Vijayasiri News
ವಿಜಯನಗರಹೂವಿನಹಡಗಲಿ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಹೊಲಿಗೆ ತರಬೇತಿ ಸಮಾರೋಪ|| ಕುಟುಂಬದ ಆರ್ಥಿಕ ಸದೃಢತೆಗೆ ಸ್ವ- ಉದ್ಯೋಗ ಸಹಕಾರಿ: ಸತೀಶ್‍ಶೆಟ್ಟಿ

ವಿಜಯಸಿರಿನ್ಯೂಸ್‍.ಕಾಂ/ ಹೂವಿನಹಡಗಲಿ

ಕೌಟುಂಬಿಕ ವ್ಯವಸ್ಥೆಯ ಭಾಗವಾಗಿರುವ ಮಹಿಳೆಯರಿಗೂ ಸಹ ತಮ್ಮ ಮನೆಕೆಲಸದ ಬಿಡುವಿನ ವೇಳೆಯಲ್ಲಾಗಲಿ ಅಥವಾ ಪೂರ್ಣಾವಧಿಗಾಗಲಿ ಪೂರಕವಾಗುವಂತೆ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕುಟುಂಬದ ಆರ್ಥಿಕ ಸದೃಢತೆಗೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜ್ಞಾನವಿಕಾಸ ಯೋಜನೆ ಮೂಲಕ ಉಚಿತ ಹೊಲಿಗೆ ತರಬೇತಿ ಒದಗಿಸಿ, ಸ್ವಾವಲಂಬಿ ಬದುಕಿಗೆ ನೆರವಿನ ಹಸ್ತಚಾಚಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್‌ಶೆಟ್ಟಿ ಹೇಳಿದರು.
ಸೋಮವಾರ
ತಾಲ್ಲೂಕಿನ ಮಾಗಳ ಗ್ರಾಮದಲ್ಲಿ ನಡೆದ ಸಂಸ್ಥೆಯ ಶಾರದಾದೇವಿ ಜ್ಞಾನವಿಕಾಸ ಯೋಜನೆಯ ಮೂರು ತಿಂಗಳ ಹೊಲಿಗೆ ತರಬೇತಿ ಘಟಕದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯ ಮುಖ್ಯಸ್ಥರಾದ ಹೇಮಾವತಿ ಅವರ ಪ್ರೀತಿಯ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾದ ಜ್ಞಾನವಿಕಾಸ ಯೋಜನೆಗೆ ಪ್ರಾಧಾನ್ಯತೆ ಕೊಡುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮನೆಕೆಲಸದ ಜತೆಜತೆಯಲ್ಲಿಯೇ ಸ್ವ- ಉದ್ಯೋಗಕ್ಕೆ ಸೂಕ್ತ ತರಬೇತಿ ಒದಗಿಸುವ ಮೂಲಕ ಕೌಟುಂಬಿಕ ಆರ್ಥಿಕ ಸದೃಢತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯೋಜನೆ ಅಡಿಯಲ್ಲಿ ಕೇವಲ ಹೊಲಿಗೆ ತರಬೇತಿ ಮಾತ್ರವಲ್ಲ; ಹೊಲಿಗೆ ತರಬೇತಿ ಸೇರಿದಂತೆ ಉಚಿತ ಬ್ಯೂಟಿಪಾರ್ಲರ್ ತರಬೇತಿ, ಸೀರೆಗೆ ಕುಚ್ಚು ಕಟ್ಟುವ ತರಬೇತಿ, ಜುಲಾಯಿ ವರ್ಕ್, ಬ್ಯಾಗ್ ಹೆಣಿಗೆ, ಸೋಪ್, ಪೆನಾಯಿಲ್ ತಯಾರಿಕೆ ಸೇರಿದಂತೆ ಸಾಕಷ್ಟು ತರಬೇತಿಗಳು ಯೋಜನೆ ಅಡಿಯಲ್ಲಿ ಜಾರಿಯಲ್ಲಿದ್ದು, ಅವುಗಳ ಉಚಿತ ತರಬೇತಿಯನ್ನು ಗ್ರಾಮೀಣ ಪ್ರದೇಶದ ಮಹಿಳೆಯರು ಸದ್ವಿನಿಯೋಗ ಪಡಿಸಿಕೊಳ್ಳುವ ಮೂಲಕ ಕುಟುಂಬದ ಆರ್ಥಿಕ ಸ್ವಾವಲಂಬಿತನಕ್ಕೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಸಂಸ್ಥೆ ನುರಿತ ಹಾಗೂ ಅನುಭವಿ ಪರಿಣಿತರಿಂದ ಸೂಕ್ತ ತರಬೇತಿ ಒದಗಿಸುವ ಜತೆಯಲ್ಲಿ ಸಂಸ್ಥೆಯಿಂದ ತರಬೇತಿ ಪಡೆದು, ಯಶಸ್ವಿಯಾಗಿ ಬದುಕು ಕಟ್ಟಿಕೊಂಡಿರುವ ಹಾಗೂ ಹತ್ತಾರು ಮಹಿಳೆಯರಿಗೂ ಉದ್ಯೋಗ ಒದಗಿಸಿರುವವರ ಯಶೋಗಾಥೆಗಳ ಕೇಂದ್ರಗಳಿಗೆ ಭೇಟಿ ನೀಡುವ ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಳ್ಳುವ ಮೂಲಕ ಇತರರಿಗೂ ಸ್ಫೂರ್ತಿ, ಪ್ರೇರಣೆ ಒದಗಿಸುತ್ತದೆ ಎಂದು ತಿಳಿಸಿದ ಸತೀಶ್‌ಶೆಟ್ಟಿ ಅವರು, ಸಂಸ್ಥೆಯ ಅಧೀನ ತರಬೇತಿ ಕೇಂದ್ರಗಳಾದ ರೂಡ್‌ಸೆಡ್ ಹಾಗೂ ಧಾರವಾಡದ ರಾಯಪುರದ ಜ್ಞಾನವಿಕಾಸ ತರಬೇತಿ ಕೇಂದ್ರಗಳಲ್ಲಿ ಸ್ವ- ಉದ್ಯೋಗಕ್ಕೆ ಪೂರಕವಾಗಿ ನೀಡುತ್ತಿರುವ ಉಚಿತ ತರಬೇತಿ ಕೇಂದ್ರಗಳಲ್ಲಿನ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ವಿವರಿಸಿದರು.
ಸಮಾರೋಪ ಸಮಾರಂಭವನ್ನು ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್‌ಶೆಟ್ಟಿ, ಕ್ಷೇತ್ರ ಯೋಜನಾಧಿಕಾರಿ ಮಂಜುನಾಥಭಟ್ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯ ಭರತೇಶ್ ಬಸ್ತಿ ಸೇರಿದಂತೆ ಒಕ್ಕೂಟದ ಪ್ರಮುಖರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸಂಸ್ಥೆಯ ಕ್ಷೇತ್ರ ಯೋಜನಾಧಿಕಾರಿ ಮಂಜುನಾಥ ಭಟ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವಿರುಪಣ್ಣ, ಜನಜಾಗೃತಿ ವೇದಿಕೆಯ ಸದಸ್ಯ ಭರತೇಶ್ ಬಸ್ತಿ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯ ಮಾಗಳ ವಲಯದ ಮೇಲ್ವಿಚಾರಕ ಅರುಣ್‌ಕುಮಾರ್ ವಿ. ಜ್ಞಾನವಿಕಾಸ ಯೋಜನೆಯ ಸಮನ್ವಯ ಅಧಿಕಾರಿ ಆರತಿ ಹಿರೇಮಠ್, ಒಕ್ಕೂಟದ ಅಧ್ಯಕ್ಷೆ ಕೆ. ಲತಾ, ಸದಸ್ಯರಾದ ಪ್ರೇಮಾ, ವಿಮಲಾಕ್ಷಿ, ಶಕುಂತಲಾ, ಪ್ರಭಾವತಿ, ರಿಂದಮ್ಮ ಹಾಗೂ ರಫೀಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೇಂದ್ರದ ಸದಸ್ಯರಾದ ವಿಜಯಾ ಅವರು ಪ್ರಾರ್ಥಿಸಿದರು. ಶಕುಂತಲಾ ಅವರು ಸ್ವಾಗತಿಸಿದರು. ಪ್ರೇಮಾ ಅವರು ನಿರೂಪಿಸಿದರು.
ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ತರಬೇತುದಾರರಿಂದ ಪಡೆದ ಉಡುಪು ತಯಾರಿಕೆಯ ಸಂಕೇತಗಳ ಮುಖಾಂತರ ನೃತ್ಯ ಪ್ರದರ್ಶಿಸಿದರು. ಜತೆಗೆ ತರಬೇತಿ ಅವಧಿಯಲ್ಲಿ ಸಿದ್ಧಪಡಿಸಿದ ಸಿದ್ಧ ಉಡುಪುಗಳ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು.

Related posts

||ಚಪ್ಪಲಿಯಿಂದ ಹೊಡೆದು; ಅಶ್ಲೀಲ ಪದಗಳಿಂದ ನಿಂದಿಸಿದ ಪೇದೆ ಮಂಜುನಾಥ || ಕರ್ತವ್ಯನಿರತ ಬಸ್ ಚಾಲಕನ ಮೇಲೆ ಪೊಲೀಸ್ ಮುಖ್ಯ ಪೇದೆ ಗೂಂಡಾಗಿರಿ…!

Vijayasiri News

||ಅರಸೀಕೆರೆ: ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟ|| ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆಟೋಟ ಅತ್ಯಗತ್ಯ: ಜೆ. ಪದ್ಮಲತಾ

Vijayasiri News

ಅರಸೀಕೆರೆ: ಕಲುಷಿತ ಕುಡಿಯುವ ನೀರು ಪೂರೈಕೆ; ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ, ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ಕೊರೆಯಿಸಿ ಕೊಡುವುದಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಭರವಸೆ; ಪ್ರತಿಭಟನೆ ಸ್ಥಗಿತ

Vijayasiri News

ವಿಜಯನಗರ: ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ವಕೀಲ ಬಸವರಾಜ ಸಂಗಪ್ಪನವರ್ ನೇಮಕ

Vijayasiri News

|| ಕೂಡ್ಲಿಗಿ: ಬಸ್ ಚಾಲಕನ ಮೇಲೆ ಪೊಲೀಸ್ ಪೇದೆ ಹಲ್ಲೆ ಪ್ರಕರಣ || ಪೇದೆ ಮಂಜುನಾಥನನ್ನು ಅಮಾನತುಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ

Vijayasiri News

ಅರಸೀಕೆರೆ ಗ್ರಾ.ಪಂ. ಅಧ್ಯಕ್ಷರ ಚುನಾವಣೆ: ಪಿ. ಕೆಂಚಮ್ಮ ಅವಿರೋಧ ಆಯ್ಕೆ

admin
error: Content is protected !!