Vijayasiri News
ಅಸಾಮಾನ್ಯರು

ಗರ್ಭಿಣಿ ಮಹಿಳೆಯರ ಹೆರಿಗೆ ಸಮಯವನ್ನು ಕರಾರುವಕ್ಕಾಗಿ ಹೇಳುವ ‘ಪ್ರಸೂತಿ ಪ್ರವೀಣೆ’ ಚನ್ನಬಸಮ್ಮ ತಳವಾರ

ಗರ್ಭಾವಸ್ಥೆ ಹಾಗೂ ಪ್ರಸವ ಈ ಎರಡು ಕ್ರಿಯೆಗಳು ಮಹಿಳೆಯ ವೈವಾಹಿಕ ಬದುಕಿನಲ್ಲಿ ನಡೆಯುವ ಪ್ರಮುಖ ಜೈವಿಕ ಕಾಲಘಟ್ಟ. ತನ್ನೊಡಲೊಳಗೆ ಇನ್ನೊಂದು ಜೀವವನ್ನು ಸೃಷ್ಟಿಸುವ ಮೂಲಕ ಸಂತಾನೋತ್ಪತ್ತಿಯ ಆಗೋಚರ ಕ್ರಿಯೆ ಅಡಗಿರುವುದು ಮಹಿಳೆಯಲ್ಲಿ ಮಾತ್ರ. ತನ್ನದೇ ಪ್ರತಿರೂಪ, ತನ್ನೊಳಗೆ ಕುಡಿಯೊಡೆದು ಹೊರಪ್ರಪಂಚಕ್ಕೆ ಅಡಿಯಿಡುವ ಒಂದು ಮಹತ್ವದ ಕಾಲಘಟ್ಟವೇ ಪ್ರಸವ. ತಾಯ್ತನ ಎಂಬುದು ಎಷ್ಟು ಸುಂದರವೋ, ಅಷ್ಟೇ ಭಯಂಕರ ಕಠಿಣ ಹಾಗೂ ಅಸಾಮಾನ್ಯ. ಪ್ರಸವದ ಸಂದರ್ಭದಲ್ಲಿನ ನೋವು ಆಕೆಯ ಜೀವನದ ಒಂದು ಅವಿಸ್ಮರಣೀಯ ಅನುಭವ ಎಂದಿಗೂ ಮಾಸದ ಸಂತಸ- ಸಂಕಷ್ಟದ ಕಲೆ.
ಹೆರಿಗೆಯನ್ನು ನೋವುರಹಿತವಾಗಿ ಮಾಡಿಸಲು ಈಗ ಸಾಕಷ್ಟು ವೈಜ್ಞಾನಿಕ ಆವಿಷ್ಕಾರಗಳು ಸಾಲುಸಾಲಾಗಿವೆ. ಆದರೆ, ಕಳೆದ ನಾಲ್ಕೂ ದಶಕಗಳಿಂದಲೂ ನೈಸರ್ಗಿಕವಾಗಿ ಗರ್ಭಿಣಿ ಮಹಿಳೆಯರ ಹೆರಿಗೆ ಮಾಡಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೂವರೆ ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಮಹಾತಾಯಿಯ ಸೇವಾಕಾರ್ಯ ಹಾಗೂ ಬದುಕಿನ ಚಿತ್ರಣ. ಅವರೇ ಪ್ರಸೂತಿ ಪ್ರವೀಣೆ ಚನ್ನಬಸಮ್ಮ ತಳವಾರ.


ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಮಲ್ಲಾ ಬಿ. ಗ್ರಾಮದ ಚನ್ನಬಸಮ್ಮ ಮಲ್ಲಪ್ಪ ತಳವಾರ ಅವರು, ಕಳೆದ ನಲವತ್ತು ವರ್ಷಗಳಿಂದ ಸೂಲಗಿತ್ತಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆರೂವರೆ ಸಾವಿರಕ್ಕೂ ಅಧಿಕ ಗರ್ಭಿಣಿಯರ ಹೆರಿಗೆಯನ್ನು ಸುಸೂತ್ರ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಮಲ್ಲಾ ಬಿ. ಗ್ರಾಮದ ಹತ್ತಾರು ಹಳ್ಳಿಗರ ಪಾಲಿಗೆ ಪ್ರಸೂತಿ ಪ್ರವೀಣೆ, ನಮ್ಮೂರಿನ ನರ್ಸ್ ಎಂದೇ ಮನೆಮಾತಾಗಿದ್ದಾರೆ.
ಸುರಪುರ ತಾಲ್ಲೂಕಿನ ಮಲ್ಲಾ ಬಿ., ಮಲ್ಲಾ ಕೆ., ಹದನೂರು, ಹೇವೂರು ತಾಂಡ, ಹೇವೂರು ಹಾಗೂ ಕೆಂಭಾವಿ ಸೇರಿದಂತೆ ಹತ್ತಾರುಗಳ ಗರ್ಭಿಣಿಯರ ಪಾಲಿಗೆ ಚನ್ನಬಸಮ್ಮ ತಳವಾರ ಅವರ ಸೂಲಗಿತ್ತಿ ಸೇವೆಯೇ ಆಸರೆ. ಚನ್ನಬಸಮ್ಮ ಅವರು ಈ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವುದು ಆಕಸ್ಮಿಕವಾಗಿಯೇ ಆದರೂ, ಈ ಹತ್ತಾರು ಹಳ್ಳಿಗರ ಪಾಲಿಗೆ ಕಾಯಂ ಸೂಲಗಿತ್ತಿ ಸಮಾಜಸೇವಕಿಯಾಗಿ ರೂಪಾಂತರ ಪಡೆದದು ಅಚ್ಚರಿಯೇ ಸರಿ.
ಕಳೆದ, ನಲವತ್ತು ನಲವತ್ತೆರಡು ವರ್ಷಗಳ ಹಿಂದೆ, ಚನ್ನಬಸಮ್ಮ ಅವರ ಪತಿ ಮಲ್ಲಪ್ಪ ಅವರು ವಿಷಜಂತು ಕಡಿದ ಪರಿಣಾಮ, ಅಕಾಲಿಕವಾಗಿ ಸಾವನ್ನಪ್ಪಿದರು. ಒಂದೆಡೆ ಕುಟುಂಬದ ಆಧಾರಸ್ತಂಭವಾಗಿದ್ದ ಪತಿ ಮಲ್ಲಪ್ಪ ಅವರ ಸಾವು. ಇನ್ನೊಂದೆಡೆ ಬೆಳೆಯುವ ಹಂತದಲ್ಲಿದ್ದÀ ನಾಲ್ವರು ಜನ ಮಕ್ಕಳ ಪಾಲನೆ, ಪೋಷಣೆಯ ಜವಾಬ್ದಾರಿ ಚನ್ನಬಸಮ್ಮ ಅವರನ್ನು ಕ್ಷಣಕಾಲ ವಿಚಲಿತಗೊಳ್ಳುವಂತೆ ಮಾಡಿತಾದರೂ, ಕಣ್ಮುಂದೆ ಇದ್ದ ಮಕ್ಕಳ ಭವಿಷ್ಯದ ಗುರುತರ ಜವಾಬ್ದಾರಿ ತನ್ನ ಮೇಲಿದೆ ಎಂಬುದನ್ನು ಅರಿತ ಚನ್ನಬಸಮ್ಮ, ಮಕ್ಕಳನ್ನು ಎದೆಗವಚಿಕೊಂಡು, ಪೋಷಣೆಗೆ ಮುಂದಾದರು.
ಇದೇ ಸಂದರ್ಭದಲ್ಲಿ ಚಿಕ್ಕೋಡಿ ಭಾಗದ ನರ್ಸ್ ಕುಸುಮಾ ಎಂಬುವವರು ಈ ಭಾಗಕ್ಕೆ ನೇಮಕವಾಗಿ ಬರುತ್ತಾರೆ. ಅವರ ಆಕಸ್ಮಿಕ ಪರಿಚಯ, ಮುಂದೆ, ಅವರ ಕಾಯಕದಲ್ಲಿನ ಒಂದು ಭಾಗವಾದ ಹೆರಿಗೆ ಮಾಡಿಸುವವರೆಗೂ ಆಸರೆಯ ಊರುಗೋಲಾಗಿ ಮುಂದುವರೆಯುತ್ತದೆ. ಹೀಗೆ, ಮುಂದುವರೆದ ಆಸರೆ, ನರ್ಸ್ ಕುಸುಮಾ ಅವರು, ಹೆರಿಗೆ ಸಮಯದಲ್ಲಿ ಅನುಸರಿಸುತ್ತಿದ್ದ ಚಾಕಚಕ್ಯತೆ, ಜಾಣ್ಮೆ, ನೈಪುಣ್ಯತೆಯನ್ನು ಚನ್ನಬಸಮ್ಮ ರಾತ್ರಿ ಕಳೆದು, ಬೆಳಗಾಗುವುದರೊಳಗೆ ಕರಗತ ಮಾಡಿಕೊಂಡುಬಿಡುತ್ತಾರೆ. ನರ್ಸ್ ಕುಸುಮಾ ಅವರ ಗೈರುಹಾಜರಿಯಲ್ಲಿ ಚನ್ನಬಸಮ್ಮ ಅವರೇ ನರ್ಸ್ ಪ್ರತಿರೂಪವಾಗಿ, ಗರ್ಭಿಣಿಯರ ಹೆರಿಗೆ ಮಾಡಿಸುತ್ತಾರೆ. ಈ ರೂಢಿ, ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಒಂದು ವಾರಗಳ ಸಹಜ ಹೆರಿಗೆ ಕಾರ್ಯಾಗಾರದವರೆಗೂ ಕರೆದೊಯ್ಯುತ್ತದೆ. ನರ್ಸ್ ಕುಸುಮಾ ಅವರಿಂದ ಕಲಿತ, ವಿದ್ಯೆಯ ಜತೆಗೆ, ಕೆಂಭಾವಿಯ ಕಾರ್ಯಾಗಾರ ಎರಡರಲ್ಲಿಯೂ ಹೆರಿಗೆ ಮಾಡಿಸುವ ಜಾಣ್ಮೆಯನ್ನು ಕರಗತ ಮಾಡಿಕೊಂಡ ಚನ್ನಬಸಮ್ಮ ಅವರ ಸೇವಾಕೈಂಕರ್ಯ ಕೆಂಭಾವಿ ಹೋಬಳಿಯ ಸುತ್ತಲಿನ ಹತ್ತಾರು ಹಳ್ಳಿಗಳವರೆಗೂ ವ್ಯಾಪಿಸಿಕೊಂಡಿದೆ.
ಮನೆಯಲ್ಲಿ ಕಿತ್ತುತಿನ್ನುವ ಬಡತನ. ಜತೆಗೆ, ಅನಕ್ಷರತೆ. ಹೀಗಾಗಿ, ಕೂಲಿಯ ಪುಡಿಗಾಸಿನ ಹಣದ ಜತೆಗೆ, ಹೆರಿಗೆಗೆದಂದು ಕರೆದುಕೊಂಡು ಹೋಗುವÀ ಕುಟುಂಬಗಳು ಕೊಡುತ್ತಿದ್ದ ಅತ್ಯಲ್ಪ ಜೋಳ, ಅಕ್ಕಿಯೇ ಚನ್ನಬಸಮ್ಮ ಮತ್ತು ಮಕ್ಕಳ ಒಪ್ಪಿತ್ತನ ಗಂಜಿಗೆ ಆಸರೆಯಾಗುತ್ತಿದ್ದವು. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಕ್ಕಳನ್ನು ಅಕ್ಷರಾಭ್ಯಾಸ ಮಾಡಿಸಿದರು ಚನ್ನಬಸಮ್ಮ. ಹೀಗಾಗಿ, ಇಬ್ಬರು ಪುತ್ರರೂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಚನ್ನಬಸಮ್ಮನಿಗೆ ೭೦ವರ್ಷ ವಯಸ್ಸಾಗಿದೆ. ಗರ್ಭಿಣಿ ಮಹಿಳೆ ಎಂಥದೆ ಕಷ್ಟಕರ ಸನ್ನಿವೇಶ ಎದುರಿಸುತ್ತಿದ್ದರೂ, ಅವರಿಗೆ ನಾಲ್ಕಾರು ಸಾಂತ್ವಾನದ ಮಾತು ಹೇಳುವ ಮೂಲಕ ಸುಸೂತ್ರ ಹೆರಿಗೆ ಮಾಡಿಸುವಲ್ಲಿ ಎತ್ತಿದ ಕೈ. ಜತೆಗೆ, ಇಂಥಹ ದಿನ, ಇಂಥಹ ಹೊತ್ತಿನಲ್ಲಿಯೇ ಹೆರಿಗೆ ಆಗುತ್ತದೆ. ಏನು ತೊಂದರೆ, ಇಲ್ಲ ಎಂದು ಕರಾರುವಕ್ಕಾಗಿ ಹೇಳುತ್ತಾರೆ. ಹಾಗೇಯೇ ಹೊಟ್ಟೆಹೊಳಗಿನ ಕೂಸಿನ ಕಾಲು, ತಲೆ, ಕೈ ಈ ಭಾಗದಲ್ಲಿಯೇ ಇದೆ ಎಂದು ಕರಾರುವಕ್ಕಾಗಿ ಹೇಳುವ ಮೂಲಕ ವೈದ್ಯಲೋಕವೇ ಹುಬ್ಬೇರಿಸುವಂತೆ ಅಚ್ಚರಿ ಸೃಷ್ಟಿಸಿದ್ದಾರೆ.
ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಯಾವುದಾದರೂ ಕ್ಲಿಷ್ಟಕರ ಸಮಸ್ಯೆಯ ಉದಾಹರಣೆಗಳು ಇವೇಯಾ ಎಂದು ಕೇಳಿದರೆ, ಮಲ್ಲಾ ಬಿ. ಹಾಗೂ ಮಲ್ಲಾ ಕೆ ಹಳ್ಳಿಗಳ ನಡುವೆ ಇರುವ ಹಳ್ಳದಲ್ಲಿನ ನೀರು ಬೋರ್ಗರೆಯುತ್ತಿತ್ತು. ಇಂಥಹ ಗಳಿಗೆಯಲ್ಲಿ ಮಲ್ಲಾ ಕೆ ಎನ್ನುವ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಇಂಥಹ ಸಂದರ್ಭದಲ್ಲಿ ಹಳ್ಳದಲ್ಲಿನ ನೆರೆಯನ್ನು ಲೆಕ್ಕಿಸದೆ, ಹೆರಿಗೆ ನೋವು ತಿನ್ನುತ್ತಿದ್ದ ಮಹಿಳೆಯ ಪತಿಯ ಹೆಗಲಮೇಲೆ ಕೂತುಕೊಂಡು, ಹಳ್ಳ ದಾಟಿ, ಆ ಮಹಿಳೆಯ ಹೆರಿಗೆಯನ್ನು ಮಾಡಿಸುವ ಮೂಲಕ ತಾಯಿ- ಮಗುವಿನ ಜೀವಕ್ಕೆ ಆವರಿಸಿದ್ದ ಕಂಠದ ಪಾರುಮಾಡಿದೆ ಎನ್ನುತ್ತಾರೆ ಚನ್ನಬಸಮ್ಮ.
ಜತೆಗೆ, ಇನ್ನೊಂದು ಅವಳಿ ಮಕ್ಕಳ ಹೆರಿಗೆ ಪ್ರಕರಣದಲ್ಲಿ ಮಗುವಿನ ಕಾಲು ಮುಂದಾಗಿತ್ತು. ಹೀಗಾಗಿ, ಅತಿ ಜಾಗರೂಕತೆವಹಿಸಿ, ಅವರ ಹೆರಿಗೆಯನ್ನು ಮಾಡಿಸುವ ಮೂಲಕ ತಾಯಿ, ಮಕ್ಕಳ ಜೀವ ಉಳಿಸುವಲ್ಲಿ ನನ್ನ ಪ್ರಯತ್ನ ಮಾಡಿದೆ ಎನ್ನುತ್ತಾರೆ ಚನ್ನಬಸಮ್ಮ.
ಚನ್ನಬಸಮ್ಮ ಅವರ ಈ ಸೇವಾಕೈಂಕರ್ಯ ಮೂರು ತಲೆಮಾರಿಗೂ ನಡೆದೇ ಇದೆ. ತನ್ನ ಇಬ್ಬರು ಹೆಣ್ಣು ಮಕ್ಕಳು, ಅವರ ಹೆಣ್ಣುಮಕ್ಕಳು ಅಂದರೆ ಮೊಮ್ಮಕ್ಕಳ ಹೆರಿಗೆಯನ್ನು ಮಾಡಿಸಿದ್ದೇನೆ ಎಂದು ಆತ್ಮವಿಶ್ವಾಸದಿಂದಲೇ ಹೇಳುತ್ತಾರೆ ಚನ್ನಬಸಮ್ಮ.
ನಾಲ್ಕು ದಶಕಗಳ ಚನ್ನಬಸಮ್ಮ ತಳವಾರ ಅವರ ಪ್ರಸೂತಿ ಸೇವಾಕೈಂಕರ್ಯವನ್ನು ಗಮನಿಸಿದ ಸಂಘಸAಸ್ಥೆಗಳು ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ, ಶಹಾಪುರದ ಕರಾವೇ ‘ವೀರಕೇಸರಿ ಸೇವಾಸಿರಿ’ ಪ್ರಶಸ್ತಿ ನೀಡಿದರೆ, ಕರ್ನಾಟಕ ರಕ್ಷಣಾ ವೇದಿಕೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಿದೆ. ಜತೆಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ‘ವಿಚಾರವಾದಿ ದಿ. ಡಾ.ಎಚ್. ನರಸಿಂಹಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಡಾ.ಎಚ್.ಎನ್. ಪ್ರಶಸ್ತಿಯನ್ನು ಘೋಷಿಸಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಇದೇ ೨೯ ಹಾಗೂ ೩೦ರಂದು ಆಯೋಜಿಸಿರುವ ಪರಿಷತ್‌ನ ರಾಜ್ಯಮಟ್ಟದ ಮೂರನೇ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಯಾದಗಿರಿ ಜಿಲ್ಲೆಯಿಂದ ಚನ್ನಬಸಮ್ಮ ತಳವಾರ ಅವರನ್ನು ಪರಿಷತ್ ಪ್ರಶಸ್ತಿಗಾಗಿ ಆಯ್ಕೆಮಾಡಿಕೊಂಡಿದೆ.
ಶೇಕಡ ೨೫ರಷ್ಟು ಸೇವೆ ಮಾಡಿ, ಶೇಕಡ ೭೫ರಷ್ಟು ಪ್ರಚಾರ ಪಡೆಯುವ ಮೂಲಕ ಸರ್ಕಾರದ ಸೌಲಭ್ಯ, ಪ್ರಶಸ್ತಿ, ಪುರಸ್ಕಾರಗಳಿಗೆ ಹಾತೊರೆಯುವ ಕೆಲ ಜನಗಳ ಮಧ್ಯೆ ಪ್ರಸೂತಿ ಪ್ರವೀಣೆ ಚನ್ನಬಸಮ್ಮ ತಳವಾರ ಅವರು, ಯಾವ ಪ್ರಚಾರ, ಫಲಾಫೇಕ್ಷೆಯೂ ಇಲ್ಲದೇ ನಿಸ್ವಾರ್ಥವಾಗಿ ನಾಲ್ಕು ದಶಕಗಳ ಕಾಲ ಹೆರಿಗೆ ಮಾಡಿಸುವ ಸೇವಾಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಎಲೆಮರೆಯ ಕಾಯಂತೆ ಜೀವಿಸುತ್ತಿದ್ದಾರೆ. ಇನ್ನಾದರೂ, ಸರ್ಕಾರ ಇಂಥಹ ಮಹನೀಯರ ಸೇವೆಯನ್ನು ಗುರುತಿಸುವ ಮೂಲಕ ರಾಜ್ಯೋತ್ಸವ ಸೇರಿದಂತೆ ಇತರೆ ಪ್ರಶಸ್ತಿ, ಪುರಸ್ಕಾರಗಳಿಗೆ ಪರಿಗಣಿಸಿದರೆ, ಆಳುವ ಸರ್ಕಾರಕ್ಕೂ ಹಾಗೂ ಪ್ರಶಸ್ತಿಗೂ ಒಂದು ಘನತೆಯಾದರೂ ಬಂದೀತು. ಅಲ್ವಾ ಸ್ನೇಹಿತರೇ.

Related posts

ಗಂಗಾಮತ ಸಮಾಜದ ಭರವಸೆಯ ಬೆಳಕು ʼಗಂಗಾಪುತ್ರ ಘರ್ಜನೆ ಪಡೆʼ

Vijayasiri News
error: Content is protected !!