ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಮಾನಸಿಕ ಮತ್ತು ದೈಹಿಕವಾಗಿ ಸಮತೋಲನವನ್ನ ಕಾಪಾಡಿಕೊಳ್ಳಲು ಯೋಗ ಸಂಜೀವಿನಿಯಾಗಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಎಚ್. ಶಿವಾನಂದ ಅಭಿಪ್ರಾಯಪಟ್ಟರು.
ಭಾನುವಾರ ವಿಜಯನಗರ ಜಿಲ್ಲೆ ಹರಪನಹಳ್ಳಿ ನಗರದ ತರಳಬಾಳು ವಿದ್ಯಾಸಂಸ್ಥೆಯ ಎಚ್ಪಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಧುನೀಕತೆಯ ಭರಾಟೆಯಲ್ಲಿ ಮನುಷ್ಯ ಕ್ಷಣ ಕ್ಷಣಕ್ಕೂ ಒತ್ತಡದ ಜೀವನಕ್ಕೆ ಸಿಲುಕುತ್ತಿದ್ದಾನೆ. ಹೀಗಾಗಿಯೇ, ಆರೋಗ್ಯದಲ್ಲಿ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದಾನೆ. ಅದರ ಪರಿಣಾಮವಾಗಿ, ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಹೀಗಾಗಿ, ಇದರಿಂದ ವಿಮುಕ್ತಿಯನ್ನು ಪಡೆದುಕೊಳ್ಳಬೇಕಾದರೆ, ಕನಿಷ್ಠ ಪಕ್ಷ ನಿತ್ಯವೂ ಅರ್ಧ ಗಂಟೆಯ ಸಮಯ ಯೋಗಭ್ಯಾಸವನ್ನು ರೂಢಿಸಿಕೊಂಡು, ಮಾನಸಿಕ ಮತ್ತು ದೈಹಿಕ ಸಮತೋಲವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜು ಹಾಗೂ ಮನೆಕೆಲಸದ ನಡುವೆ ಒಂದಿಷ್ಟು ಬಿಡುವು ಮಾಡಿಕೊಳ್ಳುವ ಮೂಲಕ ಯೋಗ, ಪ್ರಾಣಾಯಾಮ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಈ ಕ್ರಿಯೆಯೂ ನಮ್ಮಲ್ಲಿ ಏಕಾಗ್ರತೆ ವೃದ್ಧಿಸುವ ಜತೆಗೆ, ಆತ್ಮಸ್ಥೆöÊರ್ಯ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮರಂಭದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶಿವಗಂಗಮ್ಮ ಪಿ ಅವರು ಮಾತನಾಡಿ, ಯೋಗಾಭ್ಯಾಸ ಎಂಬುದು ನಮ್ಮ ದೈನಂದಿನ ಚಟುವಟಿಕೆಗಳ ಒಂದು ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಮನುಷ್ಯ ಮಾನಸಿಕ ಮತ್ತು ದೈಹಿಕ ಸಮತೋಲನ ಸಾಧಿಸುವ ಜತೆಗೆ, ಪಂಚೇಂದ್ರಿಯಗಳನ್ನು ಸಹ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಹೃದಯ ಸಂಬಂಧಿ ರೋಗಗಳನ್ನು ಸಹ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಬಸವರಾಜಪ್ಪ ಸಿ.ಎಸ್. ರವೀಂದ್ರ, ಕೆ.ಬಿ. ವೀರೇಶ್, ಎಂ.ಎಸ್., ಮಹಾಲಿಂಗಪ್ಪ ಬಿ. ಗೌಡರ, ಶ್ವೇತಾ ಎಂ.ಬಿ., ಮಂಜುನಾಥ ಮಾಳ್ಗಿ, ಗುರುಬಸವರಾಜ್, ಎಚ್. ಅವಿನಾಶ್, ಸೌಭಾಗ್ಯಾ, ಸುಮಾ ಮತ್ತು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

