Vijayasiri News
ಅಂಕಣ

ಕೆಕೆಆರ್‌ಡಿಬಿಯಿಂದ ಕಲ್ಯಾಣ ಕರ್ನಾಟದ ಅಭಿವೃದ್ಧಿಯೋ ಇಲ್ಲ ಅನಾದರವೋ….?

ಐತಿಹಾಸಿಕ ಕಾರಣಗಳಿಂದ ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳು ರಾಜ್ಯದ ಅತಿ ಹಿಂದುಳಿದ ಜಿಲ್ಲೆಗಳಾಗಿವೆ. ಪ್ರಾದೇಶಿಕ ಸಮಾನತೆ ದೃಷ್ಟಿಯಿಂದ ತೀರ ಹಿಂದುಳಿದಿವೆ. ಡಾ. ಡಿ.ಎಂ. ನಂಜುಂಡಪ್ಪನವರ ವರದಿಯ ಪ್ರಕಾರ ಕಲ್ಯಾಣ ಕರ್ನಾಟಕದ ಹೆಚ್ಚುಕಡಿಮೆ ಎಲ್ಲಾ ತಾಲ್ಲೂಕುಗಳು ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು ಎಂದು ಅಧ್ಯಯನದ ಮುಖಾಂತರ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪ್ರದೇಶವನ್ನು ಸಮಾನವಾಗಿ ಅಭಿವೃದ್ಧಿ ಪಡಿಸುವ ಕಾರಣದಿಂದ ಹಿಂದುಳಿದ ಪ್ರದೇಶದ ಜಿಲ್ಲೆಗಳ ಶಿಕ್ಷಣ, ಆರೋಗ್ಯ, ರಸ್ತೆ, ನೀರಾವರಿ, ಗ್ರಾಮೀಣಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಸುಧಾರಣೆ ತರಲು ಡಾ.ಡಿ.ಎಂ. ನಂಜುಂಡಪ್ಪ ಅವರು ವಿಶೇಷ ಅಭಿವೃದ್ಧಿ ಯೋಜನೆ ಮೂಲಕ ಅನುದಾನವನ್ನು ಪ್ರತಿ ವರ್ಷ ಬಜೆಟ್‌ನಲ್ಲಿ ಒದಗಿಸಬೇಕೆಂದು ಶಿಫಾರಸ್ಸು ಮಾಡಿದರು.

ಈ ಅನುದಾನದ ಬಳಕೆ ಮತ್ತು ಗುಣಮಟ್ಟದ ನಿರ್ವಹಣೆಗಾಗಿ ಸರ್ಕಾರವು ‘ಹೈದರಾಬಾದ್- ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು (HKDB) ಸ್ಥಾಪಿಸಿತು. ನಂತರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಎಂದು ಮರುನಾಮಕರಣ ಮಾಡಲಾಯಿತು. ಆದರೆ, ಇಲ್ಲಿ ಮುಖ್ಯ ಸಮಸ್ಯೆ ಏನೆಂದರೆ, ಬಿಡುಗಡೆಯಾದ ಹಣ ಸಂಪೂರ್ಣವಾದ ಬಳಕೆ ಕಳೆದ 10ವರ್ಷಗಳಿಂದ ಆಗಿರುವುದಿಲ್ಲ.2013-14ರಿಂದ 2023-24ರವರೆಗೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ರೂ. 10,228ಕೋಟಿ ಸರ್ಕಾರದ ಬಿಡುಗಡೆಯಾಗಿದೆ. ಇದರಲ್ಲಿ ರೂ. 8,337ಕೋಟಿ (ಶೇ.81) ಮಾತ್ರ ಬಳಕೆಯಾಗಿದೆ. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾಗುವ ಹಣ ಕಡಿಮೆ, ಇದರಲ್ಲಿ ಬಿಡುಗಡೆಯಾದ ಹಣ ಖರ್ಚು ಮಾಡದೆ ಇರುವುದು ಇನ್ನೂ ಗಂಭೀರ ವಿಷಯ. ಕಾರಣ ಮಂಡಳಿಯೂ ಬಿಡುಗಡೆಯಾದ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡುತ್ತಿಲ್ಲ ಮತ್ತು ಖರ್ಚು ಮಾಡಿದ ಹಣ ಸದ್ಬಳಕೆಯಾಗುತ್ತಿಲ್ಲ. ಇದರಿಂದ ಗುಣಮಟ್ಟದ ಅಭಿವೃದ್ಧಿ ಚಟುವಟಿಕೆಗಳು ಈ ಪ್ರದೇಶದಲ್ಲಿ ಕುಂಠಿತಗೊಂಡಿದ್ದು ಕಾಣುತ್ತೇವೆ. ಇಂದು ಕಲ್ಯಾಣ ಕರ್ನಾಟಕದಲ್ಲಿ ಸಮಸ್ಯೆಗಳ ವಾಸ್ತವ ಸ್ಥಿತಿಯೇ ಬೇರೆಯೇ ಇದೆ. ಈ ಪ್ರದೇಶದ ಜಿಲ್ಲೆಗಳ ಶಿಕ್ಷಣ ಕ್ಷೇತ್ರದಲ್ಲಿ ಕೊನೆಯ ಸ್ಥಾನದಲ್ಲಿವೆ. ಮಾನವ ಅಭಿವೃದ್ಧಿಯ ಸೂಚ್ಯಂಕದಲ್ಲಿ ಅತಿ ಹಿಂದುಳಿದ ಪ್ರದೇಶವಾಗಿದೆ. ಸದ್ಯ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 9,240 ಒಟ್ಟು ಶಾಲೆಗಳಿವೆ. ಇದರಲ್ಲಿ 6,773ಶಾಲೆಗಳು(ಶೇ.73) ಪೂರ್ಣ ಶಿಥಿಲಗೊಂಡಿವೆ. ಇದರಿಂದ ವಿದ್ಯಾರ್ಥಿಗಳು ಜೀವ ಭಯದಲ್ಲಿ ಶಿಕ್ಷಣ ಪಡೆಯುವಂತಾಗಿದೆ. ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶೌಚಾಲಯವು ಇಲ್ಲಾ. ಇದ್ದಲ್ಲಿ, ಹಲವಾರು ಕಾರಣಗಳಿಂದ ಬಳಕೆಯಾಗುತ್ತಿಲ್ಲ. ಸರ್ಕಾರಿ ಶಾಲೆಯ ಮಕ್ಕಳು ಊಟಕ್ಕಾಗಿ ಬೇರೆ ಊರಿನ ಶಾಲೆಗಳಿಗೆ 2- 3 ಕಿ.ಮೀ. ನಡೆದು ಹೋಗುತ್ತಿದ್ದಾರೆ. ಏಕೆಂದರೆ ಇಲ್ಲಿ ಅಡುಗೆ ಮಾಡುವವರ ಕೊರತೆ, ಅಡುಗೆ ಮನೆಗಳು ಸಹ ಈ ಶಾಲೆಗಳಲ್ಲಿ ಇಲ್ಲ. ಈ ಪ್ರದೇಶದಲ್ಲಿರುವ ಶಾಲೆಗಳು ಶಿಕ್ಷಕ ಕೊರತೆಯಿಂದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ವಿಫಲವಾಗುತ್ತಿವೆ. ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ವಿಶೇಷ ಅನುದಾನವಿಲ್ಲದೇ ಮೂಲಭೂತ ಸೌಕರ್ಯ, ಸಂಶೋಧನೆ, ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಡಿವೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಶೇ. 10ರಷ್ಟು ಅನುದಾನ ಈ ಭಾಗದ ವಿಶ್ವವಿದ್ಯಾಲಯಗಳಿಗೆ ಮೀಸಲಿಡಬೇಕು ಎಂದು ಗೌರವಾನ್ವಿತ ರಾಜ್ಯಪಾಲರು ಈಗಾಗಲೇ ನಿರ್ದೇಶನ ನೀಡಿದ್ದಾರೆ. ಇದನ್ನು ಅನುಷ್ಠಾನಕ್ಕೆ ತಂದು ವಿಶ್ವವಿದ್ಯಾಲಯಗಳ ಅಭಿವೃದ್ಧಿ ಕಾರ್ಯಕೈಗೊಂಡು ಗುಣಮಟ್ಟದ ಉನ್ನತ ಶಿಕ್ಷಣವನ್ನು ಕನಿಷ್ಠ ಖರ್ಚಿನಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು ಎಂಬುದು ಎಲ್ಲರ ಆಶಯ.

ಈ ಭಾಗದಲ್ಲಿ ರಸ್ತೆಗಳು ನಿರ್ಮಾಣ ಮಾಡಿದ ಒಂದು ವರ್ಷದಲ್ಲೇ ಗುಂಡಿಗಳು ಬಿದ್ದು ಸಾರ್ವಜನಿಕರು ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಆಸ್ಪತ್ರೆಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ರೋಗಿಗಳ ಪಾಲಿಗೆ ಮೃತ್ಯುಕೂಪವಾಗಿವೆ. ಕೆಲವು ಆಸ್ಪತ್ರೆಗಳಲ್ಲಿ ಶವಗಾರಗಳಿಲ್ಲದೆ ಬಯಲಿನಲ್ಲಿ ಶವ ಪರೀಕ್ಷೆ ಮಾಡಿರುವ ಉದಾಹರಣೆಗಳು ಈ ಭಾಗದಲ್ಲಿದೆ. ಗ್ರಾಮೀಣಾಭಿವೃದ್ಧಿಯ ಸ್ಥಿತಿಯು ತುಂಬ ಹದಗೆಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಶೌಚಾಲಯಗಳಿಲ್ಲದೆ ಬಯಲಿನಲ್ಲಿ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿಯಿದೆ. ಹಾಗೂ ಗ್ರಾಮೀಣ ಭಾಗದಲ್ಲಿ ಪೌಷ್ಠಿಕ ಆಹಾರದ ಕೊರತೆ ಎದ್ದು ಕಾಣುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳ ಪೌಷ್ಠಿಕತೆಯ ಕೊರತೆಯಿಂದ ಕುಂಠಿತ ಬೆಳವಣಿಗೆ, ಹೆರಿಗೆ ಸಂದರ್ಭದಲ್ಲಿ ತೊಂದರೆಗಳು ಸರ್ವೆ ಸಾಮಾನ್ಯವವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕೆಗಳ ಕೊರತೆಯ ಕಾರಣದಿಂದ ಉದ್ಯೋಗವಕಾಶಗಳು ತೀರಾ ಕಡಿಮೆ ಇದೆ. ರಾಜ್ಯದ ಗರಿಷ್ಠ ಕೃಷಿ ಕಾರ್ಮಿಕರು ಈ ಭಾಗದಲ್ಲಿ ಇದ್ದು, ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ದೂರದ ನಗರಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ‘ಮಳೆ ಬಂದರೆ ಬೆಳೆ; ಇಲ್ಲದಿದ್ದರೆ ಗುಳೆ’ ಎಂಬುದು ಜನರ ಜೀವನದ ದುಸ್ಥಿತಿಯಾಗಿದೆ. ಸ್ಥಳೀಯವಾಗಿ ಜನರಿಗೆ ಕೆಲಸ ಸಿಗುವಂತೆ ಮಾಡುವುದು, ಉದ್ಯಮಶೀಲತೆ ಬೆಳೆಸುವುದು ಕೆಕೆಆರ್‌ಡಿಬಿಯ ಜವಾಬ್ದಾರಿಯಾಗಿದೆ.

ಇನ್ನೂ ವಿಪರ್ಯಾಸದ ವಿಷಯವೇನೆಂದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬಿಡುಗಡೆಯಾಗಿ ಬಂದ ಹಣವನ್ನು ಸರಿಯಾಗಿ ಖರ್ಚು ಮಾಡದೆ ದುರ್ಬಳಕೆ ಮತ್ತು ಅವ್ಯವಹಾರಗಳು ನಡೆದಿವೆ ಎಂಬ ವರದಿಗಳು ಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿವೆ. ಆದರೆ, ಭ್ರಷ್ಟಾಚಾರಕ್ಕೆ ನಿಯಂತ್ರಣ ಮಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಒದಗಿಸಿದ ಅನುದಾನ ಸದ್ಬಳಕೆಯಾಗಿ, ಈ ಪ್ರದೇಶ ಅಭಿವೃದ್ಧಿ ಆಗಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ. 371(J) ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕದ ಭಾಗಕ್ಕೆ ವಿಶೇಷ ಕ್ರಿಯಾಯೋಜನೆ ಸಿದ್ಧಪಡಿಸುವ ಅವಶ್ಯಕತೆ ಇದೆ. ಕೆಕೆಆರ್‌ಡಿಬಿಗೆ ಬಿಡುಗಡೆಯಾದ ಹಣವನ್ನು ನಿಗದಿತ ಸಮಯದಲ್ಲಿಯೇ ಸಂಪೂರ್ಣ ಬಳಕೆಯಾಗಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಚಟುವಟಿಕೆಗಳನ್ನು ಚುರುಕುಗೊಳಿಸಿದಾಗ ಮಾತ್ರ ಈ ಭಾಗದಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.

error: Content is protected !!