Vijayasiri News
ದಾವಣಗೆರೆರಾಜ್ಯ

ಮೂಗ ಮತ್ತು ಕಿವುಡ ಸ್ನೇಹಿತರ ಮಾದರಿ ಗಣೇಶ ಪ್ರತಿಷ್ಠಾಪನೆ, ವಿಶೇಷಚೇತನರ ವೈಭವದ ಉತ್ಸವಕ್ಕೆ ಈಗ ದಶಮಾನದ ಸಂಭ್ರಮ

ಬಿ. ಚನ್ನವೀರಯ್ಯ

ವಿಜಯಸಿರಿನ್ಯೂಸ್.ಕಾಂ/ ದಾವಣಗೆರೆ
ಅದೊಂದು ಸಮಾನಮನಸ್ಕರ ಗೆಳೆಯರ ಗುಂಪು. ಆ ಗುಂಪಿನಲ್ಲಿ ಭಾಗಿಯಾಗಿರುವ ಸದಸ್ಯರು ಕೇವಲ ಒಂದು ಸೀಮಿತಿ ಪ್ರಾಂತ್ಯ ಅಥವಾ ಪ್ರದೇಶದಲ್ಲಿ ವಾಸಿಸುವವರಂತೂ ಅಲ್ಲವೇ ಅಲ್ಲ. ಕೇವಲ ಒಂದು ಜಾತಿ, ಕುಲ, ಗೋತ್ರಕ್ಕೆ ಇಲ್ಲವೇ ಒಂದು ಧರ್ಮಕ್ಕೆ ಸೇರಿರುವವರು ಅಲ್ಲಿಲ್ಲ. ಅದೆಲ್ಲಕ್ಕಿಂತ ಅವರಾರಿಗೂ ಮಾತನಾಡಲು ಬರುವುದಿಲ್ಲ. ಇನ್ನೊಬ್ಬರು ಮಾತನಾಡುವುದನ್ನು ಸರಳವಾಗಿ ಆಲಿಸಲು ಅವರಿಗೆ ಸಾಧ್ಯವಿಲ್ಲ. ಆದರೂ, ಅವರೆಲ್ಲರೂ, ಒಂದೆಡೆ ಸೇರುವ ಮೂಲಕ ಕಳೆದೊಂದು ದಶಕದಿಂದಲೂ, ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಜತೆಗೆ, ತಮ್ಮಂತೆ ಶ್ರವಣದೋಷ ಹೊಂದಿದವರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಮೂಲಕ ಸದ್ದಿಲ್ಲದೇ ಸಂಘಟಿಸುವ ಮಹಾ ಕಾಯಕಕ್ಕೆ ಮುಂದಾಗಿದ್ದಾರೆ.
ಅದು, ಎಲ್ಲಿ ಅಂತೀರಾ…? ಹಾಗಾದರೆ ಈ ಸ್ಟೋರಿ ನೋಡಿ…
ಹೌದು. ಮಧ್ಯ ಕರ್ನಾಟಕದ ಕೇಂದ್ರಬಿಂದು, ವಾಣಿಜ್ಯನಗರಿ, ವಿದ್ಯಾಸಿರಿ ನಾಡು ಎಂಬ ಬಿರುದಾವಳಿಯನ್ನು ಮುಡಿಗೇರಿಸಿಕೊಂಡಿರುವ ದಾವಣಗೆರೆ ನಗರ ಇಂಥಹ ವಿಶಿಷ್ಟ ಮಾದರಿ ಸದಸ್ಯರ ಸಂಘ ಒಂದಕ್ಕೆ ವೇದಿಕೆ ಕಲ್ಪಿಸಿದೆ. ಅದರ ಹೆಸರೇ… ‘ಮೂಗ ಮತ್ತು ಕಿವುಡರ ಸ್ನೇಹಿತರ ಬಳಗ’. ಕಳೆದ ಹನ್ನೊಂದು ವರ್ಷಗಳಿಂದಲೂ ನಿರಂತರವಾಗಿ ಗಣೇಶ ಉತ್ಸವವನ್ನು ವೈಭವೋಪೇತವಾಗಿ ನೆರವೇರಿಸುವ ಮೂಲಕ, ಸಹಜರಿಗಿಂತಲೂ ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಜತೆಗೆ, ನಾವು ವಿಶೇಷಚೇತನರು ಎಂಬ ಕಾರಣಕ್ಕೆ ಅವಕಾಶ ಕಸಿಯುವುದು ಬೇಡ ಎಂಬ ಸಂದೇಶ ಸಾರುತ್ತಿದ್ದಾರೆ.
ಆರಂಭದಲ್ಲಿ ಕೇವಲ ಎಂಟತ್ತು ಜನರಿಂದ ಆರಂಭವಾದ ಈ ಬಳಗದಲ್ಲಿ ಈಗ ಬರೋಬ್ಬರಿ 100ಕ್ಕೂ ಅಧಿಕ ಸದಸ್ಯರಿದ್ದಾರೆ. ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗಾರೆ ಕಾರ್ಮಿಕರು, ಪೆಂಟಿಂಗ್ ಕಾರ್ಮಿಕರು ಜತೆಗೆ, ಟೈಲ್ ಅಂಗಡಿಗಳಲ್ಲಿ ಕೆಲಸ ಮಾಡುವ ಕೆಲಸಗಾರರು ಸೇರಿದಂತೆ ನಾನಾ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಇವರು, ಗಣೇಶ ಉತ್ಸವದ ಆರಂಭಕ್ಕೂ ಮುನ್ನ ಒಂದೆಡೆ ಸೇರುತ್ತಾರೆ. ಉತ್ಸವ ಮುಗಿಯುವವರೆಗೂ, ಅಲ್ಲಿಂದ ಜಾಗಬಿಟ್ಟು ಕದಲುವುದಿಲ್ಲ. ಉತ್ಸವ ಮುಗಿದ ಬಳಿಕ, ತಮ್ಮ ತಮ್ಮ ಉದ್ಯೋಗಕ್ಕೆ ಮರಳುತ್ತಾರೆ. ಈ ಪರಂಪರೆ ಕಳೆದ ದಶಕದುದ್ದಕ್ಕೂ ನಡೆದುಬಂದಿರುವ ಸಂಪ್ರದಾಯ.
ನಗರದ ಪುಣೆ- ಬೆಂಗಳೂರು ರಸ್ತೆಗೆ ಹೊಂದಿಕೊಂಡಿರುವ ಹಾಗೂ ಹೃದಯ ಭಾಗದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇವರು, ಕಳೆದ ಹನ್ನೊಂದು ವರ್ಷದಿಂದಲೂ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಉತ್ಸವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವೈಭವದಿಂದ ಅರ್ಥಪೂರ್ಣವಾಗಿ ಆಚರಿಸುತ್ತ ಬರುತ್ತಿದ್ದಾರೆ.


ಗಣೇಶ ಹಬ್ಬ ಸಮೀಪಿಸುತ್ತಿದ್ದಂತಿಯೇ ಇವರೆಲ್ಲರೂ ದೇವಸ್ಥಾನಕ್ಕೆ ಸೇರುತ್ತಾರೆ. ಗಣೇಶನ ಹಬ್ಬ ಮುಗಿಯುವರೆಗೂ ಅಲ್ಲಿಯೇ ಹಾಜರಿರುವ ಮೂಲಕ ಉತ್ಸವದ ಪೂರ್ವಭಾವಿಯಾಗಿ ಮಾಡಬೇಕಾದ ಕಾರ್ಯಗಳನ್ನೇ ಅವರೇ ಸ್ವತಃ ಕೈಯಾರೇ ಮಾಡುತ್ತಾರೆ. ಅವರೇ ವಂತಿಕೆ ಹಾಕುತ್ತಾರೆ. ಆರಂಭದಲ್ಲಿ ಒಂದಿಷ್ಟು ನಗರದ ಕೆಲ ಕಡೆಗಳಲ್ಲಿ ವಂತಿಕೆ ಸಂಗ್ರಹಿಸಲು ನೋಡಿದರು. ಆದರೆ, ಕೆಲವರು, ಇವರನ್ನು ಅನುಮಾನದಿಂದಲೇ ನೋಡಿದರು. ಹೀಗಾಗಿ, ಅದರಿಂದ ಮಾನಸಿಕವಾಗಿ ನೋವುಂಡ ಇವರು, ವಂತಿಕೆ ಸಂಗ್ರಹ ಕಾರ್ಯವನ್ನು ಕೈಬಿಟ್ಟು, ತಾವೇ ತಮ್ಮ ದುಡಿಮೆಯಲ್ಲಿನ ಒಂದು ಭಾಗವನ್ನು ಉತ್ಸವಕ್ಕಾಗಿ ವಿನಿಯೋಗಿಸುತ್ತಾರೆ. ಜತೆಗೆ, ಇವರನ್ನು ಬಲ್ಲವರೂ ಒಂದಿಷ್ಟು ನೆರವು ನೀಡುತ್ತಾರೆ.
ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ, ಅಲಂಕಾರಿಕ ಸಾಮಾಗ್ರಿ, ಹಣ್ಣುಹಂಪಲ ಖರೀದಿ. ಮಂಟಪ ನಿರ್ಮಾಣ ಸೇರಿದಂತೆ ಇವಿಷ್ಟೇ ಕಾರ್ಯಕ್ರಮಗಳು ಇದ್ದರೇ, ತಮ್ಮ ದುಡಿಮೆಯ ನಾಲ್ಕಾರು ದಿನದ ಮೊತ್ತವನ್ನು ಸಲೀಸಾಗಿ ವೆಚ್ಚ ಮಾಡುತ್ತಿದ್ದರೋ ಏನೋ. ಆದರೆ, ಉತ್ಸವದ ವಿಸರ್ಜನೆಯ ಐದನೇ ದಿನ, ಅನ್ನಸಂತರ್ಪಣೆಯನ್ನು ಏರ್ಪಡಿಸುವ ಮೂಲಕ ಅನ್ನದಾಸೋಹಕ್ಕೂ ಕೈಹಾಕಿದ್ದಾರೆ. ಆರಂಭದಲ್ಲಿ ಕೇವಲ 500 ಜನರಿಗೆ ಒದಗಿಸುತ್ತಿದ್ದ ಅನ್ನಸಂತರ್ಪಣಾ ಮಹಾದಾಸೋಹ, ಇಂದು, ಸಾವಿರ ಸಂಖ್ಯೆಯ ಗಡಿ ದಾಟಿದೆ. ಹೀಗಾಗಿ, ಅಗತ್ಯ ವಸ್ತುಗಳ, ಆಹಾರಧಾನ್ಯಗಳ ಬೆಲೆ ಏರಿಕೆಯ ಬಿಸಿ ತಾಕುತ್ತಿದ್ದರೂ, ಅದನ್ನು ಲೆಕ್ಕಿಸದೆ, ನೆರವು ನೀಡುವವರನ್ನು ನಿರೀಕ್ಷಿಸದೇ, ತಾವೇ ತಮ್ಮ ದುಡಿಮೆಯ ಹಣವನ್ನು ವಿನಿಯೋಗಿಸಿ, ಅನ್ನಸಂತರ್ಪಣೆಯಂತ ಮಹಾದಾಸೋಹಕ್ಕೆ ಮುಂದಾಗುವ ಮೂಲಕ ಸಾರ್ಥಕ ಕಾಯಕಕ್ಕೆ ಇಳಿದಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಸ್ಮರಣೀಯ ಸಂಗತಿ.
ಉತ್ಸವದಲ್ಲಿ ತೊಡಗಿಸಿಕೊಂಡಿರುವ ಈ ವಿಶೇಷ ಚೇತನರ ಸಹಾಯಕಕ್ಕೆ ಕೆಲ ಪೋಷಕರು ನೆರವು ನೀಡುತ್ತಿದ್ದಾರೆ. ಜತೆಗೆ, ಅಗತ್ಯಬಿದ್ದರೆ, ಉತ್ಸವ ಮುಗಿಯುವವರೆಗೂ ಅವರೊಂದಿಗೆ ಕೈಜೋಡಿಸುತ್ತಾರೆ. ಆದರೆ, ಕಡ್ಡಾಯವಂತೂ ಇಲ್ಲ.
ಈ ಮೂಗ ಮತ್ತು ಕಿವುಡ ಸ್ನೇಹಿತರ ಬಳಗದ ವಿಶೇಷಚೇತನ ವೇದಿಕೆಯಲ್ಲಿ ಕೇವಲ ಹಿಂದೂ ಧರ್ಮಕ್ಕೆ ಸೇರಿದವರು ಮಾತ್ರ ಇಲ್ಲ. ಇಲ್ಲಿ, ಹಿಂದೂಗಳ ಜತೆ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೂ ಸೇರಿದ ಸದಸ್ಯರಿದ್ದಾರೆ. ಆದರೆ, ಇವರಾರಲ್ಲಿಯೂ, ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಜಾತಿ, ಧರ್ಮದ ಸಂಕುಚಿತ ಭಾವನೆಗಳು ಇವರಲ್ಲಿ ಮೂಡಿಲ್ಲ. ನಾವೆಲ್ಲರೂ ಮನುಷ್ಯ ಜಾತಿಗೆ ಸೇರಿದವರು ಎಂಬ ಜೀವಪರತೆ ಇವರನ್ನು ಆವರಿಸಿಕೊಂಡಿದೆ. ಆ ಮೂಲಕ ಏಕತೆ, ಸಾಮರಸ್ಯತೆಯನ್ನು ಸಾರುವ ಮೂಲಕ ಈ ಮೂಗ ಮತ್ತು ಕಿವುಡ ಸ್ನೇಹಿತರ ವಿಶೇಷಚೇತನ ಬಳಗ, ರಾಜ್ಯಕ್ಕೆ ಮಾದರಿಯಾಗಿದೆ. ಪ್ರಾಯಶಃ ಇಂಥಹ ವಿಶೇಷ ಚೇತನರೇ ನಡೆಸಿಕೊಂಡು ಬರುತ್ತಿರುವ ವಿಶೇಷತೆ ರಾಜ್ಯದ ಬೇರೆ ಯಾವ ಭಾಗದಲ್ಲಿಯೂ ಇರಲಿಕ್ಕಿಲ್ಲ ಎನ್ನುತ್ತಾರೆ ಈ ವಿಶೇಷಚೇತನರಿಗೆ ನೆರವು, ಸಲಹೆ ಹಾಗೂ ಸಹಕಾರ ನೀಡುತ್ತಿರುವ ವಿಕಲಚೇತನ ಕೆ.ಜಿ.ಎಚ್. ಮೇಘನಾ ಅವರು.
ಉತ್ಸವದ ಅಂಗವಾಗಿ ಈ ವಿಶೇಷಚೇತನ ಸದಸ್ಯರೇ ಕೇರಂ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಆದರೆ, ಈ ವರ್ಷ ಸ್ಪರ್ಧೆಗಳನ್ನು ಆಯೋಜಿಸಿಲ್ಲ. ಧ್ವನಿವರ್ಧಕದ ಅಬ್ಬರ ಇಲ್ಲದೇ, ಪಟಾಕಿಗಳ ಸಿಡಿಮದ್ದಿನ ಕರ್ಕಶ ಶಬ್ದವಿಲ್ಲದೇ, ಅತ್ಯಂತ ಸರಳ ಹಾಗೂ ಶ್ರದ್ಧಾಭಕ್ತಿಯಿಂದ ಉತ್ಸವವನ್ನು ನೆರವೇರಿಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಮೇಘನಾ ಅವರು.

ಮಾತು ಬಾರದಿದ್ದರೇ ಏನಾಯಿತು? ಕಿವಿ ಕೇಳಿಸದಿದ್ದರೂ ತೊಂದರೆ ಇಲ್ಲ. ಈ ಕಾರಣಕ್ಕೆ ಅವಕಾಶದಿಂದ ವಂಚಿತಗೊಳಿಸಬೇಡಿ. ನಮಗೂ ಸಹಜರಂತೆ ಬದುಕುವ ಹಾಗೂ ಸಮಾನ ಅವಕಾಶ ಒದಗಿಸುವ ಮೂಲಕ ಮನುಷ್ಯರಂತೆ ನೋಡಬೇಕಾದುದು ನಮ್ಮ ಸಾಮಾಜಿಕ ಪ್ರಜ್ಞೆಯೂ ಹೌದು. ಜತೆಗೆ, ಅವರಲ್ಲಿನ ತಂಡದಲ್ಲಿನ ವಿವಿಧತೆಯಲ್ಲಿನ ಏಕತೆಯೂ ನಮಗೆ ಮಾದರಿಯಾಗಬೇಕಿದೆ.

ಇದನ್ನೂ ಓದಿ: ಪ್ರಥಮಪೂಜಿತ ವಿಘ್ನೇಶ್ವರನ ಉತ್ಸವಕ್ಕೆ ಕ್ಷಣಗಣನೆ, ಬ್ಯಾಡಗಿ: ಕಲಾವಿದರ ಕೈಚಳಕದಲ್ಲಿ ಅರಳಿರುವ ಅಲಂಕಾರಿಕ ಗಣೇಶಮೂರ್ತಿಗಳು

Related posts

ಆಹಾ… ರಸ್ತೆಯೇ…? ಏನೀದು ನಿನ್ನ ಅವ್ಯವಸ್ಥೆ…!! ಇದು ಹಡಗಲಿ- ಮಂಡ್ಯ ರಾಜ್ಯಹೆದ್ದಾರಿ, ಯಾಮಾರಿದರೆ ‘ಯಮನ’ ಸವಾರಿ…!!!

Vijayasiri News

ಒಕ್ಕಲುತನ ಪರಂಪರೆಯ ವಿಶಿಷ್ಟ ಉತ್ಸವ, ಭೂಲೋಕಕ್ಕೆ ಮಳೆ ತರಿಸುವ ಮಹಾದೇವ ನಮ್ಮ ಈ ಜೋಕುಮಾರಸ್ವಾಮಿ.

Vijayasiri News

ದಾವಣಗೆರೆ: ದಲಿತ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ, ನ್ಯಾ. ನಾಗಮೋಹನದಾಸ್ ಆಯೋಗದ ವರದಿ ಯಥಾವತ್ ಅನುಷ್ಠಾನಕ್ಕೆ ಆಗ್ರಹ

Vijayasiri News

ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಹಕ್ಕುಮಂಡಿಸಿದ ಸಮಾಜದ ನಿಯೋಗ, ವಾಲ್ಮೀಕಿನಾಯಕ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಿ; ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟಕ್ಕೆ ಅಣಿ: ಎಚ್ಚರಿಕೆ

Vijayasiri News

ಜೋಕುಮಾರಮೂರ್ತಿಯ ಮೇಲೆ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರಾಧನೆ ಸ್ಥಗಿತ; ಅಂದಿನಿಂದಲೇ ಊರ ಹೆಸರು ನಾಮಾಂಕಿತ, ಹುಲಿಕಟ್ಟೆ: ಈ ಊರಲ್ಲಿ ಜೋಕುಮಾರಸ್ವಾಮಿ ಆರಾಧನೆ ನಿಷಿದ್ಧ!

Vijayasiri News

ತಲೆಕೂದಲನ್ನು ಬೋಳಿಸಿಕೊಂಡು ಆಕ್ರೋಶ, ನ್ಯಾ. ನಾಗಮೋಹನದಾಸ್ ವರದಿ ಅಂಗೀಕಾರಕ್ಕೆ ವಿರೋಧ ಅವಕಾಶ ವಂಚಿತ ಸಮುದಾಯಗಳಿಗೆ ಮರಣ ಶಾಸನವಾದ ವರದಿ ಕೈಬಿಡಿ

Vijayasiri News
error: Content is protected !!