ವಿಜಯಸಿರಿನ್ಯೂಸ್.ಕಾಂ/ಬೆಂಗಳೂರು
ಅದೊಂದು ಸಮಾನ ಮನಸ್ಕ ಕ್ರಿಯಾಶೀಲ ಗೆಳೆಯರ ತಂಡ. ಆ ತಂಡದಲ್ಲಿ ಸಕ್ರಿಯವಾಗಿರುವ ಸದಸ್ಯರು ಒಂದು ಕೇವಲ ಊರಿನ, ಒಂದು ಪ್ರಾಂತ್ಯ, ಒಂದು ಪ್ರದೇಶ ಹಾಗೂ ಒಂದು ಸೀಮೆಗೆ ಸೀಮಿತರಾದ ಹುಡುಗರು ಮಾತ್ರ ಅದರಲ್ಲಿ ಇಲ್ಲ. ಇಡೀ ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿಕೊಂಡಿರುವ, ನಾನಾ ಊರಿನ ವಾರಿಗೆಯ ಕ್ರಿಯಾಶೀಲ ಗೆಳೆಯರ ತಂಡ ಅದು. ಅಸಂಘಟಿತವಾಗಿದ್ದ ತಮ್ಮ ಸಮುದಾಯವನ್ನು ಸಂಘಟಿಸುವ ಮೂಲಕ ಸಮುದಾಯದಲ್ಲಿ ಜಾಗೃತಿ, ಅರಿವು, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಾಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆರಂಭವಾದ ಈ ತಂಡ, ಈಗ, ಆ ಸಮುದಾಯದ ಆಶಾಕಿರಣವಾಗಿ, ಭರವಸೆಯ ಬೆಳಕಾಗಿ ಬೆಳೆದುನಿಂತಿರುವ ಪರಿ ನೋಡಿದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಆ ತಂಡದ ಗೆಳೆಯರು ಸದ್ದಿಲ್ಲದೇ ಸಮಾಜ ಕಟ್ಟುವಿಕೆಯ ಕಾರ್ಯದಲ್ಲಿ ತೊಡಗಿಸಿಕೊಂಡುರವ ಕಾರ್ಯ ಇಡೀ ಆ ಸಮುದಾಯವೇ ಸೈ ಎನಿಸುವಷ್ಟರ ಮಟ್ಟಿಗೆ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದೆ.
ಇನ್ನೂ ಆಗತಾನೇ ಕಣ್ಣುಮಿಟುಕಿಸಿ, ಪಿಳಿಪಿಳಿ ಎನ್ನುತ್ತಿದ್ದ ಸಾಮಾಜಿಕ ಜಾಲತಾಣದ ವಾಟ್ಸಪ್ ತಾಣವನ್ನು ಸಂಘಟನೆಗಾಗಿ ಉಪಯೋಗಿಸಿಕೊಂಡ ಈ ತಂಡದ ಗೆಳೆಯರಾದ ಯಾದಗಿರಿ ಜಿಲ್ಲೆಯ ಸುರಪುರದ ಜಕ್ಕಪ್ಪ ಕಟ್ಟಿಮನಿ, ಬಳ್ಳಾರಿ ಜಿಲ್ಲೆಯ ಸಂಡೂರಿನ ಸೋಮಶೇಖರ್, ಕಲ್ಬುರ್ಗಿ ಜಿಲ್ಲೆಯ, ಈಗ ಬೆಂಗಳೂರಲ್ಲಿ ವಾಸವಾಗಿರುವ ಚಂದ್ರಶೇಖರ್ ಮಿಣಜಗಿ, ವಿಜಯಪುರ ಜಿಲ್ಲೆಯ ತಾಳಿಕೋಟೆಯ ಬಸವರಾಜ ನಾಯ್ಕೋಡಿ, ಸಿದ್ದರಾಮ್ ಆಸ್ಕಿ, ಬೀದರ್ ಜಿಲ್ಲೆಯ ರಮೇಶ್ ರಾಜಗೀರ್, ಸುರಪುರದ ಭೀಮರಾವ್ ಗೌಂಡಿ, ರಾಯಚೂರು ಜಿಲ್ಲೆಯ ಸಿಂಧನೂರಿನ ವೀರೇಶ್, ಕಲ್ಬುರ್ಗಿ ಜಿಲ್ಲೆಯ ಮೇಲಪ್ಪಗೌಡ, ದಾವಣಗೆರೆ ಜಿಲ್ಲೆಯ ಪ್ರಕಾಶ್ ಹಾಗೂ ಕರಿಬಸವರಾಜು, ರಾಯಚೂರು ಜಿಲ್ಲೆಯ ದೇವದುರ್ಗದ ನರಸಣ್ಣ ಜಾಳಳ್ಳಿ ಹಾಗೂ ಆಂಜನೇಯ ರಾಂಪೂರ ಸೇರಿದಂತೆ ಹಲವು ಸಮಾನ ಮನಸ್ಕ ಗೆಳೆಯರು ಕಟ್ಟಿದ ಈ ತಂಡ, ಈಗ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಕ್ರಿಯಾಶೀಲ ತಂಡವಾಗಿ ಹೊರಹೊಮ್ಮಿದೆ. ಸಮುದಾಯದ ಸಂಘಟನೆ, ಜಾಗೃತಿ, ಅರಿವಿನ ಆಂದೋಲನ ರೂಪಿಸುವ ಹಿನ್ನೆಲೆಯಲ್ಲಿ ಆರಂಭಿಸಿದ ಈ ತಂಡದ ಸಂಘಟನೆ ಈಗ, ಅಸಹಾಯಕ ಕುಟುಂಬಗಳಿಗೆ ಆಸರೆಯಾಗುವ, ನೋವುಗಳಿಗೆ ಮಿಡಿಯುವ, ನಲಿವುಗಳ ನೆರವಿನ ನೊಗಕ್ಕೂ ಹೆಗಲು ಕೊಡುವ ಕೆಲಸಕ್ಕೂ ಮುಂದಾಗಿದೆ. ಆ ಮೂಲಕ ಸಂಘಟನೆಗೂ ಜೈ; ಸಹಾಯಕ್ಕೂ ಸೈ ಎಂಬ ಅಲಿಖಿತ ನಿಯಮವನ್ನು ಮೈಗೂಡಿಸಿಕೊಂಡಿದೆ. ಅದುವೇ ಇವತ್ತಿನ ವಿಜಯಸಿರಿ ವಿಶೇಷ, ಗಂಗಾಮತ ಸಮಾಜದ ಭರವಸೆಯ ಬೆಳಕು ʼಗಂಗಾಪುತ್ರ ಘರ್ಜನೆ ಪಡೆʼ

ಕಲಬುರ್ಗಿ ಜಿಲ್ಲೆಯ ತೊನಸಿಹಳ್ಳಿ ಸುಕ್ಷೇತ್ರ ಅಲ್ಲಮಪ್ರಭು ಸಂಸ್ಥಾನಮಠದ ಮಲ್ಲಣ್ಣಪ್ಪ ಮುತ್ಯಾ ಅವರ ಮಠದಲ್ಲಿ ಮಲ್ಲಣ್ಣಪ್ಪ ಮುತ್ಯಾ ಅವರ ಅಮೃತ ಹಸ್ತದಿಂದ ಫೆಬ್ರುವರಿ 21, 2011ರಂದು ಗಂಗಾಪುತ್ರ ಘರ್ಜನೆ ಪಡೆ ಎಂಬ ತಂಡ ಜನ್ಮತಾಳಿತು. ಅಲ್ಲಿಂದ ಆರಂಭವಾದ ಗಂಗಾಮತ ಸಮಾಜದ ಲವಲವಿಕೆಯ ಈ ಗಂಗಾಪುತ್ರ ಘರ್ಜನಾ ಪಡೆ ದಶಮಾನೋತ್ಸವ ಆಚರಿಸಿಕೊಂಡು, ಒಂದೂವರೆ ದಶಕದ ಹೊಸ್ತಿಲಿನಲ್ಲಿ ನಿಂತಿದೆ. ಈ ಸಣ್ಣ ಅವಧಿಯಲ್ಲಿ ಗಂಗಾಪುತ್ರ ಘರ್ಜನಾ ಪಡೆ ಎಂಬ ಕ್ರಿಯಾಶೀಲ ಯುವಕರ ತಂಡದ ಕೆಲಸ- ಕಾರ್ಯಗಳು ಈ ಸಮುದಾಯದಲ್ಲಿ ಚಿರಸ್ಥಾಯಿಯಾಗಿ ಅಚ್ಚಳಿಯದೇ ಉಳಿದುಕೊಂಡಿರುವುದು ಅಚ್ಚರಿಯ ಸಂಗತಿಯೇ ಸರಿ.
ಗಂಗಾಮತ ಸಮಾಜದ ಸಮುದಾಯದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಂಗಾಪುತ್ರ ಘರ್ಜನಾ ಪಡೆ ಎಂಬ ವಿಶಿಷ್ಟ ಸಂಘಟನೆ ವಿಕಾಸಸಭೆಯನ್ನು ಆರಂಭಿಸಿತು. ಆರಂಭದಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಬಳಿಗಾನೂರು ಕ್ರಾಸ್‌ನಲ್ಲಿರುವ ಕುವೆಂಪು ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಮೊದಲ ʼವಿಕಾಸಸಭೆʼ ಭರ್ಜರಿ ಯಶಸ್ಸು ಕಂಡಿತು. ಈ ವಿಕಾಸಸಭೆಯ ಯಶಸ್ಸೇ ಗಂಗಾಪುತ್ರ ಘರ್ಜನಾ ಪಡೆಯ ಹೊಸತನದ ಕಸವು ಪಡೆದುಕೊಂಡು, ಮತ್ತಷ್ಟು ಸಕ್ರಿಯವಾಗಿ ಸಮುದಾಯದ ಸಂಘಟನೆಗೆ ಮುಂದಾಯಿತು.
ಅದಾದ ಬಳಿಕ, ಗಂಗಾಮತ ಸಮಾಜದ ಕುಲಗುರು ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಎರಡನೇ ವಿಕಾಸಸಭೆ ಆಯೋಜಿಸಿತು. ಈ ಸಭೆ ಇಡೀ ಸಮುದಾಯದಲ್ಲಿಯೇ ಹೊಸತನದ ಸಂಚಲನಕ್ಕೆ ಕಾರಣೀಭೂತವಾಯಿತು ಎಂದರೆ, ಅತಿಶಯೋಕ್ತಿ ಎನಿಸಲಾರದು.
ಗಂಗಾಮತ ಸಮುದಾಯ ಆರಾಧ್ಯದೈವ, ವಿಶ್ವವೈಚಾರಿಕ ಗುರು, ಬಸವಾದಿ ಪ್ರಮಥರ ಶರಣಕ್ರಾಂತಿಗೆ ಹೊಸಭಾಷ್ಯ ಬರೆದ ಅಂಬಿಗರ ಚೌಡಯ್ಯ ಅವರ ಕರ್ಮಭೂಮಿ ಚೌಡಯ್ಯದಾನಾಪುರ ಗ್ರಾಮದ ಸರಿಹದ್ದಿನಲ್ಲಿ ಹಾದುಹೋಗಿರುವ ತುಂಗಭದ್ರಾ ನದಿ ತೀರದಲ್ಲಿರುವ ಅಂಬಿಗರ ಚೌಡಯ್ಯ ಅವರ ಐಕ್ಯಮಂಟಪವನ್ನು, ಕೂಡಲಸಂಗಮದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ನಿಜಶರಣ ಅಂಬಿಗರ ಚೌಡಯ್ಯ ಅವರ ಕರ್ಮಭೂಮಿಯನ್ನು ಪ್ರವಾಸಿತಾಣವನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸುವ ಧ್ವನಿಯನ್ನು ಮೊದಲ ಭಾರೀಗೆ ಗಂಗಾಪುತ್ರ ಘರ್ಜನೆ ಪಡೆ ಮೊಳಗಿಸಿತು. ಪ್ರಾಯಶಃ ಅದುವರೆಗೂ, ಈ ಕುರಿತಂತೆ ಯಾರೊಬ್ಬರೂ ಸಹ, ಮಂಡಿಸದ ಹಕ್ಕೋತ್ತಾಯ ಗಂಗಾಪುತ್ರ ಘರ್ಜನಾ ಪಡೆ ಮಾಡುವ ಮೂಲಕ, ಗಂಗಾಮತ ಸಮಾಜದ ಯುವಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸಲು ಕಾರಣವೂ ಆಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಅದಾದ ಬಳಿಕ, ಮಂಡ್ಯ ಜಿಲ್ಲೆಯ ಮಳವಳ್ಳಿ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹಾಗೂ ಮಂಗಳೂರ ಮಹಾನಗರದಲ್ಲಿ ಸಂಘಟನೆಯ ವಿಕಾಸಸಭೆಗಳು ನಡೆದಿವೆ. ಈ ಪೈಕಿ, ಬಳ್ಳಾರಿ ನಗರದಲ್ಲಿ ನಡೆದ ವಿಕಾಸಸಭೆ ಪ್ರಾಯಶಃ, ಸಮಾಜದ ಮುಖ್ಯವಾಹಿನಿಯಲ್ಲಿರುವ ಸಮಾಜದ ಸಂಘಟನೆಯನ್ನು ಮೀರಿ ನಡೆದಿದ್ದು, ಒಂದು ಐತಿಹಾಸಿಕ ಸಮಾರಂಭ ಎಂದೇ ವ್ಯಾಕ್ಯಾನಿಸಲಾಗುತ್ತಿದೆ. ಈ ಆರು ಸ್ಥಳಗಳಲ್ಲಿಯೂ ನಡೆದ ಗಂಗಾಪುತ್ರ ಘರ್ಜನಾ ಪಡೆಯ ಈ ವಿಕಾಸಸಭೆಗಳು ಒಂದು ಚಾರಿತ್ರಿಕ ರೂಪ ಪಡೆದುಕೊಂಡಿವೆ. ಸಮಾಜದಲ್ಲಿ ಸಂಚಲನ ಸೃಷ್ಟಿಸಿವೆ. ಜತೆಗೆ ಜಾಗೃತಿಯ ಕಿಚ್ಚುಹೊತ್ತಿಸಿರುವುದು ಅಸಾಮಾನ್ಯ ಸಂಗತಿ.
ಸಮಾಜದಲ್ಲಿ ಪರ್ಯಾಯ ಸಂಘಟನೆಯ ರೂಪದಲ್ಲಿ ಶರವೇಗದಲ್ಲಿ ದಾಪುಗಾಲು ಹಾಕುತ್ತಿರುವ ಗಂಗಾಪುತ್ರ ಘರ್ಜನಾ ಪಡೆ, ಸಂಘಟನೆ, ಜಾಗೃತಿ ಹಾಗೂ ಅರಿವಿನ ಆಂದೋಲನದ ಜತೆಯಲ್ಲಿ ಸಮಾಜದಲ್ಲಿ ಸೂಕ್ತ ಮಾರ್ಗದರ್ಶಕರಿಲ್ಲದೇ ಎಲೆಮರೆಯ ಕಾಯಿಂತೆ ಇದ್ದ ಸಮಾಜದ ಕಲಾವಿದರನ್ನೂ ಗುರುತಿಸುವ ಮೂಲಕ ಅವರಿಗೆ ಜಾಗತಿಕವಾದ ಮನ್ನಣೆ ಕಲ್ಪಿಸುವಲ್ಲಿ ಗಂಗಾಪುತ್ರ ಘರ್ಜನಾ ಪಡೆಯ ತಂಡದ ಸದಸ್ಯರ ಕಾರ್ಯ ಒಂದು ಅವಿಸ್ಮರಣೀಯ ಅಧ್ಯಾಯ ಎಂದೇ ಹೇಳಬಹುದು. ಬಳ್ಳಾರಿಯ ಕುಚಪುಡಿ ನೃತ್ಯ ಕಲಾವಿದ ಬಸವರಾಜ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರ ಗ್ರಾಮದ ಹಿಂದೂಸ್ತಾನಿ ಸಂಗೀತ ಕಲಾವಿದೆ ಕುಮಾರಿ ಕುಸುಮಾ ಅಯ್ಯಣ್ಣ ಬೋಯಿ, ರಾಯಚೂರು ಜಿಲ್ಲೆಯ ಲಿಂಗಸ್ಗೂರು ನಗರದ ವಚನ ಗಾಯನದ ಕಲಾವಿದ ಹನುಮಂತಕುಮಾರ್ ಬೋರಗಿ ಸೇರಿದಂತೆ ವಿವಿಧ ಕಲಾವಿದರೂ, ಸೂಕ್ತ ವೇದಿಕೆಗಳ ಅವಕಾಶ ದೊರೆಯದೇ, ಅವಕಾಶ ವಂಚಿತಗೊಂಡಿದ್ದ ಕಲಾವಿದರನ್ನು ಗಂಗಾಪುತ್ರ ಘರ್ಜನಾ ಪಡೆಯ ತಂಡದ ಸದಸ್ಯರು ಪರಿಚಯಿಸುವ ಮೂಲಕ, ಈ ಕಲಾವಿದರ ಕಲಾಪ್ರದರ್ಶನಗಳು ನಾಡಿನ ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವಗಳಾದ ಮೈಸೂರು ದಸರಾ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿವರಾತ್ರಿ ಜಾಗರಣೆಯಂತ ಪ್ರಸಿದ್ಧ ಉತ್ಸವಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಸಮಾಜದ ಈ ಕಲಾವಿದರು, ತಮ್ಮಲ್ಲಿ ಅಡಗಿದ್ದ ಕಲಾಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ನಾಡಿನಾದ್ಯಂತ ಪಸರಿಸಲು ಅವಕಾಶ ದೊರಕಿಸಿಕೊಡುವಲ್ಲಿ ಈ ಗಂಗಾಪುತ್ರ ಘರ್ಜನಾ ಪಡೆಯ ತಂಡದ ಸದಸ್ಯರ ಶ್ರಮ ಶ್ಲಾಘನೀಯ ಕಾಯಕ ಎಂದು ಗಂಗಾಪುತ್ರ ಘರ್ಜನಾ ಪಡೆಯ ತಂಡದ ಸದಸ್ಯರ ನೆರವನ್ನು ಸ್ಮರಿಸುತ್ತಾರೆ ಕುಚಪುಡಿ ನೃತ್ಯ ಕಲಾವಿದ ಬಸವರಾಜ…
ಗಂಗಾಮತ ಸಮಾಜದ ಬಡ ಹಾಗೂ ನಿರ್ಗತಿಕ ಕುಟುಂಬಗಳ ಪಾಲಿಗೂ ಈ ಗಂಗಾಪುತ್ರ ಘರ್ಜನಾ ಪಡೆಯ ತಂಡದ ಕಾರ್ಯ ಒಂದು ಅವಿಸ್ಮರಣೀಯ ಸಂಗತಿ ಎಂದೇ ಹೇಳಬಹುದು. ದುಬಾರಿ ಬೆಲೆಯ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲಾಗದೇ, ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿದ್ದ ತಾಳಿಕೋಟೆ ಪಟ್ಟಣದ ಪರಮಾನಂದ ಕಲ್ಲೂರು ಎಂಬುವವರು, ಯಕೃತ್ ಅಂಗಾಂಗ ಕಾಯಿಲೆಯಿಂದ ನರಳುತ್ತಿದ್ದ ಮಗುವನ್ನು ಮಡಿಲಲ್ಲಿಟ್ಟುಕೊಂಡು, ರೋಧಿಸುತ್ತಿದ್ದ ನೋವಿನ ನರಳಾಟ, ಗಂಗಾಪುತ್ರ ಘರ್ಜನಾ ಪಡೆಯ ತಂಡದ ಸದಸ್ಯರ ಕಿವಿಗೆ ಅಪ್ಪಳಿಸುತ್ತಿದ್ದಂತಿಯೇ, ತತ್‌ಕ್ಷಣವೇ ಕಾರ್ಯಪ್ರವೃತ್ತರಾದ ಸದಸ್ಯರು, ಪರಸ್ಪರ ಚರ್ಚಿಸಿ, ಅಂತಿಮ ತೀರ್ಮಾನಕ್ಕೆ ಬರುತ್ತಾರೆ. ನಮ್ಮದೇ ಸಮುದಾಯದ ಮಗು, ಇಂಥಹ ಕಾಯಿಲೆಗೆ ಸಿಲುಕಿ, ಬಳಲುತ್ತಿದೆ. ಆ ಕಾಯಿಲೆಗೆ ಸೂಕ್ತ ಚಿಕಿತ್ಸಾ ವೆಚ್ಚ ಸರಿದೂಗಿಸುವಷ್ಟು ಆ ಕುಟುಂಬ ಶಕ್ತವಾಗಿಲ್ಲ. ದಾನಿಗಳು ನೆರವಾಗುವಂತೆ ಒಂದು ಸಂದೇಶವನ್ನು ತಮ್ಮ ಗುಂಪಿನಲ್ಲಿ ಹರಿಬಿಡುತ್ತಾರೆ.
ತಂಡದ ಗುಂಪಿನಲ್ಲಿ ಯಾವಾಗ ಇಂಥಹ ಮನಕಲಕುವ ಸಂದೇಶ ಹರಿದಾಡತೊಡಗಿತೋ, ನಾ ಮುಂದು, ತಾ ಮುಂದು ಎಂಬಂತೆ ದಾನಿಗಳು ನೆರವಿನ ಹಸ್ತ ಚಾಚಿದರು. ಆಸ್ಪತ್ರೆಯ ವೆಚ್ಚದ ಪೈಕಿ, ಆರು ಲಕ್ಷ ಮೊತ್ತವನ್ನು ಕ್ರೋಡೀಕರಿಸಿ, ಪರಮಾನಂದ ಕಲ್ಲೂರು ಅವರಿಗೆ ಹಸ್ತಾಂತರಿಸಿದರು. ಜತೆಗೆ, ಇದೇ ತಂಡದ ಸದಸ್ಯರು ಅಂದಿನ ಬಸವಕಲ್ಯಾಣದ ಶಾಸಕ ಬಿ. ನಾರಾಯಣರಾವ್ ಅವರ ಮೂಲಕ ಸರ್ಕಾರದ ಮೇಲೂ ಒತ್ತಡ ಹಾಕಿ, ಹತ್ತು ಲಕ್ಷ ಮೊತ್ತದ ಹಣಕಾಸಿನ ನೆರವು ಸರ್ಕಾರದಿಂದ ದೊರಕಲು ಶ್ರಮಿಸಿದ ಗಂಗಾಪುತ್ರ ಘರ್ಜನಾ ಪಡೆಯ ತಂಡದ ಸದಸ್ಯರ ಕಾರ್ಯ ಸಮುದಾಯ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.
ಮಂಡ್ಯ ಜಿಲ್ಲೆಯ ಹೊಳಲು ಗ್ರಾಮದ ಬಡ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಹನಾ ಎಂಬುವವರು, ಎಂಜಿನಿಯರಿಂಗ್ ಪದವಿಯ ಐದನೇ ಸೆಮಿಸ್ಟರ್ ಪ್ರವೇಶದ ಕಾಲೇಜು ಶುಲ್ಕ ಭರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದ ಪರಿಸ್ಥಿತಿ ಗಂಗಾಪುತ್ರ ಘರ್ಜನಾ ಪಡೆಯ ತಂಡದ ಸದಸ್ಯರಿಗೂ ತಲುಪಿದೆ. ಇಲ್ಲಿಯೂ ಸಹ ಕೂಡಲೇ ಕಾರ್ಯೋನ್ಮುಖರಾದ ತಂಡದ ಸದಸ್ಯರು, ದಾನಿಗಳ ಮೊರೆಹೋಗಿದ್ದಾರೆ. ಕೇವಲ ಮೂರ್ನಾಲ್ಕು ದಿನಗಳಲ್ಲಿಯೇ ಒಂದೂವರೆ ಲಕ್ಷದಷ್ಟು ಮೊತ್ತ ಕ್ರೋಢಿಕೃತವಾಗುವ ಮೂಲಕ ಸಹನಾಳ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಗಂಗಾಪುತ್ರ ಘರ್ಜನೆ ಪಡೆಯ ತಂಡ ದಾನಿಗಳ ಮೊರೆ ಹೋಗದಿದ್ದರೇ, ಸಹನಾ ಎಂಬ ವಿದ್ಯಾರ್ಥಿನಿಯ ಎಂಜಿನಿಯರಿಂಗ್ ವಿದ್ಯಾಭ್ಯಾಸದ ಕನಸು ಕಮರಿಹೋಗುವ ಸಾಧ್ಯತೆಯೇ ಹೆಚ್ಚಾಗಿತ್ತು. ಘರ್ಜನಾ ಪಡೆಯ ತಂಡದ ಸದಸ್ಯರ ಸೇವಾಕೈಂಕರ್ಯ ಸಹನಾಳ ಬದುಕಿನಲ್ಲಿ ಹೊಸಬೆಳಕು ಮೂಡಿಸಿದೆ ಎನ್ನುತ್ತಾರೆ ತಂಡದ ಸದಸ್ಯ ವಿಜಯಪುರದ ಸಿದ್ದರಾಮ ಆಸ್ಕಿ, ಸುರಪುರದ ಅರುಣ್ ಹಾಗೂ ಹಟ್ಟಿಯ ಶೋಭಾ ಜಹಾಗೀರದಾರ್.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ನವಲಿ ಗ್ರಾಮದಲ್ಲಿ 2021ರಲ್ಲಿ ಸೋಮಣ್ಣ ಬಾರಿಕರ ಎಂಬುವವರ ಮನೆ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಸಂಪೂರ್ಣ ಸುಟ್ಟು ಕಮರಿರುತ್ತದೆ. ಕೇವಲ ಮನೆಯಷ್ಟೇ ಅಲ್ಲ; ಸೋಮಣ್ಣ ಕುಟುಂಬ ಅಕ್ಷರಶಃ ಬೀದಿಗೆ ಬೀಳುತ್ತದೆ. ಈ ಕುರಿತು, ಪ್ರಕಾಶ್ ಮಣೆಗಾರ್ ಎಂಬುವವರು, ತಂಡಕ್ಕೆ ಮಾಹಿತಿ ನೀಡುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದ ತಂಡ, ವಿಜಯನಗರ ಜಿಲ್ಲೆಯ ಗಂಗಾಮತ ಸಮಾಜದ ಜಿಲ್ಲಾಘಟಕದ ಅಧ್ಯಕ್ಷರಾದ ಅಂಬಾಡಿ ನಾಗರಾಜ್ ಅವರಿಗೆ ಮನವಿ ಸಲ್ಲಿಸುವ ಮೂಲಕ, ಸೋಮಣ್ಣ ಬಾರಿಕರ ಅವರಿಗೆ ಅಗತ್ಯ ದೈನಂದಿನ ಬಳಕೆಯ ದವಸ-ಧಾನ್ಯ, ಸಾಮಾಗ್ರಿ ಹಾಗೂ ಬಟ್ಟೆ- ಬರಿಗಳನ್ನು ಕೊಳ್ಳಲು ನೆರವಾಗುತ್ತಾರೆ. ಇದರ ಹಿಂದೆಯೂ ಗಂಗಾಪುತ್ರ ಘರ್ಜನೆ ಪಡೆಯ ಸದಸ್ಯರ ಶ್ರಮವನ್ನು ಸ್ಮರಿಸಲೇಬೇಕಾಗಿದೆ.
ಯಾವುದೇ ಫಲಾಫೇಕ್ಷ ನಿರೀಕ್ಷಿಸದೇ, ಪ್ರಚಾರದ ಉಸಾಬರಿಗೂ ಹಪಿಹಪಿಸದೇ ತಾವಾಯಿತು. ತಮ್ಮ ಸಮಾಜದ ಸಂಘಟನೆ, ಸಹಾಯ, ನೆರವುಗಳಂತ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಗಂಗಾಪುತ್ರ ಘರ್ಜನೆ ಪಡೆಯ ತಂಡದ ಸದಸ್ಯರ ಕಾರ್ಯಗಳು ನಿಜಕ್ಕೂ ಅವಿಸ್ಮರಣೀಯ ಸಂಗತಿಗಳೇ ಸರಿ. ಗಂಗಾಪುತ್ರ ಘರ್ಜನೆ ಪಡೆಯ ತಂಡದ ಸದಸ್ಯರಿಗೊಂದು ಶಹಬ್ಬಾಸ್ ಗಿರಿ ಹೇಳುವ ಮೂಲಕ ಅವರ ಕಾರ್ಯಕ್ಕೆ ಸ್ಫೂರ್ತಿ ತುಂಬೋಣ, ಇನ್ನಷ್ಟು ಇಂಥಹ ಸೇವಾಮನೋಭಾವದ ರಚನಾತ್ಮಕ ಕಾರ್ಯಗಳು ಜೀವಸೆಲೆಯಂತೆ ತುಂಬಿಕೊಂಡಿರಲಿ ಎಂದು ಅಕ್ಕರೆ ತುಂಬಿದ ಹಾರೈಕೆ ಈ ಗಂಗಾಪುತ್ರ ಘರ್ಜನೆ ಪಡೆಯ ಮೇಲಿರಲಿ ಎಂಬುದು ನಮ್ಮ ಆಶಯ.

