿವಾಳ ಅಭಿನಯದ ಕಿತ್ತೂರು ಚೆನ್ನಮ್ಮನ ಪಾತ್ರ, ಕು. ನಂದೀಶ ನಿಟ್ಟಾಲಿ ಅಭಿನಯದ ರಾಯಣ್ಣನ ಪಾತ್ರ, ಕು. ದರ್ಶನ ಸಿಗರಗಡ್ಡಿ ಅಭಿನಯದ ಭಗತ್‌ಸಿಂಗ್ ಪಾತ್ರಗಳು ನೆರದ ಜನಸಮೂಹದ ಭರ್ಜರಿ ಮೆಚ್ಚುಗೆಗೆ ಪಾತ್ರವಾದವು.
ಗ್ರಾಮದ ಶಿಕ್ಷಣಪ್ರೇಮಿ ಹಿರಿಯ ಮುತ್ಸದ್ಧಿ ಮಳ್ಳಪ್ಪ ಬೂದಿಹಾಳ ಅವರು ಶಾಲೆಯ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಶಿಕ್ಷಕ ಈರಪ್ಪ ಸೊರಟೂರ ಅವರ ನೇತೃತ್ವದಲ್ಲಿ ಶಾಲೆ ಮಾದರಿ ಶಾಲೆಯತ್ತ ದಾಪುಗಾಲು ಹಾಕುತ್ತಿದೆ. ಇದಕ್ಕೆ ಗ್ರಾಮಸ್ಥರು ಮತ್ತಷ್ಟು ಕೈಜೋಡಿಸಿದರೆ, ಶಾಲೆ ಕೀರ್ತಿ ಇನ್ನೂ ಎತ್ತರಕ್ಕೆ ಹಾರಲಿದೆ ಎಂದು ಮೆಚ್ಚುಗೆಯ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ದೇವಪ್ಪ ಕಲಿವಾಳ ಅವರು ಮಾತನಾಡಿ, ಶಾಲಾ ಚಟುವಟಿಕೆಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರೇಮಾ ದೇವೇಂದ್ರಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಭೀಮಣ್ಣ ದೊಡ್ಡಮನಿ, ವಿಜಯಲಕ್ಷ್ಮೀ ಮನೋಜಕುಮಾರ ಸನದಿ, ಶಿಕ್ಷಕಿ ಯಶೋಧಾ ಕರೆಕಲ್ಲ, ವಿನೋದಾ ತಿಮ್ಮಾಪುರ, ಸಿದ್ದಪ್ಪ ಸನದಿ, ತಿಮ್ಮಾಪುರ ಗ್ರಾಮದ ಹಿರಿಯರಾದ ಹಾಗೂ ಎಸ್‌ಡಿಎಂಸಿ ಸದಸ್ಯರಾದ ಬಸವಣ್ಣೆಪ್ಪ ಕೊಂಚಿಗೇರಿ, ಹನುಮಂತ ಸಿಗರಗಡ್ಡಿ, ಶಂಕ್ರಪ್ಪ ಕಲಿವಾಳ, ಶಂಕ್ರಪ್ಪ ತಿಮ್ಮಾಪುರ, ಸಿಗರಗಡ್ಡಿ ನಾಗಪ್ಪ, ದೇವಪ್ಪ ಬನ್ನಿಕೊಪ್ಪ, ಭೂದಾನಿ ಮಳ್ಳಪ್ಪ ಬುಡ್ರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಶಿಕ್ಷಕಿಯರಾದ ಸುಧಾ ಬಸವಣ್ಣೆಪ್ಪ ಪಾಟೀಲ, ಯಶೋಧಾ ಕರೆಕಲ್ಲ, ಕಾವ್ಯಾ ವಿನೋದ ತಿಮ್ಮಾಪುರ, ವಿಜಯಾ ಇತರರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ತರಬೇತುಗೊಳಸಿ, ನಿರೂಪಿಸಿದರು.
ಶಿಕ್ಷಕಿ ಸುಧಾ ಪಾಟೀಲ ನಿರೂಪಸಿದರೆ, ಕಾವ್ಯಾ ವಿನೋದಾ ತಿಮ್ಮಾಪುರ ವಂದಿಸಿದರು.

error: Content is protected !!