Vijayasiri News
ರಾಜ್ಯವಿಜಯನಗರಹರಪನಹಳ್ಳಿ ಸುದ್ದಿ

ಮಾನವೀಯಮೌಲ್ಯಗಳ ಮಾರ್ಗದರ್ಶಿ; ಪರಿಸರ ಚಾಕರಿಕೆ ಪ್ರವೃತ್ತಿಯ ಉಪನ್ಯಾಸಕ, ಹರಪನಹಳ್ಳಿ: ಉಪನ್ಯಾಸಕ ಶಿವಾನಂದ ಮುಡಿಗೇರಿದ ‘ರಾಜೀವ್‌ಗಾಂಧಿ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’

ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಮಕ್ಕಳಿಗೆ ಕೇವಲ ಪಾಠ- ಪ್ರವಚನಗಳ ಭೋದನೆ ಅಷ್ಟೇ ಉಪನ್ಯಾಸಕನ ಕರ್ತವ್ಯ ಎಂದು ಪರಿಭಾವಿಸದೆ, ಅವರಿಗೆ ಗುಣಾತ್ಮಕ ಶಿಕ್ಷಣ ಧಾರೆ ಎರೆಯುವ ಜತೆಗೆ, ಮಾನವೀಯಮೌಲ್ಯ, ಪರಿಸರ ಸಂರಕ್ಷಣೆ ಹಾಗೂ ಜೀವನದ ಮೌಲ್ಯಗಳನ್ನು ನಿರಂತರವಾಗಿ ಭೋದಿಸುವ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಆದರ್ಶ ಗುರುವಾಗಿರುವ ಉಪನ್ಯಾಸಕ ಎಚ್. ಶಿವಾನಂದ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕ ಕೊಡಮಾಡುವ ಮಾಜಿ ಪ್ರಧಾನಮಂತ್ರಿ ‘ರಾಜೀವ್‌ಗಾಂಧಿ ರಾಜ್ಯಮಟ್ಟದ ಶ್ರೇಷ್ಠಶಿಕ್ಷಕ ಪ್ರಶಸ್ತಿ’ಯನ್ನು ಈ ಬಾರಿ ಮುಡಿಗೇರಿಸಿಕೊಂಡಿದ್ದಾರೆ.


ವಿಜಯನಗರ ಜಿಲ್ಲೆಯ ಹರಪನಹಳ್ಳಿ ನಗರದ ಪ್ರತಿಷ್ಠಿತ ಎಚ್‌ಪಿಎಸ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಎಚ್. ಶಿವಾನಂದ ಅವರು, ತಾಲ್ಲೂಕಿನ ಅರಸನಾಳ ಗ್ರಾಮದವರು. ದಿವಂಗತ ಪಾರ್ವತಮ್ಮ ಮತ್ತು ಪುಟ್ಟಪ್ಪ ದಂಪತಿಯ ಪುತ್ರರಲ್ಲಿ ಕೊನೆಯರಾದ ಶಿವಾನಂದ ಅವರು, ಪಿಯುಸಿ ಹಾಗೂ ಪದವಿ ಕೋರ್ಸಗಳನ್ನು ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪೂರ್ಣಗೊಳಿಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿಯೇ ಎಂಎಸ್ಸಿ (ಭೂಗೋಳಶಾಸ್ತ್ರ) ಅಧ್ಯಯನ ಮಾಡಿದ್ದಾರೆ. 2007ರಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಧೀನದ ಹರಪನಹಳ್ಳಿ ನಗರದ ಹಿರೆಮೇಗಳಗೇರಿ ಪಾಟೀಲ್ ಸಿದ್ದನಗೌಡ ಪದವಿಪೂರ್ವ ಮಹಾವಿದ್ಯಾಲಯ(ಎಚ್‌ಪಿಎಸ್ ಪದವಿಪೂರ್ವ ಕಾಲೇಜು) ದಲ್ಲಿ ಭೂಗೋಳಶಾಸ್ತ್ರ ಉಪನ್ಯಾಸಕರಾಗಿ ವೃತ್ತಿಬದುಕು ಆರಂಭಿಸಿದ ಶಿವಾನಂದ ಅವರ ವೃತ್ತಿಗೆ ಈಗ, ಒಂದೂ ಮುಕ್ಕಾಲು ದಶಕದ ಹರೆಯ.
ಈ ಒಂದೂಮುಕ್ಕಾಲು ದಶಕದ ಅವರ ವೃತ್ತಿಬದುಕಿನ ಹಾದಿಯಲ್ಲಿ ಶೈಕ್ಷಣಿಕವಾಗಿ ಪಾಠ- ಪ್ರವಚನ ಭೋದಿಸುವ ಜತೆಗೆ, ಮಾನವೀಯಮೌಲ್ಯ, ಪರಿಸರ ಸಂರಕ್ಷಣೆ ಮತ್ತು ನೈಜಬದುಕಿನ ಮಾರ್ಗದರ್ಶನಕ್ಕೆ ಅಗತ್ಯವಾದ ಪಠ್ಯೇತರ ಭೋದನೆಗಳನ್ನು ಸಮರ್ಥವಾಗಿ ಭೋದಿಸುವ ಮಹಾಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಪಠ್ಯೇತರ ಚಟುವಟಿಕೆಯ ಪ್ರಾಯೋಗಿಕ ಭೋದನೆಗೆ ಅವರಿಗೆ ಸಹಕಾರಿಯಾಗಿದ್ದು, ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್).
ಹರಪನಹಳ್ಳಿಯ ಕಾಲೇಜಿನಲ್ಲಿ 2007ರಿಂದ 2014ರ ವರೆಗೂ ಸೇವೆ ಸಲ್ಲಿಸಿ, ಬಳಿಕ, 2014ರಿಂದ 2025ರವರೆಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ವರ್ಷದ ಶೈಕ್ಷಣಿಕ ಸಾಲಿನಿಂದ ಪುನಃ ತಮ್ಮ ವೃತ್ತಿಬದುಕು ಆರಂಭಿಸಿದ ಎಚ್‌ಪಿಎಸ್ ಕಾಲೇಜಿಗೆ ವರ್ಗಾವಣೆಗೊಂಡಿದ್ದಾರೆ.
ಈ ಹದಿನೆಂಟು ವರ್ಷದ ಅವಧಿಯಲ್ಲಿಯೂ ಅವರು, ಈ ಎರಡು ಕಾಲೇಜುಗಳಲ್ಲಿಯೂ ಅವರು, ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ, ಹಾವೇರಿ ಜಿಲ್ಲಾಘಟಕದ ನೋಡೆಲ್ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುವ ಮೂಲಕ ಯೋಜನೆಗೆ ಹೊಸರೂಪ ನೀಡಿದ ಶ್ರೇಯಸ್ಸು ಶಿವಾನಂದ ಅವರಿಗೆ ಸಲ್ಲುತ್ತದೆ ಎಂಬುದರಲ್ಲಿ ಅತಿಶಯೋಕ್ತಿ ಆಗಲಾದರು. ಯೋಜನೆಯಲ್ಲಿ ಸಲ್ಲಿಸಿದ ಸಮರ್ಪಣ ಕೊಡುಗೆಯನ್ನು ಪರಿಗಣಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ, 2016ರಲ್ಲಿ ರಾಜ್ಯ ನಿರ್ದೇಶನಾಲಯ ವಾರ್ಷಿಕ ಪ್ರಶಸ್ತಿ, ರಾಜ್ಯ ಅತ್ಯುನ್ನತ ಎನ್‌ಎಸ್‌ಎಸ್ ಯೋಜನಾಧಿಕಾರಿ ವಾರ್ಷಿಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಜತೆಗೆ, ಸೇವೆ ಸಲ್ಲಿಸುತ್ತಿದ್ದ ಸುಣಕಲ್ಲುಬಿದರಿ ಗ್ರಾಮದ ಎಸ್‌ಎಸ್‌ಎಸ್ ಕಾಲೇಜಿಗೆ ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಪ್ರಶಸ್ತಿ ದೊರಕಲು ಕಾರಣೀಭೂತರಾಗಿದ್ದಾರೆ.
ಇಡೀ ವರ್ಷ ಶೈಕ್ಷಣಿಕ ಅವಧಿಯಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಪಾಠ ಪ್ರವಚನ ಭೋದಿಸುವ ಉಪನ್ಯಾಸಕ ಶಿವಾನಂದ ಅವರು, ಪಠ್ಯೇತರ ಚಟುವಟಿಕೆಯ ಭಾಗವಾಗಿರುವ ಎನ್‌ಎಸ್‌ಎಸ್ ಯೋಜನೆಯ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ಬದುಕಿನ ಭಾಗವಾಗಿರುವ ಮಾನವೀಯಮೌಲ್ಯಗಳ ಭೋದನೆಯನ್ನು ಅತ್ಯಂತ ಯಶಸ್ವಿಯಾಗಿ, ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಯೋಜನೆಯ ವಾರ್ಷಿಕ ಶಿಬಿರಗಳಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಉಪಕಸಬುಗಳ ಆಧಾರಿತ ವಿಷಯಗಳ ಮೇಲೆ ಹಮ್ಮಿಕೊಳ್ಳುತ್ತಿದ್ದ ಪ್ರತಿವಾರ್ಷಿಕ ಶಿಬಿರಗಳಿಗೂ, ನುರಿತ ತಜ್ಞರನ್ನು ಹಾಗೂ ಅನುಭವಿ ಉಪನ್ಯಾಸಕರನ್ನು ಆಮಂತ್ರಿಸುವ ಮೂಲಕ ಶಿಬಿರಾರ್ಥಿಗಳಿಗೆ ಉಪನ್ಯಾಸ ಏರ್ಪಡಿಸಿ, ಮನಮುಟ್ಟುವ ರೀತಿಯಲ್ಲಿ ವಿಷಯ ಭೋದನೆ ವ್ಯವಸ್ಥೆ ರೂಪಿಸುವಲ್ಲಿ ಶಿವಾನಂದ ಅವರ ಕಾರ್ಯ ನಿಜಕ್ಕೂ ಸ್ಮರಣೀಯ. ಕೃಷಿ, ಹೈನುಗಾರಿಕೆ, ಜಾನುವಾರು ಆರೋಗ್ಯ ತಪಾಸಣೆ ಸೇರಿದಂತೆ ಕೃಷಿಗೆ ಪೂರಕವಾದ ವಿಷಯ ಉಪನ್ಯಾಸದ ಜತೆಗೆ, ರಕ್ತದಾನ, ನೇತ್ರಚಿಕಿತ್ರಾ ಶಿಬಿರ, ಏಡ್ಸ್ ಜಾಗೃತಿ ಸೇರಿದಂತೆ ವಿವಿಧ ಆರೋಗ್ಯ ಸಂಬಂಧಿತ ಉಪನ್ಯಾಸ ಹಾಗೂ ಪ್ರಾತ್ಯಕ್ಷಿತ ಶಿಬಿರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಆಂದೋಲನ ಮತ್ತು ವೈಯಕ್ತಿಕ ಶೌಚಾಲಯಗಳ ಅಗತ್ಯತೆ ಸೇರಿದಂತೆ ವಿವಿಧ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಎನ್‌ಎಸ್‌ಎಸ್ ಘಟಕವನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ ಶ್ರೇಯಸ್ಸಿಗೆ ಉಪನ್ಯಾಸಕ ಶಿವಾನಂದ ಅವರು ಪಾತ್ರರಾಗಿದ್ದಾರೆ.
ಜಾಗತಿಕ ತಾಪಮಾನ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಸದಾ ಒಂದಿಲ್ಲೊಂದು, ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಗಿಡ-ಮರಗಳ ಪೋಷಣೆ ಮಹತ್ವಗಳನ್ನು ಮಕ್ಕಳಲ್ಲಿ ಜಾಗೃತಿಮೂಡಿಸುವ ಮಹಾಕಾಯಕದಲ್ಲಿಯೂ ಶಿವಾನಂದ ಸದಾ ಮುಂಚೂಣಿಯಲ್ಲಿದ್ದಾರೆ. ಎನ್‌ಎಸ್‌ಎಸ್‌ನ ಪ್ರತಿ ವಾರ್ಷಿಕ ಶಿಬಿರಗಳಲ್ಲಿಯೂ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಭೋದಿಸುವ ಜತೆಗೆ, ಪ್ರಾಯೋಗಿಕವಾಗಿಯೂ ಶಿಬಿರದ ಶಾಲಾ ಮೈದಾನ, ಕಾಲೇಜುಗಳಲ್ಲಿ ಸಸಿನಡೆವ ಮೂಲಕ ಪರಿಸರದ ಮಹತ್ವ ಸಾರುತ್ತಿದ್ದಾರೆ. ಅವರ ಈ ಪರಿಸರ ಕಾಳಜಿಯ ಭಾಗವಾಗಿ ಹರಪನಹಳ್ಳಿ ನಗರದ ಎಚ್‌ಪಿಎಸ್ ಕಾಲೇಜಿನ ಆವರಣದಲ್ಲಿ ನೂರಾರು ಗಿಡಗಳು ಹೆಮ್ಮರಾಗಿ ಬೆಳೆದುನಿಂತಿವೆ. ಜತೆಗೆ, ರಾಣೆಬೆನ್ನೂರು ತಾಲ್ಲೂಕಿನ ಕುಸಗೂರು ಗ್ರಾಮದ ಶಾಲಾ ಆವರಣ ಹಸಿರಿನ ತೋರಣದ ಉಡುಗೆ ತೊಟ್ಟಿರುವುದು ಸಾಕ್ಷಿಯಾಗಿ ನಿಂತಿವೆ.
ಇದಲ್ಲಕ್ಕಿಂತ ಮಿಗಿಲಾಗಿ 2018ರಲ್ಲಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ವಿವಿಧ ಭಾಗಗಳಲ್ಲಿ ಸಂಭವಿಸಿದ ನೆರೆಹಾವಳಿ ಪರಿಣಾಮ ಬದುಕು ಕಳೆದುಕೊಂಡು, ಬೀದಿಗೆ ನಿಂತಿದ್ದ ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸಿದ ಉಪನ್ಯಾಸಕ ಶಿವಾನಂದ ಅವರ ನೇತೃತ್ವದ ಎನ್‌ಎಸ್‌ಎಸ್ ಯೋಜನಾ ತಂಡ, ದಾನಿಗಳಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಮೂಲಕ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚಿಕ್ಕೂರ ಹಾಗೂ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಪಡಕೋಟಿ ಗಲ್ಲಿಯಲ್ಲಿನ ಸಂತ್ರಸ್ತ ಕುಟುಂಬಗಳಿಗೆ ದೈನಂದಿನ ಅಗತ್ಯ ವಸ್ತುಗಳಾದ ಹಾಸಿಗೆ, ಬಟ್ಟೆ, ಆಹಾರಧಾನ್ಯ, ದಿನಸಿ ವಸ್ತುಗಳು, ಔಷಧಿ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಮಾನವೀಯತೆ ಮೆರೆದು, ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದಾರೆ.
ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಕೊರತೆ ಪರಿಣಾಮ, ಗುಣಾತ್ಮಕ ಶಿಕ್ಷಣದಿಂದ ಹಾಗೂ ಕಲಿಕೆಯಿಂದ ಹಿಂದುಳಿಯಬಾರದು ಎಂಬ ಆಶಯದ ಹಿನ್ನೆಲೆಯಲ್ಲಿ ತಮ್ಮ ತಂದೆ-ತಾಯಿ, ಪುಟ್ಟಪ್ಪ ಮತ್ತು ಪಾರ್ವತಮ್ಮ ಸ್ಮರಣಾರ್ಥ ರಾಣೆಬೆನ್ನೂರು ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ತಾವು ಸೇವೆ ಸಲ್ಲಿಸುತ್ತಿದ್ದ ಕಾಲೇಜಿನ ಗ್ರಂಥಾಲಯಕ್ಕೆ ಪ್ರತಿ ವರ್ಷ ಹತ್ತಾರು ಸಾವಿರ ರೂಪಾಯಿಗಳ ಪಠ್ಯಪುಸ್ತಕ ಹಾಗೂ ಪ್ರಾಯೋಗಿಕ ಪರಿಕರಗಳನ್ನು ನೀಡುವ ಮೂಲಕ ಸಾರ್ಥಕ ಬದುಕನ್ನು ಸಲ್ಲಿಸುತ್ತಿದ್ದಾರೆ.
ಕ್ರಿಯಾಶೀಲ ಹಾಗೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉಪನ್ಯಾಸಕ ಶಿವಾನಂದ ಅವರ ಸಾರ್ಥಕ ಸೇವೆಯನ್ನು ಪರಿಗಣಿಸಿ, ಪದವಿಪೂರ್ವ ಶಿಕ್ಷಣ ಇಲಾಖೆ, ಹಾವೇರಿ ಜಿಲ್ಲಾಡಳಿತ ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ, ಗೌರವಿಸಿವೆ. ಶಿವಾನಂದ ಅವರ ವೃತ್ತಿಬದುಕು ಇನ್ನಷ್ಟು ಸಮಾಜಮುಖಿಯಾಗಿ ಬೆಳೆಯಲಿ ಎಂಬದು ಎಲ್ಲರ ಆಶಯ.

Related posts

ಹರಪನಹಳ್ಳಿ: ವರ್ತಕರ ಖಾಸಗೀ ಗೋದಾಮುಗಳಲ್ಲಿ ಅಕ್ರಮ ಯೂರಿಯಾ ರಸಗೊಬ್ಬರ ದಾಸ್ತಾನು ಆರೋಪ: ರೈತರ ದಿಢೀರ್ ಪ್ರತಿಭಟನೆ

Vijayasiri News

ಅರಸೀಕೆರೆ ಗ್ರಾ.ಪಂ. ಅಧ್ಯಕ್ಷರ ಚುನಾವಣೆ: ಪಿ. ಕೆಂಚಮ್ಮ ಅವಿರೋಧ ಆಯ್ಕೆ

admin

ಹೂವಿನಹಡಗಲಿ ಮೂಲದ ಎಎಸ್‌ಐ ಹೃದಯಾಘಾತದಿಂದ ಸಾವು

Vijayasiri News

ಭಾವೈಕ್ಯತ ತಪೋಭೂಮಿ ಚೌಕಿಮಠದಲ್ಲಿ ಮಹಾ ಕಾರ್ತೀಕೋತ್ಸವ ಹಾಗೂ ದೀಪೋತ್ಸವ

Vijayasiri News

ಪಂಚಾಯ್ತಿ ಆಡಳಿತದ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಕಲುಷಿತ ನೀರು ಪೂರೈಕೆ; ಸಾಂಕ್ರಾಮಿಕ ರೋಗದ ಆತಂಕದಲ್ಲಿ ಗ್ರಾಮಸ್ಥರು…!

Vijayasiri News

₹. 50ಲಕ್ಷ ವೆಚ್ಚದ ಮೊತ್ತದಲ್ಲಿ ನಿರ್ಮಾಣವಾಗಿರುವ ಆಕರ್ಷಕ ಬೆಳ್ಳಿಪಲ್ಲಕ್ಕಿ, ಹರಪನಹಳ್ಳಿ: ಅರಸೀಕೆರೆ ಕೋಲಶಾಂತೇಶ್ವರಸ್ವಾಮಿ ಬೆಳ್ಳಿಪಲ್ಲಕ್ಕಿ ಪುರ ಪ್ರವೇಶ; ಭರ್ಜರಿ ಮೆರವಣಿಗೆ

Vijayasiri News
error: Content is protected !!