Vijayasiri News
ದಾವಣಗೆರೆ

ಡಿಜೆ ನಿಷೇಧಿಸಿರುವ ಕ್ರಮ ಸ್ವಾಗತಾರ್ಹ: ಜಿಲ್ಲಾಡಳಿತದ ಕ್ರಮದಲ್ಲಿ ರಾಜಕಾರಣ ಬೇಡ: ಬಿ. ವೀರಣ್ಣ

ವಿಜಯಸಿರಿನ್ಯೂಸ್.ಕಾಂ/ ದಾವಣಗೆರೆ
ಗಣೇಶ ಉತ್ಸವ ಸೇರಿದಂತೆ ಇತರೆ ಸಾಂಸ್ಕೃತಿಕ ಉತ್ಸವಗಳ ಮೆರವಣಿಗೆ ಸಂದರ್ಭದಲ್ಲಿ ಅಬ್ಬರಿಸುವ ಡಿಜೆ ಬಳಕೆಯ ಮೇಲೆ ನಿಷೇಧ ಹೇರಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಸರ್ಕಾರದ ಆದೇಶಗಳನ್ನು ಪರಿಪಾಲಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಳ್ಳಲಿರುವ ಕಾನೂನು ಕ್ರಮಗಳ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಸಾಧುವಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ರಾಜವೀರ ಮದಕರಿನಾಯಕ ವೃತ್ತದ ಕೆರೆಗರಡಿ ವಿನಾಯಕ ಮಹೋತ್ಸವ ಸಮಿತಿಯ ಅಧ್ಯಕ್ಷರೂ ಆದ ಬಿ. ವೀರಣ್ಣ ಹೇಳಿದ್ದಾರೆ.
ಹಬ್ಬ, ಹರಿದಿನ, ಉತ್ಸವ, ಜಾತ್ರೆ ಹಾಗೂ ಕಲೆ, ಸಂಸ್ಕೃತಿಗಳು ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬ. ಇಂಥಹ ಸಂದರ್ಭಗಳಲ್ಲಿ ಉತ್ಸವಗಳಿಗೆ ಅನುಗುಣವಾಗಿ ನಮ್ಮ ಪರಂಪರೆಯ ಕಲಾಪ್ರದರ್ಶನಗಳನ್ನು ಆಯೋಜಿಸುವ ಮೂಲಕ ನೇಪಥ್ಯಕ್ಕೆ ಸರಿಯುತ್ತಿರುವ ನಮ್ಮ ದೇಸಿಯ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರದರ್ಶನಗಳು ನಡೆಯಬೇಕೆ ವಿನಃ, ಸಾಂಸ್ಕೃತಿಕ ಹಬ್ಬ, ಹರಿದಿನ ಹಾಗೂ ಉತ್ಸವಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿರುವ ಅಬ್ಬರದ ಡಿಜೆ ಸಂಗೀತ ಕಾರ್ಯಕ್ರಮಗಳು ಅಲ್ಲ ಎಂದು ಬಿ. ವೀರಣ್ಣ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಲ್ಲಿ ಜಿಲ್ಲಾಡಳಿತ ಮುಂದಾಗುತ್ತದೆ. ಈ ವಿಚಾರದಲ್ಲಿ ಯಾರೂ ಕೂಡ ರಾಜಕೀಯವನ್ನು ಲೇಪಿಸುವ ಮೂಲಕ ಕಲುಷಿತ ವಾತಾವರಣಕ್ಕೆ ಅವಕಾಶ ನೀಡಬಾರದು. ನಮ್ಮ ನಾಡಿನ ನೆಲಮೂಲ ಸಂಸ್ಕೃತಿಯ ಸಾಂಸ್ಕೃತಿಕ ಕಲೆಗಳಾದ ಡೊಳ್ಳುಕುಣಿತ, ಕೀಲುಕೊಂಬೆ ಪ್ರದರ್ಶನ, ಕೋಲಾಟ ಸೇರಿದಂತೆ ನೂರಾರು ಕಲಾಪ್ರದರ್ಶಗಳು ನಮ್ಮಲ್ಲಿವೆ. ಈಗ ಈ ಕಲೆಗಳು ಪ್ರೋತ್ಸಾಹದ ಕೊರತೆಯಿಂದಾಗಿ, ಕಣ್ಮರೆಯಾಗುತ್ತಿವೆ. ಹೀಗಾಗಿ, ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಈ ಕಲೆಗಳ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ನಮ್ಮ ಸನಾತನ ಪರಂಪರೆಯನ್ನು ಎತ್ತಿಹಿಡಿಯಬೇಕಿದೆ ಹೊರತು, ಪಾಶ್ಚೀಮಾತ್ಯರ ಅಬ್ಬರದ ಡಿಜೆ ಸಂಗೀತಗಳ ಕುಣಿತಗಳನ್ನಲ್ಲ ಎಂದು ವೀರಣ್ಣ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಡಿಜೆ ಅಬ್ಬರದ ಶೋಗಳು ಸಾರ್ವಜನಿಕರಿಗೂ ಕಿರಿಕಿರಿಯಾಗುತ್ತದೆ. ಜತೆಗೆ, ವಿದ್ಯಾರ್ಥಿಗಳಿಗೂ, ವಯೋವೃದ್ಧರಿಗೂ, ರೋಗಿಗಳು ಕಿರಿಕಿರಿ ಉಂಟುಮಾಡು ಮೂಲಕ ಅವರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ನಮ್ಮ ಕಲಾ ಪ್ರಕಾರಗಳಲ್ಲಿ ಸೌಹಾರ್ದತೆಯ ಬೆಸುಗೆಯ ಸಂಗೀತ ಹೊರಸೂಸಿದರೆ, ಡಿಜೆ ಸದ್ದುಗಳಲ್ಲಿ ಸೌಹಾರ್ದತೆಗೆ ಧಕ್ಕೆ ಉಂಟಾಗುವ ಒಡಕುಗಳ ಅಬ್ಬರ ಪ್ರತಿಧ್ವನಿಸುತ್ತದೆ. ಹೀಗಾಗಿಯೇ ಡಿಜೆ ಬಳಕೆಯ ಮೇಲೆ ನಿಷೇಧ ಹೇರಿರುವ ಸರ್ಕಾರದ ಕ್ರಮವನ್ನು ನಾವೆಲ್ಲ ಪಕ್ಷಭೇದಗಳನ್ನು ಬಿಟ್ಟು, ಸ್ವಾಗತಿಸೋಣ ಎಂದು ವೀರಣ್ಣ ಅವರು ಹೇಳಿಕೆಯಲ್ಲಿ ಕೋರಿದ್ದಾರೆ.

Related posts

ಹುಟ್ಟುಹಬ್ಬದ ಸಮಾರಂಭಗಳು ನಮ್ಮ ಬದುಕಿನ ಆದರ್ಶಗಳ ಸಂಕೇತಗಳಾಗಬೇಕು: ಬಿ. ವೀರಣ್ಣ.

Vijayasiri News

ಮೂಗ ಮತ್ತು ಕಿವುಡ ಸ್ನೇಹಿತರ ಮಾದರಿ ಗಣೇಶ ಪ್ರತಿಷ್ಠಾಪನೆ, ವಿಶೇಷಚೇತನರ ವೈಭವದ ಉತ್ಸವಕ್ಕೆ ಈಗ ದಶಮಾನದ ಸಂಭ್ರಮ

Vijayasiri News
error: Content is protected !!